





ಗಣಪತಿ ಹೋಮ * ನಾಗ ತಂಬಿಲ *ಹರಿಸೇವೆ * ಧರ್ಮದೈವಗಳಿಗೆ ತಂಬಿಲ * ಅನ್ನಸಂತರ್ಪಣೆ



ಪುತ್ತೂರು: ತುಳುನಾಡಿನ ಕಾರಣಿಕ ಶಕ್ತಿಗಳಾದ ಆರ್ಯಾಪು ಗ್ರಾಮದ ಕೂರೇಲು ಮಣ್ಣಿನಲ್ಲಿ ನೆಲೆಯಾಗಿರುವ ಧರ್ಮದೈವ ಶ್ರೀ ಮಲರಾಯ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಧರ್ಮದೈವ ಶ್ರೀ ಮಲರಾಯ ದೈವಗಳ 19ನೇ ವರ್ಷದ ನವ ದಶ ಸಂಭ್ರಮದ ನೇಮೋತ್ಸವದ ಪ್ರಯುಕ್ತ ವಿವಿಧ ವೈಧಿಕ ಕಾರ್ಯಕ್ರಮಗಳು ನ.11 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು. ಅರ್ಚಕ ಪ್ರಕಾಶ ನಕ್ಷತ್ರಿತ್ತಾಯರವರ ನೇತೃತ್ವದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ಧಿ, ಗಣಹೋಮ, ನಾಗತಂಬಿಲ, ಹರಿಸೇವೆ ನಡೆದು ಧರ್ಮದೈವಗಳ ತಂಬಿಲ ಬಳಿಕ ಶ್ರೀ ಕ್ಷೇತ್ರದಲ್ಲಿ ಮಹಾಪೂಜೆ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಅನ್ನ ಪ್ರಸಾದ ವಿತರಣೆ ನಡೆದು ಊರಪರವೂರ ಭಕ್ತರು, ಕೂರೇಲು ತರವಾಡು ಮನೆಯ ಕುಟುಂಬಸ್ಥರು, ಹಿತೈಷಿಗಳು, ಬಂಧು ಮಿತ್ರರು ಸೇರಿದಂತೆ ನೂರಾರು ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು. ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಭಕ್ತಾಧಿಗಳನ್ನು ಸ್ವಾಗತಿಸಿ, ಪ್ರಸಾದ ನೀಡಿ ಸತ್ಕರಿಸಿದರು. ಸರಸ್ವತಿ ಸಂಜೀವ ಪೂಜಾರಿ, ಉಪನ್ಯಾಸಕ ಹರ್ಷಿತ್ ಕುಮಾರ್ ಕೂರೇಲು, ಕೂರೇಲು ತರವಾಡು ಮನೆಯ ಕುಟುಂಬಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.






ನ.12 ರಂದು ಸಂಜೆ 4.೦೦ ರಿಂದ ಶ್ರೀ ಕೊರಗಜ್ಜ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಕೊರತಿ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಸಂಜೆ 4.30 ರಿಂದ ಶ್ರೀ ಕೊರಗಜ್ಜ ದೈವದ ನೇಮ ನಡೆಯಲಿದೆ. ಸಂಜೆ 6.30ರಿಂದ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ಮತ್ತು ಕೊರತಿ ದೈವಗಳ ನೇಮೋತ್ಸವ ನಡೆದು ರಾತ್ರಿ 9.೦೦ ರಿಂದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

- ಇಷ್ಟಾರ್ಥ ಸಿದ್ಧಿದಾಯಕ ಶ್ರೀ ದೈವಗಳು
ಕೂರೇಲು ದೈವಸ್ಥಾನದಲ್ಲಿ ನೆಲೆಯಾಗಿರುವ ದೈವಗಳು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕಾರಣಿಕ ಶಕ್ತಿಗಳಾಗಿವೆ. ಇಲ್ಲಿ ಬಂದು ಭಕ್ತಿಯಿಂದ ಕೈಮುಗಿದು ತಮ್ಮ ಹರಕೆ, ಬಯಕೆಗಳನ್ನು ಹೇಳಿಕೊಂಡರೆ ಅದು ಪ್ರಾಪ್ತಿಯಾಗುತ್ತದೆ. ಇದಕ್ಕೆ ಬಹಳಷ್ಟು ನಿದರ್ಶನಗಳನ್ನು ಕಾಣಬಹುದಾಗಿದ್ದು ಪ್ರತಿ ಸಂಕ್ರಮಣ ದಿವಸ ಇಲ್ಲಿಗೆ ಬರುವ ಭಕ್ತರ ಸಂಕ್ರಮಣ ಸೇವೆಗಳೇ ಸಾಕ್ಷಿಗಳಾಗಿವೆ.ನೆಲ,ಜಲ,ಅಲಫಲ ಸೇರಿದಂತೆ ಭಕ್ತರ ಇಷ್ಟಾರ್ಥ ಸಿದ್ದಿದಾಯಕನಾಗಿ ಶ್ರೀ ಮಲರಾಯ ಇಲ್ಲಿ ನೆಲೆಸಿದ್ದಾನೆ.









