ಉಪ್ಪಿನಂಗಡಿ: ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕದ ನೆಡ್ಚಿಲ್ ನಿವಾಸಿ ಸಂದೀಪ್ ಪೂಜಾರಿ 73ನೇ ಅಖಿಲ ಭಾರತೀಯ ಪೊಲೀಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನ ಮೂರು ಸಾವಿರ ಮೀಟರ್ ಸ್ಟೀಪಲ್ ಚೇಸ್ನಲ್ಲಿ ಐದನೇ ಸ್ಥಾನವನ್ನು ಪಡೆದಿದ್ದಾರೆ.
ನ.10ರಿಂದ ನ.14ರವರೆಗೆ ದೆಹಲಿಯಲ್ಲಿ ಈ ಕ್ರೀಡಾಕೂಟ ನಡೆಯಿತು. ಇದರಲ್ಲಿ ನಡೆದ ಸ್ಟೀಪಲ್ ಚೇಸ್ನಲ್ಲಿ ದೇಶದ ವಿವಿಧ ರಾಜ್ಯಗಳಿಂದ ಒಟ್ಟು 30 ಕ್ರೀಡಾಪಟುಗಳು ಭಾಗವಹಿಸಿದ್ದರು. ಸಂದೀಪ್ ಪೂಜಾರಿಯವರು ಬಿಎಸ್ಸೆಫ್ನ ತಂಡವನ್ನು ಪ್ರತಿನಿಧಿಸಿದ್ದರು.
ಕಠಿಣ ಕ್ರೀಡೆ:
ಸ್ಟೀಪಲ್ ಚೇಸ್ ಅನ್ನುವುದು ಕಠಿಣ ಓಟದ ಸ್ಪರ್ಧೆಯಾಗಿದ್ದು, 400 ಮೀಟರ್ ಟ್ರಾಕ್ನ ಕ್ರೀಡಾಂಗಣದಲ್ಲಿ ಮೂರು ಸಾವಿರ ಮೀ. ಕ್ರಮಿಸಲು ಏಳೂವರೆ ಸುತ್ತುಗಳನ್ನು ಕ್ರೀಡಾಂಗಣದಲ್ಲಿ ಓಡಬೇಕು. ಈ ಸಂದರ್ಭ 28 ಬಾರಿಯರ್ಸ್ಗಳನ್ನು ಜಿಗಿದು, ಏಳು ವಾಟರ್ ಜಂಪ್ಗಳನ್ನು ಮಾಡಿ ಓಟವನ್ನು ಪೂರ್ತಿಗೊಳಿಸಬೇಕಿದೆ.
ನೆಡ್ಚಿಲ್ನ ಕೇಶವ ಪೂಜಾರಿ ಮತ್ತು ಸುಮಿತ್ರಾ ದಂಪತಿಯ ಪುತ್ರನಾಗಿರುವ ಸಂದೀಪ್ ಪೂಜಾರಿ ಶಾಲಾ ದಿನಗಳಲ್ಲಿಯೇ ಉತ್ತಮ ಕ್ರೀಡಾಪಟುವಾಗಿದ್ದು, ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.