ಕುಂಬ್ರದಲ್ಲಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 23 ನೇ ಶಾಖೆ ಅಕ್ಷಯ ಆರ್ಕೇಡ್‌ನಲ್ಲಿ ಶುಭಾರಂಭ

0

ಪುತ್ತೂರು: ಬೆಳ್ತಂಗಡಿಯಲ್ಲಿ 2008 ರಲ್ಲಿ ಆರಂಭವಾದ ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರ ಸಂಘವು ಕುಂಬ್ರದಲ್ಲಿ ತನ್ನ 23 ನೇ ಶಾಖೆಯನ್ನು ಆರಂಭ ಮಾಡಿದೆ. ನಮ್ಮ ಸಂಘವು ಈ ಮಟ್ಟಿಗೆ ಬೆಳೆಯಬೇಕಾದರೆ ಅದಕ್ಕೆ ಮುಖ್ಯ ಕಾರಣ ನಮ್ಮೆಲ್ಲ ಗ್ರಾಹಕ ಬಂಧುಗಳಾಗಿದ್ದಾರೆ. ಗ್ರಾಹಕರ ಸಹಕಾರವೇ ಸಂಘದ ಬೆಳವಣಿಗೆಗೆ ಸಹಕಾರಿಯಾಗಿದೆ.ಯಾವುದೇ ಸಂಸ್ಥೆ ಬೆಳೆಯಬೇಕಾದರೆ, ಸಮಾಜದಲ್ಲಿ ಯಶಸ್ವಿ ಕಾಣಬೇಕಾದರೆ ಅದಕ್ಕೆ ಗ್ರಾಹಕರ ಸಹಕಾರ ಅತೀ ಅಗತ್ಯ. ಕುಂಬ್ರದ ಜನತೆ, ನಮ್ಮ ಗ್ರಾಹಕ ಬಂಧುಗಳು ಸಂಘದ ಕೈ ಹಿಡಿದು ಯಶಸ್ವಿನತ್ತ ಸಾಗಿಸುತ್ತಾರೆ ಎಂಬ ಭರವಸೆ ನಮಗಿದೆ. ನಿಮ್ಮೆಲ್ಲರ ಸಹಕಾರ ನಿರಂತರವಾಗಿ ಇರಲಿ ಎಂದು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷರಾದ ಎನ್.ಪದ್ಮನಾಭ ಮಾಣಿಂಜರವರು ಹೇಳಿದರು.


ಅವರು ನ.24 ರಂದು ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿ ಆರಂಭವಾದ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 23 ನೇ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಮಾಣಿಕ ಮತ್ತು ಪಾರದರ್ಶಕ ಸೇವೆಯೇ ಸಂಘದ ಮುಖ್ಯ ಧ್ಯೇಯವಾಗಿದೆ ಎಂದ ಪದ್ಮನಾಭ ಮಾಜಿಂಜರವರು 2025 ರ ಹೊತ್ತಿಗೆ 25 ಶಾಖೆಗಳನ್ನು ಆರಂಭ ಮಾಡುವ ಕನಸು ಇದ್ದು ಇದು ನನಸು ಆಗಲಿದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.


ರಾಜ್ಯ ವ್ಯಾಪ್ತಿ ಪಸರಿಸುವಂತಾಗಲಿ: ಸತೀಶ್ ಕುಮಾರ್ ಕೆಡೆಂಜಿ
ರಿಬ್ಬನ್ ತುಂಡರಿಸಿ, ದೀಪ ಬೆಳಗಿಸುವ ಮೂಲಕ ಕಛೇರಿ ಉದ್ಘಾಟಿಸಿದ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿಯವರು ಮಾತನಾಡಿ, ಸಂಘದ ಈ ಅಭೂತಪೂರ್ವ ಬೆಳವಣಿಗೆಯ ಹಿಂದೆ ಸಂಘದ ಕ್ರಿಯಾಶೀಲ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರ ಶ್ರಮ ಬಹಳಷ್ಟಿದೆ ಮುಂದಿನ ದಿನಗಳಲ್ಲಿ ಶ್ರೀ ಗುರುದೇವ ಸಹಕಾರ ಸಂಘವು ರಾಜ್ಯ ವ್ಯಾಪ್ತಿ ಪಸರಿಸಲಿ ಎನ್ನುವ ಹಾರೈಕೆಯೊಂದಿಗೆ ಒಂದು ಸಹಕಾರ ಸಂಘ ಆರಂಭವಾದರೆ ಖಂಡಿತವಾಗಿಯೂ ಮತ್ತೊಂದು ಸಂಘಕ್ಕೆ ತೊಂದರೆಯಾಗುವುದಿಲ್ಲ ಎನ್ನುವ ಮಾತನ್ನು ಹೇಳಿ ಸಂಘವು ಕುಂಬ್ರದಲ್ಲಿ ಯಶಸ್ವಿಯನ್ನು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು.


ಬೆಳೆಯುತ್ತಿರುವ ಕುಂಬ್ರಕ್ಕೆ ಮತ್ತೊಂದು ಗರಿ: ಜಯಂತ ನಡುಬೈಲ್
ಭದ್ರತಾ ಕೊಠಡಿಯನ್ನು ಉದ್ಘಾಟನೆ ಮಾಡಿದ ಪುತ್ತೂರು ಅಕ್ಷಯ ಕಾಲೇಜಿನ ಸಂಚಾಲಕ, ಅಕ್ಷಯ ಆರ್ಕೇಡ್‌ನ ಮಾಲಕ ಜಯಂತ ನಡುಬೈಲ್‌ರವರು ಮಾತನಾಡಿ, ಕುಂಬ್ರದಲ್ಲಿ ಶ್ರೀ ಗುರುದೇವ ಸಹಕಾರ ಸಂಘ ಆರಂಭಗೊಂಡಿದ್ದು ಬಹಳಷ್ಟು ಖುಷಿ ತಂದಿದೆ. ಬೆಳೆಯುತ್ತಿರುವ ಕುಂಬ್ರ ಪೇಟೆಯ ಮತ್ತೊಂದು ಗರಿಯ ಸೇರ್ಪಡೆಯೊಂದಿಗೆ ಪೇಟೆ ಇನ್ನಷ್ಟು ಅಭಿವೃದ್ದಿ ಕಾಣಲು ಸಾಧ್ಯವಾಗಿದೆ. ಸಂಘದ ಈ ಬೆಳವಣಿಗೆಯನ್ನು ಗಮನಿಸುವಾಗ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸಬೇಕಾಗಿದೆ ಎಂದರು. ಸಿಬ್ಬಂದಿ ವರ್ಗದಲ್ಲಿ ಹೆಚ್ಚಾಗಿ ಯುವಕರೇ ಇದ್ದು ಎಲ್ಲರೂ ಒಗ್ಗಟ್ಟಾಗಿ ಗ್ರಾಹಕರೊಂದಿಗೆ ನಗುಮೊಗದಿಂದ ಬೆರೆಯುತ್ತಿರುವುದನ್ನು ನೋಡಿದಾಗ ಖುಷಿಯಾಗುತ್ತದೆ. ಸಂಘವು ಕುಂಬ್ರದಲ್ಲಿ ಯಶಸ್ವಿಯನ್ನು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು.


ಗ್ರಾಹಕರ ಮೆಚ್ಚುಗೆ ಗಳಿಸುವ ಮೂಲಕ ಯಶಸ್ಸು ಕಾಣಲಿ: ತ್ರಿವೇಣಿ ಪಲ್ಲತ್ತಾರು
ಗಣಕಯಂತ್ರದ ಉದ್ಘಾಟನೆ ನೆರವೇರಿಸಿದ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಗ್ರಾಮದ ಆರ್ಥಿಕ ವ್ಯವಸ್ಥೆಗೆ ಇಂತಹ ಸಹಕಾರಿ ಸಂಘಗಳ ಅಗತ್ಯತೆ ತುಂಬಾ ಇದೆ. ಗ್ರಾಹಕರ ಮೆಚ್ಚುಗೆ ಗಳಿಸಿಕೊಳ್ಳುವ ಮೂಲಕ ಕುಂಬ್ರದಲ್ಲಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಯಶಸ್ಸನ್ನು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು.


