ಬಿಳಿನೆಲೆ ಚೇರು,ಐನೆಕಿದು ಕೂಜಿಮಲೆಯಲ್ಲಿ ಕಾಣಿಸಿಕೊಂಡಿದ್ದ ನಕ್ಸಲ್ ತಂಡ?
ಸುಮಾರು ಎಂಟು ತಿಂಗಳ ಹಿಂದೆ ಕಡಬದ ಬಿಳಿನೆಲೆ ಚೇರು,ಸುಳ್ಯದ ಐನೆಕಿದು ಮತ್ತು ಸುಳ್ಯ-ಕೊಡಗು ಗಡಿಪ್ರದೇಶವಾಗಿರುವ ಕೂಜಿಮಲೆಗೆ ಶಂಕಿತ ನಕ್ಸಲರ ತಂಡ ಭೇಟಿ ನೀಡಿತ್ತು.ಕೂಜಿಮಲೆಗೆ ಭೇಟಿ ನೀಡಿದ್ದ ತಂಡದಲ್ಲಿ ವಿಕ್ರಂ ಗೌಡ ಇದ್ದ ಎನ್ನುವ ಬಲವಾದ ಸಂಶಯವೂ ವ್ಯಕ್ತವಾಗಿತ್ತಲ್ಲದೆ, ಕೂಜಿಮಲೆಗೆ ಭೇಟಿ ನೀಡಿದ್ದ ತಂಡದಲ್ಲಿ ವಿಕ್ರಂ ಗೌಡನ ಹೋಲುವ ಓರ್ವ ಇದ್ದ ಎನ್ನುವ ಮಾಹಿತಿಯೂ ಅಧಿಕಾರಿಗಳಿಗೆ ಸಿಕ್ಕಿತ್ತು.ಇದು ನಕ್ಸಲರ ತಂಡವೆಂದು ಬಹುತೇಕ ಖಚಿತವಾಗಿ, ನಕ್ಸಲರು ಈ ಪ್ರದೇಶ ತೊರೆದು ಹೋಗಿಲ್ಲ ಎನ್ನುವುದು ದೃಢವಾಗಿದ್ದರಿಂದ ಈ ಪರಿಸರದಲ್ಲೂ ಕೂಂಬಿಂಗ್ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲಾಗಿತ್ತು.
13 ವರ್ಷಗಳ ಬಳಿಕ ಎನ್‌ಕೌಂಟರ್
ಕಬ್ಬಿನಾಲೆ ಅರಣ್ಯದಲ್ಲಿ ನಡೆದ ಎನ್‌ಕೌಂಟರ್‌ನೊಂದಿಗೆ ಉಡುಪಿ ಭಾಗದಲ್ಲಿ 13ವರ್ಷಗಳ ನಂತರ ಗುಂಡಿನ ಶಬ್ದ ಕೇಳಿದಂತಾಗಿದೆ.ನ.18ರ ರಾತ್ರಿ ಐದು ಮಂದಿ ಇದ್ದ ನಕ್ಸಲರ ತಂಡ ಗ್ರಾಮಕ್ಕೆ ದಿನಸಿ ಸಾಮಗ್ರಿ ಖರೀದಿಗೆಂದು ಬಂದಿದ್ದಾಗ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿದೆ.ಅಷ್ಟರಲ್ಲಿ ನಕ್ಸಲರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ.ಈ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲರ ನೇತ್ರಾವತಿ ದಳದ ನಾಯಕ ವಿಕ್ರಂ ಗೌಡ ಹತನಾಗಿದ್ದು, ಉಳಿದ ನಕ್ಸಲರು ಪರಾರಿಯಾಗಿದ್ದಾರೆ.
ಮಂಗಳೂರು:ಉಡುಪಿ ಜಿಲ್ಲೆ ಹೆಬ್ರಿ ತಾಲ್ಲೂಕಿನ ಕಬ್ಬಿನಾಲೆ ಪೀತುಬೈಲು ಎಂಬಲ್ಲಿ ನ.18ರ ತಡರಾತ್ರಿ ನಕ್ಸಲ್ ನಾಯಕ ಕೂಡ್ಲು ವಿಕ್ರಂ ಗೌಡನ ಎನ್‌ಕೌಂಟರ್ ನಡೆದಿದೆ.ಕಬ್ಬಿನಾಲೆಯ ಪರಿಸರದಲ್ಲಿ ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್)ಯ ಯೋಧರು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ನಕ್ಸಲರ ತಂಡವು ಎಎನ್‌ಎಫ್‌ಗೆ ಮುಖಾಮುಖಿಯಾಗಿತ್ತು.ಆ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂ ಗೌಡನ ಹತ್ಯೆಯಾಗಿದೆ.20 ವರ್ಷಗಳಿಂದ ವಿಕ್ರಂ ಗೌಡನಿಗಾಗಿ ಶೋಧಕಾರ್ಯ ನಡೆಯುತ್ತಿತ್ತು.
ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ದಟ್ಟಾರಣ್ಯದಲ್ಲಿ, ಅರಣ್ಯದಂಚಿನ ಗ್ರಾಮಗಳಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿರುವ ಕಾರಣ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿತ್ತು.ನಕ್ಸಲ್ ನಾಯಕ ವಿಕ್ರಂ ಗೌಡ ಕಬ್ಬಿನಾಲೆ ಮೂಲದವನಾಗಿದ್ದಾನೆ.ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ನಕ್ಸಲ್ ಚಟುವಟಿಕೆ ಬಿರುಸುಗೊಂಡಿತ್ತು.ಹೀಗಾಗಿ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಆರಂಭಿಸಿತ್ತು.
8 ತಿಂಗಳ ಹಿಂದೆ ಸುಳ್ಯ, ಕಡಬ ಭಾಗಕ್ಕೆ ಭೇಟಿ ನೀಡಿದ್ದ ನಕ್ಸಲರ ತಂಡ?:ಎಂಟು ತಿಂಗಳ ಹಿಂದೆಯಷ್ಟೆ ಕಡಬ, ಸುಳ್ಯ ಭಾಗದ ಕೆಲವು ಗ್ರಾಮಗಳಿಗೆ ನಕ್ಸಲರ ತಂಡ ಭೇಟಿ ನೀಡಿದ್ದ ಬಗ್ಗೆ ವರದಿಯಾಗಿತ್ತು.ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಲವೆಡೆಯೂ ನಕ್ಸಲರು ಭೇಟಿ ನೀಡಿದ್ದ ಸುಳಿವು ದೊರೆತಿತ್ತು.ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮದ ಸುಬ್ಬೆಗೌಡ ಎಂಬವರ ಮನೆಯಲ್ಲಿ ೩ ಬಂದೂಕುಗಳು ಪತ್ತೆಯಾಗಿದ್ದವು.ಆ ಮನೆಗೆ ನಕ್ಸಲ್ ನಾಯಕಿ ಮುಂಗಾರು ಲತಾ ಮತ್ತು ಆಕೆಯ ತಂಡ ಭೇಟಿ ನೀಡಿರುವ ಸುಳಿವು ಸಿಕ್ಕಿತ್ತು.ನಂತರ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ತೀವ್ರಗೊಳಿಸಿತ್ತು.ಅರಣ್ಯ ಒತ್ತುವರಿ ತೆರವು, ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನಕ್ಸಲರು ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಸಭೆಗಳನ್ನು ನಡೆಸಿರುವ ಶಂಕೆ ವ್ಯಕ್ತವಾಗಿತ್ತು.ಇದೇ ಕಾರಣದಿಂದ ಮಲೆನಾಡು ಹಾಗೂ ಕರಾವಳಿ ಭಾಗದ ಪಶ್ಚಿಮ ಘಟ್ಟದ ಅಂಚಿನ ಗ್ರಾಮಗಳಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಹೆಚ್ಚಾಗುತ್ತಿರುವ ಅನುಮಾನ ಮೂಡಿದೆ.
ಐನೆಕಿದು ಮನೆಗೆ ಬಂದು ಊಟ, ಅಕ್ಕಿ ಕೊಂಡೊಯ್ದಿದ್ದರು: ಸುಳ್ಯ ಐನೆಕಿದು ಗ್ರಾಮದ ಕೋಟೆ ತೋಟದ ಮೂಲೆ ಎಂಬಲ್ಲಿನ ಮನೆಗೆ ಕಳೆದ ಮಾರ್ಚ್‌ನಲ್ಲಿ ಒಂದು ದಿನ ರಾತ್ರಿ ನಾಲ್ವರು ಶಂಕಿತ ನಕ್ಸಲರ ತಂಡ ಭೇಟಿ ನೀಡಿತ್ತು.ಅದರ ವಾರದ ಮೊದಲು(ಮಾರ್ಚ್ 16, 2024) ಸುಳ್ಯ-ಕೊಡಗು ಗಡಿಭಾಗ ಕೂಜಿಮಲೆಯ ಅಂಗಡಿಯೊಂದಕ್ಕೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರಿದ್ದ ಅಪರಿಚಿತರ ತಂಡ ಭೇಟಿ ನೀಡಿ ದಿನಸಿ ಸಾಮಗ್ರಿಗಳನ್ನು ಕೊಂಡೊಯ್ದಿತ್ತು.ಇದು ನಕ್ಸಲರ ತಂಡವೆಂದು ಬಹುತೇಕ ಖಚಿತವಾಗಿ, ನಕ್ಸಲರು ಈ ಪ್ರದೇಶ ತೊರೆದು ಹೋಗಿಲ್ಲ ಎನ್ನುವುದನ್ನು ದೃಢಪಡಿಸಿದ್ದರಿಂದ ಈ ಪರಿಸರದಲ್ಲೂ ಕೂಂಬಿಂಗ್ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲಾಗಿತ್ತು.ಕಡಬ ಭಾಗದ ಬಿಳಿನೆಲೆ ಚೇರು ಪ್ರದೇಶದಲ್ಲಿಯೂ ಶಂಕಿತ ನಕ್ಸಲರ ತಂಡ ಪತ್ತೆಯಾಗಿತ್ತು.ಐನೆಕಿದು ಗ್ರಾಮದ ತೋಟದ ಮೂಲೆ ಎಂಬಲ್ಲಿರುವ ಅಶೋಕ್ ಕೂಜುಗೋಡು ಎಂಬವರ ಮನೆಗೆ ಸಂಜೆ ಆರು ಗಂಟೆಯ ವೇಳೆಗೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರಿದ್ದ ನಾಲ್ವರ ತಂಡ ಬಂದಿತ್ತು.
