ಪುತ್ತೂರು: ನೆಹರೂ ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ವಿಶಿಷ್ಟ ಸಾಧನೆಯನ್ನು ಮಾಡುತ್ತಿದ್ದಾರೆ. ಇದೀಗ ಅದಕ್ಕೆ ಉದಾಹರಣೆ ಎಂಬಂತೆ ಚದುರಂಗ ಸ್ಪರ್ಧೆಯಲ್ಲಿ ಸಾಧನೆ ಮಾಡುವ ಮೂಲಕ ಗುರುತಿಸಿಕೊಂಡಿದ್ದಾರೆ.
ಚಿತ್ರದುರ್ಗದ ಎಸ್ ಜೆ ಎಂ ಕಾನೂನು ಮಹಾವಿದ್ಯಾಲಯ ಮತ್ತು ಕರ್ನಾಟಕ ಕಾನೂನು ವಿವಿ ಇವರು ಆಯೋಜಿಸಿದ ಕರ್ನಾಟಕ ಕಾನೂನು ವಿವಿ ಅಂತರ್ ಕಾಲೇಜು ಪುರುಷ ಹಾಗೂ ಮಹಿಳೆಯರ ಚದರಂಗ ಸ್ಪರ್ಧೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಮಹಿಳೆಯರ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ದ್ವಿತೀಯ ಬಿಎಎಲ್ಎಲ್ಬಿ ವಿದ್ಯಾರ್ಥಿನಿ ಎಸ್. ಶರಣ್ಯ ತೋಳ್ಪಾಡಿ ವೈಯಕ್ತಿಕ ವಿಭಾಗದಲ್ಲಿ ದ್ವಿತೀಯ ಸ್ಥಾನ ಮತ್ತು ದ್ವಿತೀಯ ಎಲ್ಎಲ್ಬಿ ವಿದ್ಯಾರ್ಥಿ ಓಂಕಾರ್ ಮಂಜುನಾಥ್ ಮೊಗೆರ್ ಚತುರ್ಥ ಸ್ಥಾನ ಪಡೆದುಕೊಂಡು, ಅಖಿಲ ಭಾರತ ಮಟ್ಟದ ದಕ್ಷಿಣ ಪ್ರಾಂತೀಯ ಚದುರಂಗ ಸ್ಪರ್ಧೆಗೆ ಕರ್ನಾಟಕ ರಾಜ್ಯ ಕಾನೂನು ವಿವಿ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಮಹಿಳೆಯರ ತಂಡ ವಿಭಾಗದಲ್ಲಿ ಅಂತಿಮ ಬಿ.ಎ.ಎಲ್.ಎಲ್.ಬಿ ವಿದ್ಯಾರ್ಥಿನಿ ಜ್ಯೋತಿಕಾ ಲಕ್ಷ್ಮಿ, ಅಂತಿಮ ಎಲ್ಎಲ್ಬಿ ವಿದ್ಯಾರ್ಥಿನಿ ಮಣಿ, ಚತುರ್ಥ ಬಿ.ಎ.ಎಲ್.ಎಲ್.ಬಿ ವಿದ್ಯಾರ್ಥಿನಿ ಫಾತಿಮಾ ಶಮೂಲ ಶರಾಫಥ್, ತೃತೀಯ ಬಿ. ಎ.ಎಲ್.ಎಲ್.ಬಿ ವಿದ್ಯಾರ್ಥಿನಿ ಶ್ರದ್ಧಾ ಪಂಡಿತ್, ದ್ವಿತೀಯ ಬಿ.ಎ.ಎಲ್.ಎಲ್.ಬಿ ವಿದ್ಯಾರ್ಥಿನಿ ಎಸ್. ಶರಣ್ಯ ತೋಳ್ಪಾಡಿ ಇವರುಗಳ ತಂಡ ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದಾರೆ.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕ್ರೀಡಾ ಕಾರ್ಯದರ್ಶಿಯಾದ ಅಂತಿಮ ಬಿ.ಎ.ಎಲ್.ಎಲ್.ಬಿ.ಯ ಹಿತೇಶ್ ಸಹಕರಿಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ನವೀನ್ ಕುಮಾರ್ ಎಂ ಕೆ ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಈ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಣ ನಿರ್ದೇಶಕರಿಗೆ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ, ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರು, ಪ್ರಾಂಶುಪಾಲರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದರು.