ಪುತ್ತೂರು: ಪುತ್ತೂರಿನ ಸಾಹಿತ್ಯ ಪ್ರಕಾಶಕ, ಪರಿಚಾರಕ ಪ್ರಕಾಶ್ಕುಮಾರ್ ಕೊಡೆಂಕಿರಿ ಅವರು ಬೆಂಗಳೂರು ರಾಷ್ಟ್ರೋತ್ಥಾನ ಸಾಹಿತ್ಯ ಸಂಸ್ಥೆ ಕೊಡಮಾಡುವ ಬೆಂಗಳೂರಿನ ಕನ್ನಡ ಪುಸ್ತಕ ಹಬ್ಬದ ವಿಶೇಷ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಸುಮಾರು 37 ದಿನಗಳಿಂದ ಬೆಂಗಳೂರಿನ ಕೇಶವಶಿಲ್ಪ ಸಭಾಂಗಣದಲ್ಲಿ ನಡೆಯುತ್ತಿರುವ ಕನ್ನಡ ಪುಸ್ತಕ ಹಬ್ಬ-2024ರ ಸಮಾರೋಪ ಸಮಾರಂಭ ಡಿ.1ರಂದು ನಡೆಯಲಿದೆ. ಆ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕುಮಾರ್, ಪದ್ಮಶ್ರೀ ಪುರಸ್ಕೃತ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಅವರ ಉಪಸ್ಥಿತಿಯಲ್ಲಿ ಪ್ರಕಾಶ್ ಕುಮಾರ್ ಕೊಡೆಂಕಿರಿಯವರಿಗೆ ಕನ್ನಡ ಪುಸ್ತಕ ಹಬ್ಬ ಪುರಸ್ಕಾರ ಮಾಡಲಾಗುವುದು.
ಪ್ರಕಾಶ್ ಕುಮಾರ್ ಕೊಡೆಂಕಿರಿ: ತಮ್ಮ ಜ್ಞಾನಗಂಗಾ ಪುಸ್ತಕ ಮಳಿಗೆಯ ಮೂಲಕ ಸದಾಭಿರುಚಿಯ ಪುಸ್ತಕಗಳನ್ನು ಓದುಗರ ಕೈಗೆ ನೀಡಿದವರು. ಭೀಷ್ಮಾರ್ಜುನ, ಸುಭದ್ರಾರ್ಜುನ, ಕುಮಾರವಿಜಯ ಯಕ್ಷಗಾನ ಪ್ರಸಂಗಗಳು; ರಾಮರಾಜ್ಯದ ರೂವಾರಿ, ಸಾಮಗ ಪಡಿದನಿ, ಕಡಂಬಿಲ ಅಡುಗೆ, ಶಿಕ್ಷಣ ನೋಟ, ನಮ್ಮ ಶಿಕ್ಷಣ ಪದ್ಧತಿಯ ಸಮಸ್ಯೆಗಳು, ಬಣ್ಣದ ಬದುಕಿನ ಸ್ವಗತ, ಸಾವಿರಾರು ಗಾದೆಗಳು, ಅನ್ನದ ಮರ, ಮಣ್ಣಿಗೆ ಮಾನ, ಕಥಾಕಿರಣ, ಚಿಂತನಗಾಥಾ.. ಇವೇ ಮೊದಲಾದ ಅರವತ್ತಕ್ಕೂ ಕೃತಿಗಳಿಗೂ ಮಿಕ್ಕಿ ಪುಸ್ತಕಗಳು ಪ್ರಕಾಶನಗೊಂಡಿದೆ. ರಸಋಷಿ ದೇರಾಜೆ ಸೀತಾರಾಮಯ್ಯನರ ದೇರಾಜೆ ಭಾರತಹಾಗೂ ದೇರಾಜೆ ರಾಮಾಯಣ ಪುಸ್ತಕಗಳನ್ನು ಪ್ರಕಾಶಿಸಿ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ. ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರ ಶೋಭಾ ಪುಸ್ತಕ ಭಂಡಾರದಲ್ಲಿ ಅವರ ಸಹಾಯಕನಾಗಿದ್ದು, ಅಕ್ಷರ ಪ್ರೀತಿಯನ್ನು ಹೆಚ್ಚಿಸಿಕೊಂಡವರು. ಶಾಲೆ, ಮನೆ, ಸಮಾರಂಭಗಳಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ಪರಿಕಲ್ಪನೆಯನ್ನು ಹುಟ್ಟು ಹಾಕಿದವರು.