ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ‘ಸಾಂಸ್ಕೃತಿಕ ಸಮನ್ವಯ ’ವರ್ಷದ ಹಬ್ಬ-2024’ ಸಂಪನ್ನ

0

ಪುತ್ತೂರು: ಇಲ್ಲಿನ ತೆಂಕಿಲದ ವಿವೇಕ ನಗರದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಾಂಸ್ಕೃತಿಕ ಸಮನ್ವಯ ’ವರ್ಷದ ಹಬ್ಬ – 2024’, ರಾಷ್ಟ್ರಮಟ್ಟದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ನೂತನ ಎಂಎಲ್ಸಿ ಕಿಶೋರ್ ಕುಮಾರ್ ಬೊಟ್ಯಾಡಿ ಅವರಿಗೆ ಅಭಿನಂದನೆ, ರುಪ್ಸಾ ಕೊಡಮಾಡುವ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತ ಶಾಲಾ ಮುಖ್ಯೊಪಾಧ್ಯಾಯಿನಿ ಆಶಾ ಬೆಳ್ಳಾರೆಯವರಿಗೆ ಅಭಿನಂದನೆ, ಎಸ್ಸೆಸ್ಸೆಲ್ಸಿ ಸಾಧಕರಿಗೆ ಬಹುಮಾನ, ಶಾಲಾ ವಾರ್ಷಿಕ ಸಂಚಿಕೆ ’ಸಾಹಿತ್ಯ ಮಿತ್ರ’ ಬಿಡುಗಡೆ, ದತ್ತಿ ನಿಧಿ ಪ್ರದಾನ, ಸಹಪಠ್ಯ ಚಟುವಟಕೆಗಳಲ್ಲಿ ವಿಶೇಷ ಸಾಧನೆ ಮೆರೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸೇರಿದಂತೆ ಕಾರ್ಯಕ್ರಮ ವೈವಿಧ್ಯ ಡಿ.1ರಂದು ಶಾಲಾ ಆವರಣದಲ್ಲಿರುವ ರಂಗ ಮಂದಿರದಲ್ಲಿ ಸಂಪನ್ನಗೊಂಡಿತು.


ಸಭಾ ಕಾರ್ಯಕ್ರಮ ಪ್ರಾರಂಭದಲ್ಲಿ ಅತಿಥಿ ಅಭ್ಯಾಗತರು ಸರಸ್ವತಿ ವಿಗ್ರಹಕ್ಕೆ ಪುಷ್ಪಾರ್ಚನೆಗೈದರು. ಬಳಿಕ ದೀಪ ಪ್ರಜ್ವಲನೆ ನಡೆಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಲಾಯಿತು. ಬಳಿಕ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭಗೊಂಡಿತು. ಬಳಿಕ ಶಾಲಾ ವಿದ್ಯಾರ್ಥಿಗಳು, ಪಂಚಾಂಗ, ಸುಭಾಷಿತ, ಅಮೃತವಚನ, ಕಬೀರ ದೋಹೆ ಮತ್ತು ಮಂಕುತಿಮ್ಮನ ಕಗ್ಗ ವಾಚಿಸಿದರು. ಬಳಿಕ ಸಭೆಯಲ್ಲಿದ್ದ ಅತಿಥಿ ಗಣ್ಯರಿಗೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಾರ್ಪಣೆ ಸಲ್ಲಿಸಲಾಯಿತು. ರಾಜ್ಯ ವಿಧಾನಪರಿಷತ್‌ಗೆ ಆಯ್ಕೆಗೊಂಡ ಕಿಶೋರ್ ಕುಮಾರ್ ಬೊಟ್ಯಾಡಿ ಅವರಿಗೆ ಶಾಲಾ ಆಡಳಿತ ಮಂಡಳಿಯ ಪರವಾಗಿ ಗೌರವಾರ್ಪಣೆ ಮಾಡಲಾಯಿತು.


