ರೋಟರಿ ಪುತ್ತೂರು, ವಿವಿಧ ಸಂಘ-ಸಂಸ್ಥೆಗಳಿಂದ ವಿಶ್ವ ಮಧುಮೇಹ ದಿನಾಚರಣೆ – ಪ್ರಯುಕ್ತ ವಾಕಥಾನ್-ಜಾಗೃತಿ ಜಾಥಾ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ, ಡಾ.ನಝೀರ‍್ಸ್ ಡಯಾಬಿಟಿಸ್ ಸೆಂಟರ್ ಪುತ್ತೂರು, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಪುತ್ತೂರು, ಇನ್ನರ್‌ವೀಲ್ ಕ್ಲಬ್ ಪುತ್ತೂರು, ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು, ರೋಟರ‍್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು ಪುತ್ತೂರು, ಹಾಸ್ಟಿಟಲ್ ಅಸೋಸಿಯೇಷನ್ ಪುತ್ತೂರು, ಡಾಕ್ಟರ‍್ಸ್ ಪೋರಮ್ ಪುತ್ತೂರು, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪುತ್ತೂರು ಇವುಗಳ ಸಹಯೋಗದಲ್ಲಿ “ವಿಶ್ವ ಮಧುಮೇಹ ದಿನಾಚರಣೆ” ಪ್ರಯುಕ್ತ ವಾಕಥಾನ್-ಜಾಗೃತಿ ಜಾಥಾ ಮತ್ತು ಪ್ರಾಜೆಕ್ಟ್ ಸ್ವೀಟ್ ಚೈಲ್ಡ್ ಮಕ್ಕಳ ಸಮ್ಮಿಲನ ಕಾರ್ಯಕ್ರಮದ ಜಾಥಾದ ಉದ್ಘಾಟನೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿ ಬಳಿಕ ಸಭಾ ಕಾರ್ಯಕ್ರಮ ಪ್ರಗತಿ ಆಸ್ಪತ್ರೆಯ ಸಭಾಂಗಣದಲ್ಲಿ ನ.14ರಂದು ಜರಗಿತು.


ಮಧುಮೇಹದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೀತಿರಬೇಕು-ಡಾ.ನರಸಿಂಹ ಶರ್ಮ:
ಪುತ್ತೂರು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ಡಾ.ನರಸಿಂಹ ಶರ್ಮ ಕಾನಾವುರವರು ಮಾತನಾಡಿ, ಮನುಷ್ಯನ ಒತ್ತಡದ ಜೀವನ, ಆಹಾರ ಶೈಲಿಯಲ್ಲಿ ವ್ಯತ್ಯತೆ, ವ್ಯಾಯಾಮ ಇಲ್ಲದಿರುವಿಕೆ ಇವುಗಳಿಂದ ಮಧುಮೇಹವು ವ್ಯಕ್ತಿಗೆ ಬಾಧಿಸುವ ಸಂಖ್ಯೆ ಹೆಚ್ಚುತ್ತಿದೆ. ಪುತ್ತೂರು ತಾಲೂಕಿನಲ್ಲಿ ಮಧುಮೇಹದ ಕುರಿತು ಜಾಗೃತಿ ಮೂಡಿಸುವಲ್ಲಿ ಇಂತಹ ಕಾರ್ಯಕ್ರಮ ನಡೀತಾ ಇರಬೇಕು. ಜನರು ಒತ್ತಡರಹಿತ ಜೀವನಕ್ಕೆ, ಸಮತೋಲಿತ ಆಹಾರದ ಬಗ್ಗೆ, ದೈನಂದಿನ ವ್ಯಾಯಾಮ ಮಾಡುವುದರಿಂದ ಹಾಗೂ ಸದಾ ಮತ್ತೊಬ್ಬರ ಬಗ್ಗೆ ಒಳ್ಳೆಯ ಭಾವನೆ ವ್ಯಕ್ತಪಡಿಸುವತ್ತ ಹೆಜ್ಜೆ ಇಟ್ಟಾಗ ಮಧುಮೇಹ ಮುಕ್ತ ಎನಿಸಿಕೊಳ್ಳಬಹುದು ಎಂದರು.


