ಮುಕ್ವೆ ಸರಕಾರಿ ಹಿ.ಪ್ರಾ‌ ಶಾಲಾ‌ ನೂತನ ಕೊಠಡಿಗೆ ಶಿಲಾನ್ಯಾಸ

0

ಗುಣಮಟ್ಟದ ಶಿಕ್ಷಣ ದೊರೆತರೆ ಮಾತ್ರ ಸರಕಾರಿ ಶಾಲೆಗಳು ಉಳಿಯಲು ಸಾಧ್ಯ: ಶಾಸಕ ಅಶೋಕ್ ರೈ

ಪುತ್ತೂರು: ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ತಂದು ಬಿಡುವಷ್ಟರ ಮಟ್ಟಿಗೆ ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತಹ ವಾತಾವರಣ ಸೃಷ್ಟಿಯಾದರೆ ಮಾತ್ರ ಸರಕಾರಿ ಶಾಲೆಗಳು ಉಳಿಯಲು ಸಾಧ್ಯ. ಇದಕ್ಕಾಗಿ ಸರಕಾರ ಮತ್ತು ಪೋಷಕರು‌ ಜಂಟಿಯಾಗಿ ಕೆಲಸ‌ ಮಾಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.


ಅವರು‌ ಮುಕ್ವೆ ಸರಕಾರಿ ಹಿ ಪ್ರಾ ಶಾಲೆಯಲ್ಲಿ ಸಿಎಸ್ಆರ್ ಫಂಡ್‌ನಿಂದ 30 ಲಕ್ಷ ರೂ ವೆಚ್ಚದಲ್ಲಿ‌ ನಿರ್ಮಾಣವಾಗಲಿರುವ ನೂತನ ಶಾಲಾ ಕೊಠಡಿಗೆ ಶಿಲಾನ್ಯಾಸ ನೆರವೇರಿಸಿ‌ ಮಾತನಾಡಿದರು.


ಎಂಆರ್ ಪಿಎಲ್ ಸಂಸ್ಥೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 4 ಕೋಟಿಗೂ‌ ಮಿಕ್ಕಿ ಅನುದಾನ‌ ಬಂದಿದೆ. ತಮ್ಮ ಮೂಲಕ ಶಿಫಾರಸ್ಸು‌ ಮಾಡಲಾದ ಶಾಲೆಗಳಿಗೆ ಮಾತ್ರ ಈ ಅನುದಾನವನ್ನು ನೀಡಲಾಗುತ್ತದೆ. ಸರಕಾರದ ಜೊತೆ ಖಾಸಗಿ ಸಹಭಾಗಿತ್ವ ಇದ್ದಲ್ಲಿ‌ ಮಾತ್ರ ಇನ್ನಷ್ಟು‌ ಅಭಿವೃದ್ದಿ ಕೆಲಸಗಳು ಸಾಧ್ಯವಾಗಲಿದೆ ಎಂದು ಹೇಳಿದರು.

ಮಕ್ಕಳಿಗೆ ಇಂಗ್ಲೀಷ್‌ ಕಲಿಸಿ
ತಮ್ಮ‌ ಮಕ್ಕಳಿಗೆ ಕನ್ನಡ, ತುಳು‌ ಭಾಷೆಯ ಜೊತೆ ಇಂಗ್ಲೀಷನ್ನೂ‌ ಕಲಿಸಬೇಕು. ಉದ್ಯೋಗ ಪಡೆದುಕೊಳ್ಳುವಲ್ಲಿ‌ ಇಂಗ್ಲೀಷ್ ಅಗತ್ಯವಾಗಿದೆ ಎಂದ ಶಾಸಕರು‌ ಮುಕ್ವೆ ಶಾಲೆಯ ಬಡವರ ಮಕ್ಕಳೂ ಇಂಗ್ಲೀಷ್‌ ಮಾತನಾಡುವ ಕಾಲ ದೂರವಿಲ್ಲ. ಕೆಪಿಎಸ್ ಮಾದರಿ‌ ಶಾಲೆಯಲ್ಲಿ ಎಲ್ ಕೆ ಜಿಯಿಂದ ಪಿ.ಯು ತನಕ ಆಂಗ್ಲ ಮಾಧ್ಯಮ ನಡೆಯುತ್ತದೆ. ಮುಂದೆ ಈ ಯೋಜನೆ ಮಹತ್ತರ ಬದಲಾವಣೆಗೆ ಕಾರಣವಾಗುತ್ತದೆ ಎಂದು‌ ಶಾಸಕರು ಹೇಳಿದರು.