ಸ್ವಾಮಿ ವಿವೇಕಾನಂದರ ಬದುಕು ನಮಗೆ ಆದರ್ಶವಾಗಲಿ, ಸಾಮಾಜಿಕ ಕೆಡುಕುಗಳನ್ನು ಸಂಹರಿಸುವ ಶ್ರೀ ಕೃಷ್ಣರಾಗೋಣ – ಕಿಶೋರ್ ಕುಮಾರ್ ಬೊಟ್ಯಾಡಿ:
ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅಭ್ಯಾಗತರಲ್ಲಿ ಒಬ್ಬರಾಗಿದ್ದ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ ಅವರು, ಪುತ್ತೂರು ಮಹಾಲಿಂಗೇಶ್ವರ ದೇವರ ಕೃಪಾ ಕಟಾಕ್ಷ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶೀರ್ವಾದ ಮತ್ತು ನಿಮ್ಮೆಲ್ಲರ ಪ್ರೀತಿ-ಅಭಿಮಾನದ ಬಲದಿಂದ ಇಂದು ನಾನು ಎಂಎಲ್ಸಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ, ಇದಕ್ಕೆ ಕಾರಣವಾಗಿರುವುದು ಇದೇ ಸ್ಥಳದಲ್ಲಿ ಕಳೆದ ವರ್ಷ ನಡೆದ ರಾಮಕಥಾ ವೈಭವವಾಗಿದೆ ಎಂದು ನೆನಪಿಸಿಕೊಂಡರು. ನಾವೆಲ್ಲರೂ ನಮ್ಮ ತಾಯಿಗೆ ಖುಷಿ ಕೊಡುವಂತಹ ಕೆಲಸವನ್ನು ಮಾಡಬೇಕು. ಭಗವಾನ್ ಶ್ರೀ ಕೃಷ್ಣನಿಗೆ ಇಬ್ಬರು ತಾಯಂದಿರು, ಒಬ್ಬಾಕೆ ಹೆತ್ತ ತಾಯಿ ದೇವಕಿಯಾದರೆ ಇನ್ನೊಬ್ಬಾಕೆ ಆತನನ್ನು ಸಾಕಿ ಸಲಹಿದ ತಾಯಿ ಯಶೋಧೆ, ಶ್ರೀ ಕೃಷ್ಣ ತನ್ನ ಬಾಲ ಲೀಲೆಯ ಮೂಲಕ ಎಳವೆಯಲ್ಲೇ ದುಷ್ಟರ ಸಂಹಾರ ಮಾಡುತ್ತಾ ಇಬ್ಬರೂ ತಾಯಂದಿರಿಗೆ ಸಂತೋಷವನ್ನು ಕೊಟ್ಟಂತೆ, ನಾವಿಂದು ನಮ್ಮ ಸಮಾಜವನ್ನು ಕಾಡುತ್ತಿರುವ ಮಾದಕ ದ್ರವ್ಯಗಳಂತಹ ಕೆಡುಕುಗಳೆಂಬ ಅಸುರರನ್ನು ಸೋಲಿಸಿ ನಮ್ಮ ಹೆತ್ತವರ ಮನ ಸಂತೋಷಪಡಿಸಬೇಕಿದೆ. ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿ ಆ ಕೆಡುಕುಗಳನ್ನು ನಮ್ಮ ಬಳಿಯಾಗಲಿ, ನಾವು ಕಲಿಯುತ್ತಿರುವ ಶಿಕ್ಷಣ ಸಂಸ್ಥೆಗಳ ಬಳಿಯಾಗಲಿ ಸುಳಿಯದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಕಿಶೋರ್ ಕುಮಾರ್, ನನ್ನ ಅಧಿಕಾರಾವಧಿಯಲ್ಲಿ ಜನರ ಸೇವೆಯನ್ನು ದೇವರ ಸೇವೆಯೆಂಬಂತೆ ನಿಷ್ಠೆಯಿಂದ ಮಾಡುತ್ತೇನೆ ಎಂದು ಹೇಳಿದರು.


