ಪುತ್ತೂರು:ಎಪಿಎಂಸಿಯಲ್ಲಿ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೋರ್ವರ ವಿರುದ್ಧ ಎಪಿಎಂಸಿ ಪ್ರಾಂಗಣದ ವರ್ತಕರು ನೀಡಿದ್ದ ದೂರಿನೊಂದಿಗೆ ಲಗತ್ತಿಸಲಾಗಿದ್ದ, ವರ್ತಕರ ಸಹಿಯುಳ್ಳ ಪತ್ರದ ಪ್ರತಿಯನ್ನೇ ಬಳಸಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳೀರ್ವರ ವಿರುದ್ಧ ನಕಲಿ ದೂರು ನೀಡಿ ತನಿಖೆಗೆ ಆಗ್ರಹಿಸಿರುವ ಫೋರ್ಜರಿ ಪ್ರಕರಣವೊಂದು ವರದಿಯಾಗಿದ್ದು ಈ ನಕಲಿ ದೂರಿನ ಕುರಿತೂ ತನಿಖೆಗೆ ವರ್ತಕರು ಆಗ್ರಹಿಸಿದ್ದಾರೆ.
ಎಪಿಎಂಸಿಯಲ್ಲಿ ಈ ಹಿಂದೆ ಪ್ರಭಾರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮಚಂದ್ರ ಎಂಬವರ ವಿರುದ್ಧ ಪ್ರಾಂಗಣದ ವರ್ತಕರು ಸೇರಿಕೊಂಡು ಕೃಷಿ ಮಾರಾಟ ನಿರ್ದೇಶಕರಿಗೆ ಮತ್ತು ಜವಳಿ, ಸಕ್ಕರೆ, ಸಹಕಾರ ಇಲಾಖೆಯ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ದೂರು ನೀಡಿದ್ದರು.ದೂರಿನಲ್ಲಿ ರಾಮಚಂದ್ರ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿತ್ತು.ಈ ದೂರಿನ ಜೊತೆಗೆ ಪ್ರಾಂಗಣದ ಅಂಗಡಿ ಮಾಲಕರು, ವರ್ತಕರು ಸಹಿ ಮಾಡಿದ್ದ ಪತ್ರವನ್ನು ಲಗತ್ತಿಸಿದ್ದರು.ಇನ್ನೇನು ಅಧಿಕಾರಿ ವಿರುದ್ಧ ಕ್ರಮವಾಗುತ್ತೆ ಎಂದು ದೂರು ನೀಡಿದ್ದವರು ಕಾಯುತ್ತಿದ್ದರು.ಆದರೆ ತಾವು ದೂರು ನೀಡಿದ ಅಧಿಕಾರಿಯ ಬದಲು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ಯಾರೋ ಒಬ್ಬರ ಹೆಸರಿನಲ್ಲಿ ದೂರು ನೀಡಿದ್ದಲ್ಲದೆ, ವರ್ತಕರು ರಾಮಚಂದ್ರ ಅವರ ವಿರುದ್ಧ ನೀಡಿದ್ದ ದೂರಿನೊಂದಿಗೆ ಲಗತ್ತಿಸಿದ್ದ ಸಹಿಯುಳ್ಳ ಪತ್ರವನ್ನು ಲಗತ್ತಿಸಿರುವುದು ಗಮನಕ್ಕೆ ಬಂತು.ವರ್ತಕರು ನೀಡಿದ್ದ ದೂರನ್ನು ಮೇಲಾಽಕಾರಿಗಳ ಕಚೇರಿಯಲ್ಲಿ ಯಾರೋ ಈ ರೀತಿ ಫೋರ್ಜರಿ ಮಾಡಿ ಬದಲಿಸಿರುವ ಅನುಮಾನ ಮೂಡಿದೆ.
