*ಕಿರು ಉದ್ದಿಮೆದಾರರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರುಕಟ್ಟೆಯ ಬಗ್ಗೆ ಅರಿವು
*ವಸ್ತುಗಳು ಗುಣಮಟ್ಟ ಆರೋಗ್ಯ ಭರಿತವಾಗಿದ್ದಲ್ಲಿ ಮಾರುಕಟ್ಟೆಯನ್ನು ಸುದ್ದಿ ಅರಿವು ಕೇಂದ್ರದಿಂದ ಪಡೆಯುವ ಅವಕಾಶ: ಡಾ.ಯುಪಿ ಶಿವಾನಂದ
puttur: ಸುದ್ದಿ ಅರಿವು ಕೇಂದ್ರದ ವತಿಯಿಂದ ನ.12 ರಂದು ಮಂಗಳೂರು ಸಿಓಡಿಪಿ ಕಚೇರಿ ಸಭಾಂಗಣದಲ್ಲಿ ಉದ್ಯಮಶೀಲ ಕಾರ್ಯಗಾರ ಹಾಗೂ ಕಿರು ಉದ್ದಿಮೆಗಾರರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರುಕಟ್ಟೆಯ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು.
ಕಾರ್ಯಗಾರದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 20 ಕ್ಕೂ ಹೆಚ್ಚು ಕಿರು ಉದ್ದಿಮೆದಾರರು ತಾವು ತಯಾರಿಸಿದ್ದ 50 ಕ್ಕೂ ಹೆಚ್ಚು ಉತ್ಪನ್ನಗಳೊಂದಿಗೆ ಭಾಗವಹಿಸಿ ಅದರ ತಯಾರಿಕೆಯ ವಿಧಾನ,ಅದರ ಗುಣಮಟ್ಟದ ಬಗ್ಗೆ ವಿವರಿಸಿದರು. ಹಾಗೂ ವಸ್ತುಗಳ ಮಾರಾಟ ಮತ್ತು ಇನ್ನೂ ಹೆಚ್ಚು ಮಾರುಕಟ್ಟೆ ಪಡೆಯಲು ಬೇಕಾದ ಬಗ್ಗೆ ಮಾಹಿತಿ ಪಡೆದುಕೊಂಡರು. ಸುದ್ದಿ ಅರಿವು ಕೇಂದ್ರದ ಮುಖ್ಯಸ್ಥ ಡಾ.ಯು ಪಿ ಶಿವಾನಂದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿ ಓ ಡಿ ಪಿ ಕಚೇರಿ ಮುಖ್ಯಸ್ಥರಾದ ಫಾದರ್ ವಿನ್ಸಂಟ್ ಡಿ’ ಸೋಜ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಉತ್ಪನ್ನಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಸುದ್ದಿ ಸಂಸ್ಥೆಯು ಕೇವಲ ಮಾಧ್ಯಮವಾಗಿ ಮಾತ್ರ ಕೆಲಸ ಮಾಡದೆ ಜನರ ಜೀವನಾಭಿವೃದ್ಧಿಗೆ ಪೂರಕವಾಗಿ ಕೆಲಸ ಕಾರ್ಯಗಳು ಮಾಡುತ್ತಾ ಬರುತ್ತಿದೆ. ಸುದ್ದಿ ಅರಿವು ಕೇಂದ್ರದ ಮೂಲಕ ಕಿರು ಉದ್ದಿಮೆದಾರರು ತಯಾರಿಸಿದ ಆಹಾರ ಉತ್ಪನ್ನ ವಸ್ತುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮತ್ತು ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ಕೆಲಸಕ್ಕೆ ಸುದ್ದಿ ಮುಂದಾಗಿದೆ ಇದು ಉತ್ತಮ ಬೆಳವಣಿಗೆಯಾಗಿದೆ.