ನಮ್ಮದು ಕನ್ನಡ ಶಾಲೆ, ಈ ಶಾಲೆಯ ಬಗ್ಗೆ ನಮಗೆಲ್ಲಾ ಹೆಮ್ಮೆ ಇದೆ- ಶಶಿಕಲಾ:
ಪುತ್ತೂರು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶಶಿಕಲಾ ಅವರು ಮಾತನಾಡಿ, ದೇಗುಲಗಳಲ್ಲಿ ವಾರ್ಷಿಕ ಜಾತ್ರೆಗಳು ನಡೆಯುವಂತೆ, ವಿದ್ಯಾದೇಗುಲದಲ್ಲಿ ಅಲ್ಲಿನ ಮಕ್ಕಳ ಪ್ರತಿಭೆಗಳನ್ನು ಅನಾವರಣ ಮಾಡುವ ಉದ್ದೇಶದಿಂದ ವರ್ಷಕ್ಕೊಮ್ಮೆ ನಡೆಯುವ ಉತ್ಸವವೇ ’ವರ್ಷದ ಹರ್ಷ’ವಾಗಿದೆ. ಆಶಾ ಮೇಡಂ ಅವರು ಪ್ರತೀ ಬಾರಿ ’ನಮ್ಮದು ಕನ್ನಡ ಶಾಲೆ..’ ಎಂದು ಹೆಮ್ಮೆಯಿಂದ ಹೇಳ್ತಿರ್ತಾರೆ. ಅವರು ಹಾಗೆ ಹೇಳುವುದನ್ನು ಕೇಳುವುದೇ ಒಂದು ರೋಮಾಂಚನದ ಅನುಭವ ಮಾತ್ರವಲ್ಲದೇ ನನ್ನ ಕ್ಲಸ್ಟರ್‌ನಲ್ಲಿರುವಂತಹ ಹದಿನೆಂಟು ಶಾಲೆಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲೇ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆ ಇದು ಎಂಬ ಹೆಮ್ಮೆ ನನಗೂ ಇದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.


ಮಕ್ಕಳಿಗೆ ಭಗವದ್ಗೀತೆ ಪುಸ್ತಕ ಉಚಿತವಾಗಿ ನೀಡುವ ಕಾರ್ಯವಾಗಬೇಕು-ಕಿಶೋರ್ ಆಳ್ವ:
ಅದಾನಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರು ಮಾತನಾಡಿ, ನಾನು ಮೂಲತಃ ಇದೇ ಪುತ್ತೂರಿನ ಬನ್ನೂರು ಮೂಲದವನಾಗಿದ್ದು, ಬಳಿಕ ವಿದ್ಯಾಭ್ಯಾಸ ಮತ್ತು ಉದ್ಯೋಗ ನಿಮಿತ್ತ ಹೊರ ದೇಶ ಮತ್ತು ಹೊರ ರಾಜ್ಯಗಳಿಗೆ ಹೋಗಬೇಕಾಗಿ ಬಂತು ಎಂದು ತಮಗೂ ಮತ್ತು ಪುತ್ತೂರಿಗೂ ಇರುವ ನಂಟನ್ನು ನೆನಪಿಸಿಕೊಂಡರು. ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಒಂದು ಕ್ರಾಂತಿಕಾರಿ ಬದಲಾವಣೆಯನ್ನು ಸಮಾಜದಲ್ಲಿ ಉಂಟುಮಾಡಿದೆ. ಅತೀ ಹೆಚ್ಚು ಧಾರ್ಮಿಕ ಕೇಂದ್ರಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿರುವ ಜಿಲ್ಲೆ ದಕ್ಷಿಣ ಕನ್ನಡವಾಗಿದ್ದು ಇಲ್ಲಿಗೆ ಬೃಹತ್ ಉದ್ಯಮಗಳು ಬರಬೇಕೆನ್ನುವುದು ನನ್ನ ಅಭಿಲಾಷೆಯಾಗಿದೆ ಎಂದು ಹೇಳಿದರು. ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಭಗವದ್ಗೀತೆ ಪುಸ್ತಕವನ್ನು ಉಚಿತವಾಗಿ ಕೊಡುವ ಮೂಲಕ ಅವರಲ್ಲಿ ಧಾರ್ಮಿಕ ಪ್ರe ಮತ್ತು ಸಂಸ್ಕಾರವನ್ನು ಬೆಳೆಸುವ ಕೆಲಸಗಳಾಗಬೇಕು ಹಾಗೂ ಇಲ್ಲಿನ ಧಾರ್ಮಿಕ ಕೇಂದ್ರಗಳು ಹಾಗೂ ಕನ್ನಡ ಶಾಲೆಗಳ ಅಭಿವೃದ್ಧಿಗೆ ಅದಾನಿ ಸಂಸ್ಥೆ ಸದಾ ನೆರವನ್ನು ನೀಡುತ್ತಿದೆ, ಮಕ್ಕಳು ಕಲಿಕೆಯ ಕಡೆಗೆ ಗಮನಕೊಟ್ಟು ಹೊಸ ಆವಿಷ್ಕಾರಗಳಿಗೆ ತಮ್ಮನ್ನು ತೆರೆದುಕೊಂಡು ಆ ಮೂಲಕ ಭವ್ಯ ಭಾರತದ ನಿರ್ಮಾಣದ ಪಾಲುದಾರರಾಗಬೇಕೆಂದು ಅವರು ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು.


