ನೆಲ್ಯಾಡಿ: ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿ ಇಲ್ಲಿನ ಮಹಿಳಾ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಹಭಾಗಿತ್ವದಲ್ಲಿ ಮಹಿಳಾ ಆರೋಗ್ಯ ಹಾಗೂ ನೈರ್ಮಲ್ಯ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿಶಿರ ಅವರು ಹದಿಹರೆಯದಲ್ಲಿ ಆರೋಗ್ಯದಲ್ಲಿ ಆಗುವ ಬದಲಾವಣೆಗಳು, ಸಮಸ್ಯೆಗಳು, ರೋಗಗಳನ್ನು ತಡೆಗಟ್ಟಲು ಮಾಡಬೇಕಾದ ಪರಿಹಾರಗಳು, ಪೌಷ್ಟಿಕ ಆಹಾರ ಸೇವನೆಯ ಪ್ರಾಮುಖ್ಯತೆ ಹಾಗೂ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಇರುವ ಗೊಂದಲಗಳಿಗೆ ಸೂಕ್ತ ಪರಿಹಾರವನ್ನು ನೀಡುತ್ತಾ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೆರೋನಿಕಾ ಪ್ರಭಾರವರು ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ಮಹಿಳಾ ಸಂಘದ ಸಂಚಾಲಕಿ ಪಾವನ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಶ್ರುತಿ ವಂದಿಸಿದರು. ವಿದ್ಯಾರ್ಥಿನಿ ಚೈತನ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.