ಅದರ ಮೂಲಕ ಮಾರುಕಟ್ಟೆಯಲ್ಲಿ ಜನತೆಗೆ ಉತ್ತಮ ಆಹಾರ ಪದಾರ್ಥಗಳನ್ನು ಖರೀದಿಸಲು ಮತ್ತು ಮಾರಾಟಕ್ಕೆ ಅವಕಾಶ ಒದಗಿಬರಲಿ ಮತ್ತು ಸುದ್ದಿ ಸಂಸ್ಥೆಯ ಈ ಪರಿಕಲ್ಪನೆ ಬಹಳ ಉತ್ತಮವಾದದ್ದು ಎಂದು ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮತ್ತು ಕಾನೂನು ರೀತಿಯಲ್ಲಿ ಉದ್ದಿಮೆಯನ್ನು ಬೆಳೆಸುವ ಬಗ್ಗೆ ಅರಿವು ನೀಡಿದ ಪುತ್ತೂರು ಕ್ಯಾಂಪ್ಕೋ ಸಂಸ್ಥೆಯ ಮಾಜಿ ನಿರ್ದೇಶಕ ಎಚ್ ಎಂ ಕೃಷ್ಣ ಕುಮಾರ್ ‘ವಸ್ತುಗಳ ತಯಾರಿಕೆ ಮತ್ತು ಮಾರಾಟ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿದೆ ಉತ್ಪನ್ನಗಳ ಬಗ್ಗೆ ನಮಗಿರುವ ಎಚ್ಚರಿಕೆ. ಅದರ ತಯಾರಿಕೆಯಲ್ಲಿ ಹೆಚ್ಚು ಜಾಗರೂಕತೆ ವಹಿಸಬೇಕು.ಒಂದು ವಸ್ತುವನ್ನು ತಯಾರಿಸುವ ವೇಳೆ ಅದು ನಮ್ಮ ಮಕ್ಕಳು ಮತ್ತು ಮನೆಯವರು ಅದನ್ನು ಉಪಯೋಗಿಸುವವರು ಎಂಬ ಚಿಂತನೆಯಿಂದ ಆಗಿರಬೇಕಾಗಿದೆ.
ವಸ್ತುಗಳನ್ನು ತಯಾರಿಸಿದ ಬಳಿಕ ಅದರ ಗುಣಮಟ್ಟ ಕಳೆದುಕೊಂಡಲ್ಲಿ ಅದು ನಮಗೆ ಆಗುವ ನಷ್ಟವಾಗಿದೆ ಎಂಬ ಅರಿವು ನಮ್ಮಲ್ಲಿ ಇರಬೇಕು. ತಯಾರಿಸಿದ ವಸ್ತುಗಳನ್ನು ಮಾರುಕಟ್ಟೆಗೆ ತರುವಾಗ ಅದರ ಕಾನೂನಿನ ನಿಬಂಧನೆಗಳನ್ನು ನಾವು ಪೂರ್ಣವಾಗಿ ಪಾಲಿಸಬೇಕಾಗಿದೆ.ಉತ್ಪನ್ನದ ವಿವರ,ತಯಾರಿಕೆಯ ದಿನಾಂಕ,ತೂಕ,ಮೊತ್ತ, ಇವೆಲ್ಲವೂ ನಿಯಮಾನುಸಾರದಿಂದ ಕೂಡಿರಬೇಕು ಎಂಬಿತ್ಯಾದಿ ವಿವರಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುದ್ದಿ ಸಮೂಹ ಸಂಸ್ಥೆಯ ಮಾಲಕರು ಸುದ್ದಿ ಅರಿವು ಕೇಂದ್ರದ ಮುಖ್ಯಸ್ಥರಾದ ಡಾ.ಯು ಪಿ ಶಿವಾನಂದ ರವರು ಮಾತನಾಡಿ ‘ಸುದ್ದಿ ಅರಿವು ಕೇಂದ್ರ ಜನರಲ್ಲಿ ಶಕ್ತಿ ನೀಡುವ ಕೆಲಸ ಮಾಡಲಿದೆ.