ನಮ್ಮ ಪ್ರಯತ್ನಕ್ಕೆ ದೈವಬಲ ಸಿಗಬೇಕಾದ್ರೆ ಸಂಸ್ಕಾರ ಮುಖ್ಯ- ಕೃಷ್ಣವೇಣಿ ಪ್ರಸಾದ್ ಮುಳಿಯ:
ಮುಳಿಯ ಜ್ಯುವೆಲ್ಲರ‍್ಸ್ ನ ನಿರ್ದೇಶಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಅವರು ಮಾತನಾಡಿ, ನವರತ್ನ ಹೊದಿಸಿದ ಬಂಗಾರವನ್ನು ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ, ಹಾಗೆಯೇ ಶಿಕ್ಷಕರೆಂಬ ಬಂಗಾರದಿಂದ ಆವರಿಸಲ್ಪಟ್ಟ ನವರತ್ನಗಳಾದ ಮಕ್ಕಳು ತಮ್ಮ ಬದುಕಿನಲ್ಲಿ ಸಂಸ್ಕಾರವಂತರಾಗುತ್ತಾರೆ ಎಂದು ಹೇಳಿದರಲ್ಲದೇ, ನಾವು ಮಾಡುವ ಯಾವುದೇ ಪ್ರಯತ್ನಕ್ಕೆ ದೈವಬಲ ಒದಗಿಬರಬೇಕಾದರೆ ಸಂಸ್ಕಾರವೆಂಬುದು ಅತೀ ಮುಖ್ಯ. ಹಾಗಾಗಿ ಗುರುವಿನ ಮಾತನ್ನು ಮೀರದೆ ಇದ್ದಲ್ಲಿ ನಮಗೆ ಜೀವನದಲ್ಲಿ ಯಶಸ್ಸು ಸಿಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.


ನನ್ನ ವ್ಯಕ್ತಿತ್ವ ರೂಪುಗೊಳ್ಳಲು ನನ್ನ ಅಮ್ಮ ಹಾಗೂ ವಿವೇಕಾನಂದ ಸಂಸ್ಥೆಗಳು ಕಾರಣ-ಡಾ. ಗ್ರೀಷ್ಮಾ ವಿವೇಕ್ ಆಳ್ವ:
ಆಳ್ವಾಸ್ ಫಾರ್ಮಸಿಯ ಮುಖ್ಯ ನಿರ್ವಾಹಕಿ ಹಾಗೂ ಶಾಲೆಯ ಹಳೆ ವಿದ್ಯಾರ್ಥಿನಿ ಡಾ.ಗ್ರೀಷ್ಮಾ ವಿವೇಕ್ ಆಳ್ವ ಮಾತನಾಡಿ, ನನ್ನ ವ್ಯಕ್ತಿತ್ವವನ್ನು ರೂಪಿಸಿದವರಲ್ಲಿ ಇಬ್ಬರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಅವರಲ್ಲಿ ಒಬ್ಬರು ನನ್ನ ಅಮ್ಮ ಹಾಗೂ ಇನ್ನೊಂದು ಈ ವಿವೇಕಾನಂದ ವಿದ್ಯಾಸಂಸ್ಥೆಗಳು ಎಂದು ಅಭಿಮಾನದ ನುಡಿಗಳನ್ನಾಡಿದರು. ನಾನು ವಿವೇಕಾನಂದ ಕನ್ನಡ ಮೀಡಿಯಂ, ಇಂಗ್ಲಿಷ್ ಮೀಡಿಯಂ ಹಾಗೂ ಪಿಯು ಕಾಲೇಜಿನಲ್ಲಿ ಕಲಿತಿದ್ದೆನೆಂಬ ಹೆಮ್ಮೆ ನನಗಿದೆ. ಇಂಗ್ಲಿಷ್ ನಮಗಿಂದು ಅನಿವಾರ್ಯವಾಗಿದ್ದರೂ ಅದನ್ನು ಕಲಿಯಲು ಹಲವಾರು ದಾರಿಗಳಿವೆ. ಆದರೆ ನಮ್ಮ ಮಾತೃಭಾಷೆಯನ್ನು ನಾವು ಇಷ್ಟಪಟ್ಟು ಕಲಿತು ಬಳಸಬೇಕು ಎಂದು ಅಭಿಪ್ರಾಯಪಟ್ಟರು.


