ಕೆರೆಮೂಲೆ ಮೇಸ್ತ್ರೀ ಸಹಾಯಕ ಶಿವಪ್ಪರವರ ಸಾವಿನ ಪ್ರಕರಣ-ಮೃತರ ಮನೆ ಮಂದಿಯಿಂದ ನ್ಯಾಯಕ್ಕಾಗಿ ಮೊರೆ

0

ಓರ್ವ ಆರೋಪಿಯ ಬಂಧನ
ಸಾಲ್ಮರ ಕೆರೆಮೂಲೆಯ ಶಿವಪ್ಪ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಸ್ಟ್ಯಾನಿ ಮೇಸ್ತ್ರೀ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಸಾಲ್ಮರ ತಾವ್ರೋ ವುಡ್ ಇಂಡಸ್ಟ್ರೀಸ್ ಬಳಿ ಪೊಲೀಸ್ ಕಾವಲು ಮುಂದುವರಿದಿದೆ.

ಪುತ್ತೂರು:ಮೇಸ್ತ್ರೀ ಸಹಾಯಕರಾಗಿ ಕೆಲಸಕ್ಕೆ ಹೋಗುತ್ತಿದ್ದ ಸಾಲ್ಮರ ಕೆರೆಮೂಲೆ ನಿವಾಸಿ ಶಿವಪ್ಪ ಅವರು ಮೃತಪಟ್ಟ ವಿಚಾರಕ್ಕೆ ಸಂಬಂಧಿಸಿ ಕೆಲಸ ಮಾಡಿಸಿಕೊಂಡ ಸಂಸ್ಥೆಯ ಮಾಲಕ ಸಹಿತ ಮೂವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ, ಪ್ರಮುಖ ಆರೋಪಿಯನ್ನು ಬಂಧಿಸುವಂತೆ ಮತ್ತು ತಮಗೆ ನ್ಯಾಯ ಕೊಡಿಸುವಂತೆ ಮನೆ ಮಂದಿಯ ಆಗ್ರಹ ಒಂದೆಡೆಯಾದರೆ, ನನ್ನ ತಂದೆ ಅಮಾನವೀಯತೆ ತೋರಿಲ್ಲ.ಮಾನವೀಯತೆ ಮೆರೆದಿದ್ದಾರೆ ಎಂದು ಸಂಸ್ಥೆಯ ಮಾಲಕರ ಪುತ್ರ ಸ್ಪಷ್ಟನೆ ನೀಡಿದ್ದಾರೆ.ಇನ್ನೊಂದೆಡೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸದೇ ಇದ್ದರೆ ಹೋರಾಟ ನಡೆಸುವುದಾಗಿ ಆದಿದ್ರಾವಿಡ ಸಮಾಜ ಸೇವಾ ಸಂಘ ಎಚ್ಚರಿಕೆ ನೀಡಿದೆ.

