ಪಾಣಾಜೆ: ಕಾರಣಿಕ ಪ್ರಸಿದ್ಧ ಆರ್ಲಪದವು ಶ್ರೀ ಕಿನ್ನಿಮಾಣಿ -ಪೂಮಾಣಿ, ಹುಲಿಭೂತ ದೈವಸ್ಥಾನದಲ್ಲಿ ಜೀರ್ಣೋದ್ಧಾರ ಪ್ರಕ್ರಿಯೆ ಆರಂಭಗೊಂಡು ಕಳೆದ ಒಂದು ವರ್ಷದಿಂದ ಕ್ಷಿಪ್ರಗತಿಯ ಕಾಮಗಾರಿ ನಡೆಯುತ್ತಿದ್ದು, ನೂತನ ದೈವಸ್ಥಾನ, ದೈವದ ಗುಡಿಗಳ ನಿರ್ಮಾಣ ಕಾರ್ಯಗಳು ಈಗಾಗಲೇ ನೆರವೇರಿದ್ದು, ಜಾಗ ಸಮತಟ್ಟು, ದೈವಸ್ಥಾನದ ಅಂಗಣ ಇತ್ಯಾದಿ ಕೆಲಸ ಕಾಮಗಾರಿಗಳು ಅಂತಿಮ ರೂಪವನ್ನು ಪಡೆಯುತ್ತಿದೆ. 2025ನೇ ಜನವರಿ 19 ಮತ್ತು 20 ರಂದು ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವವು ಜರಗಲಿದೆ. ಈ ಹಿನ್ನೆಲೆಯಲ್ಲಿ ವಿವಿಧ ಕಾಮಗಾರಿಗಳಿಗೆ ಶರವೇಗ ಪಡೆದುಕೊಳ್ಳುವಲ್ಲಿ ದೈವಸ್ಥಾನದ ಜೀರ್ಣೊದ್ಧಾರ ಸಮಿತಿ ಮುತುವರ್ಜಿ ವಹಿಸಿದೆ. ನೂತನ ದೈವಸ್ಥಾನದ ಅಂಗಣಕ್ಕೆ ಕಾಂಕ್ರಿಟ್ ಹಾಕುವ ಕಾರ್ಯ ದ.1 ರಂದು ನಡೆದಿದ್ದು, ಊರ ಪರವೂರ ಭಕ್ತರ ಕರಸೇವೆಯಲ್ಲಿ ಈ ಕಾಮಗಾರಿ ನಡೆಯಿತು. ಸುಮಾರು ನೂರಕ್ಕೂ ಅಧಿಕ ಭಕ್ತರು ಕರಸೇವೆಯಲ್ಲಿ ತೊಡಗಿಸಿಕೊಂಡರು. ಬೆಳಿಗ್ಗೆ ಉಪಾಹಾರ ಮತ್ತು ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ದೈವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ, ಜೀರ್ಣೋದ್ಧಾರ ಸಮಿತಿ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ಅಧ್ಯಕ್ಷ ಜಗನ್ಮೋಹನ ರೈ ಸೂರಂಬೈಲು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಪ್ರಧಾನ ಕಾರ್ಯದರ್ಶಿ ತಮ್ಮಣ್ಣ ನಾಯ್ಕ್ ಸುಡುಕುಳಿ, ಕಾರ್ಯದರ್ಶಿ ವಿಶ್ವನಾಥ ಪೈ ಕೊಂದಲ್ಕಾನ, ಸದಸ್ಯರಾದ ರಮಾನಾಥ ರೈ ಪಡ್ಯಂಬೆಟ್ಟು, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡರು.
ನಾಳೆ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರ ಬಿಡುಗಡೆ
ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವವು 2025 ಜನವರಿ 19 ಮತ್ತು 20 ರಂದು ನಡೆಯಲಿದ್ದು, ಅದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ದ. 3 ರಂದು ಕ್ಷೇತ್ರದ ವಠಾರದಲ್ಲಿ ನಡೆಯಲಿದೆ. ಸಭಾಧ್ಯಕ್ಷತೆಯನ್ನು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ ವಹಿಸಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್, ಪಾಣಾಜೆ ಸುಬೋಧ ಪ್ರೌಢಶಾಲೆಯ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು, ಶ್ರೀಮತಿ ಲೀಲಾವತಿ ಕೆ. ಶೆಟ್ಟಿ ಕೋಟೆ, ಉದ್ಯಮಿ ರೋಶನ್ ರೈ ಬನ್ನೂರು, ಪಿಡಬ್ಲ್ಯುಡಿ ಗುತ್ತಿಗೆದಾರ ರಂಜಿತ್ ಬಂಗೇರ, ಚಿಕ್ಕಮಗಳೂರು ಶಾ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಸೀತಾರಾಮ್ ಭರಣ್ಯ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ ಎಂದು ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯವರು ತಿಳಿಸಿದ್ದಾರೆ.