ಚೆಲ್ಯಡ್ಕ ಸೇತುವೆಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಸಾರ್ವಜನಿಕ ಹಿತರಕ್ಷಣಾ ಸಮಿತಿಯಿಂದ ಸಹಾಯಕ ಆಯುಕ್ತರಿಗೆ ಮನವಿ

0

ಪುತ್ತೂರು: ಲೋಕೋಪಯೋಗಿ ಇಲಾಖೆಯ ಅಧೀನಕ್ಕೆ ಒಳಪಡುವ ಆರ್ಯಾಪು , ಒಳಮೊಗ್ರು , ಬೆಟ್ಟಂಪಾಡಿ ಗ್ರಾಮಗಳ ಮೂಲಕ ಹಾದುಹೋಗುವ ದೇವಸ್ಯ – ದೇರ್ಲ ರಸ್ತೆಯಲ್ಲಿ ಬರುವ ಚೆಲ್ಯಡ್ಕ ಮುಳುಗು ಸೇತುವೆಯಲ್ಲಿ ಕಳೆದ ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಘನವಾಹನಗಳ ಸಂಚಾರವನ್ನು ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು. ಪ್ರಸ್ತುತ ಮಳೆಗಾಲ ಕಡಿಮೆಯಾಗಿದ್ದು ಹೊಳೆಯಲ್ಲಿ ನೀರಿನ ಹರಿವು ತೀರಾ ಕಡಿಮೆ ಆಗಿದ್ದು ಮತ್ತು ಸೇತುವೆಯೂ ಹೊಳೆಯಿಂದ 5 ಅಡಿಯಷ್ಟು ಎತ್ತರದಲ್ಲಿ ಇರುವುದರಿಂದ ಪ್ರಾಣಪಾಯಗಳು ಸಂಭವಿಸುವ ಸಾಧ್ಯತೆಗಳು ಕಡಿಮೆ ಇದೆ. ಅದಲ್ಲದೆ ಪ್ರಸ್ತುತ ದಿನಗಳಲ್ಲಿ ಬಸ್ ಹೊರತುಪಡಿಸಿ ಎಲ್ಲಾ ರೀತಿಯ ಲಘು ಹಾಗೂ ಘನ ವಾಹನಗಳು ಸೇತುವೆ ಮೇಲೆ ಸಂಚರಿಸುತ್ತಿವೆ. ಜಿಲ್ಲಾಧಿಕಾರಿಗಳ ಆದೇಶ ಇರುವುದರಿಂದ ಬಸ್ ಚಾಲಕ, ಮಾಲಕರು ಈ ಸೇತುವೆ ಮೇಲೆ ಚಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಈ ಭಾಗದ ನೂರಾರು ಮಂದಿ ಸಾರ್ವಜನಿಕರು , ವಿದ್ಯಾರ್ಥಿಗಳು ನಿತ್ಯ ಪರದಾಡುತ್ತಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಈ ಕೂಡಲೇ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಜ್ಜಿಕಲ್ಲು ಇದರ ವತಿಯಿಂದ ಪುತ್ತೂರು ಸಹಾಯಕ ಆಯುಕ್ತರಿಗೆ ಅವರ ಕಛೇರಿ ಸಹಾಯಕರ ಮೂಲಕ ನ.27 ರಂದು ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಶ್ರೀ ವೀರಕೇಸರಿ ಸ್ಪೋರ್ಟ್ಸ್ ಆಂಡ್ ಗೇಮ್ಸ್ ಕ್ಲಬ್‌ನ ಅಧ್ಯಕ್ಷರಾದ ಸಂದೀಪ್ ರೈ ಚಿಲ್ಮೆತ್ತಾರು , ಪ್ರಧಾನ ಕಾರ್ಯದರ್ಶಿ ಸೂರಜ್ ಶೆಟ್ಟಿ ನಾಯಿಲ , ಶ್ರೀ ಶಕ್ತಿ ಜಠಾಧಾರಿ ಭಜನಾ ಮಂದಿರದ ಅಧ್ಯಕ್ಷ ಅಜಿತ್ ಹೊಸಮನೆ , ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ಕೇರಿ , ಹಿತರಕ್ಷಣಾ ಸಮಿತಿಯ ಸಂದೀಪ್ ಹೊಸಮನೆ , ಧನ್‌ರಾಜ್ ಕಾಪಿಕಾಡು ಉಪಸ್ಥಿತರಿದ್ದರು.

