ನೆಲ್ಯಾಡಿ: ಆಲಂತಾಯ ಗ್ರಾಮದ ಪೆರ್ಲ ನಿವಾಸಿ ವೆಂಕಪ್ಪ ಗೌಡ ಅವರ ಪುತ್ರ, ಪ್ರಗತಿಪರ ಕೃಷಿಕ, ಭಜನಾ ಸಂಘಟಕ ರಮೇಶ್ ಗೌಡ(47 ವ.)ರವರ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಆಲಂತಾಯ ಗ್ರಾಮದ ಪೆರ್ಲ ಕಲ್ಲಂಡ ನಿವಾಸಿ ಹರೀಶ್ (39ವ.)ಬಂಧಿತ ಆರೋಪಿಯಾಗಿದ್ದಾನೆ. ಮೃತ ರಮೇಶ ಗೌಡ ಹಾಗೂ ಆರೋಪಿ ಹರೀಶ್ ನಡುವೆ ತೋಟಕ್ಕೆ ಬಿದ್ದ ಮರವೊಂದರ ತೆರವುಗೊಳಿಸುವ ವಿಚಾರದಲ್ಲಿ ನ.8ರಂದು ಮಧ್ಯಾಹ್ನ ಗಲಾಟೆ ನಡೆದಿದ್ದು ಇದೇ ದ್ವೇಷದಲ್ಲಿ ಸಂಜೆ ರಮೇಶ್ ಗೌಡ ಅವರನ್ನು ಮನೆಯಿಂದ ದೇವಸ್ಥಾನಕ್ಕೆ ಹೋಗುವ ಸಂದರ್ಭದಲ್ಲಿ ಪೆರ್ಲಕಲ್ಲಂಡ ಎಂಬಲ್ಲಿ ಆರೋಪಿಗಳಾದ ಹರೀಶ್, ಆತನ ತಂಗಿಯ ಗಂಡ ಸಂತೋಷ್ ಹಾಗೂ ಧರ್ಣಪ್ಪ ಯಾನೆ ಬೆಳಿಯಪ್ಪ ಎಂಬವರು ಸೇರಿಕೊಂಡು ಅಡ್ಡಹಾಕಿ ಕತ್ತಿಯಿಂದ ಕಡಿದು ಕೊಲೆಗೈದಿರುವುದಾಗಿ ಆರೋಪಿಸಲಾಗಿದೆ. ಈ ಕುರಿತು ಮೃತ ರಮೇಶ ಗೌಡ ಅವರ ಪತ್ನಿ ಗೀತಾ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ನ.9ರಂದು ಪೆರ್ಲ ಪರಿಸರದಲ್ಲಿಯೇ ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿರುವುದಾಗಿ ವರದಿಯಾಗಿದೆ.
1 ವರ್ಷದಿಂದ ದಾರಿ ವಿವಾದ:
ಮೃತ ರಮೇಶ ಗೌಡ ಹಾಗೂ ಕೊಲೆ ಆರೋಪಿ ಹರೀಶ್ ದೂರದ ಸಂಬಂಧಿಕರಾಗಿದ್ದಾರೆ. ಇವರ ನಡುವೆ ಸುಮಾರು 1 ವರ್ಷದಿಂದ ದಾರಿ ವಿವಾದವಿದೆ. ರಮೇಶ ಗೌಡರ ಮನೆ ಹಿಂಬದಿ ಹರೀಶನಿಗೆ ಸೇರಿದ ಕೃಷಿ ಜಾಗವಿದೆ. ಈ ಜಾಗಕ್ಕೆ ಹೋಗಲು ರಮೇಶ ಗೌಡ ಅವರ ಮನೆಗೆ ಹೋಗುವ ರಸ್ತೆಯನ್ನೇ ಹರೀಶ ಗೌಡನ ಮನೆಯವರು ಬಳಸುತ್ತಿದ್ದು ರಮೇಶ ಗೌಡ ಅವರ ಮನೆಯ ಅಂಗಳದ ತನಕ ರಮೇಶ ಗೌಡರ ಮನೆಗೆ ಬರುವ ರಸ್ತೆಯಲ್ಲಿಯೇ ಬಂದು ಅಲ್ಲಿಂದ ಎಡಬದಿಯಲ್ಲಿರುವ ಓಣಿ ಮೂಲಕ ತಮ್ಮ ಜಾಗಕ್ಕೆ ತೆರಳುತ್ತಿದ್ದರು. ಈ ಓಣಿಯಲ್ಲಿ ರಸ್ತೆ ಮಾಡಿಕೊಡಬೇಕೆಂದು ಹರೀಶ ಹಾಗೂ ಆತನ ಮನೆಯವರು ಸುಮಾರು 1 ವರ್ಷದಿಂದ ರಮೇಶ ಗೌಡ ಹಾಗೂ ಅವರ ಮನೆಯವರ ಜೊತೆಗೆ ಪದೇ ಪದೇ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೇ 7-8 ತಿಂಗಳ ಹಿಂದೆ ರಸ್ತೆಯಲ್ಲೇ ನೀರಿನ ಪೈಪ್ ಅಳವಡಿಸಿರುವ ವಿಚಾರದ ಬಗ್ಗೆ ಎರಡೂ ಮನೆಯವರ ನಡುವೆ ಗಲಾಟೆ ನಡೆದಿದ್ದು ಈ ಬಗ್ಗೆ ಗ್ರಾಮ ಪಂಚಾಯಿತಿ, ಪೊಲೀಸ್ ಠಾಣೆಗೆ ದೂರು ಹೋಗಿದ್ದು ಎರಡೂ ಕಡೆಯವರನ್ನು ಕರೆಸಿ ಮಾತುಕತೆ ನಡೆಸಲಾಗಿತ್ತು ಎಂದು ತಿಳಿದುಬಂದಿದೆ.
ತೋಟಕ್ಕೆ ಮರಬಿದ್ದ ವಿಚಾರದಲ್ಲಿ ಗಲಾಟೆ:
2 ತಿಂಗಳ ಹಿಂದೆ ರಮೇಶ ಗೌಡ ಅವರ ಜಾಗದಲ್ಲಿನ ಆಕೇಶಿಯ ಮರವೊಂದು ಮಳೆಗೆ ಹರೀಶ್ರವರ ರಬ್ಬರ್ ತೋಟಕ್ಕೆ ಬಿದ್ದಿತ್ತು. ಈ ಮರವನ್ನು ಕಡಿಯಲು ಹರೀಶ್ ಬಿಡದೇ ಇದುದ್ದರಿಂದ ತೆಗೆದಿರಲಿಲ್ಲ. ನ.8ರಂದು ಮಧ್ಯಾಹ್ನ 1.3೦ರ ವೇಳೆಗೆ ಹರೀಶ್ ಈ ಅಕೇಶಿಯಾ ಮರವನ್ನು ಕಡಿಯುತ್ತಿದ್ದಾಗ ರಮೇಶ್ರವರು ಅಲ್ಲಿಗೆ ಹೋಗಿ ಮರವನ್ನು ಕಡಿಯುವುದು ಬೇಡ ಎಂದು ಹೇಳಿದ್ದರು. ಈ ವೇಳೆ ಹರೀಶ ಬಾಯಿಗೆ ಬಂದಂತೆ ರಮೇಶ್ರವರಿಗೆ ಬೈದಿದ್ದು ಇಬ್ಬರ ನಡುವೆ ಗಲಾಟೆಯಾಗುತ್ತಿರುವುದನ್ನು ನೋಡಿ ರಮೇಶ ಅವರ ಪತ್ನಿ ಗೀತಾ, ತಂದೆ ವೆಂಕಪ್ಪ ಗೌಡರು ಅಲ್ಲಿಗೆ ಹೋಗಿ ರಮೇಶ ಅವರನ್ನು ಸಮಾಧಾನಪಡಿಸಿ ಮನೆಗೆ ಕರೆದುಕೊಂಡು ಬಂದಿದ್ದರು. ಇದೇ ದ್ವೇಷ ಇಟ್ಟುಕೊಂಡು ಸಂಜೆ ವೇಳೆಗೆ ಹರೀಶ್ ಹಾಗೂ ಇನ್ನಿಬ್ಬರು ಸೇರಿ ಕೊಲೆ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.