ಹಾಲಿ ಕಾರ್ಯದರ್ಶಿ, ಹಿರಿಯ ಮಾರುಕಟ್ಟೆ ಮೇಲ್ವಿಚಾರಕಿಗೆ ನೊಟೀಸ್:
ರಾಮಚಂದ್ರ ಅವರ ವಿರುದ್ಧ ವರ್ತಕರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಮಂಗಳೂರು ಎಪಿಎಂಸಿಯ ಸಹಾಯಕ ನಿರ್ದೇಶಕ ಮೋಹನ್ ಸಿ.ಎಚ್.ಅವರು ಪರಿಶೀಲನೆಗೆಂದು ನ.11ರಂದು ಎಪಿಎಂಸಿಗೆ ಭೇಟಿ ನೀಡಿದ್ದರು.ಈ ಸಂದರ್ಭಕಾರಿ ರಾಮಚಂದ್ರ ಅವರು ಬಂದಿರಲಿಲ್ಲ.ಆಪಾದಿತ ಅಽಕಾರಿ ವರ್ತಕರಿಗೆ ನೀಡುತ್ತಿದ್ದ ಕಿರುಕುಳದ ಕುರಿತು ವರ್ತಕರು ತಮ್ಮ ಅಹವಾಲನ್ನು ಸಹಾಯಕ ನಿರ್ದೇಶಕರ ಗಮನಕ್ಕೆ ತಂದು ತನಿಖೆಗೆ ಆಗ್ರಹಿಸಿದರು.ಈ ಮಧ್ಯೆ ಎಪಿಎಂಸಿಯ ಹಾಲಿ ಕಾರ್ಯದರ್ಶಿ ಎಂ.ಸಿ.ಪಡಗಾನೂರ ಮತ್ತು ಹಿರಿಯ ಮಾರುಕಟ್ಟೆ ಮೇಲ್ವಿಚಾರಕಿ ಪವಿತ್ರ ಕೆ.ಅವರಿಗೂ ತನಿಖೆಗೆ ನೊಟೀಸ್ ಜಾರಿಯಾಗಿದ್ದ ವಿಚಾರ ಅಧಿಕಾರಿಯ ಭೇಟಿ ವೇಳೆ ವರ್ತಕರ ಗಮನಕ್ಕೆ ಬಂದಿತ್ತು.ಅಬೂಬಕ್ಕರ್ ಎಂಬವರ ಹೆಸರಿನಲ್ಲಿ ಎಂ.ಸಿ.ಪಡಗಾನೂರ ಮತ್ತು ಪವಿತ್ರ ಅವರ ವಿರುದ್ಧ ದೂರು ನೀಡಿರುವುದಲ್ಲದೆ, ರಾಮಚಂದ್ರ ಅವರ ವಿರುದ್ಧ ದೂರು ನೀಡಿದ್ದ ಸಂದರ್ಭದಲ್ಲಿ ದೂರಿನ ಜೊತೆಗೆ ಸಲ್ಲಿಸಲಾಗಿದ್ದ, ವರ್ತಕರ ಸಹಿಯುಳ್ಳ ಪತ್ರದ ಪ್ರತಿಗಳನ್ನೇ ಅಬೂಬಕ್ಕರ್ ಹೆಸರಿನ ದೂರಿನ ಜೊತೆಗೆ ಲಗತ್ತಿಸಿರುವುದು ವರ್ತಕರ ಗಮನಕ್ಕೆ ಬಂದಿತ್ತು.ದೂರುದಾರ ಅಬೂಬಕ್ಕರ್ ಯಾರು, ಎಲ್ಲಿಯವರೆನ್ನುವ ಮಾಹಿತಿ ದೂರಿನಲ್ಲಿ ಇಲ್ಲದೇ ಇದ್ದುದರಿಂದ ಅವರಿಗೆ ನೊಟೀಸ್ ಮಾಡಲಾಗದೆ,ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಂ.ಸಿ.ಪಡಗಾನೂರ ಮತ್ತು ಪವಿತ್ರ ಅವರಿಗೆ ವಿಚಾರಣೆಗಾಗಿ ನೊಟೀಸ್ ಜಾರಿಯಾಗಿತ್ತು.ದೂರಿನಲ್ಲಿ ವಿಳಾಸ, ಹುದ್ದೆ ವಿವರ ಇಲ್ಲದೇ ಇದ್ದರೂ ಲೋಕೇಶ್ ಬನ್ನೂರು,ಮೋಹನ್ ಪ್ರಭು ಎಂಬವರ ವಿರುದ್ಧವೂ ತನಿಖೆಗೆ ನೋಟೀಸ್ ಜಾರಿಯಾಗಿತ್ತು.
