ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರಕಾರಿ ಜಾಗದಲ್ಲಿದ್ದ ವಾಸ್ತವ್ಯದ ಮನೆ ನೆಲಸಮಗೊಳಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಿ ನಮಗೆ ನ್ಯಾಯ ಒದಗಿಸುವಂತೆ ವೃದ್ಧೆ ರಾಧಮ್ಮ ನ.30ರಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ನ.13ರಂದು ಬೆಳಿಗ್ಗೆ 6.45ಕ್ಕೆ ಪತಿ ಮುತ್ತುಸ್ವಾಮಿ ಜೊತೆ ವಾಸವಾಗಿದ್ದ ನಮ್ಮ ಮನೆಗೆ ನುಗ್ಗಿ ನಮ್ಮನ್ನು ಮನೆಯಿಂದ ಎಳೆದು ತಂದು ಮಾನಸಿಕ ಚಿತ್ರ ಹಿಂಸೆ ನೀಡಿದ್ದಾರೆ. ನಾವು ಕೈ ಮುಗಿದು ಪರಿ ಪರಿಯಾಗಿ ಕೇಳಿದರೂ ಗಮನ ಕೊಡದೆ ಬೆಳಗ್ಗಿನ ಉಪಾಹಾರಕ್ಕಾಗಿ ಮಾಡಿಟ್ಟ ಆಹಾರವನ್ನು ಚೆಲ್ಲಾಪಿಲ್ಲಿಯಾಗಿ ಚೆಲ್ಲಿ, ಮನೆಯಲ್ಲಿದ್ದ ಮೌಲ್ಯಯುತ ಸಾಮಗ್ರಿಗಳನ್ನು ಒಡೆದು ಹಾಕಿ, ಸಾಕು ಪ್ರಾಣಿಗಳಿಗೆ ಚಿತ್ರಹಿಂಸೆ ನೀಡಿ, ಜಾತಿ ನಿಂದನೆ ಮಾಡಿ ವಾಸವಿದ್ದ ಮನೆಯನ್ನು ನೆಲಸಮ ಮಾಡಿದ್ದಾರೆ. ಆ ಬಳಿಕ ನಾವು ತಾತ್ಕಾಲಿಕವಾಗಿ ನಿರ್ಮಿಸಿದ ಗುಡಿಸಿಲಿನ ಮೇಲ್ಛಾವಣಿಗೆ ಹಾಕಿದ್ದ ಪ್ಲಾಸ್ಟಿಕ್ ಶೀಟ್ ಮೇಲೆ ಪ್ರತಿದಿನ ರಾತ್ರಿ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಮನೆ ನೆಲಸಮಗೊಳಿಸಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಂಡು ಕೆಡವಿದ ಮನೆ ಮರು ನಿರ್ಮಾಣ ಮಾಡಿಕೊಡಲು ಆದೇಶ ನೀಡಿ, ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅವರು ಮನವಿ ಮಾಡಿದ್ದಾರೆ.