ಮಾಮೂಲಿ ಡ್ರೆಸ್‌ನಲ್ಲಿದ್ದ ಈ ನಾಲ್ವರೂ ಕೈಯಲ್ಲಿ ಬಂದೂಕು ಹಿಡಿದುಕೊಂಡಿದ್ದರು.ಅದನ್ನು ಪಕ್ಕಕ್ಕಿಟ್ಟು ಮನೆಯ ಹೊರಗಡೆ ನಿಂತು,ಱತಾವು ಯಾರು ಗೊತ್ತಿದೆಯಾ?ೞಎಂದು ಪ್ರಶ್ನಿಸಿದ್ದು, ಅನುಮಾನಗೊಂಡ ಮನೆಯವರು ನಕ್ಸಲರಾ ಎಂದು ಕೇಳಿದ್ದರು.ಅದಕ್ಕೆ ಸ್ಪಷ್ಟವಾಗಿ ಏನೂ ಹೇಳದ ತಂಡ, ತಮಗೆ ಊಟ ಕಟ್ಟಿಕೊಡುವಂತೆ ಮತ್ತು ಅಕ್ಕಿ ನೀಡುವಂತೆ ಹೇಳಿದ್ದರು.ಮನೆಯವರು ಅದೇ ರೀತಿ ಮಾಡಿದ್ದರು.ಒಂದಷ್ಟು ಹೊತ್ತು ಅಲ್ಲಿ ಮಾತನಾಡಿದ್ದ ಅಪರಿಚಿತರು ಒಂದು ಗಂಟೆಯ ಬಳಿಕ ಅಲ್ಲಿಂದ ತೆರಳಿದ್ದಾಗಿ ತಿಳಿದುಬಂದಿತ್ತು.ಕೂಜಿಮಲೆಗೆ ನಕ್ಸಲರು ಬಂದಿರುವ ವಿಚಾರ ಪತ್ರಿಕೆಗಳಲ್ಲಿ ಬಂದಿದೆ ಎಂದು ಮನೆಯವರು ಹೇಳಿದಾಗ, ಆ ಪತ್ರಿಕೆ ಇದ್ದರೆ ಕೊಡಿ ಎಂದೂ ಶಂಕಿತ ನಕ್ಸಲರು ಹೇಳಿದ್ದರೆನ್ನಲಾಗಿದೆ.
ಶಂಕಿತ ನಕ್ಸಲರು ಬಂದ ಮಾಹಿತಿಯ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆಯ ಡಿವೈಎಸ್‌ಪಿ ರಾಘವೇಂದ್ರ ಮತ್ತಿತರ ಅಧಿಕಾರಿಗಳು, ಸುಳ್ಯದ ಸರ್ಕಲ್ ಇನ್‌ಸ್ಪೆಕ್ಟರ್ ನವೀನ್‌ಚಂದ್ರ ಜೋಗಿ, ಸುಬ್ರಹ್ಮಣ್ಯ ಎಸ್‌ಐ ಕಾರ್ತಿಕ್, ಗುಪ್ತಚರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದರು.ಬ್ರಹ್ಮಗಿರಿ ಮತ್ತು ಪುಷ್ಪಗಿರಿ ಅರಣ್ಯ ಶ್ರೇಣಿಯ ವಿವಿಧ ಕಡೆಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದ ಎಎನ್‌ಎಫ್ ಪಡೆಯವರು ಬಳಿಕ ಈ ಪ್ರದೇಶದಲ್ಲೂ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದರು.
ಕೂಜಿಮಲೆಗೆ ಬಂದಿದ್ದ ತಂಡದಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಇದ್ದ ಎಂದು ಪೊಲೀಸರು ಮತ್ತು ಎಎನ್‌ಎಫ್‌ನವರು ಬಲವಾದ ಸಂಶಯ ಹೊಂದಿದ್ದರು.ಮಾತ್ರವಲ್ಲದೆ, ಕೂಜಿಮಲೆಗೆ ಬಂದ ತಂಡದಲ್ಲಿದ್ದ ಓರ್ವ ವಿಕ್ರಂ ಗೌಡನಂತೆ ಹೋಲುತ್ತಿರುವುದಾಗಿ ಇಲಾಖೆಯವರಿಗೆ ಮಾಹಿತಿ ಲಭಿಸಿತ್ತು ಎಂದೂ ಹೇಳಲಾಗಿತ್ತು.ಇದೀಗ ಉಡುಪಿ ಕಬ್ಬಿನಾಲೆಯಲ್ಲಿ ನಡೆದ ಎಎನ್‌ಎಫ್ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಹತನಾಗಿದ್ದಾನೆ.