ನೆಲ್ಯಾಡಿ: ಇಚ್ಲಂಪಾಡಿ ಮಾನಡ್ಕ ನಿವಾಸಿ ಮೋಹಿನಿಯವರ ಮನೆಯಲ್ಲೂ ನ.17ರಂದು ಕಳೆದ ರಾತ್ರಿ ಕಳ್ಳತನಕ್ಕೆ ಯತ್ನ ನಡೆದಿರುವುದಾಗಿ ವರದಿಯಾಗಿದೆ.
ಮೋಹಿನಿ ಅವರು ಪತಿ ಹಾಗೂ ಮಗಳು ದಿಶಾಳೊಂದಿಗೆ ನ.16ರಂದು ರಾತ್ರಿ 10.30 ಗಂಟೆಗೆ ಮನೆಯಲ್ಲಿ ಊಟ ಮಾಡಿ ಮಲಗಿದ್ದು, ರಾತ್ರಿ 1.30ರ ವೇಳೆಗೆ ಕರೆಂಟ್ ಹೋಗಿದ್ದು, ಮನೆ ಒಳಗೆ ಕತ್ತಲಲ್ಲಿ ಯಾರೋ ಕಳ್ಳರು ಅಡ್ಡಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮಗಳು ಮತ್ತು ಪತಿಯನ್ನು ಎಬ್ಬಿಸಿದ್ದಾರೆ. ಮೂವರು ಎದ್ದಾಗ ಹಿಂಬದಿ ಬಾಗಿಲಿನ ಮುಖೇನ ವ್ಯಕ್ತಿಯೋರ್ವರು ಹೊರಗೆ ಹೋಗುತ್ತಿರುವುದನ್ನು ಮಗಳು ದಿಶಾ ನೋಡಿದ್ದಾರೆ. ಮೋಹಿನಿ ಅವರ ಮನೆಯ ಹಿಂಬದಿಯ ಬಾಗಿಲನ್ನು ತೆರೆದು ಅಥವಾ ಮನೆಯ ಹಿಂಬದಿಯ ಕಿಟಕಿಯ ಮೇಲೆ ಸ್ವಲ್ಪ ತೆರೆದ ಜಾಗವಿದ್ದು, ಇದರ ಮುಖೇನ ಯಾರೋ ಕಳ್ಳರು ಮನೆಯ ಒಳಗಡೆ ನುಗ್ಗಿ ಕಳವು ಮಾಡಲು ಪ್ರಯತ್ನಿಸಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಮೋಹಿನಿ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.