ಮೇಸ್ತ್ರೀ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದ ಶಿವಪ್ಪ ಅವರನ್ನು ನ.16ರ ಬೆಳಿಗ್ಗೆ ತಾವ್ರೋ ವುಡ್ ಇಂಡಸ್ಟ್ರೀಸ್‌ನ ಮಾಲೀಕರಾದ ಹೆನ್ರಿ ತಾವ್ರೋ ಅವರು ಮರದ ಕೆಲಸಕ್ಕೆಂದು ಕರೆದುಕೊಂಡು ಹೋಗಿದ್ದರು.ಅಲ್ಲಿ ಅಸ್ವಸ್ಥಗೊಂಡಿದ್ದ ಅವರನ್ನು ಹೆನ್ರಿ ತಾವ್ರೋ,ಸ್ಟ್ಯಾನಿ ಮೇಸ್ತ್ರೀ ಹಾಗೂ ಇನ್ನೊಬ್ಬರು ಸೇರಿ ಪಿಕಪ್ ವಾಹನದಲ್ಲಿ ಮರದ ದಿಮ್ಮಿಗಳ ಮೇಲೆ ಮಲಗಿಸಿಕೊಡು ಬಂದು ಶಿವಪ್ಪ ಅವರ ಮನೆಯ ಬಳಿ ರಸ್ತೆ ಬದಿಯಲ್ಲಿ ಮಲಗಿಸಿ ಹೋಗಿದ್ದರು.ಇದನ್ನು ಗಮನಿಸಿದ ಶಿವಪ್ಪ ಅವರ ಅವರ ಪತ್ನಿ ಮತ್ತು ಮಗಳು, ಶಿವಪ್ಪ ಅವರು ಮಾತನಾಡದೇ ಇದ್ದುದರಿಂದ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರು.ಆದರೆ ಶಿವಪ್ಪ ಅವರು ಮೃತಪಟ್ಟಿದ್ದಾರೆಂದು ಅಲ್ಲಿ ವೈದ್ಯರು ತಿಳಿಸಿದ್ದರು.ಹೆನ್ರಿ ತಾವ್ರೋ ಅವರ ನಿರ್ಲಕ್ಷ್ಯ ದಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಿ ಪೊಲೀಸರಿಗೆ ನೀಡಿದ ದೂರಿನಂತೆ ಪೊಲೀಸರು ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.ಇದೀಗ ಶಿವಪ್ಪ ಅವರ ಮನೆ ಮಂದಿ, ತಮಗೆ ನ್ಯಾಯ ಒದಗಿಸುವಂತೆ ಅಳಲನ್ನು ತೋಡಿಕೊಂಡಿದ್ದಾರೆ.

ನಾಯಿಯನ್ನು ಬಿಸಾಡಿದಂತೆ ಎಸೆದು ಹೋದರು: ಮೃತ ಶಿವಪ್ಪ ಅವರ ಪತ್ನಿ ಗುಲಾಬಿ ಅವರು ಮಾಧ್ಯಮದ ಜೊತೆ ಮಾತನಾಡುತ್ತಾ, ನ.16ಕ್ಕೆ ನನ್ನ ಗಂಡ ಮನೆಯಲಿದ್ದ ವೇಳೆ ಸ್ಟ್ಯಾನಿ ಎಂಬವರು 5 ನಿಮಿಷದ ಕೆಲಸವಿದೆ ಅರ್ಜಂಟ್ ಬರಬೇಕೆಂದು ನನ್ನ ಗಂಡನನ್ನು ಕರೆದುಕೊಂಡು ಹೋಗಿದ್ದಾರೆ.ಪುನಃ ಸ್ವಲ್ಪ ಹೊತ್ತಿನ ಬಳಿಕ ವಾಹನದಲ್ಲಿ ಹಿಂದೆ ಅಂಗಾತ ಮಲಗಿದ್ದ ಗಂಡನನ್ನು ನಾಯಿಯನ್ನು ಬಿಸಾಡಿ ಹೋದಂತೆ ಹೋಗಿದ್ದಾರೆ ಎಂದರು. ಮೃತರ ಪುತ್ರಿ ಉಷಾ ಅವರು ಮಾತನಾಡಿ,ಪಿಕಪ್ ವಾಹನದಲ್ಲಿ ತಂದೆಯನ್ನು ಹಿಂದೆ ಮಲಗಿದ್ದ ಸ್ಥಿತಿಯಲ್ಲಿ ಕರೆದುಕೊಂಡು ಬಂದಿದ್ದರು.ಅವರನ್ನು ಕೆಳಗೆ ಇಳಿಸಲು ಪಿಕಪ್‌ನಲ್ಲಿದ್ದ ಹೆನ್ರಿ ತಾವ್ರೋ, ಸ್ಟ್ಯಾನಿ ಮೇಸ್ತ್ರೀ ಹಾಗು ಇನ್ನೋರ್ವರು ಬಂದಿಲ್ಲ. ಅವರು ನಮಗೆ ಜೋರು ಮಾಡಿ, ಎಳೆದು ಹಾಕುವಂತೆ ಕ್ರೂರವಾಗಿ ವರ್ತಿಸಿದ್ದಾರೆ.ಕೊನೆಗೆ ನಾಯಿಯನ್ನು ಬಿಸಾಡಿದಂತೆ ನನ್ನ ತಂದೆಯನ್ನು ಎಸೆದುಹೋಗಿದ್ದಾರೆ.ನಮಗೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.