ಸಮಾಜದ ಒಳಿತಿಗೋಸ್ಕರ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ-ಡಾ.ದೀಪಕ್ ರೈ:
ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯಾಗಿ ಭಾಗವಹಿಸಿದ ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ ಮಾತನಾಡಿ, ಭಾರತದಲ್ಲಿ ಸುಮಾರು ಏಳುವರೆ ಕೋಟಿ ಜನ ಟೈಪ್-2 ಡಯಾಬಿಟಿಸ್‌ಗೆ, ಸುಮಾರು ಎರಡೂವರೆ ಕೋಟಿ ಜನ ಪ್ರಿ ಡಯಾಬಿಟಿಸ್ ರೋಗದಿಂದ ಬಳಲುತ್ತಿದ್ದಾರೆ. ಹೃದಯಾಘಾತ, ಮಧುಮೇಹ ಮುಂತಾದ ರೋಗಗಳು ಶ್ರೀಮಂತರಿಗೆ ಮಾತ್ರ ಬಾಧಿಸುವಂತಹುದು ಎಂಬ ಕಾಲವೊಂದಿತ್ತು. ಆದರೆ ಬದಲಾದ ಜೀವನಶೈಲಿಯಿಂದಾಗಿ ಇಂತಹ ರೋಗ ಯಾರಿಗೆ ಬೇಕಾದರೂ ಬರಬಹುದು. ವೈದ್ಯರಂಗದಲ್ಲಿನ ಖಾಸಗಿ ವಲಯ ಹಾಗೂ ಸರಕಾರಿ ವಲಯ ಒಟ್ಟಾಗಿ ಮಧುಮೇಹ ನಿಯಂತ್ರಣ ಬಗ್ಗೆ ಕಾರ್ಯಾಚರಿಸಿದಾಗ ಮಧುಮೇಹ ನಿಯಂತ್ರಣವನ್ನು ಮಾಡಬಹುದಾಗಿದೆ. ಸಮಾಜದ ಒಳಿತಿಗೋಸ್ಕರ ವೈದ್ಯರು ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು ವೈದ್ಯರನ್ನು ಉದಾತ್ತ ವೃತ್ತಿಯವರು ಎಂದು ಹೇಳಲಾಗುತ್ತದೆ ಎಂದರು.


ಜಾಗೃತಿ ಕಾರ್ಯಕ್ರಮ ವರ್ಷಪೂರ್ತಿ ಆಚರಣೆಯಾಗಲಿ-ಡಾ.ಶ್ರೀಪತಿ ರಾವ್:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ಮಾತನಾಡಿ, ದೇಹದ ಎಲ್ಲಾ ಅಂಗಾಗಗಳಿಗೆ ಗ್ಲುಕೋಸ್ ಅತ್ಯಗತ್ಯ. ಇದರಲ್ಲಿ ವೈಪರಿತ್ಯ ಉಂಟಾದಾಗ ಮಧುಮೇಹ ಕಾಡುತ್ತದೆ. ಸುಮಾರು ಹತ್ತು ಕೋಟಿಗೂ ಮಿಕ್ಕಿ ಜನರು ಮಧುಮೇಹ ರೋಗದಿಂದ ಬಳಲುತ್ತಿರುವುದು ವೈದ್ಯಕೀಯ ಅಂಕಿ ಅಂಶಗಳು ಹೇಳುತ್ತದೆ. ಕಳೆದ ಹತ್ತು ವರ್ಷಗಳಿಂದ ಮಧುಮೇಹ ಜಾಗೃತಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ರೋಟರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುತ್ತಿದ್ದು ಇದು ಒಂದು ದಿವಸಕ್ಕೆ ಸೀಮಿತವಾಗದೆ ವರ್ಷಪೂರ್ತಿ ಆಚರಣೆಯಾಗಲಿ ಎಂದರು.


ಪುತ್ತೂರಿನ ಜನತೆಯ ಆರೋಗ್ಯಕ್ಕೆ ರೋಟರಿ ಪುತ್ತೂರು ಮಹತ್ತರ ಕೊಡುಗೆ ನೀಡಿದೆ-ಡಾ.ಹರ್ಷಕುಮಾರ್ ರೈ:
ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಡಾ.ಹರ್ಷಕುಮಾರ್ ರೈ ಮಾಡಾವು ಮಾತನಾಡಿ, ರೋಟರಿ ಪುತ್ತೂರು ಸಂಸ್ಥೆಯು ಬ್ಲಡ್‌ಬ್ಯಾಂಕ್, ಡಯಾಲಿಸಿಸ್ ಕೇಂದ್ರ, ಕಣ್ಣಿನ ಆಸ್ಪತ್ರೆ ಜೊತೆಗೆ ಒಂದಲ್ಲ ಒಂದು ವೈದ್ಯಕೀಯ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವುದು ಪುತ್ತೂರಿನ ಜನತೆಗೆ ವರದಾನವಾಗಿದೆ. ಪುತ್ತೂರಿನ ಜನತೆಯ ಆರೋಗ್ಯಕ್ಕೆ ಮಹತ್ತರ ಕೊಡುಗೆ ನೀಡಿದ ರೋಟರಿ ಪುತ್ತೂರು ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಶಾಲಾ-ಕಾಲೇಜು ಹಂತದಲ್ಲಿಯೇ ಶಿಬಿರ ನಡೆಸಬೇಕು-ರಾಜೇಶ್ವರಿ ಆಚಾರ್:
ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ರಾಜೇಶ್ವರಿ ಆಚಾರ್ ಮಾತನಾಡಿ, ಮಧುಮೇಹ ಕುರಿತು ಜಾಗೃತಿಯನ್ನು ಶಾಲಾ-ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಶಿಬಿರ ನಡೆಸಿದ್ರೆ ಮಧುಮೇಹ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಬಹುದಾಗಿದೆ ಮಾತ್ರವಲ್ಲ ಮನುಷ್ಯನ ಆರೋಗ್ಯ ಸುಧಾರಿಸುವಲ್ಲಿ ಅವಶ್ಯಕ ಕ್ರಮವಾಗಿದೆ ಎಂದರು.