ಕಾದು ಕುಳಿತು ಕತ್ತಿಯಿಂದ ಹಲ್ಲೆ:
ಮಧ್ಯಾಹ್ನ ನಡೆದ ಮಾತಿನ ಚಕಮಕಿ ಬಳಿಕ ರಮೇಶ ಗೌಡ ಅವರು ಉಪ್ಪಿನಂಗಡಿ ಹಾಗೂ ಇತರ ಕಡೆಗಳಿಗೆ ತೆರಳಿ ರಾತ್ರಿ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ನಡೆಯುವ ವಾರದ ಭಜನೆಗೆ ತಯಾರಿ ಮಾಡಿಕೊಂಡಿದ್ದರು. ಸಂಜೆ 6.45ಕ್ಕೆ ಭಜನೆಗೆ ಸಂಬಂಧಿಸಿದ ಸೊತ್ತುಗಳೊಂದಿಗೆ ತನ್ನ ಬೈಕ್ನಲ್ಲಿ ಮನೆಯಿಂದ ಹೊರಟು ಮನೆಯಿಂದ ಸುಮಾರು 500 ಮೀ.ದೂರದಲ್ಲಿರುವ ದೇವಸ್ಥಾನ ಸಂಪರ್ಕಿಸುವ ಕಾಂಕ್ರಿಟ್ ರಸ್ತೆಗೆ ಪ್ರವೇಶಿಸುತ್ತಿದ್ದಂತೆ ಮೊದಲೇ ಕತ್ತಿಹಿಡಿದು ಕಾದು ಕುಳಿತ್ತಿದ್ದ ಆರೋಪಿ ಹರೀಶ್ ಹಾಗೂ ಇತರರು ದಾಳಿ ಮಾಡಿದ್ದರು ಎನ್ನಲಾಗಿದೆ. ರಮೇಶ ಗೌಡರ ಬೈಕ್ ಕಾಂಕ್ರಿಟ್ ರಸ್ತೆಯಲ್ಲಿಯೇ ಪಲ್ಟಿಯಾಗಿದ್ದು ಅವರ ಮೃತದೇಹ ಅಲ್ಲಿಂದ ಸುಮಾರು 100 ಮೀ.ದೂರದಲ್ಲಿ ಲಿಂಗಮ್ಮ ಎಂಬವರ ಮನೆಗೆ ಸಂಪರ್ಕಿಸುವ ಮಣ್ಣಿನ ರಸ್ತೆಯಲ್ಲಿ ಲಿಂಗಮ್ಮ ಅವರ ಮನೆ ಸಮೀಪ ಬಿದ್ದುಕೊಂಡಿತ್ತು. ದಾಳಿಯ ಮನ್ಸೂಚನೆ ಸಿಗುತ್ತಿದ್ದಂತೆ ರಮೇಶ ಗೌಡರು ಲಿಂಗಮ್ಮ ಅವರ ಮನೆಗೆ ತೆರಳುವ ಮಣ್ಣಿನ ರಸ್ತೆಯಲ್ಲಿ ಓಡಿದ್ದು ಆರೋಪಿ ಅವರನ್ನು ಬೆನ್ನಟ್ಟಿ ಕತ್ತಿಯಿಂದ ಹಲ್ಲೆ ನಡೆಸಿರುವ ಸಾಧ್ಯತೆ ಇದೆ. ಕತ್ತಿಯ ದಾಳಿಯಿಂದ ರಮೇಶ ಗೌಡ ಅವರ ಮುಖ ಹಾಗೂ ದೇಹದ ಇತರೇ ಭಾಗಗಳಲ್ಲಿ ಗಾಯವಾಗಿದ್ದು ಗಂಭೀರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಆರೋಪಿ ಹರೀಶನ ಮನೆಯೂ ರಮೇಶ್ ಗೌಡ ಅವರ ಮೇಲೆ ದಾಳಿ ನಡೆದ ರಸ್ತೆಯ ಬದಿಯಲ್ಲೇ ಇದ್ದು ಆತ ಮನೆ ಸಮೀಪವೇ ಹೊಂಚು ಹಾಕಿ ಕುಳಿತಿದ್ದ.