ಅತ್ಯುತ್ತಮ ಶಾಖೆಯಾಗಿ ಮೂಡಿಬರಲಿ: ಕಿಶೋರ್ ಕುಮಾರ್ ಬೊಟ್ಯಾಡಿ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ತು ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿಯವರು ಮಾತನಾಡಿ, ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರ ಸಂಘವು ತನ್ನ ೨೩ ನೇ ಶಾಖೆಯನ್ನು ಕುಂಬ್ರದಲ್ಲಿ ಆರಂಭಿಸಿದ್ದು ಖುಷಿ ತಂದಿದೆ. ಒಂದು ಸಹಕಾರ ಸಂಘವು 23 ಶಾಖೆಗಳನ್ನು ಆರಂಭ ಮಾಡುವುದೆಂದರೆ ಅದು ಸುಲಭದ ಕೆಲಸವಲ್ಲ, ಇದರಲ್ಲಿ ಎಲ್ಲರ ಶ್ರಮ ಇದೆ.ಮುಂದಿನ ದಿನಗಳಲ್ಲಿ ಕುಂಬ್ರ ಶಾಖೆಯು ಅತ್ಯುತ್ತಮ ಶಾಖೆಯಾಗಿ ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.


ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಪ್ರಗತಿಪರ ಕೃಷಿಕರಾದ ವಾಸು ಪೂಜಾರಿ ಗುಂಡ್ಯಡ್ಕರವರು ಮಾತನಾಡಿ, ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 23 ನೇ ಶಾಖೆಯು ಕುಂಬ್ರದಲ್ಲಿ ಆರಂಭಗೊಂಡಿರುವುದು ಖುಷಿ ಕೊಟ್ಟಿದೆ. ಸಂಘವು ಯಶಸ್ವಿನತ್ತ ಸಾಗಲಿ ಎಂದು ಹೇಳಿ ಶುಭ ಹಾರೈಸಿದರು. ಉಳಿತಾಯ ಖಾತೆ ಪುಸ್ತಕ ವಿತರಣೆ ಮಾಡಿದ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ, ಮನೆಮನ ಮುಟ್ಟುವ ಕ್ಷೇತ್ರವೊಂದಿದ್ದರೆ ಅದು ಸಹಕಾರಿ ಕ್ಷೇತ್ರವಾಗಿದೆ. ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಎಲ್ಲರೊಂದಿಗೆ ಬೆರೆಯುವ ಸಂಘಗಳು ಸಹಕಾರ ಸಂಘಗಳಾಗಿವೆ. ಕುಂಬ್ರದಲ್ಲಿ ಆರಂಭಗೊಂಡ ಶ್ರೀ ಗುರುದೇವ ಸಹಕಾರ ಸಂಘದಿಂದ ಗ್ರಾಮದ ಜನರಿಗೆ ಒಳ್ಳೆಯದಾಗಲಿ ಎಂದು ಹೇಳಿ ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿದ್ದ ಕುಂಬ್ರ ಪಂಚಮಿ ಗ್ರೂಪ್ಸ್ ಮಾಲಕ, ಉದ್ಯಮಿ ಪುರಂದರ ರೈ ಮಿತ್ರಂಪಾಡಿ ಮಾತನಾಡಿ, ಬ್ರಿಟೀಷರ ಕಾಲದಿಂದಲೂ ವ್ಯಾಪಾರ ಕೇಂದ್ರವಾಗಿದ್ದ ಕುಂಬ್ರದಲ್ಲಿ ಸಹಕಾರ ಸಂಘ ಆರಂಭಗೊಂಡಿದ್ದು ಒಳ್ಳೆಯ ಬೆಳವಣಿಗೆಯಾಗಿದೆ. ಸಮಾನತೆಯ ಮೂಲಕ ಸಂದೇಶ ಸಾರಿದ ಶ್ರೀ ನಾರಾಯಣ ಗುರುಗಳ ಹೆಸರನ್ನು ಇಟ್ಟುಕೊಂಡಿರುವ ಶ್ರೀ ಗುರುದೇವ ಸಹಕಾರ ಸಂಘವು ಕುಂಬ್ರದಲ್ಲೂ ಯಶಸ್ಸು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ವಿಶೇಷಾಧಿಕಾರಿ ಯಂ.ಮೋನಪ್ಪ ಪೂಜಾರಿ ಕಂಡೆತ್ಯಾರುರವರು, 2008 ರಲ್ಲಿ ಕೆ.ಜಿ ಬಂಗೇರರವರು ಸ್ಥಾಪಕ ಅಧ್ಯಕ್ಷರಾಗಿದ್ದುಕೊಂಡು ಸಂಘವು ಬೆಳ್ತಂಗಡಿಯಲ್ಲಿ ಆರಂಭವಾಯಿತು. ಪ್ರಸ್ತುತ 22 ಶಾಖೆ ಇದ್ದು 23 ನೇ ಶಾಖೆ ಆರಂಭಗೊಂಡಿದೆ.2025 ಕ್ಕೆ 25ಶಾಖೆ ಮಾಡುವ ಗುರಿ ಇದೆ.ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಮೈಸೂರು ಪ್ರಾಂತ್ಯಗಳಲ್ಲಿ ಶಾಖೆಗಳಿವೆ.189 ಕೋಟಿ ಸಾಲ ಹಾಗೇ ಬೇರೆಬೇರೆ ಸಂಸ್ಥೆಗಳಲ್ಲಿ 45ಕೋಟಿ ಡೆಫಾಸಿಟ್ ಇದೆ. ಸತತ ಶೇ.15 ಡಿವಿಡೆಂಡ್ ನೀಡುತ್ತಿದ್ದೇವೆ. ಕುಂಬ್ರದಲ್ಲಿ 85 ಲಕ್ಷ ಡೆಫಾಸಿಟ್ ಹಾಗೇ 400 ಮಂದಿ ಸದಸ್ಯತನ ಆಗಿದೆ ಎಂದು ಮಾಹಿತಿ ನೀಡಿದರು. ಯಾವುದೇ ಸಂಘದೊಂದಿಗೆ ಪೈಪೋಟಿ ಮಾಡುವುದು ನಮ್ಮ ಉದ್ದೇಶವಲ್ಲ ಎಂಬ ಮಾತನ್ನು ಅವರು ಈ ಸಂದರ್ಭದಲ್ಲಿ ಹೇಳಿದರು.


