8 ದಿನದ ಕಾಲಾವಕಾಶ ಕೇಳಿದ ಅಪರ ಉಪನಿರ್ದೇಶಕ ಮುಷ್ಕರ ಹಿಂಪಡೆದು ಕೆಲಸಕ್ಕೆ ಗೈರಾಗುವ ಮೂಲಕ ಪ್ರತಿಭಟನೆ ಮುಂದುವರಿಕೆ
ಪುತ್ತೂರು:ಕರ್ನಾಟಕ ರಾಜ್ಯ ರಾಷ್ಟ್ರೀಯ ಜೀವನೋಪಾಯ ಅಭಿಯಾನ(ಸಂಜೀವಿನಿ ಯೋಜನೆ)ದಡಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ವ-ಸಹಾಯ ಗುಂಪುಗಳ ಒಕ್ಕೂಟದ ರಾಜ್ಯ ಗ್ರಾಮ ಪಂಚಾಯತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರ(ಎಂಬಿಕೆ) ಮತ್ತು ಸ್ಥಳಿಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು(ಎಲ್‌ಸಿಆರ್‌ಪಿ)ಸಮಾನ ಕೆಲಸಕ್ಕೆ ಸಮಾನ ವೇತನ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ.11ರಂದು ಅನಿಽಷ್ಟ ಮುಷ್ಕರ ಆರಂಭಿಸಿದ್ದಾರೆ.
ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಆರಂಭಗೊಂಡ ಅನಿರ್ಧಿಷ್ಟಾವಧಿ ಮುಷ್ಕರ ಸ್ಥಳಕ್ಕೆ ರಾತ್ರಿ ವೇಳೆ ಆಗಮಿಸಿದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಪರ ಉಪನಿರ್ದೇಶಕ ಅರ್ಜುನ್ ಒಡೆಯರ್ ಅವರು, 8 ದಿನಗಳ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಮುಷ್ಕರ ನಿರತರು ಮುಷ್ಕರ ಕೊನೆಗೊಳಿಸಿ,ಕೆಲಸಕ್ಕೆ ಗೈರಾಗುವ ಮೂಲಕ ಪ್ರತಿಭಟನೆ ಮುಂದುವರಿಸಲು ತೀರ್ಮಾನಿಸಿದ್ದಾರೆ.
ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವ ಮೊದಲು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರಿಗೆ ಬೇಡಿಕೆಗಳ ಮನವಿಯನ್ನು ನೀಡಲಾಗಿತ್ತು.ಅದಕ್ಕೆ ಸ್ಪಂದನೆ ದೊರೆಯದೇ ಇದ್ದ ಹಿನ್ನೆಲೆಯಲ್ಲಿ ಮುಷ್ಕರ ಆರಂಭಿಸಲಾಗಿದೆ.ಕರ್ನಾಟಕ ರಾಜ್ಯ ರಾಷ್ಟ್ರೀಯ ಜೀವನೋಪಾಯ ಅಭಿಯಾನ(ಸಂಜೀವಿನಿ ಯೋಜನೆ)ದಡಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ವ-ಸಹಾಯ ಗುಂಪುಗಳ ಒಕ್ಕೂಟವನ್ನು ರಚಿಸಿಕೊಂಡು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಅನುಷ್ಠಾನಿಸುವ ನಿಟ್ಟಿನಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿರುತ್ತೇವೆ.ಇನ್ನೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಹಾಗೂ ಜೀವನ ಭದ್ರತೆ ದೃಷ್ಠಿಯಿಂದ ಹಲವು ಬೇಡಿಕೆಗಳನ್ನು ಈಡೇರಿಸಲು ಈ ಹಿಂದೆ ಹಲವು ಬಾರಿ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಲಾಗಿತ್ತಾದರೂ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯು ಮೇಲಿನ ಉಲ್ಲೇಖಕ್ಕೆ ಸಂಬಂಧಿಸಿದಂತೆ ಆದೇಶ/ಸುತ್ತೋಲೆಯನ್ನು ಹೊರಡಿಸಿದ್ದು ಅದು ಗ್ರಾಮ ಪಂಚಾಯತಿ ಒಕ್ಕೂಟದ ಎಮ್‌ಬಿಕೆ ಮತ್ತು ಎಲ್‌ಸಿಆರ್‌ಪಿಗಳಿಗೆ ಮಾರಕವಾಗಿದೆ.ಈ ಹಿಂದೆ ಹಲವಾರು ಬಾರಿ ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಾಗ ಸರ್ಕಾರದ ಅಭಿಯಾನ ನಿರ್ದೇಶಕರು ಸಕಾರತ್ಮಾಕವಾಗಿ ಸ್ಪಂದಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿರುತ್ತಾರೆ.ಆದರೆ ಸದರಿ ಉಲ್ಲೇಖದಲ್ಲಿ ಮುಖ್ಯ ಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ಗೌರವಧನವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದ್ದು ಈ ಆದೇಶಕ್ಕೆ ರಾಜ್ಯದ ಎಲ್ಲಾ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರು ಮತ್ತು ಸ್ಥಳಿಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಮಹಾ ಒಕ್ಕೂಟ ವಿರೋಽಸುತ್ತಿದ್ದು ಸದರಿ ಆದೇಶವನ್ನು ಹಿಂಪಡೆದು ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಸರ್ಕಾರದಿಂದಲೇ ನೇರವಾಗಿ ಪಾವತಿಸಬೇಕಾಗಿ ಹಾಗೂ ಇನ್ನೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಹಾಗೂ ಜೀವನ ಭದ್ರತೆ ದೃಷ್ಟಿಯಿಂದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.ದ.ಕ ಜಿಲ್ಲೆ ಸಹಿತ ರಾಜ್ಯದಿಂದ ಸುಮಾರು 6 ಸಾವಿರ ಮಂದಿ ಮುಷ್ಕರದಲ್ಲಿ ಪಾಲ್ಗೊಂಡರು.ಪುತ್ತೂರು, ಕಡಬ ತಾಲೂಕಿನಿಂದ 25ಕ್ಕೂ ಮಿಕ್ಕಿ ಹೆಚ್ಚು ಸದಸ್ಯರು ಮುಷ್ಕರದಲ್ಲಿ ಪಾಲ್ಗೊಂಡರು.ರಾತ್ರಿ ವೇಳೆ ಮುಷ್ಕರ ನಿರತರ ಬಳಿಗೆ ಇಲಾಖಾ ಅಪರ ಉಪನಿರ್ದೇಶಕ ಅರ್ಜುನ್ ಒಡೆಯರ್ ಅವರು ಆಗಮಿಸಿ 8 ದಿನದ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು ಎಂದು ಮುಷ್ಕರ ನಿರತರು ತಿಳಿಸಿದ್ದಾರೆ.
ಬೇಡಿಕೆಗಳು
ಮುಖ್ಯ ಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ಗೌರವಧನವನ್ನು ಪರಿಷ್ಕರಿಸಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು.ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರುಗಳಿಗೆ ರೂ.೨೦ ಸಾವಿರ ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ ರೂ.10 ಸಾವಿರ ರೂಪಾಯಿ ವೇತನ ನಿಗದಿಪಡಿಸಬೇಕು.ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.ಸರ್ಕಾರದಿಂದ ನೇರವಾಗಿ ಮುಖ್ಯ ಪುಸ್ತಕ ಬರಹಗಾರರಿಗೆ, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ ವೇತನ ಜಮೆಯಾಗಬೇಕು.ನಮ್ಮ ಕೆಲಸದ ಜೊತೆಗೆ ಗ್ರಾಮ ಪಂಚಾಯತಿಗಳ ಹಲವಾರು ಕೆಲಸಗಳನ್ನು ನಿರ್ವಹಣೆ ಮಾಡುತ್ತಿದ್ದು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವಹಿಸಬೇಕು.ವೇತನ ಸಹಿತ ಹೆರಿಗೆ ರಜೆ ಮಂಜೂರು ಮಾಡಬೇಕು.ಮಹಿಳಾ ಸಿಬ್ಬಂದಿಗಳಾದ ನಮ್ಮ ಮೇಲೆ ನಡೆಯುತ್ತಿರುವ ಮಾನಸಿಕ ದೌರ್ಜನ್ಯವನ್ನು ನಿಲ್ಲಿಸಬೇಕು.ಇಎಸ್‌ಐ ಮತ್ತು ಪಿಎಫ್ ಸೌಲಭ್ಯಗಳನ್ನು ಒದಗಿಸುವುದು.
ರಾಜ್ಯ ಮಹಾ ಒಕ್ಕೂಟದ ಅಧ್ಯಕ್ಷೆ ರುದ್ರಮ್ಮ ಅವರ ನೇತೃತ್ವದಲ್ಲಿ ನಾವು ಅನಿಽಷ್ಟಾವಽ ಮುಷ್ಕರ ನಡೆಸುವ ನಿರ್ಧಾರ ಕೈಗೊಂಡಿದ್ದೆವು.ರಾಜ್ಯದಿಂದ ಸುಮಾರು 6 ಸಾವಿರಕ್ಕೂ ಮಿಕ್ಕಿ ಮಂದಿ ಮುಷ್ಕರದಲ್ಲಿ ಪಾಲ್ಗೊಂಡಿದ್ದೆವು.ಬೆಳಿಗ್ಗೆ ಅಧಿಕಾರಿಯೊಬ್ಬರು ಬಂದು ನಮ್ಮ ಮನವಿ ಸ್ವೀಕರಿಸಿದರು.ಆದರೆ ನಮ್ಮ ಬೇಡಿಕೆಗೆ ಭರವಸೆ ಸಿಗದ ಕಾರಣ ಮುಷ್ಕರ ಮುಂದುವರಿದಿತ್ತು.ರಾತ್ರಿ ವೇಳೆ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಪರ ಉಪನಿರ್ದೇಶಕ ಅರ್ಜುನ್ ಒಡೆಯರ್ ಅವರು ಬಂದು ನ.25ರ ತನಕ ಕಾಲಾವಕಾಶ ಕೇಳಿದ್ದಾರೆ.ಹಾಗಾಗಿ ಒಕ್ಕೂಟದ ರಾಜ್ಯಾಧ್ಯಕ್ಷರ ಸೂಚನೆಯಂತೆ ಅನಿಽಷ್ಟಾವಽ ಮುಷ್ಕರವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಮುಂದೆ ಕೆಲಸಕ್ಕೆ ಗೈರಾಗುವ ಮೂಲಕ ಪ್ರತಿಭಟನೆ ಮುಂದುವರಿಸಲಿದ್ದೇವೆ-
ಸಂಧ್ಯಾ, ಅಧ್ಯಕ್ಷರು ಎಂಬಿಕೆ, ಎಲ್‌ಸಿಆರ್‌ಪಿ
ಮಹಾ ಒಕ್ಕೂಟ ಪುತ್ತೂರು ಕಡಬ ತಾಲೂಕು