ಬೊಬ್ಬೆಕೇಳಿ ಓಡಿಬಂದ ಮನೆಯವರು:
ರಮೇಶ ಗೌಡ ಅವರ ಬೊಬ್ಬೆ ಕೇಳಿ ಅವರ ಪತ್ನಿ, ತಂದೆ, ತಾಯಿ ಹಾಗೂ ನೆರೆ ಮನೆಯವರು ಓಡಿಬಂದಿದ್ದು ಆ ವೇಳೆಗಾಗಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಮೇಶ ಗೌಡ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಆಲಂತಾಯ, ಗೋಳಿತ್ತೊಟ್ಟು, ಕೊಣಾಲು ಗ್ರಾಮದ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ನೆಲ್ಯಾಡಿ ಹೊರಠಾಣೆ, ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಂಡಿದ್ದರು. ರಾತ್ರಿ ಸುಮಾರು 10 ಗಂಟೆ ವೇಳೆಗೆ ದ.ಕ.ಜಿಲ್ಲಾ ಎಸ್ಪಿ ಯತೀಶ್ ಹಾಗೂ ಇತರೇ ಹಿರಿಯ ಅಧಿಕಾರಿಗಳೂ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದರು. ವಿಧಿ ವಿಜ್ಞಾನ, ಬೆರಳಚ್ಚು ತಜ್ಞರೂ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ ಬಳಿಕ ನ.9ರಂದು ಮುಂಜಾನೆ 4 ಗಂಟೆ ವೇಳೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಸಂಜೆ ಅಂತ್ಯಕ್ರಿಯೆ:
ರಮೇಶ ಗೌಡರ ಮೃತದೇಹದ ಮರಣೋತ್ತರ ಪರೀಕ್ಷೆ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಯಲ್ಲಿ ನಡೆದು ನ.9ರಂದು ಸಂಜೆ 4.30ರ ವೇಳೆಗೆ ಮೃತದೇಹವನ್ನು ಆಲಂತಾಯ ಪೆರ್ಲದ ಮನೆಗೆ ತಂದು ಅಂತ್ಯಕ್ರಿಯೆ ನಡೆಸಲಾಯಿತು. ಈ ವೇಳೆ ಮಾಜಿ ಸಂಸದ ನಳಿನ್ಕುಮಾರ್ ಕಟೀಲ್, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕ ಸಂಜೀವ ಮಠಂದೂರು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಎ.ವಿ.ನಾರಾಯಣ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕಮಲಾಕ್ಷ ಪಂಡಿತ್, ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿ ಶೇಖರ ಗೌಡ, ಬಿಜೆಪಿ ಕೊಲ ಮಹಾಶಕ್ತಿಕೇಂದ್ರದ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ, ಒಕ್ಕಲಿಗ ಗೌಡ ಸಂಘದ ಕಡಬ ತಾಲೂಕು ಅಧ್ಯಕ್ಷ ಸುರೇಶ್ ಗೌಡ ಬೈಲು, ಉಪಾಧ್ಯಕ್ಷ ದಯಾನಂದ ಆಲಡ್ಕ, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ ಪುಲಾರ, ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ, ಎಪಿಎಂಸಿ ಮಾಜಿ ನಿರ್ದೇಶಕ ಕುಶಾಲಪ್ಪ ಗೌಡ ಅನಿಲ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಟ್ರಸ್ಟಿ ಬಾಲಕೃಷ್ಣ ಬಳ್ಳೇರಿ, ರವಿ ಮುಂಗ್ಲಿಮನೆ, ರಾಧಾಕೃಷ್ಣ ಕೆರ್ನಡ್ಕ, ಬಿಜೆಪಿ ಮುಖಂಡರಾದ ಕೆ.ವಿ.ತೀರ್ಥರಾಮ, ಆಶಾತಿಮ್ಮಪ್ಪ ಗೌಡ, ಹರೀಶ್ ಕಂಜಿಪಿಲಿ ಸೇರಿದಂತೆ ಸ್ಥಳೀಯ ಗ್ರಾ.ಪಂ.ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದು ರಮೇಶ ಗೌಡ ಅವರ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದರು.
ಮೂವರ ಕೃತ್ಯ:
ಪೆರ್ಲಕಲ್ಲಂಡದ ಪುರಂದರ ಗೌಡ ಅವರ ಪುತ್ರ ಹರೀಶ, ಆತನ ತಂಗಿಯ ಗಂಡ ಸಂತೋಷ್ ಹಾಗೂ ಧರ್ಣಪ್ಪ ಯಾನೆ ಬೆಳಿಯಪ್ಪ ಎಂಬವರು ಸೇರಿಕೊಂಡು ರಮೇಶ್ ಗೌಡರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿ ಮೃತ ರಮೇಶ ಗೌಡ ಅವರ ಪತ್ನಿ ಗೀತಾ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 119/2024 ಕಲಂ: 103(1) ಜೊತೆಗೆ 3(5) BNS-2023 ರಂತಯೆ ಪ್ರಕರಣ ದಾಖಲಾಗಿರುತ್ತದೆ.