80 ಕ್ಕೂ ಅಧಿಕ ಜನರ ಸಹಿ ಇರುವ ಮನವಿ
ಚೆಲ್ಯಡ್ಕ ಸೇತುವೆ ಮೇಲೆ ಬಸ್ಸು ಸಂಚಾರ ಆಗಬೇಕು ಎಂಬುದು ಕೇವಲ ಒಂದೆರಡು ಮಂದಿಯ ಮನವಿಯಲ್ಲ, ಈ ಭಾಗದ ಸುಮಾರು 600 ಕ್ಕೂ ಅಧಿಕ ಮಂದಿಗೆ ಬಸ್ಸು ಸಂಚಾರ ಇಲ್ಲದೆ ತೊಂದರೆಯಾಗಿದೆ. ಸಹಾಯಕ ಆಯುಕ್ತರಿಗೆ ನೀಡಿದ ಮನವಿಯಲ್ಲೂ 80 ಕ್ಕೂ ಅಧಿಕ ಮಂದಿ ಬಸ್ಸು ಸಂಚಾರ ಆಗಬೇಕು ಎಂದು ಆಗ್ರಹಿಸಿ ಸಹಿ ಮಾಡಿರುವು ಇಲ್ಲಿನ ಪರಿಸ್ಥಿತಿಯನ್ನು ತೋರಿಸುತ್ತದೆ.


ಘನ ವಾಹನಗಳ ನಿರಂತರ ಸಂಚಾರ
ಮುಳುಗು ಸೇತುವೆ ಮತ್ತು ಸೇತುವೆ ದುರ್ಬಲಗೊಂಡಿದೆ ಎಂಬ ಕಾರಣಕ್ಕೆ ಮಳೆಗಾಲದಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ ಮಳೆಗಾಲ ಮುಗಿದಿದ್ದು ಹೊಳೆಯಲ್ಲಿ ನೀರಿನ ಮಟ್ಟ ತುಂಬಾ ಕೂಡ ತುಂಬಾ ಕಡಿಮೆ ಇದೆ. ಪ್ರಸ್ತುತ ದಿನಗಳಲ್ಲಿ ಘನ ವಾಹನಗಳು ನಿರಂತರ ಸೇತುವೆ ಮೇಲೆ ಸಂಚರಿಸುತ್ತಿವೆ. ಒಳಮೊಗ್ರು ಗ್ರಾಪಂ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಸದಸ್ಯರು ಪ್ರಸ್ತಾಪಿಸಿದ್ದರು. ಬಸ್ಸು ಸಂಚಾರ ಇಲ್ಲದೆ ಈ ಭಾಗದ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ಸದಸ್ಯಾದ ಮಹೇಶ್ ರೈ, ನಳಿನಾಕ್ಷಿಯವರು ಸಭೆಯ ಗಮನಕ್ಕೆ ತಂದಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಬರೆದುಕೊಳ್ಳಲಾಗಿತ್ತು. ಆದರೆ ಇದುವರೇಗೆ ಯಾವುದೇ ಪರಿಹಾರ ಸಿಗದೇ ಇರುವ ಹಿನ್ನೆಲೆಯಲ್ಲಿ ಇಲ್ಲಿನ ನಾಗರೀಕರು ಮತ್ತೆ ಮನವಿಯನ್ನು ನೀಡಿದ್ದಾರೆ.

ದ.5ರೊಳಗೆ ಪರಿಹಾರ ಸಿಗದಿದ್ದರೆ ಹೋರಾಟ ಅನಿವಾರ‍್ಯ
‘ ಈ ಸೇತುವೆ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕದಲ್ಲಿ ಇದ್ದರೂ ಜಿಲ್ಲಾಧಿಕಾರಿಗಳ ಈ ಆದೇಶದಿಂದ ಒಳಮೊಗ್ರು ಗ್ರಾಮದ ನಾನು ಪ್ರತಿನಿಧಿಸುವ ವಾರ್ಡ್‌ನ ಜನರೇ ತೀವ್ರ ಸಂಕಷ್ಟಕ್ಕೆ ಒಳಗಾಗಿರುವುದು. ಜಿಲ್ಲಾಧಿಕಾರಿಗಳು ಭೇಟಿ ನೀಡುವ ಸಂಧರ್ಭದಲ್ಲಿ ನಮಗೆ ಮಾಹಿತಿ ನೀಡದಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಬಸ್ ಹೊರತುಪಡಿಸಿ ಎಲ್ಲಾ ರೀತಿಯ ಸರಕು ತುಂಬಿದ ಬೃಹತ್ ಗಾತ್ರದ ಘನವಾಹನಗಳು ಸೇತುವೆ ಮೇಲೆ ಸಂಚರಿಸುತ್ತಿವೆ. ಸಹಾಯಕ ಆಯುಕ್ತರಿಗೆ , ಜಿಲ್ಲಾಧಿಕಾರಿಗಳಿಗೆ ಬಸ್ ಸಂಚರಿಸುವಂತೆ ಕ್ರಮವಹಿಸಲು ಸಾರ್ವಜನಿಕ ಹಿತರಕ್ಷಣಾ ಸಮಿತಿ ವತಿಯಿಂದ ಮನವಿ ಮಾಡಲಾಗಿದ್ದು ಡಿ.5 ರ ಒಳಗೆ ಈ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಸಾರ್ವಜನಿಕರೊಂದಿಗೆ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ.’
ಮಹೇಶ್ ರೈ ಕೇರಿ, ಸದಸ್ಯರು ಒಳಮೊಗ್ರು ಗ್ರಾಮ ಪಂಚಾಯತ್

LEAVE A REPLY

Please enter your comment!
Please enter your name here