ಉಪ್ಪಿನಂಗಡಿ: ಇಲ್ಲಿನ ವಲಯ ಅರಣ್ಯ ವ್ಯಾಪ್ತಿಗೆ ಒಳಪಟ್ಟ ಹತ್ಯಡ್ಕ ಗ್ರಾಮದ ಪಲಸ್ತಡ್ಕ ಎಂಬಲ್ಲಿ ಸರಕಾರಿ ರಕ್ಷಿತಾರಣ್ಯದಿಂದ ವ್ಯಾಪಕವಾಗಿ ಮರಗಳ ಮಾರಣಹೋಮ ನಡೆಯುತ್ತಿದೆ ಎಂಬ ಗ್ರಾಮಸ್ಥರ ದೂರು ಮತ್ತು ಪತ್ರಿಕಾ ವರದಿಯ ಹಿನ್ನೆಲೆಯಲ್ಲಿ ಪತ್ತೆ ಕಾರ‍್ಯಾಚರಣೆ ನಡೆಸಿದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಪ್ರಕರಣವನ್ನು ಭೇದಿಸಿ, ಕಾಡಿನಿಂದ ಕಳವು ಮಾಡಲಾಗಿದ್ದ ಮರಗಳನ್ನು ಪತ್ತೆ ಮಾಡಿ, ಓರ್ವ ಆರೋಪಿಯನ್ನು ಬಂಧಿಸಿದೆಯಲ್ಲದೆ, ಮರಗಳನ್ನು ಕಡಿಯಲು ಉಪಯೋಗಿಸಿದ ಯಂತ್ರಗಳ ಸಹಿತ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.
ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮತ್ತು ಸಿಬ್ಬಂದಿಗಳ ತಂಡ ಹತ್ಯಡ್ಕ ಗ್ರಾಮದ ಪಲಸ್ತಡ್ಕ ಎಂಬಲ್ಲಿ ಕಾರ‍್ಯಾಚರಣೆ ನಡೆಸಿ ಸರಕಾರಿ ಅಧೀನದ ಕಾಡಿನಲ್ಲಿ ಮರುವ ಜಾತಿಯ 2 ಮರ, ಸರಳ ಜಾತಿಯ 2 ಮರ, ಚೇರೆ ಜಾತಿಯ-1 ಮರ ಮತ್ತು ಬನ್ಪು ಜಾತಿಯ 1 ಮರಗಳನ್ನು ಕಡಿದು ಸಾಗಾಟ ಮಾಡಿರುವುದನ್ನು ಪತ್ತೆ ಹಚ್ಚಿದೆ. ಈ ಪೈಕಿ ಬನ್ಪು ಮರದ 23 ಸೈಜುಗಳ ಸಹಿತ 1 ಮರ ಕತ್ತರಿಸುವ ಯಂತ್ರವನ್ನು ವಶಕ್ಕೆ ಪಡೆದುಕೊಂಡು ಆರೋಪಿ ಕಡಬ ತಾಲೂಕು ಶಿರಾಡಿ ಗ್ರಾಮದ ಬಾಗಿಲುಗದ್ದೆ ಮನೆ ನಿವಾಸಿ ಪ್ರಕಾಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದೆ. ಆರೋಪಿ ಪ್ರಕಾಶ್‌ನನ್ನು ಬಂಧಿಸಲಾಗಿದ್ದು, ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಯತೀಂದ್ರ ಕುಮಾರ್, ಗಸ್ತು ಅರಣ್ಯ ಪಾಲಕರಾದ ಸುನೀಲ್ ನಾಯ್ಕ, ಶಿವಾನಂದ ಕುದರಿ, ಜೀಪು ಚಾಲಕ ಕಿಶೋರ್ ಕುಮಾರ್ ಭಾಗವಹಿಸಿದ್ದರು.