ಉದ್ಘಾಟನಾ ಸಮಾರಂಭದಲ್ಲಿ ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ ಹಾಗೇ ಸಮಾರಂಭದ ವೇದಿಕೆಯಲ್ಲಿ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು, ಕೆಯ್ಯೂರು ವರ್ತಕರ ಸಂಘದ ಅಧ್ಯಕ್ಷ, ನಿವೃತ್ತ ತಹಶೀಲ್ದಾರ್ ವಿಶ್ವನಾಥ ಪೂಜಾರಿ, ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಎಪಿಎಂಸಿ ನಿರ್ದೇಶಕ ತೀರ್ಥಾನಂದ ಗೌಡ ದುಗ್ಗಳ, ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಭಗೀರಥ ಜಿ ಮತ್ತಿತರರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಡಾ.ರಾಜರಾಮ್ ಕೆ.ಬಿ. ಸ್ವಾಗತಿಸಿದರು. ಸ್ಮೃತಿ ಪಲ್ಲತ್ತಾರು ಪ್ರಾರ್ಥಿಸಿದರು. ನಿರ್ದೇಶಕರುಗಳಾದ ಧರ್ಣಪ್ಪ ಪೂಜಾರಿ, ತನುಜಾ ಶೇಖರ್, ಚಿದಾನಂದ ಪೂಜಾರಿ ಎಲ್ದಕ್ಕ, ಸಂಜೀವ ಪೂಜಾರಿ, ಕೇಂದ್ರ ಕಛೇರಿ ವ್ಯವಸ್ಥಾಪಕ ಕೀರ್ತನ್, ಪ್ರಕಾಶ್ ಡಿ,ವೇಣೂರು ಶಾಖೆಯ ಉಮೇಶ್, ರೂಪಲತಾ,ಉಪ್ಪಿನಂಗಡಿ ಶಾಖೆಯ ಪ್ರಶಾಂತ್ ಕುಮಾರ್,ಮುಡಿಪು ಶಾಖೆಯ ಶರತ್ ಕುಮಾರ್, ಕುಂಬ್ರ ಶಾಖೆಯ ಪ್ರ.ಶಾಖಾ ವ್ಯವಸ್ಥಾಪಕ ಅಶ್ವಥ್ ವಿ ಅತಿಥಿಗಳಿಗೆ ಶಾಲು,ಹೂ ನೀಡಿ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಆನಂದ ಪೂಜಾರಿ ಸರ್ವೆದೋಳ ವಂದಿಸಿದರು. ವಿವಿಧ ಶಾಖೆಯ ಸಿಬ್ಬಂದಿಗಳು ಸಹಕರಿಸಿದ್ದರು.

