ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಮಹಿಳೆ ಮತ್ತು ಮಕ್ಕಳ ಕಾವಲು ಸಮಿತಿಯ ವತಿಯಿಂದ ಮಹಿಳೆಯರಿಗೆ ಕಾನೂನು ಮಾಹಿತಿ ಕಾರ್ಯಕ್ರಮ ನ.25ರಂದು ನಡೆಯಿತು.
ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಸಂಚಲನ ಮಂಗಳೂರು ಇದರ ತರಬೇತುದಾರೆ ವತ್ಸಲಾ ನಾಯಕ್ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳು, ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.
ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಕಾರ್ಯಕ್ರಮದಲ್ಲಿ ಗುಂಪು ಚರ್ಚೆ ನಡೆಸಲಾಯಿತು. ಮಕ್ಕಳ ಸಹಾಯವಾಣಿ, ಮಹಿಳಾ ಸಹಾಯವಾಣಿ ಹಾಗೂ ಮಹಿಳೆಯರಿಗೆ ಇರುವ ವಿವಿಧ ಕಾನೂನು ಸೌಲಭ್ಯಗಳು, ವ್ಯವಸ್ಥೆಗಳ ಬಗ್ಗೆ ತಿಳಿಸಲಾಯಿತು.
ಮುಖ್ಯ ಅತಿಥಿಯಾಗಿ ಸಾಮಾಜಿಕ ಕಾರ್ಯಕರ್ತೆ ಜಯ ಉಪ್ಪಿನಂಗಡಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಾದ ವಸಂತಿ ಎನ್., ದೇವಕಿ, ಬಬಿತಾ ಲವೀನಾ ಮಿನೇಜಸ್, ಅಮೀತಾ ಹರೀಶ್ ಹಾಗೂ ಸೌಂದರ್ಯ, ಉಷಾ, ವಸಂತಿ ಬಿ., ಚಿತ್ರಾವತಿ, ಸ್ಫೂರ್ತಿ ಸಿ.ವಿ., ಶಾಂಭವಿ, ಸುಶೀಲಾ ಕೆ., ಸೀತಾ, ಮೀನಾಕ್ಷಿ ಉಪಸ್ಥಿತರಿದ್ದರು.
ಆಶಾ ಕಾರ್ಯಕರ್ತೆ ವಸಂತಿ ಎನ್. ಸ್ವಾಗತಿಸಿದರು. ಗ್ರಾ.ಪಂ. ಸದಸ್ಯೆ ಗೀತಾ ವಂದಿಸಿದರು. ಸಿಬ್ಬಂದಿ ಸುಶೀಲಾ ಕಾರ್ಯಕ್ರಮ ನಿರೂಪಿಸಿದರು.