ಬೆಳ್ತಂಗಡಿ: ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಡಿಸೆಂಬರ್ 1ರಿಂದ 3ರವರೆಗೆ ದಕ್ಷಿಣ ಕನ್ನಡ ಜಿಲ್ಲಾ ಶಿಬಿರ ಕೈಗೊಳ್ಳಲಿದ್ದಾರೆ.
ಡಿ.2ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಮತ್ತು ಮಧ್ಯಾಹ್ನ 2.30ರಿಂದ 5ರವರೆಗೆ ಮಂಗಳೂರು ನೇತ್ರಾವತಿ ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ಹಮ್ಮಿಕೊಂಡಿದ್ದು ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿ/ನೌಕರರಿಂದ ಕಾನೂನು ರೀತ್ಯಾ ಆಗಬೇಕಾದ ಕೆಲಸದಲ್ಲಿ ವಿಳಂಬವೇನಾದರೂ ಆಗಿದ್ದರೆ ಅಥವಾ ಅಧಿಕಾರಿ/ನೌಕರರು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುವುದು ಅಥವಾ ಇನ್ಯಾವುದೇ ತರಹದ ಭ್ರಷ್ಟಾಚಾರ ಮತ್ತು ದುರಾಡಳಿತದಲ್ಲಿ ತೊಡಗಿದ್ದರೆ ಅದರಿಂದ ತೊಂದರೆಗೊಳಗಾದ ಸಾರ್ವಜನಿಕರು ಅಹವಾಲುಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ.
ಡಿ.03ರಂದು ಬೆಳಿಗ್ಗೆ 11 ಗಂಟೆಯಿಂದ 1.30ರವರೆಗೆ ಮತ್ತು ಮಧ್ಯಾಹ್ನ 2.30ರಿಂದ 4.30ರವರೆಗೆ ಮಂಗಳೂರಿನ ನೇತ್ರಾವತಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ಉಪಲೋಕಾಯುಕ್ತರ ಕಾರ್ಯವ್ಯಾಪ್ತಿಗೆ ಒಳಪಡುವ ಪ್ರಕರಣಗಳ ತನಿಖೆ/ವಿಚಾರಣೆಗೆ ಬಾಕಿಯಿರುವ ಪ್ರಕರಣಗಳಿಗೆ ಸಂಬಂಧಿಸಿ
ಕಛೇರಿಯಿಂದ ನೋಟಿಸ್ ಕಳುಹಿಸಲಾಗಿರುವ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರೀತ್ಯಾ ವಿಚಾರಣೆ ನಡೆಯಲಿದೆ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.