ಅಪ್ರಾಪ್ತ ಬಾಲಕಿಯ ಜೊತೆಗೆ ಅನುಚಿತ ವರ್ತನೆ -ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ – ಪುತ್ತೂರು ಜಿಲ್ಲಾ ಸತ್ರ ನ್ಯಾಯಾಲಯದ ಆದೇಶ

0

ಪುತ್ತೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಜೊತೆಗೆ ಅನುಚಿತವಾಗಿ ವರ್ತಿಸಿದ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಅಪರಾಽಗೆ ಪೋಕ್ಸೋ ಕಾಯ್ದೆಯಡಿ 3 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.20 ಸಾವಿರ ದಂಡ ವಿಧಿಸಿದೆ.


ದಂಡ ತೆರಲು ತಪ್ಪಿದಲ್ಲಿ ಮತ್ತೆ 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಧೀಶೆ ಸರಿತಾ ಡಿ ಅವರು ತೀರ್ಪು ನೀಡಿದ್ದಾರೆ.
ಕಬಕ ಗ್ರಾಮದ ವಿದ್ಯಾಪುರ ನಿವಾಸಿ ಮಹಮ್ಮದ್ ಮುಸ್ತಾಫ ಯಾನೆ ಮುಸ್ತಾಫಾ ಶೇಖ್ ಶಿಕ್ಷೆಗೆ ಗುರಿಯಾದ ಅಪರಾಧಿ.ಮುಸ್ತಾಫಾ ಶೇಖ್ 2015ರ ಡಿಸೆಂಬರ್ 4ರಂದು ಕಬಕ ಗ್ರಾಮದ ಬೈಪದವು ಎಂಬಲ್ಲಿ ಅಂಗಡಿಗೆಂದು ಕಾಲುದಾರಿಯಲ್ಲಿ ಬರುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕೈ ಹಿಡಿದು ಎಳೆದು ತಬ್ಬಿಕೊಂಡು ಮುತ್ತುಕೊಡಲು ಮುಂದಾದ ಸಂದರ್ಭದಲ್ಲಿ ಬಾಲಕಿ ಆತನನ್ನು ದೂಡಿ ತಪ್ಪಿಸಿಕೊಂಡು ಬಂದು ಬೊಬ್ಬೆ ಹೊಡೆದಿದ್ದರು. ಬೊಬ್ಬೆ ಕೇಳಿ ಕೆಲವರು ಅಲ್ಲಿಗೆ ಬಂದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಬಾಲಕಿ ಘಟನೆ ಕುರಿತು ಮನೆಯವರಲ್ಲಿ ವಿಷಯ ತಿಳಿಸಿದ್ದು ಆಕೆಯ ತಾಯಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಠಾಣೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.


14 ಮಂದಿ ಸಾಕ್ಷಿದಾರರ ವಿಚಾರಣೆ: ಪ್ರಕರಣದ ವಿಚಾರಣೆಯನ್ನು ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸರಿತಾ ಡಿ ಅವರು ಕೈಗೆತ್ತಿಕೊಂಡರು.ಒಟ್ಟು 14 ಮಂದಿ ಸಾಕ್ಷಿದಾರರನ್ನು ವಿಚಾರಿಸಿದರು. ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿ ಭಾರತೀಯ ದಂಡ ಸಂಹಿತೆ ಕಲಂ 341ರಡಿಯ ಅಪರಾಧಕ್ಕೆ 1 ತಿಂಗಳ ಸಾದಾ ಶಿಕ್ಷೆ ಮತ್ತು 5೦೦ರೂ ದಂಡ, ದಂಡ ತೆರಲು ತಪ್ಪಿದಲ್ಲಿ 1 ವಾರ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕು,ಭಾ.ದಂ.ಸಂ. ಕಲಂ 354ರಡಿಯ ಅಪರಾಧ ಮತ್ತು ಪೊಕ್ಸೋ ಕಾಯ್ದೆಯ ಕಲಂ 8ರಡಿಯ ಅಪರಾಧಕ್ಕೆ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 2೦,೦೦೦ ರೂ.ದಂಡ ವಿಽಸಿದ್ದಾರೆ.ದಂಡ ತೆರಲು ತಪ್ಪಿದಲ್ಲಿ ಮತ್ತೆ 6 ತಿಂಗಳ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದ್ದಾರೆ.ದಂಡದ ಮೊತ್ತದಲ್ಲಿ ರೂ.15 ಸಾವಿರವನ್ನು ಬಾಲಕಿಗೆ ಪರಿಹಾರದ ರೂಪದಲ್ಲಿ ನೀಡಬೇಕೆಂದು ಆದೇಶಿಸಿದ್ದಾರೆ. ಸರಕಾರದ ಪರವಾಗಿ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.

LEAVE A REPLY

Please enter your comment!
Please enter your name here