ಗೊಂದಲಕ್ಕೀಡಾದ ವರ್ತಕರು:
ಈ ಎಲ್ಲ ಬೆಳವಣಿಗೆಗಳಿಂದ ವರ್ತಕರು ಗೊಂದಲಕ್ಕೀಡಾದರು.ರಾಮಚಂದ್ರ ಅವರ ವಿರುದ್ಧ ತಾವು ನೀಡಿದ್ದ ದೂರಿನ ಜೊತೆಗೆ ಲಗತ್ತಿಸಲಾಗಿದ್ದ, ವರ್ತಕರ ಸಹಿಯುಳ್ಳ ಪತ್ರವನ್ನೇ ದುರುಪಯೋಗ ಪಡಿಸಿಕೊಂಡು,ಪ್ರಸ್ತುತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಅಧಿಕಾರಿಗಳ ವಿರುದ್ಧ ದೂರು ನೀಡಿರುವುದು ವರ್ತಕರು ಪೇಚಿಗೆ ಸಿಲುಕುವಂತೆ ಮಾಡಿತ್ತು.ರಾಮಚಂದ್ರ ಅವರ ವಿರುದ್ಧ ತಾವು ನೀಡಿದ್ದ ದೂರಿನ ಬದಲು ತಮ್ಮ ಸಹಿಯುಳ್ಳ ಪತ್ರದ ಪ್ರತಿಯನ್ನು ದುರ್ಬಳಕೆ ಮಾಡಿ ಪ್ರಾಮಾಣಿಕ ಅಧಿಕಾರಿಗಳಿಬ್ಬರ ವಿರುದ್ಧ ಯಾರದ್ದೋ ಬೇನಾಮಿ ಹೆಸರಿನಲ್ಲಿ ನೀಡಲಾದ ದೂರಿನ ಕುರಿತು ತನಿಖೆಗೆ ಮುಂದಾಗಿರುವುದಕ್ಕೆ ವರ್ತಕರಿಂದ ಆಕ್ರೋಶವೂ ವ್ಯಕ್ತವಾಯಿತು.ಈ ಕುರಿತೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪ್ರಾಂಗಣದ ವರ್ತಕರು ಆಗ್ರಹಿಸಿದ್ದಾರೆ.ಹಿರಿಯ ಅಧಿಕಾರಿ ಕಚೇರಿಯಲ್ಲೇ ಯಾರೋ ಈ ರೀತಿ,ತಮ್ಮ ದೂರಿನಲ್ಲಿದ್ದ ಸಹಿಯುಳ್ಳ ಪತ್ರವನ್ನು ದುರ್ಬಳಕೆ ಮಾಡಿ ಪ್ರಾಮಾಣಿಕ ಅಧಿಕಾರಿಗಳೀರ್ವರ ವಿರುದ್ಧ ಯಾರದ್ದೋ ಬೇನಾಮಿ ಹೆಸರಿನಲ್ಲಿ ದೂರು ನೀಡಿರುವುದು ವರ್ತಕರ ಗಮನಕ್ಕೆ ಬಂದ ಬೆನ್ನಲ್ಲೇ, ಈ ಕುರಿತು ತನಿಖೆಗೆ ಪ್ರಾಂಗಣಕ್ಕೆ ಬಂದಿದ್ದ ಸಹಾಯಕ ನಿರ್ದೇಶಕ ಮೋಹನ್ ಅವರಿಗೆ ಒತ್ತಾಯಿಸಿದ್ದಾರೆ, ಕಾನೂನು ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ.ಈ ಕುರಿತು ಕೇಂದ್ರ ಕಚೇರಿಗೆ ವರದಿ ಸಲ್ಲಿಸುವುದಾಗಿ ಅಧಿಕಾರಿ ವರ್ತಕರಿಗೆ ಭರವಸೆ ನೀಡಿದ್ದರು ಎನ್ನಲಾಗಿದೆ.ಒಟ್ಟಾರೆ ಯಾರದ್ದೋ ವಿರುದ್ಧದ ದೂರಿನೊಂದಿಗೆ ಲಗತ್ತಿಸಲಾಗಿದ್ದ ಸಹಿಯುಳ್ಳ ಪತ್ರದ ಪ್ರತಿಯನ್ನು ದುರ್ಬಳಕೆ ಮಾಡಿ ಇನ್ಯಾರದ್ದೋ ವಿರುದ್ಧ ದೂರು ನೀಡಿರುವ ಹಿಂದೆ ಯಾರ ಕೈಚಳಕ ನಡೆದಿದೆ ಎನ್ನುವುದು ನಿಗೂಢವಾಗಿದ್ದು ಈ ಕುರಿತು ತನಿಖೆಗೆ ಆಗ್ರಹ ವ್ಯಕ್ತವಾಗಿದೆ.
