ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಬೆಂಬಲಿತರಿಗೆ ಬೆಂಬಲ ನೀಡಲಿದ್ದಾರೆ: ಶಾಸಕ ಅಶೋಕ್ ರೈ ವಿಶ್ವಾಸ
ಪುತ್ತೂರು: ಉಪಚುನಾವಣೆ ನಡೆಯುವ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರಿಯಡ್ಕ, ಕೆದಂಬಾಡಿ ಮತ್ತು ಪೆರ್ನೆ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತದಾರರು ಬೆಂಬಲ ನೀಡಲಿದ್ದಾರೆ ಎಂಬ ಪೂರ್ಣ ವಿಶ್ವಾಸವಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೆದಂಬಾಡಿ ಗ್ರಾಮ ವ್ಯಾಪ್ತಿಯ ತಿಂಗಳಾಡಿಯಲ್ಲಿ ಗ್ರಾಪಂ ಅಭ್ಯರ್ಥಿ ಮೆಲ್ವಿನ್ ಪರ ಮತಯಾಚನೆ ನಡೆಸಿದ ಬಳಿಕ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಪಂಚ ಗ್ಯಾರಂಟಿ ಯೋಜನೆಗಳು ಪ್ರತೀ ಮನೆಯನ್ನು ಬೆಳಗಿದೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ , ಉಚಿತ ೫ ಕೆಜಿ ಅಕ್ಕಿ ಹಾಗೂ ನಿರುದ್ಯೋಗಿ ಪದವೀಧರರಿಗೆ ನೀಡುವ ಗೌರವ ಧನ ಅರ್ಹ ಪ್ರತೀ ಕುಟುಂಬಕ್ಕೂ ಸರಕಾರ ನೀಡಿದೆ. ನುಡಿದಂತೆ ನಡೆದ ಸರಕಾರ ಇದ್ದರೆ ಅದು ಕಾಂಗ್ರೆಸ್ ಸರಕಾರ ಮಾತ್ರ ಎಂಬ ಅಭಿಪ್ರಾಯ ಜನರಲ್ಲಿ ಮೂಡಿದೆ. ಅಭಿವೃದ್ದಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂಬುದು ದೃಢವಾಗಿದೆ. ನಾನು ಶಾಸಕನಾದ ಬಳಿಕ ಪಕ್ಷಾತೀತವಾಗಿ ಎಲ್ಲಾ ಜನರ ಕೆಲಸವನ್ನು ಮಾಡಿದ್ದೇನೆ, 94ಸಿ ,ಅಕ್ರಮ ಸಕ್ರಮ ಕಡತಗಳನ್ನು ಲಂಚ ಭ್ರಷ್ಟಾಚಾರವಿಲ್ಲದೆ ಜನರ ಮನೆ ಬಾಗಿಲಿಗೆ ನೀಡಿದ್ದೇನೆ ಈ ಎಲ್ಲಾ ಕಾರಣಕ್ಕೆ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದು ಆ ಮೂಲಕ ಪುತ್ತೂರು ಶಾಸಕರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪರ ವಾತಾವರಣವಿದೆ: ಕಾವು ಹೇಮನಾಥ ಶೆಟ್ಟಿ
