ಮಾದಕ ವಸ್ತು ಮುಕ್ತ ಸಮಾಜಕ್ಕೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಅಗತ್ಯ- ಶ್ರೀ ಆಂಜನೇಯ ರೆಡ್ಡಿ
ಪುತ್ತೂರು : ಸಂತ ಫಿಲೋಮಿನಾ ಪ. ಪೂ ಕಾಲೇಜು ವತಿಯಿಂದ ಮಾದಕ ವಸ್ತು ವಿರೋಧಿ ಜಾಗೃತಿ ಉಪನ್ಯಾಸವು ನ.26 ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶ್ರೀ ಆಂಜನೇಯ ರೆಡ್ಡಿ ಮಾತನಾಡಿ “ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಅರಿವು ಮೂಡಬೇಕಿದೆ. ಯುವಜನತೆಯಲ್ಲಿ ಮಾದಕ ವ್ಯಸನ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಯುವಕರು ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಲು ಗೆಳೆಯರ ಒತ್ತಡ, ಕುತೂಹಲ ಮತ್ತು ಅರಿವಿನ ಕೊರತೆಯೇ ಪ್ರಮುಖ ಕಾರಣ ಎಂದು ಹೇಳಲಾಗುತ್ತದೆ. ಆದ್ದರಿಂದ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವುದು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವುದು ಅತ್ಯಗತ್ಯ.ಮಾದಕ ದ್ರವ್ಯಗಳನ್ನು ಸೇವಿಸಿದ ಬಳಿಕ ಮೆದುಳು ನಿಯಂತ್ರಣ ಕಳೆದುಕೊಳ್ಳುತ್ತದೆ. ಆಗ ಆರೋಗ್ಯ ಹದಗೆಡುತ್ತದೆ. ಯುವಕರೂ ಯುವತಿಯರೂ ಈ ಜಾಲದಲ್ಲಿ ಸಿಲುಕಿ, ಹೊರಬರಲಾರದೇ ಚಡಪಡಿಸುವಂತಾಗುತ್ತದೆ. ಆದುದರಿಂದ ಅಂತ ಮೋಸದ ಜಾಲಕ್ಕೆ ಬಲಿಬೀಳಬಾರದು. ಮಹಿಳೆಯರು ಯಾವುದೇ ಆಮಿಷಗಳಿಗೆ ಬಲಿಯಾಗದೇ ಸ್ವ-ರಕ್ಷಣೆಯನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ ಅಶೋಕ್ ರಾಯನ್ ಕ್ರಾಸ್ತಾ ಮಾತಾನಾಡಿ ವಿದ್ಯಾರ್ಥಿಗಳು ಪಠ್ಯ, ಪಠ್ಯೇತರ ಚಟುವಟಿಕೆಗಳೊಂದಿಗೆ ಉತ್ತಮ ಗುಣ ನಡತೆಗಳ ಮೂಲಕ ಹೆತ್ತವರಿಗೆ, ಗುರುಹಿರಿಯರಿಗೆ, ವಿದ್ಯಾ ಸಂಸ್ಥೆಗೆ ಕೀರ್ತಿ ತರಬೇಕು. ಮಾದಕ ದ್ರವ್ಯ ವ್ಯಸನಗಳಿಗೆ ಬಲಿಯಾಗಬಾರದು. ಪೊಲೀಸ್ ಇಲಾಖೆ ಈ ಬಗ್ಗೆ ಎಚ್ಚರಿಕೆ ನೀಡುವುದರ ಜತೆಗೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳುತ್ತದೆ ಎಂದರು. ವೇದಿಕೆಯಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಕೃಷ್ಣಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪನ್ಯಾಸಕರಾದ ಸತ್ಯಲತಾ ರೈ ವಂದಿಸಿ, ಸುಮಾ. ಡಿ ಕಾರ್ಯಕ್ರಮ ನಿರೂಪಿಸಿದರು.