ಘನತ್ಯಾಜ್ಯ ಘಟಕದಲ್ಲಿನ ಒಣಕಸ ತೆರವುಗೊಳಿಸುವಂತೆ ಆಗ್ರಹ
ಪೆರಾಬೆ: ಗ್ರಾ.ಪಂ.ನ ಘನತ್ಯಾಜ್ಯ ಘಟಕದಲ್ಲಿ ಒಣಕಸ ತುಂಬಿದ್ದು ನಿರ್ವಹಣೆ ಕಷ್ಟವಾಗುತ್ತಿದೆ. ಆದ್ದರಿಂದ ಘಟಕದಲ್ಲಿ ತುಂಬಿರುವ ಒಣಕಸ ತೆರವುಗೊಳಿಸುವ ಸಂಬಂಧ ಸೂಕ್ತ ಕ್ರಮಕ್ಕಾಗಿ ತಾ.ಪಂ.ಇಒ ಅವರಿಗೆ ಮನವಿ ಮಾಡಲು ಪೆರಾಬೆ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಭೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ.,ಅವರ ಅಧ್ಯಕ್ಷತೆಯಲ್ಲಿ ನ.6ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಮನವಳಿಕೆಯಲ್ಲಿರುವ ಗ್ರಾ.ಪಂ.ನ ಘನತ್ಯಾಜ್ಯ ಘಟಕದಲ್ಲಿ ಒಣಕಸ ತುಂಬಿರುವುದರಿಂದ ನಿರ್ವಹಣೆ ಕಷ್ಟವಾಗುತ್ತಿದೆ. ಎಂಆರ್‌ಎಫ್ ಘಟಕದವರಿಗೆ ತ್ಯಾಜ್ಯ ಖಾಲಿ ಮಾಡುವ ಬಗ್ಗೆ ತಿಳಿಸಿದರೂ ತೆಗೆದುಕೊಂಡು ಹೋಗಿರುವುದಿಲ್ಲ ಎಂಬ ವಿಚಾರ ಸಭೆಯಲ್ಲಿ ಪ್ರಸ್ತಾಪಗೊಂಡು ಚರ್ಚೆ ನಡೆಯಿತು. ಬಳಿಕ ಈ ವಿಚಾರವನ್ನು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರ ಗಮನಕ್ಕೆ ತರಲು ಸಭೆಯಲ್ಲಿ ನಿರ್ಣಯಿಸಲಾಯಿತು. ಅಲ್ಲದೇ ಘನತ್ಯಾಜ್ಯ ಘಟಕದ ನಿರ್ವಹಣೆಯ ಬಗ್ಗೆ ಸಂಬಂಧಪಟ್ಟ ಸಂಜೀವಿನಿ ಅಧಿಕಾರಿಯವರು ಬಂದು ಸಂಜೀವಿನಿ ಸಭೆ ನಡೆಸಬೇಕೆಂಬ ಸದಸ್ಯರ ಆಗ್ರಹದಂತೆ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.
ಗುಮಾಸ್ತ,ಕಾರ್ಯದರ್ಶಿ ನೇಮಕಕ್ಕೆ ಆಗ್ರಹ:
ಗ್ರಾಮ ಪಂಚಾಯತ್‌ನಲ್ಲಿ ಖಾಲಿ ಇರುವ ಗುಮಾಸ್ತ/ಡಾಟಾ ಎಂಟ್ರಿ ಆಪರೇಟರ್ ಮತ್ತು ಕಾರ್ಯದರ್ಶಿ ನೇಮಕ ಮಾಡುವಂತೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಬರೆಯಲು ನರ್ಣಯಿಸಲಾಯಿತು.
ನಿವೇಶನ ಮಾರಾಟಕ್ಕೆ ಅವಕಾಶವಿಲ್ಲ:
ಬೆಳ್ಪಾಡಿಯಲ್ಲಿರುವ ಪಂಚಾಯತ್ ನಿವೇಶನವನ್ನು ಫಲಾನುಭವಿ ಕಾನೂನು ಬಾಹಿರವಾಗಿ ಮಾರಾಟ ಮಾಡಿದ್ದು, ಪ್ರಸ್ತುತ ಆ ನಿವೇಶನದಲ್ಲಿ ವಾಸವಾಗಿರುವ ಮಂಜುನಾಥ ಎಂಬವರು ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ಬೆಳ್ಪಾಡಿ ನಿವಾಸಿಗಳು ಸಲ್ಲಿಸಿರುವ ಅರ್ಜಿಯ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಸದ್ರಿ ನಿವೇಶನವನ್ನು ಮಂಜುನಾಥರವರಿಗೆ ಮಾರಾಟ ಮಾಡಿರುವ ಅನ್ನಪೂರ್ಣರವರಿಗೆ ನೋಟಿಸ್ ನೀಡುವುದು ಹಾಗೂ ನಿವೇಶನ ಜಮೀನಿನಲ್ಲಿ ಈಗಾಗಲೇ ವಾಸ್ತವ್ಯ ಇರುವವರು ಸದ್ರಿ ನಿವೇಶನವನ್ನು ಬೇರೆಯವರಿಗೆ ಮಾರಾಟ/ಖರೀದಿ ಮಾಡಲು ಅವಕಾಶ ಇಲ್ಲದಿರುವ ಬಗ್ಗೆ ಬಗ್ಗೆ ನಾಮಫಲಕ ಅಳವಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸ್ಥಳ ಪರಿಶೀಲನೆಗೆ ನಿರ್ಣಯ:
