ಈಶ್ವರಮಂಗಲ: ಪ್ರವಾದಿ ಪೈಗಂಬರ್ ಬಗ್ಗೆ ಬಸ್‌ಸ್ಟ್ಯಾಂಡ್‌ನಲ್ಲಿ ಅವಹೇಳನಕಾರಿ ಬರಹ..!-ಕಿಡಿಗೇಡಿಗಳ ಬಂಧನಕ್ಕೆ ವಿವಿಧ ಮುಸ್ಲಿಂ ಸಂಘಟನೆಗಳ ಆಗ್ರಹ-ಪೊಲೀಸ್ ಠಾಣೆಗೆ ಮನವಿ

0

ಪುತ್ತೂರು: ಪ್ರವಾದಿ ಪೈಗಂಬರ್‌ರವರ ಬಗ್ಗೆ ಅವಹೇಳನಕಾರಿಯಾಗಿ ಬರಹ ಬರೆದು ಹಾಗೂ ಅಶ್ಲೀಲ ಚಿತ್ರವೊಂದನ್ನು ಬಸ್‌ಸ್ಟ್ಯಾಂಡ್‌ನಲ್ಲಿ ಅಂಟಿಸಿದ ಘಟನೆ ನಡೆದಿದ್ದು ಕೃತ್ಯ ಎಸಗಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಈಶ್ವರಮಂಗಲದ ವಿವಿಧ ಮುಸ್ಲಿಂ ಸಂಘಟನೆಗಳು ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣಾ ಎಸ್ಸೈಯವರಿಗೆ ದೂರು ನೀಡಿದ್ದಾರೆ.

ನೆ.ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಪುಳಿತ್ತಡಿ ಎಂಬಲ್ಲಿರುವ ಬಸ್‌ಸ್ಟ್ಯಾಂಡ್‌ನ ಗೋಡೆಯಲ್ಲಿ ಪ್ರವಾದಿ ಪೈಗಂಬರ್ ಕುರಿತು ಮತ್ತು ಮುಸ್ಲಿಮರ ಬಗ್ಗೆ ಅವಹೇಳನಕಾರಿಯಾಗಿ ಬರಹ ಬರೆದು ಅಶ್ಲೀಲ ಚಿತ್ರವೊಂದನ್ನು ಬಿಡಿಸಿ ಅದರ ಕೆಳಗೆ ಕೆಟ್ಟ ಶಬ್ದಗಳಿಂದ ಬರೆದಿರುವುದು ಕಂಡು ಬಂದಿದ್ದು, ಅವಹೇಳನಕಾರಿ ಬರಹ ಬರೆದಿರುವ ವಿಚಾರ ತಿಳಿದ ಈಶ್ವರಮಂಗಲ ಹೊರಠಾಣಾ ಪೊಲೀಸರು ಬಸ್‌ಸ್ಟ್ಯಾಂಡ್‌ನಲ್ಲಿ ಅಂಟಿಸಿದ್ದ ಚೀಟಿಯನ್ನು ತೆರವು ಮಾಡಿರುವುದಾಗಿ ತಿಳಿದು ಬಂದಿದೆ.

ಬಳಿಕದ ಬೆಳವಣಿಗೆಯಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳು ಈಶ್ವರಮಂಗಲ ಹೊರಠಾಣೆಗೆ ತೆರಳಿ ದೂರು ನೀಡಿದ್ದು ಪ್ರವಾದಿಯವರ ಬಗ್ಗೆ ಅವಹೇಳನಕಾರಿಯಾಗಿ ಬರೆದು ಅಂಟಿಸಿರುವುದು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆಯುಂಟಾಗಿದ್ದು, ಅವಹೇಳನಕಾರಿಯಾಗಿ ಬರಹ ಬರೆದು ಅಂಟಿಸಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ. ಕಿಡಿಗೇಡಿಗಳನ್ನು ಬಂಧಿಸುವ ಬಗ್ಗೆ ಎಸ್ಸೈ ಭರವಸೆ ನೀಡಿದ್ದಾರೆ ಎಂದು ಮನವಿ ನೀಡಿದ ಮುಖಂಡರು ತಿಳಿಸಿದ್ದಾರೆ. ಸ್ಥಳೀಯ ವಿವಿಧ ಮುಸ್ಲಿಂ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಮನವಿ ನೀಡುವ ನಿಯೋಗದಲ್ಲಿದ್ದರು.

ಪ್ರಕರಣ ದಾಖಲು:
ಕೃತ್ಯದ ಬಗ್ಗೆ ಎಸ್.ಡಿ.ಪಿ.ಐ ನೆ.ಮುಡ್ನೂರು ಬ್ರಾಂಚ್ ಅಧ್ಯಕ್ಷ ಫಾರೂಕ್ ಟಿ.ಎ ಎಂಬವರು ಸಂಪ್ಯ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here