ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಬೇಡ-ಅಶೋಕ್ ರೈ
ಪುತ್ತೂರು: ಜನಪ್ರತಿನಿಧಿ ಆದ ಮೇಲೆ ಯಾವುದೇ ರಾಜಕೀಯ ಮಾಡದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು, ನಮ್ಮ ಪ್ರಾಮಾಣಿಕ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜನರು ಮತ ನೀಡಬೇಕೆನ್ನುವುದು ನಮ್ಮ ಬಯಕೆ, ಆದರೆ ಮತದಾರರಿಗೆ ಮನಸ್ಸು ಕೊಡುವುದು ದೇವರು, ಹಾಗಾಗಿ ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೇ ಪ್ರಾಮಾಣಿಕವಾಗಿ ಜನಪರ ಕೆಲಸಗಳನ್ನು ಮಾಡುವುದು ನಮ್ಮ ಗುರಿಯಾಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಕೆದಂಬಾಡಿ ಗ್ರಾಮ ಪಂಚಾಯತ್ ನಾಲ್ಕನೇ ವಾರ್ಡ್ನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೆಲ್ವಿನ್ ಮೊಂತೆರೋ ಅವರ ಗೆಲುವಿಗಾಗಿ ಸಹಕರಿಸಿದ ಮತದಾರರಿಗೆ, ಪಕ್ಷದ ಹಿರಿಯ ಕಿರಿಯ-ನಾಯಕರುಗಳಿಗೆ ಮತ್ತು ಕಾರ್ಯಕರ್ತರಿಗೆ ಡಿ.3ರಂದು ಸಂಜೆ ತಿಂಗಳಾಡಿ ಮೊಂತೆರೋ ಕಾಂಪೌಂಡ್ನಲ್ಲಿ ಏರ್ಪಡಿಸಿದ್ದ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.
ಭ್ರಷ್ಟಾಚಾರ ಮುಕ್ತ ಆಡಳಿತ ನಾವು ಮಾಡಿದಾಗ ನಮಗೆ ನೈತಿಕತೆ ಇರುತ್ತದೆ. ನಾನು ಭ್ರಷ್ಟಾಚಾರದ ವಿರುದ್ಧ ಸತತ ಹೋರಾಡುತ್ತಿದ್ದು, ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆ ಆಗಬೇಕೆನ್ನುವುದು ನನ್ನ ಕನಸಾಗಿದೆ, ಅದರೆ ಆ ದೇವರೇ ಭೂಮಿಗೆ ಇಳಿದು ಬಂದರೂ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ, ಏಕೆಂದರೆ ಕೆಲವು ಜನರೇ ತಮ್ಮ ಕೆಲಸ ಆದಾಗ ಅಧಿಕಾರಿಗಳಿಗೆ ಹಣ ಕೊಡುವ ಅಭ್ಯಾಸ ರೂಢಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಮೆಲ್ವಿನ್ ಗೆದ್ದದ್ದು ಹೆಚ್ಚು ಖುಷಿಯಾಗಿದೆ:
ಗ್ರಾ.ಪಂ ಉಪ ಚುನಾವಣೆಯಲ್ಲಿ ಕೆದಂಬಾಡಿಯಲ್ಲಿ ನಮಗೆ ಸ್ವಲ್ಪ ಡೌಟ್ ಇತ್ತು, ಎಸ್‌ಡಿಪಿಐ ಸ್ಪರ್ಧಿಸಿದ ಕಾರಣ ಸ್ವಲ್ಪ ಕಷ್ಟ ಆಗಬಹುದು ಎಂದು ಸ್ಥಳೀಯ ನಾಯಕರೇ ಹೇಳಿದ್ದರು. ಆದರೂ ಅವೆಲ್ಲವನ್ನೂ ಲೆಕ್ಕಸದೇ ನಾವು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಇಲ್ಲಿನ ನಾಯಕರು ಮತ್ತು ಕಾರ್ಯಕರ್ತರು ನನಗೆ ಭರವಸೆ ನೀಡಿದ್ದರು. ಅದರಂತೆ ಮಾಡಿ ತೋರಿಸಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಸಂತಸ ವ್ಯಕ್ತಪಡಿಸಿದರು.
