ಜಲಜೀವನ್ ಮಿಷನ್ ಕಾಮಗಾರಿ ಕಳಪೆ ಆರೋಪ -ಗುತ್ತಿಗೆದಾರರನ್ನು ಕಪ್ಪುಪಟ್ಟೆಗೆ ಸೇರಿಸಲು ಸದಸ್ಯರ ಆಗ್ರಹ
ವಿಟ್ಲ: ಮಾಣಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಅಧ್ಯಕ್ಷರಾದ ಸುದೀಪ್‌ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಪ್ರಮುಖವಾಗಿ ಮಾಣಿ ಗ್ರಾಮದಲ್ಲಿ ನಡೆದ 69ಲಕ್ಷ ರೂಪಾಯಿಯ ಜಲಜೀವನ್ ಮಿಷನ್ ಕಾಮಗಾರಿಯ ಬಗ್ಗೆ ತೀವ್ರ ತರಹದ ಆಕ್ಷೇಪ ವ್ಯಕ್ತವಾಯಿತು. ಸಭೆಯಲ್ಲಿ ಸದಸ್ಯರಾದ ಮೆಲ್ವಿನ್ ಕಿಶೋರ್ ಮಾರ್ಟಿಸ್ ಈ ವಿಷಯವನ್ನು ಪ್ರಸ್ತಾವಿಸಿ, ಗ್ರಾಮದಲ್ಲಿ ನಡೆದಿರುವ ಜಲಜೀವನ್ ಮಿಷನ್ ಕಾಮಗಾರಿಯು ಕಳಪೆ ಗುಣಮಟ್ಟದ್ದಾಗಿದ್ದು ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸದೆ ಅರ್ಧದಲ್ಲಿ ನಿಲ್ಲಿಸಿದ್ದಾರೆ ಎಂದು ಆರೋಪ ಮಾಡಿದರು.
ಈ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಜಿಲ್ಲಾ ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗ, ಮಂಗಳೂರು ಇವರಿಗೆ ದೂರು ನೀಡುವುದೆಂದು ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಎನ್.ಆರ್. ಕನ್ಸ್ ಸ್ಟ್ರೆಕ್ಷನ್ ನವರು ಮಾಣಿ ಜಂಕ್ಷನ್‌ನಲ್ಲಿ ಮುಚ್ಚಿರುವ ಸರ್ವಿಸ್ ರಸ್ತೆಯನ್ನು ತೆರವುಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಬಗ್ಗೆ ತೆರವುಗೊಳಿಸಲು ಕೆಎನ್‌ಆರ್ ಸಂಸ್ಥೆಯ ಮುಖ್ಯಸ್ಥರಿಗೆ ಸೂಚಿಸುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿನ ಅನುಮತಿ ಪಡೆಯದೆ ಬ್ಯಾನರ್ ಅಳವಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದೆಂದು ನಿರ್ಣಯಿಸಲಾಯಿತು.
ಉಪಾಧ್ಯಕ್ಷರಾದ ಸುಜಾತ ಪೂಜಾರಿ, ಸದಸ್ಯರಾದ ಇಬ್ರಾಹಿಂ ಕೆ., ಬಾಲಕೃಷ್ಣ ಆಳ್ವ ಕೆ., ನಾರಾಯಣ ಶೆಟ್ಟಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ರಮಣಿ ಡಿ ಪೂಜಾರಿ, ಪ್ರೀತಿ ಡಿನ್ನಾ ಪಿರೇರಾ, ಸೀತಾ ಮತ್ತು ಮಿತ್ರಾಕ್ಷಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗಿರಿಜಾ ಮೊದಲಾದವರು ಉಪಸ್ಥಿತರಿದ್ದರು.