ಪರಿಸರದಲ್ಲೇ ಇದ್ದ ಆರೋಪಿ:
ಕೊಲೆ ಆರೋಪಿ ಹರೀಶ ಘಟನೆ ಬಳಿಕ ಸ್ಥಳದಿಂದ ತಲೆಮರೆಸಿಕೊಂಡಿದ್ದ. ಆರೋಪಿ ಘಟನಾ ಸ್ಥಳದಿಂದ ತಾರಿಪಡ್ಪು, ಪುರ ಮೂಲಕ ಅಲೆಕ್ಕಿ ಕಡೆಗೆ ತೆರಳಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ತಡರಾತ್ರಿಯೇ ಆರೋಪಿಯನ್ನು ಅಲೆಕ್ಕಿ ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದರು ಎಂದು ತಿಳಿದುಬಂದಿದೆ. ಈತ ಕೃತ್ಯಕ್ಕೆ ಬಳಸಿದ್ದ ರಕ್ತಸಿಕ್ತವಾದ ಕತ್ತಿಯನ್ನು ಕಲ್ಲಂಡ ಎಂಬಲ್ಲಿ ತೋಡಿನ ಇನ್ನೊಂದು ಬದಿಗೆ ಎಸೆದಿದ್ದ. ಈ ಕತ್ತಿಯನ್ನು ನ.೯ರಂದು ಗಮನಿಸಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ವರದಿಯಾಗಿದೆ.
ಸಾಮಾಜಿಕ ಸಂಘಟಕ:
ವೆಂಕಪ್ಪ ಗೌಡರ ಹಿರಿಯ ಪುತ್ರರಾಗಿದ್ದ ಮೃತ ರಮೇಶ ಗೌಡ ಅವರು ಮನೆಯ ಜವಾಬ್ದಾರಿಯೊಂದಿಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರು ಆಲಂತಾಯ-ಪೆರ್ಲ ಶ್ರೀ ಷಣ್ಮುಖ ಭಜನಾ ಮಂಡಳಿಯ ಅಧ್ಯಕ್ಷರಾಗಿದ್ದು ಕಳೆದ ಡಿಸೆಂಬರ್ನಲ್ಲಿ ಮನೆ ಮನೆಗೆ ಭಜಕ ನಡಿಗೆ ನಡೆಸಿ ಪೆರ್ಲ ದೇವಸ್ಥಾನದ ವಠಾರದಲ್ಲಿ ಅದರ ಮಂಗಳೋತ್ಸವ, ಪ್ರಥಮ ವಾರ್ಷಿಕೋತ್ಸವ ಆಚರಿಸಿದ್ದರು. ಉತ್ತಮ ಭಜನಾ ಸಂಘಟಕರಾಗಿ ಗುರುತಿಸಿಕೊಂಡಿದ್ದ ಇವರು ಪ್ರಸ್ತುತ ಗೋಳಿತ್ತೊಟ್ಟು ವಲಯ ಭಜನಾ ಪರಿಷತ್ನ ಅಧ್ಯಕ್ಷರಾಗಿದ್ದರು. ಇದರೊಂದಿಗೆ ಒಕ್ಕಲಿಗ ಗೌಡ ಸಂಘದ ಆಲಂತಾಯ ಗ್ರಾಮ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವದಲ್ಲೂ ಸಕ್ರೀಯವಾಗಿ ತೊಡಗಿಕೊಂಡಿದ್ದರು. ಮೃತ ರಮೇಶ ಗೌಡರವರ ತಂದೆ ಅನಾರೋಗ್ಯ ಪೀಡಿತರಾಗಿದ್ದಾರೆ. ತಾಯಿ, ಪತ್ನಿ ಮನೆಯಲ್ಲೇ ಇದ್ದಾರೆ. ಹಿರಿಯ ಮಗ 10ನೇ ತರಗತಿಯಲ್ಲೂ ಪುತ್ರಿ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮನೆಗೆ ಆಧಾರವಾಗಿದ್ದ ರಮೇಶ ಗೌಡರನ್ನು ಕಳೆದುಕೊಂಡ ಅವರ ಕುಟುಂಬ ಈಗ ಸಂಕಷ್ಟಕ್ಕೆ ಸಿಲುಕಿದೆ.
ಆರೋಪಿಗೆ ಕ್ರಿಮಿನಲ್ ಹಿನ್ನೆಲೆ?:
ಆರೋಪಿ ಹರೀಶ್ ಕ್ರಿಮಿನಲ್ ಹಿನ್ನೆಲೆ ಉಳ್ಳವನಾಗಿದ್ದು ಈತನ ವಿರುದ್ಧ ಪೋಕ್ಸೋ, ಹಲ್ಲೆ ಸೇರಿದಂತೆ ಹಲವು ಪ್ರಕರಣಗಳು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ವರದಿಯಾಗಿದೆ.