ನಗರಸಭೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ

0

ಪುತ್ತೂರು:ಪೌರ ಕಾರ್ಮಿಕರನ್ನೆಲ್ಲಾ ಸನ್ಮಾನಿಸಿ, ಅವರಿಗೆ ಬೈಸಿಕಲ್, ಟಿಫಿನ್ ಬಾಕ್ಸ್ ಮತ್ತು ರೂ.3 ಲಕ್ಷದ ಆರೋಗ್ಯ ವಿಮೆಯೊಂದಿಗೆ ಗೌರವ ನೀಡಿದ ವಿಶೇಷ ಕಾರ್ಯಕ್ರಮವಾಗಿ ಪುತ್ತೂರು ನಗರಸಭೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ನ.12ರಂದು ನಡೆಯಿತು.ಬೆಳಿಗ್ಗೆ ಗಾಂಧಿಕಟ್ಟೆ ಬಳಿಯಿಂದ ಪೌರ ಕಾರ್ಮಿಕರ ಪುರಮೆರವಣಿಗೆ ಪುರಭವನದ ತನಕ ನಡೆಯಿತು.ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಜಾಥಾಕ್ಕೆ ಚಾಲನೆ ನೀಡಿದರು.ಬಳಿಕ ಪುರಭವನದಲ್ಲಿ ಪೌರ ಕಾರ್ಮಿಕರ ದಿನಾಚರಣೆಯ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ವೇಸ್ಟ್ ಮ್ಯಾನೇಜ್‌ಮೆಂಟ್ ದೊಡ್ಡ ಚಾಲೆಂಜ್-ಟ್ಯಾಲೆಂಟ್ ಇದ್ದವ ಪೌರ ಕಾರ್ಮಿಕನಾಗಬಲ್ಲ:
ಶಾಸಕ ಅಶೋಕ್ ಕುಮಾರ್ ರೈ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಗರ ಅಲಂಕಾರಗೊಂಡು ಫ್ರೆಶ್ ಆಗಿರಬೇಕಾದರೆ ನಗರಸಭೆ ಪೌರಕಾರ್ಮಿಕರು ಕಾರಣರು.ಅವರು ಒಂದು ದಿನ ಇಲ್ಲವಾದರೆ ನಗರಸಭೆ ಸದಸ್ಯರಿಗೆ ಕಿವಿ ಬಿಡಲು ಆಗುವುದಿಲ್ಲ.ಯಾಕೆಂದರೆ ವೇಸ್ಟ್ ಮ್ಯಾನೇಜ್‌ಮೆಂಟ್ ಮಾಡುವುದು ದೊಡ್ಡ ಚಾಲೆಂಜ್.ಪೌರ ಕಾರ್ಮಿಕರು ಬೆಳಿಗ್ಗೆ 5 ಗಂಟೆಯಿಂದ ಪುತ್ತೂರು ನಗರದ ಸ್ವಚ್ಛತೆಯನ್ನು ಕೈಗೊಳ್ಳುವ ಮೂಲಕ ನಮ್ಮ ನಗರ ಎಂದು ಕೆಲಸ ಮಾಡುತ್ತಾರೆ.ಇವತ್ತು ಬೇರೆ ಬೇರೆ ಐಎಎಸ್, ಐಪಿಎಸ್ ಸಹಿತ ಅನೇಕ ಅಧಿಕಾರಿಗಳು ಇದ್ದಾರೆ.ಆದರೆ ನಗರ ಸ್ವಚ್ಛತೆಯನ್ನು ಮಾಡುವ ಪೌರ ಕಾರ್ಮಿಕರಿಗೆ ಸರಕಾರ ವಿಶೇಷವಾಗಿ ಗೌರವಿಸುತ್ತದೆ.ಅವರ ಕ್ರಿಯಾಶೀಲತೆ ಹೆಚ್ಚು ಮಾಡಲು ಈ ಕಾರ್ಯಕ್ರಮ ಮಾಡಲಾಗುತ್ತದೆ.ಇವತ್ತು ಎಲ್ಲಾ ಟ್ಯಾಲೆಂಟ್ ಇದ್ದವನು ಮಾತ್ರ ಪೌರ ಕಾರ್ಮಿಕನಾಗಬಲ್ಲ.ಇಲ್ಲದಿದ್ದರೆ ಆಗಲು ಸಾಧ್ಯವಿಲ್ಲ.ಒಬ್ಬ ಐಎಎಸ್ ಮಾಡುವುದು ದೊಡ್ಡ ಕೆಲಸವಲ್ಲ.ಯಾಕೆಂದರೆ ಅವರು ಒಳಗಡೆ ಕೂತು ಆದೇಶ ಮಾತ್ರ ಬರೆಯುವುದು.ಆದರೆ ಪೌರಕಾರ್ಮಿಕರು ಫೀಲ್ಡ್‌ನಲ್ಲಿ ಕೆಲಸ ಮಾಡುವವರು.ಜನರ ಬೇಡಿಕೆ ಈಡೇರಿಸುವವರು.ಸ್ವಲ್ಪ ಆಚೆ ಈಚೆ ಆದರೂ ನಾಲ್ಕು ಜನರ ಮಾತನ್ನು ಕೇಳುವವರು.ಹಾಗಾಗಿ ಅವರಲ್ಲಿ ಎಲ್ಲಾ ಟ್ಯಾಲೆಂಟ್ ಇರುತ್ತದೆ ಎಂದು ಹೇಳಿದರು.