ಜೀವನಶೈಲಿಯಲ್ಲಿನ ಬದಲಾವಣೆಯೇ ಮಧುಮೇಹ ನಿಯಂತ್ರಣವಾಗಿದೆ-ಡಾ.ನಝೀರ್ ಅಹಮ್ಮದ್:
ಕಾರ್ಯಕ್ರಮದ ಸಂಯೋಜಕ ಕಲ್ಲಾರೆ ಡಾ.ನಝೀರ್ಸ್ ಡಯಾಬಿಟಿಸ್ ಸೆಂಟರ್‌ನ ಡಾ.ನಝೀರ್ ಅಹಮ್ಮದ್ ಮಾತನಾಡಿ, ವಿಶ್ವದಲ್ಲಿ ಸುಮಾರು 53 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಓರ್ವ ವ್ಯಕ್ತಿಗೆ ತನ್ನ ಜೀವನಾಧರಿತ ಶೈಲಿಯಿಂದ ಮಧುಮೇಹ ಬಾಧಿಸಿದಾಗ ಆತನ ಜೀವನದಲ್ಲಿ ಬಹಳಷ್ಟು ವ್ಯತ್ಯಯ ಕಾಡುತ್ತದೆ. ಮಧುಮೇಹ ಇದರಲ್ಲಿ ಟೈಪ್-1, ಟೈಪ್-2 ಡಯಾಬಿಟಿಸ್ ಇದ್ದು ಇದರ ನಿಯಂತ್ರಣವನ್ನು ಸಾಧಿಸಲು ತಿಂಗಳಿಗೆ ಸುಮಾರು ಐದು ಸಾವಿರದಷ್ಟು ವ್ಯಯವಾಗುತ್ತದೆ. ಆದ್ದರಿಂದ ಮಧುಮೇಹವು ಬಾರದೇ ಇರಲು ಅಥವಾ ಮಧುಮೇಹವನ್ನು ನಿಯಂತ್ರಿಸಲು ನಾವು ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರಲೇಬೇಕಾಗುತ್ತದೆ ಎಂದರು.


ಬೆಳಗ್ಗೆ ನಡೆದ ವಾಕಥಾನ್ ಜಾಥಾವನ್ನು ರೋಟರಿ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್, ಪ್ರಗತಿ ಆಸ್ಪತ್ರೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸಂಯೋಜಕ ಡಾ.ನಝಿರ್ ಅಹಮ್ಮದ್‌ರವರು ಸ್ವಾಗತಿಸಿದರು. ರೋಟರಿ ಪುತ್ತೂರು ಮಾಜಿ ಅಧ್ಯಕ್ಷರಾದ ಜೈರಾಜ್ ಭಂಡಾರಿ, ಮಧು ನರಿಯೂರು, ಎ.ಜೆ ರೈ, ಡಾ.ಅಶೋಕ್ ಪಡಿವಾಳ್, ಪ್ರಗತಿ ಪ್ಯಾರಾಮೆಡಿಕಲ್‌ನ ಉಪನ್ಯಾಸಕಿ ದೀಕ್ಷಾ ಶೆಟ್ಟಿರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು, ಡಾ.ನಝೀರ‍್ಸ್ ಡಯಾಬಿಟಿಸ್ ಸೆಂಟರ್ ಪುತ್ತೂರು, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಪುತ್ತೂರು, ಇನ್ನರ್‌ವೀಲ್ ಕ್ಲಬ್ ಪುತ್ತೂರು, ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು, ರೋಟರ‍್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು ಪುತ್ತೂರು, ಹಾಸ್ಟಿಟಲ್ ಅಸೋಸಿಯೇಷನ್ ಪುತ್ತೂರು, ಡಾಕ್ಟರ‍್ಸ್ ಪೋರಮ್ ಪುತ್ತೂರು, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಫಾ.ಪತ್ರಾವೋ ಆಸ್ಪತ್ರೆಯ ಸದಸ್ಯರು ಭಾಗವಹಿಸಿದ್ದರು. ಪ್ರಗತಿ ಪ್ಯಾರಾಮೆಡಿಕಲ್‌ನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರೋಟರಿ ಪುತ್ತೂರು ಇದರ ಸಮುದಾಯ ಸೇವಾ ವಿಭಾಗದ ನಿರ್ದೇಶಕ ರಾಜ್‌ಗೋಪಾಲ್ ಬಲ್ಲಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಪುತ್ತೂರು ಕಾರ್ಯದರ್ಶಿ ದಾಮೋದರ್ ಕೆ ವಂದಿಸಿ, ಯೂತ್ ಸರ್ವಿಸ್ ನಿರ್ದೇಶಕಿ ಪ್ರೀತಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.


