ಪುತ್ತೂರು: ಇರ್ದೆ ಗ್ರಾಮದ ಬಾಲ್ಯೊಟ್ಟುಮಾರ್ ಶಿರೋಡಿಯನ್ ತರವಾಡಿನ ಧರ್ಮದೈವ ಧೂಮಾವತಿ ದೈವದ ಪೀಠ ಪ್ರತಿಷ್ಟೆ ಹಾಗೂ ಪುತ್ತೂರು ಮುಕ್ರಂಪಾಡಿ ಕೊರಗಪ್ಪ ಪೂಜಾರಿ ಕುಟುಂಬಸ್ಥರ ವತಿಯಿಂದ ಧರ್ಮ ದೈವ ಮತ್ತು ಪರಿವಾರ ದೈವಗಳ ಹರಕೆಯ ನೇಮೋತ್ಸವವು ನ. 23 ಹಾಗೂ 24 ರಂದು ನಡೆಯಿತು.
ನ. 23 ರಂದು ಬೆಳಿಗ್ಗೆ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಗಣಪತಿಹವನ, ಧರ್ಮದೈವ ಧೂಮಾವತಿ ದೈವದ ಪೀಠ ಪ್ರತಿಷ್ಟೆ, ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು. ಸಂಜೆ ರಾಹು ಗುಳಿಗ, ಚಾಮುಂಡಿ, ಜಾಲ ಕೊರತಿ ದೈವಗಳ ತಂಬಿಲ ನಡೆದು, ಧರ್ಮದೈವ ಹಾಗೂ ಪರಿವಾರ ದೈವಗಳ ಭಂಡಾರ ತೆಗೆದ ಬಳಿಕ ಕಲ್ಲಾಳ್ತ ಗುಳಿಗ ದೈವದ ಕೋಲ, ಅನ್ನಸಂತರ್ಪಣೆ, ಕುಪ್ಪೆ ಪಂಜುರ್ಲಿ ಹಾಗೂ ಕಲ್ಲುರ್ಟಿ ದೈವದ ನೇಮ, ವರ್ಣರ ಪಂಜುರ್ಲಿ ದೈವದ ನೇಮ ನಡೆಯಿತು. ನ. 24 ರಂದು ಬೆಳಿಗ್ಗೆ ಧರ್ಮದೈವ ಧೂಮಾವತಿ ನೇಮ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಕೊರತಿ ದೈವದ ಕೋಲ, ಕೊರಗಜ್ಜ ದೈವದ ಕೋಲ ನಡೆದು ಅನ್ನಸಂತರ್ಪಣೆ ಜರಗಿತು.
ದೈವಜ್ಞ ಉನ್ನಿಕೃಷ್ಣನ್, ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರೂ, ಆರ್ಲಪದವು ಶ್ರೀ ಪೂಮಾಣಿ ಕಿನ್ನಿಮಾಣಿ ಹುಲಿಭೂತ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಸಂಚಾಲಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ವಿಠಲ ರೈ ಬೈಲಾಡಿ, ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ರೈ ಕೊಪ್ಪಳ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಕೋರ್ಮಂಡ, ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಬೇಬಿ ಜಯರಾಮ ಸೇರಿದಂತೆ ಊರ ಪರವೂರ ಭಕ್ತಾಭಿಮಾನಿಗಳು ಭೇಟಿ ನೀಡಿ ದೈವಗಳ ಪ್ರಸಾದ ಸ್ವೀಕರಿಸಿದರು. ಸುಮಾರು 2 ಸಾವಿರ ಮಂದಿಗೆ ಅನ್ನಪ್ರಸಾದ ವಿತರಿಸಲಾಯಿತು. ನೇಮೋತ್ಸವದ ಸೇವಾಕರ್ತರಾದ ಮುಕ್ರಂಪಾಡಿ ಕೊರಗಪ್ಪ ಪೂಜಾರಿ, ತರವಾಡಿನ ಹಿರಿಯರಾದ ನರಸಿಂಹ ಪೂಜಾರಿ ಬೊಳ್ಳಿಂಬಳ ಮತ್ತು ಬಾಲ್ಯೊಟ್ಟುಮಾರ್ ಕುಟುಂಬಸ್ಥರು ಪಾಲ್ಗೊಂಡರು.
ಲಕ್ಷ್ಮಿ ಮೆಟಲ್ಸ್ ಮ್ಹಾಲಕರಿಂದ ದೈವಗಳಿಗೆ ಬೆಳ್ಳಿ ಆಭರಣ ಸಮರ್ಪಣೆ
ಪುತ್ತೂರಿನ ಶ್ರೀಲಕ್ಷ್ಮಿ ಮೆಟಲ್ಸ್‌ನ ಶ್ರೀಮತಿ ಲೀಲಾವತಿ ಅಣ್ಣಿ ಪೂಜಾರಿ ಮತ್ತು ಮಕ್ಕಳು ಧರ್ಮದೈವ ಧೂಮಾವತಿ ದೈವದ ಬೆಳ್ಳಿಯ ತಲೆಪಟ್ಟ, ತಲೆಮಣಿ, ಹಣೆಪಟ್ಟಿ, ಬೆಳ್ಳಿಯ ಬಳೆಗಳು ಹಾಗೂ ಕೊರಗಜ್ಜ ದೈವಕ್ಕೆ ಬೆಳ್ಳಿಯ ಮುಟ್ಟಾಲೆ ಹಾಗೂ ತರವಾಡಿಗೆ ಪಾತ್ರ ಸಾಮಾನುಗಳನ್ನು ಸಮರ್ಪಿಸಿದರು. ಕುಟುಂಬಸ್ಥರ ವತಿಯಿಂದ ಧರ್ಮದೈವ ಧೂಮಾವತಿಯ ಪೀಠ ಪ್ರತಿಷ್ಠೆಯ ವೇಳೆ ಕುಟುಂಬದ ಧರ್ಮದೈವಕ್ಕೆ ಕಡ್ತಲೆ ಮತ್ತು ಮಣಿ ಸಮರ್ಪಣೆ ಮಾಡಲಾಯಿತು.