ಪುತ್ತೂರು ನಗರಸಭೆ ಬೆಳೆಯುತ್ತಿರುವ ನಗರವಾಗಿದೆ.ಇವತ್ತು ನಗರಸಭೆ ರಸ್ತೆ ದುರಸ್ತಿ ಮಾಡಲು ನನಗೆ,ನಗರಸಭೆ ಸದಸ್ಯರಿಗೆ, ಅಽಕಾರಿಗಳಿಗೆ ಎಲ್ಲರಿಗೂ ಮುತುವರ್ಜಿ ಇದೆ.ಆದರೆ ಕೆಲವೊಂದು ವಿಚಾರಗಳು ಕಾನೂನಿನ ಹಿಂದೆ ಮುಂದೆ ನೋಡಿ ಕೆಲಸ ಮಾಡಬೇಕು.ನಗರಸಭೆ ಆಡಳಿತ, ನಾವೆಲ್ಲ ಜೊತೆ ಸೇರಿ ಪಕ್ಷಾತೀತವಾಗಿ ಅಭಿವೃದ್ದಿಯ ಪರ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದ ಶಾಸಕರು, ಮಳೆಯಿಂದ ಯಾವ ಕೆಲಸ ಮಾಡಲೂ ಸಾಧ್ಯವಾಗಿಲ್ಲ.ಈಗಾಗಲೇ ಟೆಂಡರ್ ನೀಡಿ ದುರಸ್ತಿ ಕೈಗೊಳ್ಳಲಾಗಿದೆ.ಇನ್ನು ಒಂದು ವಾರದಲ್ಲಿ ಡಾಮರೀಕರಣ ಮಿಕ್ಸಿಂಗ್ ಮಾಡುವ ಸಂಸ್ಥೆ ಆರಂಭಗೊಳ್ಳುತ್ತದೆ.ಅದಾದ ಕೂಡಲೇ ಎಲ್ಲಾ ದುರಸ್ತಿ ಕಾರ್ಯ ನಡೆಯಲಿದೆ.ಕಸ ವಿಲೇವಾರಿಯಲ್ಲಿ ದೇಶದಲ್ಲೇ ಹೊಸ ಕಲ್ಪನೆಯನ್ನು ಇಟ್ಟುಕೊಂಡು ಬಯೋಗ್ಯಾಸ್ ಉತ್ಪತ್ತಿ ಮಾಡುವ ಕೆಲಸ ಆಗುತ್ತಿದೆ.ಇದರ ಜೊತೆಗೆ ನಗರ ಬೆಳೆಯಬೇಕಾದರೆ ಡ್ರೈನೇಜ್ ಸಿಸ್ಟಮ್ ಆಗಬೇಕು ಎಂದರು.


ಪೌರ ಕಾರ್ಮಿಕರು ಸ್ವಚ್ಛತಾ ಸೇನಾನಿಗಳು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರು ಮಾತನಾಡಿ ಪುತ್ತೂರಿನ ಅಭಿವೃದ್ಧಿಯಲ್ಲಿ ಪೌರ ಕಾರ್ಮಿಕರ ದೊಡ್ಡ ಸಹಕಾರವಿದೆ.ಅವರು ಪುತ್ತೂರಿನ ಸ್ವಚ್ಛತಾ ಸೇನಾನಿಗಳು ಎಂದರು.


ಎಲ್ಲರ ಆರೋಗ್ಯಕರ ಜೀವನಕ್ಕೆ ಪೌರಕಾರ್ಮಿಕರು ಶಕ್ತಿಯಾಗಿದ್ದಾರೆ:
ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಅವರು ಮಾತನಾಡಿ ಎಲ್ಲರ ಆರೋಗ್ಯಕರ ಜೀವನಕ್ಕೆ ಶಕ್ತಿಯಾಗಿ ಇರುವುದು ಪೌರ ಕಾರ್ಮಿಕರು. ಇಂತಹ ಸಂದರ್ಭದಲ್ಲಿ ಪೌರ ಕಾರ್ಮಿಕರು ಕೂಡಾ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು.ಈ ನಿಟ್ಟಿನಲ್ಲಿ ಸೇಫ್ಟಿಕಿಟ್‌ನ್ನು ಕಟ್ಟುನಿಟ್ಟಾಗಿ ಉಪಯೋಗಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದರು.


