ಮಹಿಳಾ ಪೊಲೀಸ್ ಠಾಣೆ ಕಟ್ಟಡ ಅನಧಿಕೃತ !

0

ಪುತ್ತೂರು: ಕಳೆದ ಹಲವು ವರ್ಷಗಳಿಂದ ಪುತ್ತೂರು ಮಹಾಲಿಂಗೇಶ್ವರ ದೇವಳದ ಕೆರೆಯ ಬಳಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಕಟ್ಟಡ ಅನಧಿಕೃತವಾಗಿದ್ದು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ 9 ಸೆಂಟ್ಸ್ ಜಾಗವನ್ನು ಮಹಿಳಾ ಪೊಲೀಸ್ ಠಾಣಾ ಕಟ್ಟಡಕ್ಕಾಗಿ ನಿಗದಿ ಮಾಡಲಾಗಿದೆ.ಶೀಘ್ರದಲ್ಲೇ ಅಲ್ಲಿ ಹೊಸದಾಗಿ ಮಹಿಳಾ ಪೊಲೀಸ್ ಠಾಣಾ ಕಟ್ಟಡ ನಿರ್ಮಾಣಗೊಂಡು ಠಾಣೆ ಕಾರ್ಯನಿರ್ವಹಿಸಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.


ಇಷ್ಟು ವರ್ಷಗಳಿಂದ ಮಹಿಳಾ ಪೊಲೀಸ್ ಠಾಣೆ ಅನಧಿಕೃತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.ಸದ್ರಿ ಕಟ್ಟಡಕ್ಕೆ ಯಾವುದೇ ಲೈಸೆನ್ಸ್ ಇಲ್ಲ.ಪರವಾನಿಗೆ ಇಲ್ಲ.ಕಂಪ್ಲೀಷನ್ ರಿಪೋರ್ಟ್ ಇಲ್ಲ.ವಿದ್ಯುತ್ ಸಂಪರ್ಕ ಪಡೆದುಕೊಂಡದ್ದಕ್ಕೂ ಯಾವುದೇ ದಾಖಲೆ ಇಲ್ಲ.ಸೆಟ್ ಬ್ಯಾಕ್ ಕೂಡಾ ಇಲ್ಲ.ಇದು ದೇವಸ್ಥಾನಗಳಿಗೆ ಅಡ್ಡವಾಗುವುದರಿಂದ ದೇವಸ್ಥಾನದ ಎದುರು ಜಾಗವನ್ನು ತೆರವು ಮಾಡುವಂತೆ ಈಗಾಗಲೇ ನಾವು ಹೇಳಿದ್ದೇವೆ.ರಾಜ್ಯದ ಗೃಹ ಸಚಿವರು ಕೂಡಾ ಇದಕ್ಕೆ ಅನುಮತಿ ಕೊಟ್ಟಿದ್ದಾರೆ.ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಮಹಿಳಾ ಪೊಲೀಸ್ ಠಾಣೆಗಾಗಿ 9 ಸೆಂಟ್ಸ್ ಜಾಗವನ್ನು ಈಗಾಗಲೇ ನಿಗದಿಪಡಿಸಲಾಗಿದ್ದು ಶೀಘ್ರವೇ ಅಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿ ಮಹಿಳಾ ಪೊಲೀಸ್ ಠಾಣೆ ಕಾರ್ಯಾರಂಭ ಮಾಡಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.


ಪ್ರಸ್ತುತ ಮಹಿಳಾ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿರುವ ಕಟ್ಟಡದಲ್ಲಿ ಹಲವು ವರ್ಷಗಳಿಂದ ಪುತ್ತೂರು ನಗರ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿತ್ತು.ಸದ್ರಿ ಕಟ್ಟಡದಲ್ಲಿ ಮಳೆಗಾಲದ ಸಂದರ್ಭ ಮಳೆ ನೀರು ಸೋರಿಕೆಯಾಗಿ ಕಟ್ಟಡದ ಒಳಗೆಲ್ಲ ನೀರು ತುಂಬಿರುತ್ತಿತ್ತು.ಕೊನೆಗೂ ಪುತ್ತೂರು ನಗರ ಪೊಲೀಸ್ ಠಾಣೆಗೆ ಹೊಸ ಕಟ್ಟಡ ಭಾಗ್ಯ ಒದಗಿ ಬಂದಿತ್ತು.ಪ್ರಧಾನ ಅಂಚೆ ಕಚೇರಿ ಎದುರು ಜಾಗದಲ್ಲಿ ನಿರ್ಮಾಣಗೊಂಡಿದ್ದ ನೂತನ ಕಟ್ಟಡಕ್ಕೆ ನಗರ ಪೊಲೀಸ್ ಠಾಣೆ ಸ್ಥಳಾಂತರಗೊಂಡಿತ್ತು.ಹೊಸದಾಗಿ ಸಂಚಾರ ಪೊಲೀಸ್ ಠಾಣೆಯೂ ಆರಂಭಗೊಂಡಿತ್ತು.ಪೊಲೀಸ್ ವಸತಿಗೃಹವೂ ಇಲ್ಲೇ ಇದ್ದು ಒಟ್ಟು 1.72 ಎಕ್ರೆ ಜಾಗದಲ್ಲಿ ಇಲ್ಲಿ ನಗರ ಪೊಲೀಸ್ ಠಾಣೆ, ಸಂಚಾರ ಪೊಲೀಸ್ ಠಾಣೆ ಮತ್ತು ಪೊಲೀಸ್ ವಸತಿಗೃಹಗಳು ನಿರ್ಮಾಣವಾಗಿದೆ.ಆದರೆ ಮಹಿಳಾ ಪೊಲೀಸ್ ಠಾಣೆಗೆ ಸ್ವಂತ ಕಟ್ಟಡವಿಲ್ಲದೇ ಇದ್ದುದರಿಂದ ಸಂಚಾರ ಪೊಲೀಸ್ ಠಾಣಾ ಕಟ್ಟಡದಲ್ಲಿಯೇ 2017ರಲ್ಲಿ ತಾತ್ಕಾಲಿಕವಾಗಿ ಮಹಿಳಾ ಪೊಲೀಸ್ ಠಾಣೆ ಆರಂಭಗೊಂಡಿತ್ತು.ಇತ್ತ, ಮಹಾಲಿಂಗೇಶ್ವರ ದೇವಳದ ಬಳಿಯ ಕಟ್ಟಡದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ನಗರ ಪೊಲೀಸ್ ಠಾಣೆ ಸ್ಥಳಾಂತರಗೊಂಡಿದ್ದರಿಂದ ಖಾಲಿಯಾಗಿದ್ದ ಕಟ್ಟಡವನ್ನೇ ನವೀಕರಿಸಿ ಮಹಿಳಾ ಪೊಲೀಸ್ ಠಾಣೆಯನ್ನು ಅದಕ್ಕೆ ಸ್ಥಳಾಂತರ ಮಾಡಲಾಗಿತ್ತು.ಕಳೆದ ಕೆಲ ವರ್ಷಗಳಿಂದ ಮಹಿಳಾ ಪೊಲೀಸ್ ಠಾಣೆ ಇಲ್ಲಿ ಕಾರ್ಯನಿರ್ವಹಿಸುತ್ತಿದೆ.ಆದರೆ, ಈ ಕಟ್ಟಡವೇ ಅನಧಿಕೃತ ಎಂದು ಶಾಸಕರೇ ಮಾಹಿತಿ ನೀಡಿ, ಅದರ ತೆರವಿಗೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದ್ದಾರೆ.ಜೊತೆಗೆ ಇದರ ತೆರವಿಗೆ ಖುದ್ದು ಗೃಹ ಸಚಿವರೇ ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.


ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ಕೆರೆಯ ಸನಿಹವೇ ಇರುವ ಕಟ್ಟಡದಲ್ಲಿ ಮಹಿಳಾ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿದೆ.ಠಾಣೆಯ ಸಮೀಪವೇ ದೇವಳದ ಸ್ವಾಗತ ಗೋಪುರವೊಂದಿದೆ.ದೇವಳಕ್ಕೆ ಹೋಗುವ ಭಕ್ತಾದಿಗಳು ಮತ್ತು ವಾಹನಗಳು ಈ ರಸ್ತೆಯಿಂದಾಗಿಯೂ ಹೋಗುತ್ತಿರುವುದು ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

ಆರ್‌ಟಿಸಿ ದಾಖಲೆಯಲ್ಲಿ
ಪೊಲೀಸ್ ಸ್ಟೇಷನ್ ಕಟ್ಟಡಪುತ್ತೂರು ಮಹಿಳಾ ಪೊಲೀಸ್ ಠಾಣೆ ಇರುವ ಹಾಲಿ ಕಟ್ಟಡಕ್ಕೆ ಸಂಬಂಧಿಸಿದ ಆರ್‌ಟಿಸಿಯಲ್ಲಿ (ಪುತ್ತೂರು ಕಸ್ಬಾ ಸರ್ವೆ ನಂಬರ್ 76ರಲ್ಲಿ ಒಟ್ಟು 8 ಸೆಂಟ್ಸ್)ಹಕ್ಕುಗಳು ಕಾಲಂನಲ್ಲಿ ಸರಕಾರಿ ಪೊಲೀಸ್ ಸೇಷನ್ ಕಟ್ಟಡಗಳು-2 ಬಗ್ಗೆ ಪೊಲೀಸ್ ಅಧಿಕ್ಷಕರು ದ.ಕ.ಜಿಲ್ಲೆ ಎಂದು ದಾಖಲಾಗಿದೆ.ಸ್ವಾಧೀನದಾರರ ಹೆಸರು ಕಾಲಂನಲ್ಲಿ ‘ಸರಕಾರ’ ಎಂದು ನಮೂದಿಸಲಾಗಿದೆ.

ಯಾವುದೇ ನೋಟೀಸ್ ಬಂದಿಲ್ಲ
ಮಹಿಳಾ ಪೊಲೀಸ್ ಠಾಣೆಯ ಕಟ್ಟಡಕ್ಕೆ ಬೇರೆ ಕಡೆ ಸೂಕ್ತ ಸ್ಥಳಾವಕಾಶ ಗುರುತಿಸಿ ಅಲ್ಲಿ ಕಟ್ಟಡವಾದ ಬಳಿಕ ಠಾಣೆಯನ್ನು ಸ್ಥಳಾಂತರ ಮಾಡುವ ಕುರಿತು ಶಾಸಕರ ಸೂಚನೆಯಂತೆ ಇಲಾಖಾ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ.ಆದರೆ ಹಾಲಿ ಕಟ್ಟಡ ತೆರವು ಮಾಡುವ ಕುರಿತು ಯಾವುದೇ ನೋಟೀಸ್ ಬಂದಿಲ್ಲ-
ಸುನಿಲ್ ಕುಮಾರ್
ಇನ್‌ಸ್ಪೆಕ್ಟರ್ ಪುತ್ತೂರು ಮಹಿಳಾ ಪೊಲೀಸ್ ಠಾಣೆ

LEAVE A REPLY

Please enter your comment!
Please enter your name here