ನೀವು ತಯಾರಿಸುವ ವಸ್ತುಗಳು ಗುಣಮಟ್ಟದಿಂದ ಕೂಡಿದ್ದು ಆರೋಗ್ಯ ಪೂರ್ಣ ವಾಗಿದ್ದಲ್ಲಿ ಮಾರುಕಟ್ಟೆ ಒದಗಿಸುವ ಮತ್ತು ಪ್ರಚಾರ ಮಾಡುವ ಕೆಲಸ ಸುದ್ದಿ ಅರಿವು ಕೇಂದ್ರ ಮಾಡಲಿದೆ. ಜನರಿಗೆ ಸಂಪಾದನೆ ಹೆಚ್ಚಿಸುವ ಕಾರ್ಯ ಮತ್ತು ನಿಮ್ಮ ಉತ್ಪಾದನೆಯನ್ನು ಸುದ್ದಿ ಮಾಧ್ಯಮದ ಮೂಲಕ ಸುದ್ದಿ ಚಾನಲ್, ವೆಬ್ಸೈಟ್, ಆನ್ಲೈನ್ ಮಾರ್ಕೆಟಿಂಗ್ ಮೂಲಕ, ಹಳ್ಳಿಯಿಂದ ಜಗತ್ತಿಗೆ ಮುಟ್ಟಿಸುವ ಕಾರ್ಯ ಅರಿವು ಕೇಂದ್ರದಿಂದ ಆಗಲಿದೆ ಎಂದರು. ಉತ್ಪಾದನೆಗಳ ಬಗ್ಗೆ ಗ್ರಾಹಕರಿಗೆ ವಿಶ್ವಾಸ ಕೊಡುವ ಮತ್ತು ಅದೇ ರೀತಿ ನಿಮ್ಮ ಉತ್ಪಾದನೆ ಸರಿ ಇಲ್ಲದೇ ಆದರೆ ಆ ಸಂಧರ್ಭ ಗ್ರಾಹಕರ ಪರವಾಗಿ ನಿಲ್ಲುವ ಕಾರ್ಯಕೂಡ ಸುದ್ದಿ ಅರಿವು ಕೇಂದ್ರ ಮಾಡುತ್ತದೆ ಎಂದರು.
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿ ಯೋಜನೆಯ ದ ಕ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಮಾತಾಡಿ ಉದ್ಯಮ ಪ್ರಾರಂಭದ ಬಗ್ಗೆ, ಬ್ಯಾಂಕ್ ಸಾಲ ಸೌಲಭ್ಯ, ಸಬ್ಸಿಡಿ, ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಿರು ಉದ್ಯಮಿಗಳ ಪರಿಚಯ, ಅವರ ಶ್ರಮ ಮುಂತಾದ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪುತ್ತೂರು ಸುದ್ದಿ ಸಿ ಇ ಓ ಸಿಂಚನಾ ಊರುಬೈಲು ಉಪಸ್ಥಿತರಿದ್ದರು.
ಇಂಡಿಯನ್ ಗ್ಲೋಬಲ್ ಸಂಸ್ಥೆ ಅಧಿಕಾರಿ ಆಶೀಶ್ ಪ್ರಾಸ್ತವಿಕ ಮಾತನಾಡಿ ಅರಿವು ಕೇಂದ್ರದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿ, ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು.ಉದ್ಯಮಿ ಜಗದೀಶ್ ವಂದಿಸಿದರು.
ಸುದ್ದಿ ಕೃಷಿ ಕೇಂದ್ರದ ಸುಳ್ಯ ಸಿಬ್ಬಂದಿ ರಮ್ಯಾ ಸತೀಶ್,ಅರಿವು ಕೇಂದ್ರದ ಸಿಬ್ಬಂದಿ ಚೈತ್ರಾ ಪುತ್ತೂರು, ಸುದ್ದಿ ಸಿಬ್ಬಂದಿಗಳಾದ ಶಿವಕುಮಾರ್ ಈಶ್ವರಮಂಗಿಲ, ಸುಧಾಕರ್ ಪುತ್ತೂರು,ಕುಶಾಲಪ್ಪ,ಹಸೈ ನಾರ್ ಜಯನಗರ ಸಹಕರಿಸಿದರು.