ಪುತ್ತೂರು: ಆಂಧ್ರಪ್ರದೇಶದ ಗುಂಟೂರು ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯದಲ್ಲಿ ನ.26 ರಂದು ಜರಗಿದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ವೈಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ದ್ವಿತೀಯ ಬಿಎಸ್ಸಿ ವಿಭಾಗದ ಸ್ಪಂದನರವರು 45 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಫಿಲೋಮಿನಾ ಕಾಲೇಜಿನ ಇತಿಹಾಸದಲ್ಲಿಯೇ ದಕ್ಷಿಣ ವಲಯ ಅಂತರ್ ವಿವಿ ವೈಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಹುಡುಗಿಯರ ವಿಭಾಗದಲ್ಲಿ ಪ್ರಥಮ ಬಾರಿಗೆ ಬೆಳ್ಳಿ ಪದಕ ವಿಜೇತರಾಗಿ ಇತಿಹಾಸ ನಿರ್ಮಾಣ ಮಾಡಿದ್ದು, ಮಾತ್ರವಲ್ಲ ಸ್ಪಂದನಾರವರು ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾನಿಲಯದ ವೈಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ.
ಪುಣಚ ನಿವಾಸಿ ದೇವಪ್ಪ ಗೌಡ ಹಾಗೂ ಜಯಶೀಲರವರ ಪುತ್ರಿಯಾಗಿರುವ ಸ್ಪಂದನಾರವರು ಇತ್ತೀಚೆಗೆ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ 45ಕೆ.ಜಿ ವಿಭಾಗದಲ್ಲಿ ನಡೆದ ವೈಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಸಾಧನೆ ಮಾಡಿ ದಕ್ಷಿಣ ವಲಯ ಅಂತರ್-ವಿ.ವಿ ವೈಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದರು. ಸ್ಪಂದನಾರವರು ಕೇವಲ ವೈಟ್ ಲಿಪ್ಟಿಂಗ್ ನಲ್ಲಿ ಅಲ್ಲದೆ ವ್ಯಾಸಂಗದಲ್ಲೂ ಸಾಧನೆ ಮೆರೆದಿರುತ್ತಾರೆ. ಇವರಿಗೆ ವೈಟ್ ಲಿಪ್ಟಿಂಗ್ ತರಬೇತುದಾರ ಅಶ್ವಥ್ ಕೆ.ಎಸ್ ರವರು ತರಬೇತಿಯನ್ನು ನೀಡಿರುತ್ತಾರೆ. ಸ್ಪಂದನಾರವರ ಸಾಧನೆಗೆ ಕಾಲೇಜು ಪ್ರಾಂಶುಪಾಲ ವಂ.ಡಾ.ಆಂಟನಿ ಪ್ರಕಾಶ್ ಮೊಂತೇರೊರವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ ಎಂದು ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಲ್ಯಾಸ್ ಪಿಂಟೊರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.