ವಾಕಥಾನ್ ಜಾಥಾ ಉದ್ಘಾಟನೆ..
ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಬೆಳಿಗ್ಗೆ ಕೆ.ಎಸ್.ಆರ್‌ಟಿ.ಸಿ ಬಸ್ಸು ನಿಲ್ದಾಣದಲ್ಲಿ ನಡೆದ ವಾಕಥಾನ್ ಜಾಥಾವನ್ನು ಪುತ್ತೂರು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ಡಾ.ನರಸಿಂಹ ಶರ್ಮ ಕಾನಾವುರವರು ಉದ್ಘಾಟಿಸಿ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಜಾಥಾವು ಕೆ.ಎಸ್.ಆರ್.ಟಿಸಿ ಬಸ್ಸು ನಿಲ್ದಾಣದಿಂದ ಹೊರಟು ಮುಖ್ಯ ರಸ್ತೆ ಮೂಲಕ ಸಂಚರಿಸಿ ಬೊಳುವಾರು ಪ್ರಗತಿ ಆಸ್ಪತ್ರೆ ಬಳಿ ತೆರೆ ಕಾಣಲಾಯಿತು. ವಾಕಥಾನ್ ಜಾಥಾದಲ್ಲಿ ಭಾಗವಹಿಸಿದವರು ಬಿಳಿ ಟೀ-ಶರ್ಟ್ ಅನ್ನು ಧರಿಸಿದ್ದರು.

ಪ್ರಾಜೆಕ್ಟ್ ಸ್ವೀಟ್ ಚೈಲ್ಡ್..
ಟೈಪ್ 1 ಮಧುಮೇಹದಿಂದ ಬಳಲುತ್ತಿರುವವರಿಗೆ ಡಾ.ನಝೀರ್ ಡಯಾಬಿಟಿಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ಇಡಿಆರ್‌ಟಿ ಬೆಂಗಳೂರು ವತಿಯಿಂದ ಇಂತಹ ಮಕ್ಕಳಿಗೆ ನೆರವಾಗಲು ಪ್ರಾಜೆಕ್ಟ್ ಸ್ವೀಟ್ ಚೈಲ್ಡ್(ರೋಟರಿ ಪುತ್ತೂರು ಡಯಾಬಿಟಿಕ್ ಚಿಲ್ಡ್ರನ್ ಕೇರ್ ಸೆಂಟರ್) ಎಂಬ ಯೋಜನೆಯನ್ನು ಈಗಾಗಲೇ ರೂಪುಗೊಳಿಸಲಾಗಿದೆ. ಈ ಯೋಜನೆಯು ಮಕ್ಕಳಿಗೆ ವೈದ್ಯಕೀಯ ನೆರವು, ಅವಶ್ಯಕ ವೈದ್ಯಕೀಯ ಉಪಕರಣಗಳು, ಔಷಧ ವಿತರಿಸುವ ಮತ್ತು ಅವಶ್ಯಕತೆ ಇರುವವರಿಗೆ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ಒದಗಿಸುವ ಉದ್ದೇಶಗಳನ್ನು ಹೊಂದಿದೆ. ಕಳೆದ ನಾಲ್ಕೈದು ವರ್ಷಗಳಿಂದ ಸುಮಾರು 13 ಮಂದಿ ಫಲಾನುಭವಿಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ಮಾತ್ರವಲ್ಲ ಈ ಫಲಾನುಭವಿಗಳು ಸಮಾಜದಲ್ಲಿ ಮುಕ್ತವಾಗಿ ಜೀವನ ನಡೆಸುವಲ್ಲಿ ಸಫಲರಾಗಿರುತ್ತಾರೆ.
-ಡಾ.ನಝೀರ್ ಅಹಮ್ಮದ್, ಕಾರ್ಯಕ್ರಮದ ಸಂಯೋಜಕರು,

LEAVE A REPLY

Please enter your comment!
Please enter your name here