ರಸ್ತೆ ಬದಿ ಎಸೆದು ಹೋಗಿಲ್ಲ-ಮಾನವೀಯತೆ ಮೆರೆದಿದ್ದೇವೆ: ಈ ಘಟನೆಗೆ ಸಂಬಂಧಿಸಿ ಆರೋಪ ಹೊತ್ತಿರುವ ಹೆನ್ರಿ ತಾವ್ರೋ ಅವರ ಪುತ್ರ ಕಿರಣ್ ಅವರು ಮಾಧ್ಯಮದ ಜೊತೆ ಮಾತನಾಡಿ, ನಮ್ಮ ಮಿಲ್‌ನಲ್ಲಿ ತುಂಬಾ ವರ್ಕ್ಲೋಡ್ ಜಾಸ್ತಿ ಇತ್ತು. ಆಗ ಹೊರಗಡೆಯಿಂದ ಇಬ್ಬರನ್ನು ಕರೆಸಿಕೊಂಡಿದ್ದೇವೆ.ಅದರಲ್ಲಿ ಒಬ್ಬರು ತುಂಬಾ ವರ್ಷದಿಂದ ಕೆಲಸ ಮಾಡುತ್ತಿದ್ದವರು.ಅವರ ಕೆಳಗೆ ಶಿವಪ್ಪರವರು ಕೆಲಸ ಮಾಡಿಕೊಂಡಿದ್ದು, ಡ್ಯಾಮ್ ವರ್ಕ್ ಗೆ ಹಲಗೆಗಳನ್ನು ಕೊಂಡೊಯ್ದು ಒಂದು ಜಾಗದಲ್ಲಿ ಅನ್‌ಲೋಡ್ ಆಗಿ ಇನ್ನೊಂದು ಜಾಗಕ್ಕೆ ಹೋದಾಗ ಶಿವಪ್ಪ ಅವರು ಅಸ್ವಸ್ಥಗೊಂಡು ವಾಹನದ ಹಿಂದೆ ಮಲಗಿದ್ದರು.ಆಗ ನಾವು ನೀರು ಕೊಟ್ಟು ಎಬ್ಬಿಸಲು ಪ್ರಯತ್ನಿಸಿದ್ದೇವೆ.ಅಲ್ಲಿಂದ ನೇರ ಶಿವಪ್ಪ ಅವರ ಮನೆಗೆ ಬಂದು ಮನೆಯವರಿಗೆ ವಿಷಯ ತಿಳಿಸಿ ಅದೇ ದಾರಿಯಲ್ಲಿ ಹೋಗುವ ರಿಕ್ಷಾವನ್ನು ನಿಲ್ಲಿಸಿ ಅದರಲ್ಲಿ ಶಿವಪ್ಪ ಅವರನ್ನು ಕೂತ್ಕೊಳಿಸಿ ಬಳಿಕ,ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಮನೆಯವರಿಗೆ ತಿಳಿಸಿದ್ದೇವೆ.

