ನಮ್ಮ ಸಮಾಜವೆಂಬ ಮಾತು ಹೃದಯದಿಂದ ಬರಲಿ- ಭಾಸ್ಕರ್ ಗೌಡ ಇಚಿಲಂಪಾಡಿ
ಪುತ್ತೂರು: ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ನ ದಶಮಾನೋತ್ಸವ ಸಂಭ್ರಮದಲ್ಲಿ ಉದ್ಘಾಟನೆಗೊಳ್ಳಲಿರುವ ಟ್ರಸ್ಟ್ನ ಸಭಾಭವನದ ಕಾಮಗಾರಿಗೆ ಚಾಲನೆ ಮತ್ತು ದಶಮಾನೋತ್ಸವ ಸಂಭ್ರಮದ ಕಾರ್ಯಕ್ರಮಕ್ಕೆ ಕಾರ್ಯಾಲಯವನ್ನು ನ.13ರಂದು ಟ್ರಸ್ಟ್ ನ ಕಚೇರಿ ಕಟ್ಟಡದಲ್ಲಿ ಉದ್ಘಾಟಿಸಲಾಯಿತು.
ಟ್ರಸ್ಟ್ ನ ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಅವರ ಪ್ರಾರ್ಥನೆಯೊಂದಿಗೆ ಸ್ವಸ್ತಿಕದಲ್ಲಿ ಗಣಪತಿಯನ್ನು ಆರಾಧಿಸಿ ಟ್ರಸ್ಟ್ನ ಅಧ್ಯಕ್ಷ ಡಿ ವಿ ಮನೋಹರ್ ತೆಂಗಿನ ಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ನ ಅಧ್ಯಕ್ಷ ಭಾಸ್ಕರ ಗೌಡ ಇಚಿಲಂಪಾಡಿ ಅವರು ಕಾರ್ಯಾಲಯವನ್ನು ಉದ್ಘಾಟಿಸಿದರು.
ನಮ್ಮ ಸಮಾಜವೆಂಬ ಮಾತು ಹೃದಯದಿಂದ ಬರಲಿ:
ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ನ ಅಧ್ಯಕ್ಷ ಭಾಸ್ಕರ ಗೌಡ ಇಚಿಲಂಪಾಡಿ ಅವರು ಮಾತನಾಡಿ ಪುತ್ತೂರು ಮೂಲ ಸಮಿತಿ ಇಚಿಲಂಪಾಡಿಯಲ್ಲಿ ಸ್ವಸಹಾಯ ಸಂಘಕ್ಕೆ ಮಾರ್ಗದರ್ಶನವಾಗಿದೆ. ಪುತ್ತೂರಿನಲ್ಲಿ ಸಂಘದ ಕಚೇರಿಯೊಂದು ಅಚ್ಚುಕಟ್ಟಾಗಿರುವುದು ಸಂತೋಷದ ವಿಚಾರ. ನಮ್ಮ ಸಮಾಜದವರು ಮುಂದೆ ಬರುವ ಅವಕಾಶವಿದ್ದಾಗ ಅದಕ್ಕೆ ಪ್ರೋತ್ಸಾಹ ನೀಡಬೇಕು. ಇಂತಹ ಸಂದರ್ಭದಲ್ಲಿ ನಮ್ಮ ಹುದ್ದೆ ಅಗತ್ಯವಿಲ್ಲ ಎಂದ ಅವರು ನಮ್ಮ ಸಮಾಜ ಎಂಬ ಮಾತು ಹೃದಯದಿಂದ ಮೂಡಿ ಬರಬೇಕೆಂದ ಅವರು ದಶಮಾನೋತ್ಸವ ಕಾರ್ಯಕ್ರಮದ ಮುಗಿಯುವ ಸಂದರ್ಭ ಸಮಿತಿ ಟ್ರಸ್ಟ್ಗೆ ಲಾಭವನ್ನು ತಂದು ಕೊಡುವಂತೆ ಆಗಲಿ ಎಂದರು. ಇದೇ ಸಂದರ್ಭದಲ್ಲಿ ಭಾಸ್ಕರ್ ಗೌಡ ಇಚಿಲಂಪಾಡಿಯವರನ್ನು ಟ್ರಸ್ಟ್ ಮತ್ತು ದಶಮಾನೋತ್ಸವ ಸಮಿತಿಯಿಂದ ಗೌರವಿಸಲಾಯಿತು.
