ಉಪ್ಪಿನಂಗಡಿ: ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವಲ್ಲಿ ಪೋಷಕರು ಮುಂದಾಗುತ್ತಿಲ್ಲ. ಮಕ್ಕಳ ಮನಸ್ಸನ್ನು ಅಸ್ಥಿರಗೊಳಿಸುವ ಕೆಲಸ ತಂದೆ ತಾಯಿಯಿಂದ ನಡೆಯುತ್ತಿರುವ ಕಾರಣವೇ ಸಮಾಜದಲ್ಲಿ ಶಕ್ತಿವಂತ ಮತ್ತು ಶಕ್ತಿಹೀನ ಮನಸ್ಥಿತಿಗಳು ಹುಟ್ಟಿಕೊಳ್ಳುತ್ತಿವೆ. ಮಕ್ಕಳ ಅಂತ:ಕರಣದ ಶಕ್ತಿಯನ್ನು ಉದ್ದೀಪನ ಮಾಡುವ ಮೂಲಕ ಅವರ ಮನಸ್ಸಲ್ಲಿ ಸಾತ್ವಿಕ ದೀಪ ಹಚ್ಚುವ ಕೆಲಸ ಪೋಷಕರಿಂದ ನಡೆಯಬೇಕಾಗಿರುವುದು ಅತೀ ಅಗತ್ಯವಾಗಿದೆ ಎಂದು ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಡಾ.ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಪೆರಿಯಡ್ಕ ಬಿಜಿಎಸ್ ಸರ್ವೋದಯ ಪ್ರೌಢಶಾಲೆಯಲ್ಲಿ ಶನಿವಾರ ರಾತ್ರಿ ನಡೆದ ಪ್ರತಿಭಾ ಪುರಸ್ಕಾರ-ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.
ಮಕ್ಕಳು ಈ ಸಮಾಜದ ಶಕ್ತಿಯಾಗಬೇಕಾದರೆ ಅವರಲ್ಲಿ ಸಾತ್ವಿಕ ಪ್ರಜ್ಞೆಯ ಗುಣ ಹೆಚ್ಚಾಗಬೇಕಾಗಿದೆ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳ ತಂದೆ ತಾಯಿ ಈ ಅರಿವಿನಿಂದ ದೂರವಾಗಿರುತ್ತಾರೆ. ಹೀಗಾಗಿ ಈ ಸ್ಥಾನದಲ್ಲಿ ಗುರು ನಿಂತು ಸಾತ್ವಿಕತೆ ಗುಣವನ್ನು ತುಂಬಿಸುವ ಕೆಲಸ ಮಾಡಬೇಕಾಗಿದೆ. ಗುರು ಉಪದೇಶ ಮಕ್ಕಳಿಗೆ ಚೈತನ್ಯ ನೀಡುತ್ತದೆ. ಇದರಿಂದ ಸಮಾಜದಲ್ಲಿ ಅವ್ಯವಸ್ಥೆಯಾಗುವುದನ್ನು ತಡೆಯಬಹುದಾಗಿದೆ. ಮಕ್ಕಳ ಸುಪ್ತ ಮನಸ್ಸಿನಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುವುದನ್ನು ತುಂಬಿಸುವಲ್ಲಿ ನಾವು ಶ್ರಮಪಡಬೇಕಾಗಿದೆ. ಮಕ್ಕಳನ್ನು ಪ್ರೀತಿಸುವ ಮೂಲಕ ಅವರನ್ನು ತಿದ್ದುವ ಕೆಲಸ ಮಾಡುವುದು ಸೂಕ್ತವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಇಂದು ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿಸುವ ಶಿಕ್ಷಣದ ಅಗತ್ಯವಿದೆ. ಆಧ್ಮಾತ್ಮಿಕ ಗುರು-ಶೈಕ್ಷಣಿಕ ಗುರು ಜತೆಗೆ ಇರುವ ವಿದ್ಯಾಸಂಸ್ಥೆಗಳಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಕೇವಲ ಉದ್ಯೋಗಕ್ಕಾಗಿ ಶಿಕ್ಷಣ ಎಂಬ ಮನೋಭೂಮಿಕೆ ನಮ್ಮಲ್ಲಿ ಬದಲಾಗಬೇಕಾಗಿದೆ. ಬದುಕಿನ ಶಿಕ್ಷಣ ಇಂದಿನ ದಿನಗಳಲ್ಲಿ ಅಗತ್ಯವಾಗಿದೆ. ಇಂದಿನ ಮಕ್ಕಳಿಗೆ ನೀಡಲೇಬೇಕಾಗಿರುವ ಬದುಕು ಹಾಗೂ ಸಂಸ್ಕಾರದ ಪಾಠಗಳು `ಮಠ’ಗಳಿಂದ ನಡೆಸಲ್ಪಡುವ ವಿದ್ಯಾಸಂಸ್ಥೆಗಳಲ್ಲಿ ಸಿಗುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳ ತಂದೆ ತಾಯಿಯರು ಗಂಭೀರವಾಗಿ ಚಿಂತನೆ ಮಾಡಬೇಕು. ಆಂಗ್ಲಮಾಧ್ಯಮ ಶಾಲಾ ಮಕ್ಕಳಿಗಿಂತ ಗ್ರಾಮೀಣ ಭಾಗದ ಕನ್ನಡ ಶಾಲೆಗಳ ಮಕ್ಕಳಲ್ಲಿ ಆತ್ಮವಿಶ್ವಾಸಕ್ಕೆ ಕೊರತೆ ಇಲ್ಲ. ಹಾಗಾಗಿ ಈ ಹಳ್ಳಿಯ ಮಕ್ಕಳೇ ದೇಶದ ಭವಿಷ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಸಚಿನ್ ಸುಂದರ ಗೌಡ ಉಪ್ಪಿನಂಗಡಿ, ಉದ್ಯಮಿ ನಟೇಶ್ ಪೂಜಾರಿ ಪುಳಿತ್ತಡಿ ಮತ್ತು ಉದ್ಯಮಿ ಪ್ರತಾಪ್ ಪೆರಿಯಡ್ಕ ಭಾಗವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶೀನಪ್ಪಗೌಡ ಬೊಳ್ಳಾವು ಉಪಸ್ಥಿತರಿದ್ದರು. ಶಾಲಾ ಪರಿವೀಕ್ಷಕರಾದ ಬಾಲಕೃಷ್ಣ ಗೌಡ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ವರದಿ ವಾಚಿಸಿದರು. ಶಿಕ್ಷಕರಾದ ಮೋಹನ್, ರಜನಿ, ಭವ್ಯ ಮತ್ತು ಶಕುಂತಳಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಸವಿತಾ ವಂದಿಸಿದರು. ವಿದ್ಯಾರ್ಥಿನಿಯರಾದ ಚೈತನ್ಯ ಮತ್ತು ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಿಬ್ಬಂದಿ ಡೊಂಬಯ್ಯ ಗೌಡ ಸಹಕರಿಸಿದರು.
ಸಾಂಸ್ಕೃತಿಕ ಸೌರಭ:
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕ್ರೀಡಾಕೂಟ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಕಲಿಕಾ ವಿಭಾಗದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಚೈತನ್ಯ ಹಾಗೂ ಸೋನಿತ್ ನಿರ್ವಹಿಸಿದರು.