ವರ್ತಕರ ಸಹಿಯ ಪತ್ರದ ಪ್ರತಿಯಲ್ಲಿ ದೂರು
ಎಪಿಎಂಸಿ ಪ್ರಭಾರ ಕಾರ್ಯದರ್ಶಿಯಾಗಿದ್ದ ರಾಮಚಂದ್ರ ಅವರ ವಿರುದ್ಧ ಸುಮಾರು 35 ಮಂದಿ ವರ್ತಕರು ಸಹಿ ಮಾಡಿದ್ದ ದೂರನ್ನು ಮೇ.14ರಂದು ಸಚಿವರಿಗೆ ನೀಡಲಾಗಿತ್ತು.ಅದರಲ್ಲಿ ಪ್ರಥಮ ಸಹಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲು ಅವರು ಮಾಡಿದ್ದರು.ಉಳಿದಂತೆ ವರ್ತಕರ ಸಹಿ ಇದ್ದ ಎರಡು ಪ್ರತಿಗಳನ್ನು ಲಗ್ತೀಕರಿಸಲಾಗಿತ್ತು.ಈ ದೂರನ್ನು ಕೇಂದ್ರ ಕಚೇರಿಗೆ ಇ-ಮೇಲ್ ಮಾಡಲಾಗಿತ್ತು.ಆದರೆ ಜು.23ಕ್ಕೆ ಅಬೂಬಕ್ಕರ್ ಎನ್ನುವವರ ಹೆಸರಿನಲ್ಲಿ ಕಾರ್ಯದರ್ಶಿ ಸಹಿತ ಎಪಿಎಂಸಿಯ ಈಗಿನ ಇಬ್ಬರು ಅಧಿಕಾರಿಗಳ ವಿರುದ್ಧ ಇನ್ನೊಂದು ದೂರನ್ನು ನೀಡಲಾಗಿದೆ.ಅದರಲ್ಲಿ ಈ ಹಿಂದೆ ರವೀಂದ್ರನಾಥ ರೈ ಬಳ್ಳಮಜಲು ಅವರ ಸಹಿ ಬಿಟ್ಟು ವರ್ತಕರ ಸಹಿ ಇರುವ ಎರಡು ಪುಟಗಳ ಅಸಲಿ ಬದಲು ಪ್ರತಿಗಳನ್ನು ಲಗ್ತೀಕರಿಸಲಾಗಿದೆ.ಅಲ್ಲೂ ಕೊನೆಯ ಸಹಿಯಲ್ಲಿರುವ ದಿನಾಂಕವನ್ನು ಅಳಿಸಲಾಗಿದೆ.ಈ ರೀತಿಯ ಕೈಚಳಕ ಮೇಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.ಕಚೇರಿಗೆ ಬಂದಿರುವ ಇ-ಮೇಲ್ ಪ್ರತಿಯಲ್ಲಿ ವರ್ತಕರ ಸಹಿ ಇರುವ ಪ್ರತಿಯನ್ನು ಮಾತ್ರ ಪಡೆದು ದೂರಿನಲ್ಲಿ ಲಗತ್ತಿಸಿ,ಎಪಿಎಂಸಿಯ ಈಗಿನ ಕಾರ್ಯದರ್ಶಿ ಮತ್ತು ಅವರೊಂದಿಗೆ ಕೆಲವು ವರ್ತಕರು ಸೇರಿಕೊಂಡು ವಾಣಿಜ್ಯ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಅಂಗಡಿ ಮಾಲಕರು ನೀಡಿದ ದೂರಿನಲ್ಲಿ ಉಲ್ಲೇಖವಿರುವ ರಾಮಚಂದ್ರ ಎನ್ನುವ ಅಽಕಾರಿಯ ಬದಲು, ಪ್ರಸ್ತುತ ಎಪಿಎಂಸಿಯಲ್ಲಿ ಕಾರ್ಯದರ್ಶಿಯಾಗಿರುವ ಎಂ.ಸಿ.