ದಶಮಾನೋತ್ಸವ ಒಳ್ಳೆಯ ರೀತಿಯಲ್ಲಿ ನಡೆಯಲಿ:
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅವರು ಮಾತನಾಡಿ ಕಟ್ಟಡ ನಿರ್ಮಾಣ ಉತ್ತಮ ರೀತಿಯಲ್ಲಿ ಮುಗಿಯಲು ಈ ಕ್ಷೇತ್ರಕ್ಕೆ ಮೂಲವಾಗಿರುವ ಉಳ್ಳಾಲ್ತಿ ದೈವ ದೇವರಿಗೂ ಸೇವೆ ನೀಡಬೇಕೆಂದು ಸಲಹೆ ನೀಡಿದ ಅವರು, ದಶಮಾನೋತ್ಸವ ಒಳ್ಳೆಯ ರೀತಿಯಲ್ಲಿ ನಡೆಯಲಿ ಎಂದರು.
ಸಭಾಂಗಣ ಕಾಮಗಾರಿ ಶೀಘ್ರದಲ್ಲಿ ಮುಗಿಯಲಿದೆ:
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ನ ಅಧ್ಯಕ್ಷ ಡಿ.ವಿ.ಮನೋಹರ್ ಗೌಡ ಅವರು ಮಾತನಾಡಿ, ಇನ್ನು ಒಂದು ತಿಂಗಳಲ್ಲಿ ಸಭಾಂಗಣದ ಕಾಮಗಾರಿ ಪೂರ್ಣಗೊಳ್ಳಲಿದೆ. ಆದಷ್ಟು ಶೀಘ್ರದಲ್ಲಿ ಎಲ್ಲಾ ಕಾಮಗಾರಿ ಪೂರ್ಣಗೊಂಡು ದಶಮಾನೋತ್ಸವ ಕಾರ್ಯಕ್ರಮದಲ್ಲಿ ಉದ್ಘಾಟನೆಯಾಗಲಿದೆ ಎಂದು ಹೇಳಿದರು.
ತರಬೇತಿ ಸಭಾಂಗಣಾಗಲಿದೆ:
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ನ ಗೌರವಾಧ್ಯಕ್ಷ ಎ ವಿ ನಾರಾಯಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಘವು 64 ಗ್ರಾಮಗಳಲ್ಲಿ 66 ಒಕ್ಕೂಟವನ್ನು ಹೊಂದಿದೆ. ಸುಮಾರು 1 ಸಾವಿರ ಗುಂಪುಗಳಿವೆ. ಪುತ್ತೂರು, ಕಡಬ, ವಿಟ್ಲದಲ್ಲಿ ವಿಶೇಷವಾಗಿ ಸಂಘಟನೆ ಬೆಳೆದಿದೆ. ಟ್ರಸ್ಟ್ನ ಕಚೇರಿ ಹಿಂದೆ ಮಹಾಲಿಂಗೇಶ್ವರ ದೇವಳದ ಕಟ್ಟಡದಲ್ಲಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲೇ ಇತ್ತು. ನಮ್ಮ ವ್ಯವಹಾರ ವಿಸ್ತಾರವಾದಂತೆ ಅಲ್ಲೇ ಪಕ್ಕದಲ್ಲಿ ಬಾಡಿಗೆ ಕಟ್ಟಡದಲ್ಲಿ 8 ವರ್ಷ ಕಾರ್ಯಾಚರಿಸಿ ಬಳಿಕ ನೂತನ ಕಚೇರಿಗೆ ಕ್ಷೇತ್ರದಲ್ಲೇ ಜಾಗ ಸಿಗುವಂತೆ ಪ್ರಾರ್ಥನೆ ಮಾಡಿದಂತೆ ಈಗಿನ ಸ್ಥಳ ಬಹಳ ಕಡಿಮೆ ದರದಲ್ಲಿ ಖರೀದಿಸಲಾಯಿತು. ಇದೀಗ ಟ್ರಸ್ಟ್ನ ದಶಮಾನೋತ್ಸವ ಸಂದರ್ಭ ಕಟ್ಟಡದ ಮೇಲಂತಸ್ತಿನಲ್ಲಿ ಸಂಘದ ಪ್ರತಿನಿಧಿಗಳಿಗೆ ತರಬೇತಿ ನೀಡುವ ಉದ್ದೇಶವಿಟ್ಟುಕೊಂಡು ಸಭಾಂಗಣ ನಿರ್ಮಾಣ ಮಾಡಲು ಹೊರಟಿದ್ದೇವೆ. ಈ ಸಭಾಂಗಣ ಹೊರಗಿನಿಂದ ಬಂದವರಿಗೆ, ಇತರರಿಗೆ ಬಾಡಿಗೆ ಕೊಡುವ ಉದ್ದೇಶವಿಲ್ಲ. ಸುಮಾರು 150 ಮಂದಿ ಸೇರುವ ಸಣ್ಣ ಸಭಾಭವನ ಆಗಲಿದೆ ಎಂದು ಹೇಳಿದರು.
ಒಕ್ಕಲಿಗ ಸ್ವಸಹಾಯ ಟ್ರಸ್ಟ್ನ ಉಪಾಧ್ಯಕ್ಷ ಪ್ರವೀಣ್ ಕುಂಟ್ಯಾನ, ಸಲಹಾ ಸಮಿತಿ ಸದ್ಯರಾದ ನಾಗಪ್ಪ ಗೌಡ ಬೊಮ್ಮೆಟ್ಟಿ, ದಶಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹೂವಪ್ಪ ಗೌಡ ಪರ್ಪುಂಜ, ನಿರ್ದೇಶಕರಾದ ವಸಂತ ವೀರಮಂಗಲ, ರವಿಚಂದ್ರ ಹೊಸವೊಕ್ಲು, ದಶಮಾನೋತ್ಸವ ಸಮಿತಿ ಸದಸ್ಯ ನಾಗೇಶ್ ಕೆಡೆಂಜಿ, ಟ್ರಸ್ಟ್ನ ಮೆನೇಜರ್ ಸುನಿಲ್ ಕೆ.ಎಸ್, ಮೇಲ್ವಿಚಾಕರಾದ ವಿಜಯ ಕುಮಾರ್ ಗೌಡ ಕನ್ನಡ್ಕ, ಸುಮಲತಾ, ಶ್ರುತಿ, ಪ್ರೇರಕರಾದ ಶ್ರೀಕಾಂತ್, ಹೇಮಲತಾ, ನಮಿತಾ , ಗಣೇಶ್ , ತಾರಾನಾಥ, ಜಯಶ್ರೀ, ಪರಮೇಶ್ವರ, ಪುಷ್ಪಾವತಿ, ಲಲಿತಾ, ವಿನುತಾ, ಶೃತಿ, ಕಚೇರಿ ಸಿಬ್ಬಂದಿಗಳಾದ ಪ್ರತಿಭಾ ಸುಧಾಕರ್, ಸುಜಾತ, ಚರಣ್, ಚಿತ್ರಕಲಾ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಟ್ರಸ್ಟ್ನ ಮೇಲ್ವಿಚಾಕರಾದ ಸುಮಲತಾ, ಶ್ರುತಿ, ನಮಿತ ಪ್ರಾರ್ಥಿಸಿದರು. ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ ಸ್ವಾಗತಿಸಿದರು. ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್ ಎ.ಯಮ್ ವಂದಿಸಿದರು.