ಇಂಗ್ಲೀಷ್ ಟೀಚರ್ ಗೆ ಇಂಗ್ಲೀಷ್ ಗೊತ್ತಿರಲಿ:
ನಿಮ್ಮ ಶಾಲೆಗೆ ನೇಮಕ‌ ಮಾಡುವ ಇಂಗ್ಲೀಷ್ ಟೀಚರ್ ಗೆ ಇಂಗ್ಲೀಷ್ ಗೊತ್ತಿದೆಯೋ ಎಂಬುದನ್ನು ಖಾತ್ರಿ‌ ಮಾಡಿಕೊಳ್ಳಿ ಯಾಕೆಂದರೆ ಟೀಚರ್ ಗೆ ಇಂಗ್ಲೀಷ್ ಸ್ಪಷ್ಟವಾಗಿಲ್ಲದೇ ಇದ್ದರೆ ಮಕ್ಕಳೂ ಕಲಿಯಲು ಸಾಧ್ಯವಿಲ್ಲ.‌ಇಂಗ್ಲೀಷಲ್ಲಿ ಎಂ ಎ ಮಾಡಿರುವ ಟೀಚರನ್ನು ಉತ್ತಮ ಸಂಬಳ ನೀಡಿ ನಿಯೋಜಿಸಬೇಕು ಇದಕ್ಕೆ ಸರಕಾರ ಒಂದಷ್ಟು‌ ಸಂಬಳ‌ ನೀಡುತ್ತದೆ ಜೊತೆಗೆ ಪೋಷಕರೂ ಕೈ ಜೋಡಿಸಿದರೆ ನಮ್ಮ‌ ಮಕ್ಕಳ‌ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಿದರು.

ಶಿಕ್ಷಣದಲ್ಲೂ ಶಾಸಕರ ಕ್ರಾಂತಿ ಆರಂಭವಾಗಿದೆ; ಕೆ ಪಿ ಆಳ್ವ
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಪಿ ಆಳ್ವ‌ ಮಾತನಾಡಿ ಆರೋಗ್ಯ, ಉದ್ಯೋಗ ಕ್ಷೇತ್ರದಲ್ಲಿ ಕ್ರಾಂತಿ‌ ಮಾಡುತ್ತಿರುವ ಶಾಸಕರು ಶಿಕ್ಷಣ‌ ಕ್ಷೇತ್ರದಲ್ಲೂ ಹೊಸ‌ ಕ್ರಾಂತಿಗೆ ಕೈ ಹಾಕಿದ್ದಾರೆ.‌ಎಂ ಆರ್ ಪಿ ಎಲ್ ಸಂಸ್ಥೆಯ ಮೂಲಕ ಶಿಕ್ಷಣ‌ ಕೇಂದ್ರಗಳಿಗೆ 3 ಕೋಟಿಗೂ‌ ಮಿಕ್ಕಿ‌ ಅನುದಾನವನ್ನು ತಂದು ಇತಿಹಾಸ‌ ನಿರ್ಮಾಣ‌ ಮಾಡಿದ್ದಾರೆ. ಮುಂದಿನ‌ ದಿನಗಳಲ್ಲಿ‌ ಸರಕಾರಿ‌ ಶಾಲೆಗಳು ಖಾಸಗಿ ಶಾಲೆಯನ್ನು ಮೀರಲಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶಾಲೆಗೆ 3 ಲಕ್ಷ ಅನುದಾನವನ್ನು ಶಾಸಕರು ಘೋಷಿಸಿದರು.


ವೇದಿಕೆಯಲ್ಲಿ ನರಿಮೊಗರು ಗ್ರಾಪಂ ಸದಸ್ಯರಾದ ಕಲಂದರ್ ಶಾಪಿ, ಕ್ಷೇತ್ರ ಸಂಪನ್ಮೂಲ‌ ಸಮನ್ವಯಾಧಿಕಾರಿ ನವೀನ್ ವೇಗಸ್,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೋಮನಾಥ ಗೌಡ ಉಪಸ್ಥಿತರಿದ್ದರು.
ಶಾಲಾ ಎಸ್ ಡಿ‌ಎಂ‌ಸಿ ಅಧ್ಯಕ್ಷ ಮುಬೀನ್ ಸಾಹೇಬ್‌ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ‌ ಕಾರ್ಮೆಲಸ್ ಅಂದ್ರಜೆ ಸ್ವಾಗತಿಸಿದರು.ಎಸ್ ಡಿ ಎಂಸಿ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ವಂದಿಸಿದರು. ಖಾಲಿದ್ ಹಾಗೂ ಚರಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here