ನೈತಿಕ ಶಿಕ್ಷಣ -ಸಂಸ್ಕಾರ ರೂಪಿಸುವಿಕೆ ವಿವೇಕಾನಂದ ವಿದ್ಯಾಸಂಸ್ಥೆಗಳ ಹೆಗ್ಗಳಿಕೆ- ಮುರಳೀಧರ ಕೆ.:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾಗಿರುವ ಮುರಳೀಧರ ಕೆ, ಅವರು ಮಾತನಾಡಿ, ಶಾಲೆಯ ವಿದ್ಯಾರ್ಥಿಗಳು, ಬೊಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಅವಿರತ ಶ್ರಮ ಹಾಗೂ ಆಡಳಿತ ಮಂಡಳಿಯ ಪ್ರೋತ್ಸಾಹ ಮತ್ತು ಪೋಷಕರ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಇಷ್ಟು ಸುಂದರವಾಗಿ ಮೂಡಿಬರಲು ಸಾಧ್ಯವಾಗಿದೆ ಎಂದು ಹೇಳಿದರು. ಉಳಿದ ಶಾಲೆಗಳಲ್ಲಿ, ಪಠ್ಯ, ಪಠ್ಯೇತರ ಚಟುವಟಿಕೆ, ರ‍್ಯಾಂಕ್‌ಗಳಿಕೆಗೆ ಪ್ರಾಧಾನ್ಯತೆ ಕೊಟ್ಟರೆ, ವಿವೇಕಾನಂದ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳಲ್ಲಿ ಇವೆಲ್ಲದರ ಜೊತೆಗೆ ಮಕ್ಕಳಿಗೆ ನೈತಿಕ ಶಿಕ್ಷಣ ಹಾಗೂ ಸಂಸ್ಕಾರವನ್ನು ಕಲಿಸುವ ಕೆಲಸ ನಡೆದುಕೊಂಡು ಬರುತ್ತಿದೆ ಎಂದು ಹೇಳಿದರು.


ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:
ಕಬಡ್ಡಿಯಲ್ಲಿ ಬೆಸ್ಟ್ ರೈಡರ್ ಆಗಿ ರಾಷ್ಟ್ರಮಟ್ಟದಲ್ಲಿ ನಾಲ್ಕನೇ ಸ್ಥಾನಗಳಿಸಿದ ಹತ್ತನೇ ತರಗತಿಯ ಪುನೀತ್, ಖೋಖೋದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನದ ಸಾಧನೆ ಮಾಡಿದ ಜಿ.ಎಂ ಕೀರ್ತಿ, ವಿದ್ಯಾಭಾರತಿ ಜ್ಞಾನ-ವಿಜ್ಞಾನ ಮೇಳದಲ್ಲಿ ಕ್ಲೇ ಮಾಡೆಲಿಂಗ್ ನಲ್ಲಿ ರಾಷ್ಟ್ರಮಟ್ಟದಲ್ಲಿ 2ನೇ ಸ್ಥಾನವನ್ನು ಪಡೆದ ಸಾಧನೆ ಮಾಡಿದ ನಿಖಿಲ್ ಅವರನ್ನು ಹೆತ್ತವರ ಸಮ್ಮುಖದಲ್ಲಿ ಗೌರವಿಸಿ ಅಭಿನಂದಿಸಲಾಯಿತು. ರಾಷ್ಟ್ರಮಟ್ಟದಲ್ಲಿ ವಿಜೇತರಾದ ಬಾಲಕರ ಕಬಡ್ಡಿ ತಂಡ, ರಾಷ್ಟ್ರಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಿದ ಬಾಲಕಿಯರ ಕಬಡ್ಡಿ ತಂಡ, ವಿದ್ಯಾಭಾರತಿ ರಾಷ್ಟ್ರಮಟ್ಟದಲ್ಲಿ ಹಾಗೂ ಶಿಕ್ಷಣ ಇಲಾಖೆಯ ವಿಭಾಗೀಯ ಮಟ್ಟದಲ್ಲಿ ಪ್ರಶಸ್ತಿ ವಿಜೇತ ಬಾಲಕರ ಖೋಖೋ ತಂಡ ಹಾಗೂ ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಿದ ಬಾಲಕಿಯರ ಖೋಖೋ ತಂಡದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು. ಶಿಕ್ಷಕ ಚಂದ್ರಶೇಖರ ಸುಳ್ಯಪದವು ಈ ಕಾರ್ಯಕ್ರಮ ನಿರ್ವಹಿಸಿದರು.


’ಸಾಹಿತ್ಯ ಮಿತ್ರ’ – ಶಾಲಾ ವಾರ್ಷಿಕ ಸಂಚಿಕೆ ಬಿಡುಗಡೆ:
ಇದೇ ಸಂದರ್ಭದಲ್ಲಿ ಶಾಲಾ ವಾರ್ಷಿಕ ಸಂಚಿಕೆ ’ಸಾಹಿತ್ಯ ಮಿತ್ರ’ವನ್ನು ಅದಾನಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಕಿಶೋರ್ ಆಳ್ವ ಅವರು ಬಿಡುಗಡೆಗೊಳಿಸಿದರು. ಸಂಚಿಕೆಯ ಸಂಪಾದಕಿ ಶ್ವೇತಾ ಮಾತಾಜಿ ಅವರು ಈ ಕಾರ್ಯಕ್ರಮ ನಿರ್ವಹಿಸಿದರು.


ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:
ಕಳೆದ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 593 ಅಂಕಗಳ ಮೂಲಕ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದ ಕವನ ಶ್ರೀ ಮತ್ತು 577 ಅಂಕಗಳ ಮೂಲಕ ಶಾಲೆಗೆ ದ್ವಿತೀಯ ಸ್ಥಾನಿಯಾದ ಅಕ್ಷಯ್ ಅವರನ್ನು ಅಭಿನಂದಿಸಲಾಯಿತು. ಶಾಲಿನಿ ಮಾತಾಜಿ ಅವರು ಈ ಕಾರ್ಯಕ್ರಮವನ್ನು ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಾಲೆಯ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು. ಈ ಕಾರ್ಯಕ್ರಮವನ್ನು ದಾಕ್ಷಾಯಿಣಿ ಮಾತಾಜಿ ನಿರ್ವಹಿಸಿದರು.


ದತ್ತಿನಿಧಿ ವಿತರಣೆ:
ಮುಳಿಯ ಶ್ಯಾಂ ಭಟ್ ಪ್ರತಿಷ್ಠಾನ ಕೊಡಮಾಡುವ ದತ್ತಿ ನಿಧಿಯನ್ನು ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೃಷ್ಣವೇಣಿ ಮುಳಿಯ ಅವರು ನೀಡಿದರು. ಈ ಕಾರ್ಯಕ್ರಮವನ್ನು ಶಾಲಿನಿ ಮಾತಾಜಿ ನಿರ್ವಹಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಿ ತಂಡ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸೌಮ್ಯ ಮಾತಾಜಿ ಅವರು ಈ ಕಾರ್ಯಕ್ರಮವನ್ನು ನಿರ್ವಹಿಸಿದರು.


