ಉಪ್ಪಿನಂಗಡಿಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಆ್ಯಂಬುಲೆನ್ಸ್ ಲೋಕಾರ್ಪಣೆ

0

ರೋಗಿಯ ಪಾಲಿಗೆ ಅತ್ಯಂತ ಸಂತೃಪ್ತಿಯ ಸೇವೆ: ತ್ವಾಖಾ ಮುಸ್ಲಿಯಾರ್

ಉಪ್ಪಿನಂಗಡಿ: ಎಸ್.ಕೆ.ಎಸ್.ಎಸ್.ಎಫ್ ಉಪ್ಪಿನಂಗಡಿ ವಲಯ ಸಮಿತಿ ವತಿಯಿಂದ ಅರ್ಪಿತವಾದ ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಡಿ.1ರಂದು ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಆವರಣದಲ್ಲಿ ನಡೆಯಿತು.


ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹಮದ್ ಮುಸ್ಲಿಯಾರ್ ಆ್ಯಂಬುಲೆನ್ಸ್ ಲೋಕಾರ್ಪಣೆ ಮಾಡಿ ಮಾತನಾಡಿ, ಆ್ಯಂಬುಲೆನ್ಸ್ ಉಪಕಾರದ ಸೇವೆಯಾಗಿರುತ್ತದೆ. ಒಬ್ಬಾತ ರೋಗಿಯನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯುವಾಗ ರೋಗಿಯಾಗಿರುವಾತ ಅತ್ಯಂತ ಸಂತೃಪ್ತನಾಗುವ ಸಂದರ್ಭವಾಗಿರುತ್ತದೆ. ಆ ರೋಗಿಯ ಸೇವೆಯಲ್ಲಿ ಯಾರು ಭಾಗಿಯಾಗಿರುತ್ತಾನೋ ಆತ ಅಲ್ಲಾಹುವಿನ ಕಡೆಯಿಂದಲೂ ಪ್ರೀತಿಗೆ ಪಾತ್ರನಾಗುತ್ತಾನೆ ಎಂದು ಹೇಳಿದರು.


ಉಪ್ಪಿನಂಗಡಿಯ ವೈದ್ಯ ಡಾ. ನಿರಂಜನ ರೈ ಮಾತನಾಡಿ, ಇದೊಂದು ಪುಣ್ಯದ ಕೆಲಸವಾಗಿರುತ್ತದೆ. ಉಪ್ಪಿನಂಗಡಿಯಲ್ಲಿ ಕೆಲವೊಂದು ಬಾರಿ ಆ್ಯಂಬುಲೆನ್ಸ್ ಬೇಕೆನಿಸಿದಾಗ ದೊರಕುವುದಿಲ್ಲ. ಅದರಲ್ಲೂ ಸರಕಾರದ ಆ್ಯಂಬುಲೆನ್ಸ್ ಕೆಲವೊಂದು ಸಂದರ್ಭಕ್ಕೆ ಸರಕಾರದ ನಿಯಮಾನುಸಾರದ ಅಡಿಯಲ್ಲಿ ನಮ್ಮ ಅಗತ್ಯತೆಗೆ ಅನುಗುಣವಾಗಿ ದೊರಕುವುದಿಲ್ಲ. ಹೀಗಿರುವಾಗ ಇದೀಗ ಲೋಕಾರ್ಪಣೆ ಆಗಿರುವ ಆ್ಯಂಬುಲೆನ್ಸ್ ಇಲ್ಲಿನ ಕೊರತೆಯೊಂದನ್ನು ನೀಗಿಸಿದೆ ಎಂದರು.


ದಂತ ವೈದ್ಯ ಡಾ. ರಾಜಾರಾಮ್ ಮಾತನಾಡಿ, ಇದೊಂದು ಮನುಕುಲದ ಸೇವೆ. ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಇಂತಹ ಸೇವೆಯ ಮೂಲಕ ನಡೆಯುವಂತಾಗಲಿ. ಎಸ್ಕೆಎಸ್ಸೆಸ್ಸೆಫ್ ಸಂಘಟನೆ ಇನ್ನಷ್ಟು ಸಮಾಜಮುಖಿ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತಾಗಲಿ ಎಂದರು.


ಕರ್ವೇಲ್ ಜುಮಾ ಮಸೀದಿ ಖತೀಬ್ ಸೈಯ್ಯದ್ ಹಾದಿ ಅನಸ್ ತಂಙಳ್ ದುವಾಃ ನೆರವೇರಿಸಿದರು. ಆತೂರು ಮಸೀದಿ ಮುರ‍್ರಿಸ್ ಸೈಯ್ಯದ್ ಜುನೈದ್ ಜಿಫ್ರಿ ತಂಙಳ್ ಆ್ಯಂಬುಲೆನ್ಸ್ ಕೀ ಹಸ್ತಾಂತರಿಸಿದರು. ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಮುರ‍್ರಿಸ್ ಅಬ್ದುಲ್ ಸಲಾಂ ಫೈಝಿ, ಅಶ್ರಫ್ ಬಾಖಾವಿ ಸಂದರ್ಭೋಚಿತವಾಗಿ ಮಾತನಾಡಿದರು.


ಸಮಾರಂಭದಲ್ಲಿ ನೆಕ್ಕಿಲಾಡಿ ಮಸೀದಿ ಅಧ್ಯಕ್ಷ ಮಹಮ್ಮದ್ ಹಾಜಿ, ಉಪ್ಪಿನಂಗಡಿ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ, ಕಾರ್ಯದರ್ಶಿ ಶುಕೂರ್ ಹಾಜಿ, ಪದಾಧಿಕಾರಿಗಳಾದ ಹಾರೂನ್ ರಶೀದ್, ಹಮೀದ್ ಕರಾವಳಿ, ಯೂಸುಫ್ ಹಾಜಿ ಪೆದಮಲೆ, ಸೈಯ್ಯದ್ ಅಹಮದ್ ತಂಙಳ್, ನಝೀರ್ ಅಝ್‌ಹರಿ, ಶಬ್ಬೀರ್ ಕೆಂಪಿ, ನಝೀರ್ ಮಠ, ಹಸೈನಾರ್ ಹಾಜಿ, ಎಸ್ಕೆಎಸ್ಸೆಸ್ಸೆಫ್ ಪದಾಧಿಕಾರಿಗಳಾದ ಇಸ್ಮಾಯೀಲ್ ತಂಙಳ್, ಎಸ್.ಕೆ. ಸಿದ್ದಿಕ್, ಮುಹಮ್ಮದ್ ಕೂಟೇಲು, ಯು.ಟಿ. ಫಯಾಝ್, ಸಿದ್ದಿಕ್ ಕೆಂಪಿ, ಅಜೀಜ್ ಆತೂರು, ಅಬ್ದುಲ್ ರಹಿಮಾನ್ ಯುನಿಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here