ವಿಟ್ಲ: ಹಾವು ಕಚ್ಚಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ವಿಟ್ಲ ಮಂಗಿಲಪದವು ಎಂಬಲ್ಲಿ ನಡೆದಿದೆ. ಮೂಲತಃ ಪೆರುವಾಯಿ ನಿವಾಸಿಯಾಗಿದ್ದು,ಪ್ರಸ್ತುತ ಮಾಮೇಶ್ವರ ನವಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಸುರೇಶ್ ನಾಯ್ಕ್ ಮೃತದುರ್ದೈವಿ.
ಸುರೇಶ್ ನಾಯ್ಕರವರು ಮಂಗಿಲ ಪದವು ಬಳಿ ಇರುವ ನವಗ್ರಾಮ ಎಂಬಲ್ಲಿ ಸಂಬಂಧಿಕರ ಮನೆಯಲ್ಲಿ ಕಳೆದ ಆರೇಳು ತಿಂಗಳಿನಿಂದ ವಾಸಿಸುತ್ತಿದ್ದರು. ನ.17ರಂದು ಇವರ ಮನೆಯ ಪಕ್ಕದ ನಿವಾಸಿ ಅಬ್ಬು ಎಂಬವರ ಮನೆ ಪರಿಸರಕ್ಕೆ ಹಾವು ಬಂದಿರುವುದಾಗಿ ಮನೆಯವರು ಬೊಬ್ಬೆಹೊಡೆದಿದ್ದರು. ಈ ವೇಳೆ ಸುರೇಶ್ ಸಹಿತ ಸ್ಥಳೀಯ ನಿವಾಸಿಗಳು ಅಲ್ಲಿಗೆ ಬಂದಿದ್ದರು. ಈ ವೇಳೆ ಸುರೇಶ್ ರವರು ಹಾವನ್ನು ಹಿಡಿಯುವ ಸಾಹಸಕ್ಕೆ ಮುಂದಾಗಿದ್ದರು. ಈ ವೇಳೆ ಹಾವು ಅಲ್ಲಿಂದ ತಪ್ಪಿಸಿಕೊಂಡು ಕಣ್ಮರೆಯಾಗಿತ್ತು.
ಅಲ್ಪ ಹೊತ್ತು ಸುರೇಶ್ ಸಹಿತ ಇತರರು ಹುಡುಕಾಟ ನಡೆಸಿದರಾದರೂ ಹಾವು ಪತ್ತೆಯಾಗದ ಹಿನ್ನೆಲೆಯಲ್ಲಿ ಎಲ್ಲರೂ ಅವರವರ ಮನೆಗಳಿಗೆ ತೆರಳಿ ವಾಪಾಸಾಗಿದ್ದರು. ಸುರೇಶ್ರವರು ಮನೆಗೆ ಬಂದು ಮಲಗಿದ್ದರು. ಸಾಯಂಕಾಲವಾದರೂ ಅವರು ಏಳದೇ ಇರುವುದರಿಂದ ಮನೆಯವರು ಇತರರಿಗೆ ವಿಚಾರ ತಿಳಿಸಿದ್ದು,ಬಂದು ನೋಡಿದಾಗ ಸುರೇಶ್ರವರು ಮೃತಪಟ್ಟಿದ್ದರೆನ್ನಲಾಗಿದೆ.
ಸುರೇಶ್ ರವರಿಗೆ ಹಾವು ಹಿಡಿಯುತ್ತಿದ್ದ ಪ್ರಯತ್ನದ ವೇಳೆ ಹಾವುಕಡಿದಿದ್ದು, ಇದು ಅವರ ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿರುವುದಾಗಿ ಮಾಹಿತಿ ಲಭಿಸಿದೆ. ಸುರೇಶ್ರವರು ಅವಿವಾಹಿತರಾಗಿದ್ದು ಕೂಲಿಕೆಲಸ ಮಾಡಿಕೊಂಡಿದ್ದರು.