ಈ ನಡುವೆ ನನ್ನ ತಂದೆ ನೇರ ಪೊಲೀಸ್ ಸ್ಟೇಷನ್‌ಗೆ ಹೋಗಿ ನಡೆದ ಘಟನೆಯ ಕುರಿತು ಲಿಖಿತವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಅಲ್ಲಿ ಪೊಲೀಸರು, ನೀವು ಇನ್ನು ಹೋಗಿ,ಮತ್ತೆ ಕರೀತೇವೆ ಎಂದು ಹೇಳಿ ಕಳುಹಿಸಿದ್ದಾರೆ.ಸಂಜೆ ವೇಳೆ ಮತ್ತೆ ಶಿವಪ್ಪ ಅವರ ಮನೆ ಮಂದಿ ಸೇರಿಕೊಂಡು ತಂದೆಯ ಮೇಲೆ ಆರೋಪ ಮಾಡಿದ್ದಾರೆ.ಆದರೆ, ನಮಗೂ ಮನುಷ್ಯತ್ವ ಇದೆ.ನನ್ನ ತಂದೆ ಎಲ್ಲಿಯೂ ದಾರಿಯಲ್ಲಿ ಬಿಟ್ಟು ಹೋಗಿಲ್ಲ.ಎಲ್ಲಾ ಮಾಹಿತಿ ನೀಡಿ ಹೋಗಿದ್ದಾರೆ.ಆದರೆ ರಾತ್ರಿ ವೇಳೆ ಪೊಲೀಸರು ನಮ್ಮ ಮನೆಗೆ ಬಂದು ಹೋಗಿದ್ದಾರೆ.ನನ್ನ ತಂದೆ ಎಲ್ಲಿ ಇದ್ದಾರೆ ಎಂಬುದು ಗೊತ್ತಿಲ್ಲ.ಒಟ್ಟಿನಲ್ಲಿ ನಾವು ಮನುಷ್ಯತ್ವದ ರೀತಿಯಲ್ಲಿ ನಡೆದುಕೊಂಡಿದ್ದೇವೆ.ಅನಾರೋಗ್ಯಕ್ಕೀಡಾದ ಶಿವಪ್ಪ ಅವರ ಕುರಿತು ಅವರ ಮನೆ ಮಂದಿಗೆ ತಂದೆಯವರು ತಿಳಿಸಿಯೇ ಹೋಗಿದ್ದಾರೆ.ಎಲ್ಲೂ ಕೆಲವು ಆರೋಪ ಬಂದಂತೆ, ರಸ್ತೆ ಬದಿ ಎಸೆದು ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರಮುಖ ಆರೋಪಿಯನ್ನು ಬಂಧಿಸದಿದ್ದರೆ ಹೋರಾಟದ ಎಚ್ಚರಿಕೆ: ಆದಿ ದ್ರಾವಿಡ ಸಮಾಜ ಸೇವಾ ಸಂಘದ ಪ್ರಮುಖರು ನ.18ರಂದು ರಾತ್ರಿ ಪೊಲೀಸ್ ಠಾಣೆಗೆ ಹೋಗಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಮನವಿ ಮಾಡಿದ್ದಾರೆ.ಈಗಾಗಲೇ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಆದರೆ ಪ್ರಮುಖ ಆರೋಪಿಯಾಗಿರುವ ತಾವ್ರೋ ವುಡ್ ಇಂಡಸ್ಟ್ರೀಸ್‌ನ ಮಾಲಕ ಹೆನ್ರಿ ತಾವ್ರೋ ಅವರನ್ನು ಪೊಲೀಸರು ಬಂಧಿಸಬೇಕಾಗಿದೆ.ಆರೋಪಿ ನಾಪತ್ತೆಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.ಪೊಲೀಸರು ಆತನನ್ನು ಬಂಧಿಸಬೇಕು.ಇಲ್ಲವಾದಲ್ಲಿ ಮುಂದೆ ಆದಿದ್ರಾವಿಡ ಸಮಾಜ ಸೇವಾ ಸಂಘದಿಂದ ದಲಿತ ಸಂಘಟನೆಗಳನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡಲಿದ್ದೇವೆ ಎಂದು ಆದಿದ್ರಾವಿಡ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಬಾಬು ಮರಿಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here