ಮನೆ ಮನೆಯಲ್ಲೂ ಸ್ವಚ್ಛತೆಗೆ ಆದ್ಯತೆಯಿರಲಿ:
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅವರು ಮಾತನಾಡಿ ಕೇವಲ ಪೌರ ಕಾರ್ಮಿಕರು ಮಾತ್ರ ಸ್ವಚ್ಛತೆ ಮಾಡುವುದಲ್ಲ.ಪ್ರತಿ ಮನೆಯವರೂ ಅವರವರ ಪರಿಸರವನ್ನು ಸ್ವಚ್ಛವಾಗಿಡಬೇಕು.ಈ ನಿಟ್ಟಿನಲ್ಲಿ ಪೌರ ಕಾರ್ಮಿಕರ ಕೆಲಸಕ್ಕೆ ಜನತೆ ಸಹಕಾರ ನೀಡಬೇಕೆಂದರು.


ಪುತ್ತೂರು ಮಾದರಿ ನಗರವಾಗಲಿದೆ:
ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರದ ನಿರ್ದೇಶನದಂತೆ ಪ್ರತಿ ವರ್ಷ ಸೆ.23ಕ್ಕೆ ಪೌರಕಾರ್ಮಿಕರ ದಿನಾಚರಣೆ ಮಾಡಲಾಗುತ್ತಿತ್ತು.ಈ ಬಾರಿ ಚುನಾವಣೆಯ ನಿಮಿತ್ತ ದಿನಾಂಕ ಬದಲಾವಣೆ ಮಾಡಿದ್ದೇವೆ.ನಗರ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ, ನಗರ ಸ್ವಚ್ಛತೆ ಮಾಡುತ್ತಿರುವ ಪೌರ ಕಾರ್ಮಿಕರು ಸೇನಾನಿಗಳು.ಪೌರಕಾರ್ಮಿಕರಲ್ಲೂ ಕೂಡಾ ವಿವಿಧ ರೀತಿಯಲ್ಲಿ ಪ್ರತಿಭೆಗಳಿದ್ದಾರೆ.ಅವರಿಗಾಗಿ ಒಂದು ದಿನ ಮೀಸಲಿಡುವುದು ಅಗತ್ಯ ಎಂದರು.ಇವತ್ತು ನಗರಸಭೆಯಲ್ಲಿನ ನೆಲಭರ್ತಿ ಸ್ಥಳದಲ್ಲಿ ಹಸಿ ತ್ಯಾಜ್ಯ ಮುಕ್ತಗೊಳಿಸಲು ಬಯೋ ಸಿಎನ್‌ಜಿ ಘಟಕ ನಿರ್ಮಾಣ ಮಾಡಿದ್ದೇವೆ.ಉತ್ಪಾದನೆ ಆಗುವ ಹಸಿ ಕಸವನ್ನು ಸಂಪೂರ್ಣ ಸಿಎನ್‌ಜಿ ಮಾಡುವ ಕೆಲಸ ರೋಟರಿ ಮುಳಿಯ ಸಂಸ್ಥೆಯ ಮೂಲಕ ನಡೆದಿದೆ.ತ್ಯಾಜ್ಯದಿಂದ ಉತ್ಪಾದನೆಯಾಗುವ ಸಿಎನ್‌ಜಿ ಘಟಕದ ಮೂಲಕ ದೇಶದಲ್ಲೇ ಪುತ್ತೂರು ಮಾದರಿಯಾಗಿದೆ.ನಮ್ಮೆಲ್ಲ ವಾಹನಗಳನ್ನು ಸಿಎನ್‌ಜಿ ಆಗಿ ಪರಿವರ್ತಿಸಲಿದ್ದೇವೆ.ಇದರ ಜೊತೆಗೆ ಒಣ ತ್ಯಾಜ್ಯವನ್ನು ರೂ.3.5 ಕೋಟಿ ಮೆಟೀರಿಯಲ್ ರಿಕವರಿ ಮಾಡಲಾಗುತ್ತದೆ.ಸುಮಾರು 15 ವರ್ಷದಿಂದ ಅಲ್ಲಿ ಸಂಗ್ರಹಣೆಯಾಗಿರುವ ಪಾರಂಪರಿಕ ತ್ಯಾಜ್ಯವನ್ನು ತೆರವುಗೊಳಿಸಲು ಅನುಮೋದನೆ ಆಗಿದೆ. ಮುಂದಿನ ದಿನ ಬರುವಂತಹ ತ್ಯಾಜ್ಯ ಮರುಬಳಕೆ ಮಾಡುವ ವ್ಯವಸ್ಥೆ ಆಗಿದೆ.ಬಯೋಗ್ಯಾಸ್‌ಗೆ ಸಂಬಂಧಿಸಿ ಪೆಸೋ ಲೈಸನ್ಸ್ ಬಾಕಿ ಇದೆ.ಅದು ಸಿಕ್ಕಿದ ತಕ್ಷಣ ಸಿಎನ್‌ಜಿ ಮಾರಾಟಕ್ಕೆ ಲೈಸನ್ಸ್ ಸಿಗುತ್ತದೆ.ಒಟ್ಟಿನಲ್ಲಿ ಈ ಮೂರು ಕಾರ್ಯಕ್ರಮಗಳ ಉದ್ಘಾಟನೆಯನ್ನು ಶೀಘ್ರದಲ್ಲಿ ಮಾಡಲಾಗುವುದು.ಮುಂದೆ ಪುತ್ತೂರು ಮಾದರಿ ನಗರ ಆಗಲಿದೆ.ಇವೆಲ್ಲದಕ್ಕೂ ಕಾರಣ ಮೊದಲಿಗರು ಪೌರಕಾರ್ಮಿಕರು.ಅವರು ಮನೆಮನೆಯಿಂದ ಕಸ ಸಂಗ್ರಹವನ್ನು ಮಾಡುವ ಮೂಲಕ ಹೊಸ ಪ್ರಯೋಗ ನಡೆದಿದೆ.ಇವತ್ತು ಶೇ.24.1ರ ಅಡಿಯಲಿ ಮೀಸಲಿಟ್ಟ ನಿಧಿಯಿಂದ ಪೌರ ಕಾರ್ಮಿಕರಿಗೆ ಬೈಸಿಕಲ್ ವಿತರಣೆ ನೀಡುತ್ತಿದ್ದೇವೆ ಎಂದರು.ಸಮಾರಂಭದ ಬಳಿಕ ಮಧ್ಯಾಹ್ನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ|ವಿಜಯ ಸರಸ್ವತಿ ಅವರಿಂದ ‘ಸ್ವಚ್ಛತೆ ಮತ್ತು ಸ್ವ ಸುರಕ್ಷತೆ’ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.