5 ಲಕ್ಷದವರೇಗೆ ಸಾಲ ಮನ್ನಾ
ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಒಂದು ವಿಶೇಷ ಏನೆಂದರೆ ನಮ್ಮ ಸಂಘದಿಂದ 5 ಲಕ್ಷದ ತನಕ ಸಾಲ ಪಡೆದುಕೊಂಡವರು ಆಕಸ್ಮಿಕವಾಗಿ ನಿಧನರಾದರೆ ಅವರ ಸಾಲ ಮನ್ನಾ ಆಗಲಿದೆ. ಆದರೆ ಸಾಲ ಪಡೆದುಕೊಂಡ ವ್ಯಕ್ತಿಯು ಸಂಘದ ವಿಮೆ ವ್ಯವಸ್ಥೆಗೆ ಒಳಪಟ್ಟಿರಬೇಕಾಗಿರುತ್ತದೆ. ಇಂತಹ ವ್ಯವಸ್ಥೆ ಬಹುಷಹ ಸಹಕಾರಿ ಸಂಘಗಳಲ್ಲಿ ಇರುವುದು ಕಡಿಮೆ ಎಂದು ಸಂಘದ ಅಧ್ಯಕ್ಷ ಎನ್.ಪದ್ಮನಾಭ ಮಾಣಿಂಜರವರು ಹೇಳಿದರು.

ಸನ್ಮಾನ, ಗೌರವಾರ್ಪಣೆ
ಸಂಘದ ಆರಂಭಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.ಮುಖ್ಯವಾಗಿ ಅಕ್ಷಯ ಆರ್ಕೇಡ್‌ನ ಮಾಲಕ ಜಯಂತ ನಡುಬೈಲ್, ಕ್ಷೇತ್ರ ಸಂದರ್ಶನದಲ್ಲಿ ಸಹಕರಿಸಿದ ಸುಂದರ ಪೂಜಾರಿ ಮಣಿಕ್ಕರ, ಭಾಸ್ಕರ ಪೂಜಾರಿ ಪಾಂಬಾರುರವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.ಇದಲ್ಲದೆ ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಕೃತಜ್ಞತಾ ಪತ್ರ ನೀಡಿ ಗೌರವಿಸಲಾಯಿತು.

ಸಂಘದ ವಿಶೇಷತೆಗಳು
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಲ್ಲಿ 42 ಸಾವಿರಕ್ಕೂ ಮಿಕ್ಕಿ ಸದಸ್ಯರಿದ್ದಾರೆ. ರೂ.186 ಕೋಟಿ ಸಾಲ ಹಂಚಿಕೆ,ರೂ.210 ಕೋಟಿ ಮಿಕ್ಕಿ ಠೇವಣಿ, ರೂ.1250 ಕೋಟಿಗೂ ಮಿಕ್ಕಿ ವ್ಯವಹಾರ. ಪುತ್ತೂರಿನಲ್ಲಿ 3 ಶಾಖೆ ಕಬಕ, ಪುರುಷರಕಟ್ಟೆ ಮತ್ತು ಕುಂಬ್ರದಲ್ಲಿದೆ. ಮೈಸೂರು ಪ್ರಾಂತ್ಯದ ಕಾರ್ಯವ್ಯಾಪ್ತಿ ಹೊಂದಿರುವ ಸಂಸ್ಥೆ, ಲೆಕ್ಕಪರಿಶೋಧನೆಯಲಿ ಎ ತರಗತಿ, ಶೀಘ್ರದಲ್ಲಿ ಸಾಲ ಮಂಜೂರಾತಿ,ಕೃಷಿಯೇತರ ಎಲ್ಲಾ ರೀತಿಯ ಸಾಲ ಸೌಲಭ್ಯಗಳು. ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಲಾಗಿದೆ.


ಸೇವೆಗಳು
ಚಿನ್ನಾಭರಣ ಸಾಲ, ಇ-ಸ್ಟಾಂಪಿಂಗ್ ವ್ಯವಸ್ಥೆ, ಆಕರ್ಷಕ ಬಡ್ಡಿದರದಲ್ಲಿ ಠೇವಣಿಗಳ ಸ್ವೀಕಾರ, ಹಿರಿಯ ನಾಗರೀಕರಿಗೆ, ಸಂಘ ಸಂಸ್ಥೆಗಳಿಗೆ ಶೇ.0.5 ಹೆಚ್ಚುವರಿ ಬಡ್ಡಿ, ಸೇಫ್ ಲಾಕರ್,ಆರ್‌ಟಿಸಿ ಸೌಲಭ್ಯ ಸೇರಿದಂತೆ ಹಲವು ಸೇವೆಗಳು ಗ್ರಾಹಕರಿಗೆ ಲಭ್ಯವಿದೆ.

LEAVE A REPLY

Please enter your comment!
Please enter your name here