ಸವಣೂರು: ಮನುಷ್ಯರಿಂದ ದೂರ ಇರಬೇಕಾದ ವನ್ಯಜೀವಿಗಳು ಈಗ ನಾಡಿಗೆ ಲಗ್ಗೆ ಇಡುತ್ತಿದ್ದು, ಹಂದಿ, ಮಂಗ,ನವಿಲು ಸಹಿತ ಇತರೆ ವನ್ಯಜೀವಿಗಳು ಫಸಲು ಬಿಟ್ಟಿರುವ ಭತ್ತದ ಗದ್ದೆಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ನಷ್ಟದ ಭೀತಿಯಿಂದ ಈಗ ಬಹುತೇಕ ರೈತರು ಭತ್ತದ ಬೇಸಾಯದಿಂದ ವಿಮುಖರಾಗಿದ್ದಾರೆ.ಆದರೆ ಕೆಲವೆಡೆ ಭತ್ತದ ಕೃಷಿಯನ್ನು ಹಲವು ಸವಾಲುಗಳೊಂದಿಗೆ ಮುಂದುವರೆಸುತ್ತಿದ್ದಾರೆ. ನವಿಲು,ಮಂಗನ ಕಾಟದ ಜತೆಗೆ ಭತ್ತದ ಗದ್ದೆಗೆ ರಾತ್ರಿ/ನಸುಕಿನ ವೇಳೆ ಇಳಿಯುವ ಕಾಡುಹಂದಿಗಳ ಹಿಂಡು ಭತ್ತದ ಕೃಷಿಯನ್ನೇ ತಿಂದು ತೇಗುತ್ತಿವೆ.
ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಚೆನ್ನಾವರ ಪಟ್ಟೆ ಎಂಬಲ್ಲಿ ಪ್ರೇಮಲತಾ ರೈ ಹಾಗೂ ಮನೆಯವರು ಈಗಲೂ ಭತ್ತದ ಕೃಷಿಯನ್ನು ನಡೆಸುತ್ತಿದ್ದು, ಈಗ ಕಟಾವಿಗೆ ಬಂದ ಫಸಲು ಕಾಡು ಪ್ರಾಣಿಗಳ ಪಾಲಾಗುತ್ತಿದೆ.
ಯಾವುದಕ್ಕೂ ಬಗ್ಗದ ಪ್ರಾಣಿಗಳು
ವನ್ಯಜೀವಿಗಳ ಹಾವಳಿ ನಿಯಂತ್ರಣಕ್ಕಾಗಿ ರೈತರು ಸಾಕಷ್ಟು ಉಪಕ್ರಮಗಳನ್ನು ಕೈಗೊಂಡಿದ್ದು, ಕಬ್ಬಿಣದ ತಂತಿ, ಬಟ್ಟೆ, ಮೀನು ಹಿಡಿಯುವ ಹಳೆ ಬಲೆ ಸುತ್ತುವುದು, ಮನುಷ್ಯನ ಬೆವರಿನ ವಾಸನೆಯುಳ್ಳ ಬಟ್ಟೆಯನ್ನು ಗದ್ದೆಯಂಚಿನಲ್ಲಿ ಇಡುವುದು ಮಾಡುತ್ತಿದ್ದಾರೆ.
ಬೇಟೆಯಾಡಿದರೆ ಶಿಕ್ಷೆ
ಕಾಡುಪ್ರಾಣಿಗಳಿಗೆ ಕಾಡಿನಲ್ಲಿ ಹೇರಳವಾಗಿ ಆಹಾರ ಸಿಗದೇ ಇರುವ ಪರಿಣಾಮ ನಾಡಿನಲ್ಲಿ ಅವುಗಳ ಉಪಟಳ ಜೋರಾಗುತ್ತಿದೆ. ಈ ಕಾಡು ಪ್ರಾಣಿಗಳನ್ನು ಭೇಟಿಯಾಡುವಂತಿಲ್ಲ. ತೋಟ/ಕೃಷಿಭೂಮಿಗೆ ಲಗ್ಗೆ ಇಟ್ಟ ಕಾಡು ಹಂದಿಯನ್ನು ಕೃಷಿಭೂಮಿ ನಾಶ ಮಾಡುತ್ತಿರುವಾಗ ಕೊಲ್ಲುವಂತೆಯೂ ಇಲ್ಲ. ಹೀಗಾಗಿ ಅವುಗಳ ಸಂಖ್ಯೆಯೂ ಹೆಚ್ಚಳವಾಗಿ ರೈತರನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಕಷ್ಟಪಟ್ಟು ಭತ್ತದ ಕೃಷಿ ಮಾಡಿದ್ದೇವೆ. ಹಗಲು, ರಾತ್ರಿಯ ಅರಿವು ಇಲ್ಲದೇ ಕಾಡುಪ್ರಾಣಿಗಳು ಕೃಷಿಗೆ ದಾಳಿ ಮಾಡುತ್ತದೆ. ಈಗಾಗಲೇ ಹಲವು ಬಾರಿ ಬೆಳೆ ಹಾನಿಯಾಗಿದೆ. ಈಗ ಕಟಾವಿಗೆ ಬಂದ ಫಸಲಿನ ಮೇಲೆ ಕಾಡು ಪ್ರಾಣಿಗಳು ದಾಳಿ ಮಾಡಿ ಅಪಾರ ನಷ್ಟ ಉಂಟಾಗಿದೆ ಎಂದು ಕೃಷಿಕ ಪುನೀತ್ ರೈ ಚೆನ್ನಾವರ ಪಟ್ಟೆ ಹೇಳಿದ್ದಾರೆ.