ಮಕ್ಕಳ ತುಂಟತನವೆ ಹಾಗೇ… – ರಚ್ಚೆ ಹಿಡಿದು ರೊಚ್ಚಿಗೇಳಿಸುವ ತನಕ

0

@ ಸಿಶೇ ಕಜೆಮಾರ್

‘ಮಕ್ಕಳನ್ನು ನಿಭಾಯಿಸುವುದೇ ಕಷ್ಟ, ಬೆಳಿಗ್ಗೆ ಎದ್ದ ತಕ್ಷಣವೇ ಶುರು ಮಾಡುತ್ತವೆ ಏನಾದರೂ ತುಂಟತನ, ರಂಪಾಟ ಮಾಡ್ಲಿಕ್ಕೆ, ಅವರನ್ನು ಸಮಾಧಾನಿಸುವಷ್ಟರಲ್ಲಿ ಸಾಕು ಸಾಕಾಗಿ ಹೋಗುತ್ತದೆ. ಕೆಲವೊಮ್ಮೆ ಕೆಟ್ಟ ಕೋಪವೂ ಬರುತ್ತದೆ. ’ಇದು ಪ್ರತಿಯೊಬ್ಬ ಪೋಷಕರ ಮಾತುಗಳಾಗಿವೆ. ಮಕ್ಕಳ ತುಂಟತನ, ಕಪಿಚೇಷ್ಠೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡು ದಿನದೂಡುವುದೇ ಒಂದು ಸವಾಲ್ ಆಗಿ ಬಿಡುತ್ತದೆ. ಕೆಲವೊಮ್ಮೆ ಅವರ ಚೇಷ್ಠೆಗಳಿಗೆ ಕೋಪಗೊಂಡು ಹೊಡಿಯುವ ತನಕವೂ ತಂದೆ ತಾಯಿ ಮುಂದಾಗುತ್ತಾರೆ. ಆದರೆ ಹೀಗೆ ಮಾಡುವುದು ಸರಿಯಲ್ಲ. ಮಕ್ಕಳು ತುಂಟತನ, ಚೇಷ್ಠೆ ಮಾಡದೇ ನಾವು ದೊಡ್ಡವರು ಮಾಡ್ಲಿಕ್ಕೆ ಆಗ್ತದ? ಹಾಗಾದರೆ ಬನ್ನಿ ಮಕ್ಕಳೊಂದಿಗೆ ಮಕ್ಕಳಾಗುತ್ತಾ ಅವರಿಗೆ ಒಂದಷ್ಟು ಬುದ್ದಿ ಹೇಳಿ ತಿದ್ದಿ ನಡೆಯುವಂತೆ ಮಾಡೋಣ..

ಕೋಪಗೊಳ್ಳಬೇಡಿ..
ಕೆಲವೊಮ್ಮೆ ಮಕ್ಕಳ ತುಂಟತನ ನೋಡಿ ಆ ತಕ್ಷಣಕ್ಕೆ ನಾವು ನಮ್ಮ ನಿಯಂತ್ರಣ ಕಳೆದುಕೊಂಡು ಬಿಡುತ್ತೇವೆ. ಅವರಿಗೆ ಹೊಡೆಯುವುದು, ಬಡಿಯವುದು ಮಾಡುತ್ತೇವೆ. ಇದು ಸರಿಯಲ್ಲ. ಸ್ವಲ್ಪ ಹೊತ್ತು ತಾಳ್ಮೆಯಿಂದ ಗಮನಿಸಬೇಕು. ಶಾಂತ ಮನೋಭಾವದೊಂದಿಗೆ ಮಕ್ಕಳೊಂದಿಗೆ ನಾವು ಕೂಡ ಮಕ್ಕಳಾಗುತ್ತಾ ಮಾತನಾಡಬೇಕು. ಅವರು ಮಾಡುವ ರಂಪಾಟದಿಂದ ಎಷ್ಟು ತೊಂದರೆಯಾಗುತ್ತದೆ ಎಂಬುದನ್ನು ತಿಳಿಸಿ ಹೇಳಬೇಕು.

ಪ್ರೀತಿ ತೋರಿಸಿ..
ಆಫೀಸ್‌ನಿಂದ ಅಥವಾ ಇನ್ನೆಲ್ಲಿಂದಲೋ ಮನೆಯೊಳಗೆ ಬಂದ ಕೂಡಲೇ ಮಕ್ಕಳ ಮೇಲೆ ಕೋಪ ಮಾಡಿಕೊಳ್ಳುವುದಕ್ಕಿಂತ ಅವರ ಮೇಲೆ ಅನುಭೂತಿ, ಪ್ರೀತಿ ತೋರಿಸಿ. ಬೆಳಿಗ್ಗೆಯಿಂದ ತಾನಿಲ್ಲದೇ ಮಕ್ಕಳು ಮಾತ್ರ ಮನೆಯಲ್ಲಿದ್ದರೂ, ಅವರು ತಾನೇ ಮನೆಯೊಳಗೇ ಇದ್ದು ಏನು ಮಾಡಲು ಸಾಧ್ಯ ಎಂಬುದನ್ನು ಯೋಚಿಸಿ ನೋಡಿ.