ಕಾರ್ಮಿಕರಿಗೆ ಸನ್ಮಾನ:
ಸಭಾ ಕಾರ್ಯಕ್ರಮದಲ್ಲಿ ಹಿರಿಯ ಪೌರ ಕಾರ್ಮಿಕರ ಸಹಿತ 51 ಮಂದಿ ಪೌರಕಾರ್ಮಿಕರು ಮತ್ತು ನಗರಸಭೆಯ ವಾಹನ ಚಾಲಕರು ಸೇರಿ 71 ಕಾರ್ಮಿಕರಿಗೆ ಸನ್ಮಾನಿಸಲಾಯಿತು.ಇದೇ ಸಂದರ್ಭ ಅವರಿಗೆ ರೂ.3 ಲಕ್ಷದ ಆರೋಗ್ಯ ವಿಮೆ ಮತ್ತು ಬೈಸಿಕಲ್ ವಿತರಣೆ ಮಾಡಲಾಯಿತು.ಶಾಸಕ ಅಶೋಕ್ ಕುಮಾರ್ ರೈ ಸಹಿತ ಗಣ್ಯರು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ವಾಣಿ ಪ್ರಾರ್ಥಿಸಿದರು. ನಗರಸಭೆ ಪೌರಯುಕ್ತ ಮಧು ಎಸ್ ಮನೋಹರ್ ಅವರು ಸ್ವಾಗತಿಸಿದರು.ಡಾಟಾ ಆಪರೇಟರ್ ಭಾಗೀರಥಿ, ಚಾಲಕ ಸತೀಶ್, ಪೌರಕಾರ್ಮಿಕ ದಸ್ತಗಿ, ಸ್ಯಾನಿಟೈಸರ್ ಸೂಪರ್ ವೈಸರ್ ಐತ್ತಪ್ಪ, ಪೌರ ಕಾರ್ಮಿಕರಾದ ಅನಿತಾ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ಅತಿಥಿಗಳನ್ನು ಗೌರವಿಸಿದರು.ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ಅಭಿನಯ ಕಲಾ ತಂಡ ಪುತ್ತೂರು ಇವರಿಂದ ಹಾಸ್ಯ ಪ್ರಹಸನ, ಮುರಳಿ ಬ್ರದರ‍್ಸ್ ಪುತ್ತೂರು ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗು ನಗರಸಭೆ ಪೌರ ಕಾರ್ಮಿಕರು ಮತ್ತು ಸಿಬ್ಬಂದಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here