ವೇದಿಕೆಯಲ್ಲಿ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಪತ್ರಕರ್ತ ಪ್ರೊ. ವಿ ಬಿ ಅರ್ತಿಕಜೆ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ ನಾಯಕ್, ಶಾಲಾ ಆಡಳಿತ ಮಂಡಳಿಯ ಸಂಚಾಲಕ ವಸಂತ ಸುವರ್ಣ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಜಯಪ್ರಕಾಶ್, ಅನ್ನಪೂರ್ಣ ಸಮಿತಿಯ ಅಧ್ಯಕ್ಷೆ ಸ್ಮಿತಾ ಬಳ್ಳಕ್ಕುರಾಯ, ಮಾತೃ ಭಾರತೀಯ ಅಧ್ಯಕ್ಷ ಕ್ಷಮಾ, ಸುಹಾಸ್ ಮಜಿ, ಪ್ರೌಢಾಶಾಲಾ ವಿದ್ಯಾರ್ಥಿ ನಾಯಕ ಚಿರಂತನ್, ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕ ಅದ್ವಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಆಶಾ ಬೆಳ್ಳಾರೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ವರದಿ ಮಂಡಿಸಿದರು. ಆಡಳಿತ ಮಂಡಳಿಯ ಸಂಚಾಲಕ ವಸಂತ ಸುವರ್ಣ ವಂದಿಸಿದರು. ಸ್ವಾತಿ ಮಾತಾಜಿ ಅವರು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಶಿಕ್ಷಕರು-ಶಿಕ್ಷಕೇತರ ವೃಂದದವರು ಸಹಕರಿಸಿದರು. ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಅನುಮತಿ ಪಡೆದ ಅನುದಾನಿತ ಶಾಲೆಗಳಿಗೆ ರುಪ್ಸಾದವರು ಕೊಡಮಾಡುವ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಪಾತ್ರರಾದ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆಯವರನ್ನು ಶಾಲಾ ಆಡಳಿತ ಮಂಡಳಿ ಪರವಾಗಿ ಕೃಷ್ಣವೇಣಿ ಮುಳಿಯ ಅವರು ಸನ್ಮಾನಿಸಿ ಅಭಿನಂದಿಸಿದರು. ಆಶಾ ಬೆಳ್ಳಾರೆಯವರಿಗೆ ಕುಂಕುಮವಿರಿಸಿ, ಹೂ ಮುಡಿಸಿ, ಶಾಲು ಹೊದೆಸಿ, ಸ್ಮರಣಿಕೆ ನೀಡಿ ಸಾಂಪ್ರದಾಯಿಕ ರೀತಿಯಲ್ಲಿ ಸನ್ಮಾನಿಸಿದ್ದು ವಿಶೇಷವಾಗಿತ್ತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಆಶಾ ಬೆಳ್ಳಾರೆಯವರು, ’ಬೆಂಗಳೂರಿನಲ್ಲಿ ಪ್ರಶಸ್ತಿ ಸ್ವೀಕರಿಸುವ ಸಂದರ್ಭಕ್ಕಿಂತಲೂ ಇಂದು ಇಲ್ಲಿ ನಿಮ್ಮೆಲ್ಲರ ಮುಂದೆ ಸ್ವೀಕರಿಸಿದ ಈ ಸನ್ಮಾನ ರೋಮಾಂಚನವನ್ನುಂಟು ಮಾಡಿದೆ. ಮುಂದೆಯೂ ಅತ್ಯುತ್ತಮವಾಗಿ ಈ ಶಾಲೆಯಲ್ಲಿ ಕಾರ್ಯನಿರ್ವಹಿಸಲು ನಿಮ್ಮೆಲ್ಲರ ಆಶೀರ್ವಾದವಿರಲಿ’ ಎಂದು ಕೃತಜ್ಞತಾ ನುಡಿಗಳನ್ನಾಡಿದರು. ಶಿಕ್ಷಕರಾದ ಚಂದ್ರಶೇಖರ ಅವರು ಅಭಿನಂದನಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here