ಹೊಸಂಗಡಿ ನಿವಾಸಿ ಸೈನಾಜ್ ಬಾನು ಎಂಬವರ ಜಾಗದ ಕಂಪೌಂಡ್ ಬದಿಯಲ್ಲಿ ಪಕ್ಕದ ಮನೆಯ ರಮ್ಲ ಎಂಬವರು ಚರಂಡಿ ನಿರ್ಮಾಣ ಮಾಡಿರುವ ಬಗ್ಗೆ ಬಂದಿರುವ ಅರ್ಜಿಯ ಕುರಿತು ಚರ್ಚೆ ನಡೆಸಿ ಈ ಬಗ್ಗೆ ಸ್ಥಳ ಪರಿಶೀಲನೆ ಮಾಡುವುದೆಂದು ನಿರ್ಣಯಿಸಲಾಯಿತು. ಕೋಚಕಟ್ಟೆ ನಿವಾಸಿ ಮಹಮ್ಮದ್ ಶಾಹಿದ್‌ರವರು ಅವರ ಸ್ಥಿರಾಸ್ತಿ ಮತ್ತು ಮನೆಗೆ ಸಂಪರ್ಕ ಕಲ್ಪಿಸಿದ ರಸ್ತೆಗೆ ತಡೆಯೊಡ್ಡಿರುವ ಬಗ್ಗೆ ನೀಡಿರುವ ದೂರಿನ ಬಗ್ಗೆಯೂ ಸ್ಥಳ ಪರಿಶೀಲನೆ ಮಾಡಲು ನಿರ್ಣಯಿಸಲಾಯಿತು. ಪೂಂಜ ನಿವಾಸಿ ಮಹಮ್ಮದ್‌ರವರಿಗೆ ಕಟ್ಟಡ ರಚನೆ ಪರವಾನಿಗೆ ನೀಡಲು ಹಮೀದ್ ಪಿ.ಎ.,ಎಂಬವರು ಆಕ್ಷೇಪಣೆಯನ್ನು ನೀಡಿದ್ದು ಈ ಬಗ್ಗೆಯೂ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು. ಮನವಳಿಕೆ ನಡ್ಡೊಟ್ಟು ಸುರುಳಿ ಸಂಪರ್ಕ ರಸ್ತೆಗೆ ಅಡ್ಡಿಪಡಿಸುವ ಬಗ್ಗೆ ಬಂದ ಅರ್ಜಿಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಸದಸ್ಯರ ನಾಮನಿರ್ದೇಶನ:
ಕುಂತೂರುಪದವು ಶಾಲಾ ಎಸ್‌ಡಿಎಂಸಿಗೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ., ಕುಂತೂರು ಸರಕಾರಿ ಉ.ಹಿ.ಪ್ರಾ.ಶಾಲೆಯ ಎಸ್‌ಡಿಎಂಸಿಗೆ ಚಂದ್ರಶೇಖರ ರೈ ಹಾಗೂ ಇಡಾಲ ಕಿ.ಪ್ರಾ.ಶಾಲೆಯ ಎಸ್‌ಡಿಎಂಸಿಗೆ ಸದಾನಂದ ಕೆ.,ರವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಇಡಾಲ ಶಾಲಾ ಕೊಠಡಿಗಳ ಸುರಕ್ಷತೆಯ ಬಗ್ಗೆ ಬಂದಿರುವ ಅರ್ಜಿಯನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಲು ನಿರ್ಣಯಿಸಲಾಯಿತು. ಶೇ.೫ರ ನಿಧಿಯಲ್ಲಿ ಅರ್ಹ ಫಲಾನುಭವಿಗೆ ಸಹಾಯಧನ, ವೈದ್ಯಕೀಯ ಸಹಾಯಧನ ನೀಡುವ ಬಗ್ಗೆ ನಿರ್ಣಯಿಸಲಾಯಿತು. ಇತರೇ ವಿಚಾರಗಳ ಕುರಿತು ಚರ್ಚೆ ನಡೆಯಿತು.
ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ಚಂದ್ರಶೇಖರ ರೈ ಅಗತ್ತಾಡಿ, ಮೋಹನ್ ದಾಸ್ ರೈ, ಬಿ.ಕೆ ಕುಮಾರ, ಸದಾನಂದ ಕುಂಟ್ಯಾನ, ಪಿ.ಜಿ ರಾಜು, ಕೃಷ್ಣ ವೈ, ಸುಶೀಲ, ಫಯಾಝ್ ಸಿ.ಎಂ., ಮೋಹಿನಿ, ಮಮತ, ಕಾವೇರಿ, ಲೀಲಾವತಿಯವರು ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಶಾಲಿನಿ ಕೆ.ಬಿ.ಸ್ವಾಗತಿಸಿ, ಜಮಾಖರ್ಚು, ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿಗಳನ್ನು ಸಭೆಗೆ ಮಂಡಿಸಿದರು. ಸಿಬ್ಬಂದಿಗಳು ಸಹಕರಿಸಿದರು.