ಪಡಗಾನೂರ ಎನ್ನುವ ಅಧಿಕಾರಿಯ ಹೆಸರಿನಲ್ಲಿ ನಕಲಿ ದೂರು ಸೃಷ್ಠಿಸಿ, ಆ ದೂರಿನ ಪ್ರತಿಯ ಜೊತೆಗೆ ಅಂಗಡಿ ಮಾಲಕರು ರಾಮಚಂದ್ರ ಎನ್ನುವ ಅಧಿಕಾರಿಯ ವಿರುದ್ಧ ನೀಡಿದ ದೂರಿಗೆ ಹಾಕಿದ್ದ ಸಹಿಗಳನ್ನು ಜೋಡಿಸಲಾಗಿದೆ.ಹಿರಿಯ ಅಧಿಕಾರಿಗಳ ಕಚೇರಿಯಲ್ಲೇ ಈ ರೀತಿಯ ನಕಲಿ ದಾಖಲೆಗಳನ್ನು ಸೃಷ್ಟಿ ನಡೆದರೆ, ಉಳಿದ ಕಡೆಗಳಲ್ಲಿ ಯಾವ ರೀತಿಯ ನಕಲಿ ವ್ಯವಸ್ಥೆಗಳು ನಡೆಯಬಹುದು ಎನ್ನುವ ಆತಂಕ ಎದುರಾಗಿದೆ-
ಲೋಕೇಶ್ ಅಲುಂಬುಡ, ಸಾಮಾಜಿಕ ಕಾರ್ಯಕರ್ತ
ಸರಕಾರಿ ಕಚೇರಿಯೊಳಗೆ ದಾಖಲೆ ಪತ್ರಗಳನ್ನು ಈ ರೀತಿಯಲ್ಲಿ ನಕಲಿ ಮಾಡುವುದು ಒಂದು ಗಂಭೀರ ವಿಷಯವೂ ಆಗಿದೆ.ತನಿಖೆಗೆ ಆಗಮಿಸಿದ ಎಪಿಎಂಸಿ ಮಾರುಕಟ್ಟೆ ಸಹಾಯಕ ನಿರ್ದೇಶಕ ಮೋಹನ್ ಸಿ.ಎಚ್.ಅವರಿಗೆ ಸತ್ಯ ವಿಷಯವನ್ನು ಮನವರಿಕೆ ಮಾಡಿದ್ದೇವೆ.ಅವರಿಗೂ ವಿಷಯ ತಿಳಿದಿದೆ.ಅವರು ವರದಿ ಮಾಡುತ್ತೇನೆ ಎಂದು ಹೇಳಿದ್ದಾರೆ.ಜೊತೆಗೆ ಫೋರ್ಜರಿ ಸಹಿ ಮಾಡಿದ ವಿಚಾರದಲ್ಲೂ ಸೂಕ್ತ ತನಿಖೆ ನಡೆಸಬೇಕು.ಈ ಕುರಿತು ವರ್ತಕರು ಪೊಲೀಸರಿಗೆ ದೂರನ್ನೂ ನೀಡಲಿದ್ದಾರೆ-
ರವೀಂದ್ರನಾಥ ರೈ ಬಳ್ಳಮಜಲು, ಅಧ್ಯಕ್ಷರು
ಅಡಿಕೆ ವರ್ತಕರ ಸಂಘ ಪುತ್ತೂರು
ದೂರಿನಲ್ಲಿ ಹೆಸರು ಬದಲಾಗಿರುವ ಬಗ್ಗೆ ನನಗೆ ಮಾಹಿತಿಯಿಲ್ಲ.ಈ ಹಿಂದೆ ಪ್ರಭಾರ ಕಾರ್ಯದರ್ಶಿಯಾಗಿದ್ದ ರಾಮಚಂದ್ರರವರು ನನ್ನ ವಿರುದ್ಧ ದೂರು ನೀಡಿದ್ದರು.ಅದರ ತನಿಖೆಗಾಗಿ ಇಲಾಖೆಯ ಮೇಲಾಧಿಕಾರಿಗಳು ಪುತ್ತೂರು ಎಪಿಎಂಸಿಗೆ ಭೇಟಿ ನೀಡಿದ್ದರು.ಈ ವೇಳೆ ಎಪಿಎಂಸಿ ಪ್ರಾಂಗಣದ ವರ್ತಕರನ್ನು ವಿಚಾರಣೆ ನಡೆಸಿದ್ದರು.ಈ ಸಂದರ್ಭದಲ್ಲಿ ನನ್ನ ಮೇಲೆ ಕ್ರಮ ಕೈಗೊಳ್ಳದಂತೆ ಎಪಿಎಂಸಿಯ ವರ್ತಕರು ಸಹಾಯಕ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ-
ಎಂ.ಸಿ.ಪಡಗಾನೂರ, ಕಾರ್ಯದರ್ಶಿ ಎಪಿಎಂಸಿ ಪುತ್ತೂರು