ಸ್ವಚ್ಛತೆಗೆ ಮಕ್ಕಳನ್ನು ಕರೆದುಕೊಳ್ಳಿ
ನಿಮ್ಮಿಂದ ಇಡೀ ಮನೆ ಗಲೀಜಾಗಿದೆ ಎಂದು ಗೊಣಗುತ್ತಾ ಕೂರುವ ಬದಲು ಮಕ್ಕಳನ್ನೂ ಸೇರಿಸಿಕೊಂಡು ಮನೆ ಸ್ವಚ್ಛ ಮಾಡಿನೋಡಿ. ಮಕ್ಕಳು ಬಿಸಾಕಿದ ಸಾಮಾಗ್ರಿಗಳನ್ನು ಅವರೊಂದಿಗೆ ಸೇರಿಕೊಂಡು ಜೋಡಿಸಿ ಆಗ ಮಕ್ಕಳೂ ಕೆಲಸ ಕಲಿತಂತಾಗುತ್ತದೆ. ಮಕ್ಕಳಿಗೂ ಸ್ವಚ್ಛತೆಯ ಅರಿವಾಗುತ್ತದೆ.

ಮಕ್ಕಳನ್ನು ಎಂದಿಗೂ ದೂಷಿಸಬೇಡಿ
ಮಕ್ಕಳನ್ನು ಯಾವ ಕಾರಣಕ್ಕೂ ದೂಷಿಸಲು ಹೋಗಬೇಡಿ. ನಿನ್ನಿಂದ ನನಗೆ ಬೇಸರವಾಗಿದೆ, ನಿನ್ನ ವರ್ತನೆಯಿಂದ ನನಗೆ ನಾಚಿಕೆಯಾಗಿದೆ ಎಂಬಿತ್ಯಾದಿ ಮಾತು ಮಗುವಿನ ಮನಸ್ಸಿಗೆ ನೋವುಂಟು ಮಾಡಬಹುದು. ಅದರ ಬದಲು ಮಗುವಿಗೆ ವಸ್ತು ಸ್ಥಿತಿಯನ್ನು ತಿಳಿಸಿ ಹೇಳುವ ಪ್ರಯತ್ನ ಮಾಡಿ. ಮಕ್ಕಳು ಹಠ ಹಿಡಿದಾಗ ಒಂದಷ್ಟು ಬೈದು ನೀನು ಏನು ಬೇಕಾದರೂ ಮಾಡಿಕೊ ಎಂದು ಹೇಳಿ ನಿಮ್ಮಷ್ಠಕ್ಕೆ ನೀವು ದೂರ ಹೋಗಿ ನಿಮ್ಮ ಪಾಡಿಗೆ ಇರಬೇಡಿ. ಮಕ್ಕಳನ್ನು ಅಪ್ಪಿ ಮುದ್ದಾಡಿ. ಹೊಡೆದಿದ್ದಕ್ಕೆ ಕ್ಷಮೆ ಇರಲಿ ಕಂದಾ ಎಂದು ಹೇಳಿ ಮಕ್ಕಳಿಗೆ ಸರಿ ತಪ್ಪಿನ ಅರಿವು ಮೂಡಿಸಿ. ಮುಖ್ಯವಾಗಿ ಮಕ್ಕಳು ಯಾವ ಕಾರಣಕ್ಕೆ ರಂಪಾಟ ಮಾಡುತ್ತವೆ ಎಂಬುದಕ್ಕೆ ಕಾರಣ ತಿಳಿದುಕೊಳ್ಳಿ. ಮಕ್ಕಳು ಹಸಿದುಕೊಂಡಿದ್ದಾರಾ? ಮನೆಯಲ್ಲಿ ತಾಯಿ ಇಲ್ಲದೇ ಮನಸ್ಸಿಗೆ ಬೇಸರವಾಗಿದ್ಯಾ? ಏನಾದರೂ ಒತ್ತಡದಿಂದ ಹೀಗೆ ಮಾಡುತ್ತಾರಾ? ಎಂಬುದನ್ನೆಲ್ಲಾ ಯೋಚಿಸಿ. ಆಗ ಎಲ್ಲವೂ ಸರಿಯಾಗುತ್ತದೆ. ಮಕ್ಕಳನ್ನು ಮಕ್ಕಳಾಗಿಯೇ ಪ್ರೀತಿಸಿ….

LEAVE A REPLY

Please enter your comment!
Please enter your name here