ಅರಿಯಡ್ಕ, ಕೆದಂಬಾಡಿ ಮತ್ತು ಪೆರ್ನೆ ಗ್ರಾಪಂ ವಾರ್ಡುಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಗುತ್ತಾರೆ ಎಂಬ ದೃಡ ವಿಶ್ವಾಸ ನಮಗಿದೆ. ಶಾಸಕ ಅಶೋಕ್ ರೈಗಳ ಕಾರ್ಯವೈಖರಿಯಿಂದ ಕ್ಷೇತ್ರದ ಎಲ್ಲಾ ವರ್ಗದವರೂ ಸಂತೃಪ್ತರಾಗಿದ್ದಾರೆ. ತನ್ನ ಬಳಿ ನೆರವು ಕೇಳಿ ಬರುವ ಪ್ರತೀಯೊಬ್ಬರಿಗೂ ತನ್ನಿಂದಾದ ಸಹಾಯ ಮಾಡುವ ಮೂಲಕ ಶಾಸಕರು ಎಲ್ಲರ ವಿಶ್ವಾಸ ಗೆದ್ದಿದ್ದಾರೆ ಇದಕ್ಕೆ ಅವರು ಮಾಡಿದ ಜನಮನ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಕಾಂಗ್ರೆಸ್ ಸರಕಾರದ ಜನಪರ ಆಡಳಿತದಿಂದ ಗ್ರಾಮಸ್ಥರು ಸಂತೋಷದಲ್ಲಿದ್ದು ಇದು ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಲಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಪ್ರತೀ ಮನೆಗೂ ಕಾರ್ಯಕರ್ತರ ಜೊತೆ ಭೇಟಿ: ಕೆ ಪಿ ಆಳ್ವ
ಉಪಚುನಾವಣೆ ನಡೆಯಲಿರುವ ಗ್ರಾಪಂಗಳ ವಾರ್ಡುಗಳ ಪ್ರತೀ ಮನೆಗೂ ಭೇಟಿ ನೀಡಿ ಮತಯಾಚನೆ ಮಾಡಲಾಗುತ್ತಿದೆ. ರಾಜ್ಯ ಸರಕಾರದ ಪಂಚ ಗ್ಯಾರಂಟಿ ಮತ್ತು ಶಾಸಕ ಅಶೋಕ್ ರೈಗಳ ಅಭಿವೃದ್ದಿ ಕಾರ್ಯಗಳು ನಮಗೆ ವರದಾನವಾಗಿದ್ದು ನಮಗೆ ಧೈರ್ಯದಿಂದ ಜನರ ಬಳಿ ತೆರಳುವಂತಾಗಿದೆ. ಕಾಂಗ್ರೆಸ್ ಮೋಸ ಮಾಡುವ ಪಕ್ಷವಲ್ಲ, ಕಳೆದ ಬಾರಿ ಹೇಳಿದಂತೆ ಮಾಡಿತೋರಿಸಿದ್ದೇವೆ, ಗ್ರಾಪಂ ಚುನಾವಣೆಯಲ್ಲಿ ನಾವು ಗೆಲ್ಲುವ ಮೂಲಕ ಗ್ರಾಮದ ಅಭಿವೃದ್ದಿ ಮಾಡಲಿದ್ದೇವೆ, ಕಾರ್ಯಕರ್ತರ ಉತ್ಸಾಹ, ಪಕ್ಷದ ಹಿರಿಯ ಮುಖಂಡರ ಸಲಹೆಯಂತೆ ನಾವು ಕಾರ್ಯಸೂಚಿಯನ್ನು ಸಿದ್ದಪಡಿಸಿದ್ದೇವೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಪಿ ಆಳ್ವರು ಹೇಳಿದರು.
ಈ ವೇಳೆ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪುರಂದರ ರೈ ನಿಶ್ಮಿತಾ, ಕೆಯ್ಯೂರು ವಲಯ ಅಧ್ಯಕ್ಷರಾದ ಎ ಕೆ ಜಯರಾಮ ರೈ, ಕೆದಂಬಾಡಿ ಗ್ರಾಪಂ ಅಭ್ಯರ್ಥಿ ಮೆಲ್ವಿನ್‌ಮೊಂತೆರೋ, ಹಬೀಬ್ ಕಣ್ಣೂರು, ಇಸ್ಮಾಯಿಲ್ ಗಟ್ಟಮನೆ, ಚಂದ್ರಹಾಸ ರೈ ಬೋಳೋಡಿ, ಸೋಮಯ್ಯ ತಿಂಗಳಾಡಿ,ಅಬ್ದುಲ್ ಖಾದರ್ ಮೇರ್ಲ, ಹಂಝ ಕೂಡುರಸ್ತೆ, ಗಿರೀಶ್ ಸಂಟ್ಯಾರ್ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.