





ಪಾರಂಪರಿಕ ಸಂಸ್ಕೃತಿ ಬದುಕಿಗೆ ಅಗತ್ಯ: ಮಠಂದೂರು


ಉಪ್ಪಿನಂಗಡಿ: ಹಿಂದೂ ಸಮಾಜದಲ್ಲಿ ಕೌಟುಂಬಿಕ ಪರಂಪರೆಗಳು ಮರೆಯಾಗುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಇದರ ಫಲವಾಗಿಯೇ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸ್ಥಿತಿ ಕೃಷಿ ಬದುಕನ್ನೇ ನಂಬಿಕೊಂಡು ಬಂದ ಗೌಡ ಸಮುದಾಯಕ್ಕೆ ಬರಬಾರದು. ನಮ್ಮ ಪಾರಂಪರಿಕ ಸಂಸ್ಕೃತಿಯು ಬದುಕಿಗೆ ಅಗತ್ಯವಾಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹೇಳಿದರು.





ನಡ್ಪ ಹೊಸಮನೆ ಗುಡ್ಡಪ್ಪ ಗೌಡ ಅವರ ಮನೆಯಲ್ಲಿ ನಡೆದ ಒಕ್ಕಲಿಗ ಸ್ವಸಹಾಯ ಸಂಘ ಟ್ರಸ್ಟ್ ಪುತ್ತೂರು ಇದರ ದಶಮಾನೋತ್ಸವ ಸಂಭ್ರಮದ ಹಿನ್ನಲೆಯಲ್ಲಿ ಬಜತ್ತೂರು ಗ್ರಾಮದ 50ರ ದಾಂಪತ್ಯದ ಬದುಕಿಗೊಂದು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷಿ-ಸಾಂಸ್ಕೃತಿಕ ಕ್ಷೇತ್ರಕ್ಕೆ ಬಜತ್ತೂರು ಗ್ರಾಮದ ದೊಡ್ಡ ಕೊಡುಗೆ ಇದೆ. ಹೊಸ ಯುವಪೀಳಿಗೆಗೆ ಆದರ್ಶ ನೀಡುವ ಕೆಲಸದಲ್ಲಿ ಸಮಾಜದ ಕೊಡುಗೆಯಿದೆ. ಕೃಷಿ ಕಾಯಕದ ಗೌಡ ಸಮುದಾಯದ ಮಂದಿ ಉದ್ದಿಮೆಗಳತ್ತ ಮುಖ ಮಾಡುತ್ತಿರುವುದು ಇದು ಆರ್ಥಿಕತೆಯ ದೃಷ್ಟಿಯಿಂದ ಉತ್ತಮ ಚಿಂತನೆಯಾಗಿದೆ. ಕೃಷಿ ಜತೆಗೆ ಪೂರಕ ಉದ್ಯಮಗಳತ್ತ ನಾವು ಹೆಚ್ಚು ಆಸಕ್ತಿ ವಹಿಸಬೇಕು. ನಮ್ಮ ಸಮಾಜದಲ್ಲಿ ವಿಚ್ಛೇದನಗಳು ಇಂದು ಹೆಚ್ಚಾಗುತ್ತಿರುವುದಕ್ಕೆ ಮುಖ್ಯ ಕಾರಣ ಪಾರಂಪರಿಕ ಸಂಸ್ಕೃತಿಯಿಂದ ನಾವು ದೂರವಾಗಿರುವುದು. ಈ ನಿಟ್ಟಿನಲ್ಲಿ ‘50ರ ದಾಂಪತ್ಯ ಬದುಕಿಕೊಂದು ಸನ್ಮಾನ’ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ದಶಮಾನೋತ್ಸವ ಸಂಭ್ರಮ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಅವರು, ಗೌಡ ಸಮಾಜದಲ್ಲಿನ ಆಚಾರ ವಿಚಾರ ಸಂಸ್ಖೃತಿಗಳು ಇಂದು ಕ್ರಮೇಣ ಮರೆಯಾಗುತ್ತಿದೆ. ಈ ಸಮಾಜದ ಸಾಂಸ್ಕೃತಿಕತನವನ್ನು ಉಳಿಸುವ ಕೆಲಸಕ್ಕೆ ನಾವು ಮುಂದಾಗಬೇಕಾಗಿದೆ ಎಂದರು.
ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಡಿ.ವಿ.ಮನೋಹರ್ ಅವರು ಮಾತನಾಡಿ, ತಾಲೂಕಿನಲ್ಲಿ 1040 ಸ್ವಸಹಾಯ ಸಂಘಗಳಿವೆ. ಸುಮಾರು 4.30 ಕೋಟಿ ಉಳಿತಾಯ ಇದೆ. ರೂ.4.60 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಆ ಮೂಲಕ ಗೌಡ ಕುಟುಂಬಗಳ ಆರ್ಥಿಕತೆಯನ್ನು ಬಲಿಷ್ಟಗೊಳಿಸುವ ಕೆಲಸ ಟ್ರಸ್ಟ್ ವತಿಯಿಂದ ನಡೆಯುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮಸಮಿತಿ ಅಧ್ಯಕ್ಷ ದೇರಣ್ಣ ಗೌಡ ಓಮಂದೂರು ಅವರು ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ತಾ.ಪಂ. ಸದಸ್ಯ ಮುಕುಂದ ಗೌಡ ಬಜತ್ತೂರು, ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಗಂಗಾಧರ್ ಗೌಡ ನೆಕ್ಕರಾಜೆ, ಸ್ವಸಹಾಯ ಸಂಘಗಳ ವಲಯಾಧ್ಯಕ್ಷ ಗಂಗಯ್ಯ ಗೌಡ ಕನಡಾರ್, ಗೌಡ ಸಮಾಜದ ಮುಖಂಡರಾದ ನೋಣಯ್ಯ ಗೌಡ ಪದಕ, ಲೊಕೇಶ್ ಗೌಡ ಬಜತ್ತೂರು, ಶಶಿಧರ್ ಮುದ್ಯ, ಪ್ರತಿಭಾ ಬೆದ್ರೋಡಿ, ಸುಜಾತಾ ನೆಕ್ಕರೆ, ಗುಡ್ಡಪ್ಪ ಗೌಡ ಹೊಸಮನೆ, ರಾಮಣ್ಣ ಗೌಡ ಮಣಿಕ್ಕಳ ಉಪಸ್ಥಿತರಿದ್ದರು.
ದುಗ್ಗಪ್ಪ ಗೌಡ ಅಗರ್ತಿಮಾರ್ ಸ್ವಾಗತಿಸಿದರು. ವಸಂತ ಗೌಡ ಪಿಜಕ್ಕಳ ವಂದಿಸಿದರು. ವಸಂತಿ ಮತ್ತು ಪ್ರತಿಭಾ ಪ್ರಾರ್ಥಿಸಿದರು. ಗೀತಾ ಮುದ್ಯ, ವಿಜಯಾ ದಾಮೋದರ್, ವಸಂತಿ ಬೆದ್ರೋಡಿ ವಿವಿಧ ಕಾರ್ಯಕ್ರಮ ನಡೆಸಿಕೊಟ್ಟರು. ಮೇಲ್ವಿಚಾರಕಿ ಸುಮಲತಾ ಕಾರ್ಯಕ್ರಮ ನಿರೂಪಿಸಿದರು.
13 ದಂಪತಿಗಳಿಗೆ ಸನ್ಮಾನ:
ಸೀತಮ್ಮ ಮತ್ತು ಚೆನ್ನಪ್ಪ ಗೌಡ ನೆಕ್ಕರೆ, ಮೋನಕ್ಕ ಮತ್ತು ಭದ್ರಪ್ಪ ಗೌಡ ಅಗರ್ತಿಮಾರು, ಕಮಲ ಮತ್ತು ಶಿವಪ್ಪ ಗೌಡ ಶಿವಪುರ, ಮೋನಕ್ಕ ಮತ್ತು ಗುಮ್ಮಣ್ಣ ಗೌಡ ಡೆಂಬಾಲೆ, ಗುಮ್ಮಕ್ಕ ಮತ್ತು ಈಶ್ವರ ಗೌಡ ಉಕ್ರಪಳಿಕೆ, ಭವಾನಿ ಮತ್ತು ಗೋಪಾಲಕೃಷ್ಣ ಗೌಡ ಪಿಜಕ್ಕಳ, ರೇವತಿ ಮತ್ತು ರಾಮಣ್ಣ ಗೌಡ ಮಣಿಕ್ಕಳ, ರುಕ್ಮಿಣಿ ಮತ್ತು ಗುಡ್ಡಪ್ಪ ಗೌಡ ಹೊಸಮನೆ, ಚೆನ್ನಮ್ಮ ಮತ್ತು ಮೋನಪ್ಪ ಗೌಡ ನೆಕ್ಕರೆ, ಜಾನಕಿ ಮತ್ತು ಶೀನಪ್ಪ ಗೌಡ ಓಲೆಬಳ್ಳಿ, ಸೇಸಮ್ಮ ಮತ್ತು ಹೊನ್ನಪ್ಪ ಗೌಡ ಬಾರಿಕೆಬೈಲು, ಕಮಲ ಮತ್ತು ಪಧ್ಮಗೌಡ ಬಾರಿಕೆ ಹಾಗೂ ಹೊನ್ನಮ್ಮ ಮತ್ತು ಚೆನ್ನಪ್ಪ ಗೌಡ ಪೊರೋಳಿ ಈ ದಂಪತಿಗಳನ್ನು ೫೦ರ ಆದರ್ಶ ದಾಂಪತ್ಯಕ್ಕಾಗಿ ಸನ್ಮಾನಿಸಿ ಗೌರವಿಸಲಾಯಿತು.