ಇನ್ನೊಮ್ಮೆ ಮನೆ ಮನೆಗೆ ಭೇಟಿ ಕೊಡಿ:
ಮೆಲ್ವಿನ್ ಅವರು ಚುನಾವಣೆಯಲ್ಲಿ ಮತ ಕೇಳಲು ಹೋದ ಎಲ್ಲ ಮನೆಗಳಿಗೆ ಇದೀಗ ಗೆದ್ದ ಬಳಿಕ ಮತ್ತೊಮ್ಮೆ ಮನೆ ಮನೆಗೆ ಭೇಟಿ ಕೊಡಬೇಕು, ಓಟು ಕೊಟ್ಟವರು, ಕೊಡದವರು ಎಂದು ನೋಡಬೇಡಿ, ಎಲ್ಲ ಮನೆಗೂ ಒಮ್ಮೆ ಭೇಟಿ ಕೊಡಿ, ಜನರಿಗೆ ಯಾವುದೇ ಭರವಸೆ ನೀಡಬೇಡಿ, ಆಗುವ ಕೆಲಸವನ್ನು ಜನರಿಗೆ ಮಾಡಿಕೊಡಿ ಎಂದು ಶಾಸಕರು ಮೆಲ್ವಿನ್ ಮೊಂತೆರೋ ಅವರಿಗೆ ಕಿವಿಮಾತು ಹೇಳಿದರು.
ನಮ್ಮಲ್ಲೇ ಹುಳಿ ಹಿಂಡುವವರಿದ್ದಾರೆ..!
ನಮ್ಮ ಅಭ್ಯರ್ಥಿಗಳು ಕಣದಲ್ಲಿದ್ದಾಗ ನಮ್ಮೊಳಗಿನವರೇ ದೂರ ನಿಂತು ಹುಳಿ ಹಿಂಡುವ ಕೆಲಸ ಮಾಡುತ್ತಾರೆ, ಎಸ್‌ಡಿಪಿಐಯವರು ನಿಲ್ಲಲಿ ಎಂದೂ ಹೇಳುವವರಿದ್ದಾರೆ, ಅಶೋಕ್ ರೈ ಬಂದರೂ ಏನೂ ಪ್ರಯೋಜನ ಆಗಿಲ್ಲ ಎಂದು ಹೇಳಲು ಕಾಯುವವರಿದ್ದರು, ಆದರೆ ಉಪ ಚುನಾವಣೆಯಲ್ಲಿ ಮೂರೂ ಕಡೆಗಳಲ್ಲಿ ಗೆದ್ದಾಗ ಅವರದ್ದು ಸುದ್ದಿಯೇ ಇಲ್ಲ ಎಂದು ಶಾಸಕರು ಪರೋಕ್ಷವಾಗಿ ಪಕ್ಷದೊಳಗಿನ ವಿರೋಧಿಗಳಿಗೆ ಟಾಂಗ್ ನೀಡಿದರು.
ಧರ್ಮದ ಆಧಾರದಲ್ಲಿ ಮತ ಕೇಳಿದವರನ್ನು ಜನತೆ ತಿರಸ್ಕರಿಸಿದ್ದಾರೆ- ಹೇಮನಾಥ ಶೆಟ್ಟಿ
ಕೆಪಿಸಿಸಿ ಸಂಯೋಜನಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಶಾಸಕ ಅಶೋಕ್ ಕುಮಾರ್ ರೈ ಅವರ ಅಭಿವೃದ್ಧಿ ಪರ ಕಾರ್ಯ ವೈಖರಿಯನ್ನು ಜನತೆ ಮೆಚ್ಚಿಕೊಂಡಿದ್ದು ಅದಕ್ಕೆ ಗ್ರಾ.ಪಂ ಉಪ ಚುನಾವಣೆಯ ಫಲಿತಾಂಶ ಸಾಕ್ಷಿಯಾಗಿದೆ. ಉಪ ಚುನಾವಣೆಯಲ್ಲಿ ಜನತೆ ಜಾತ್ಯಾತೀತ ತತ್ವದ ಕಾಂಗ್ರೆಸ್‌ನ್ನು ಬೆಂಬಲಿಸಿದ್ದು ಧರ್ಮದ ಆಧಾರದಲ್ಲಿ ಮತ ಕೇಳಿದವರನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.
ಶಾಸಕ ಅಶೋಕ್ ರೈ ಅವರು ಈಗಲೇ ಅತೀ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು ಓರ್ವ ಶಾಸಕ ಇಷ್ಟೊಂದು ಕೆಲಸಗಳನ್ನು ಮಾಡಲು ಸಾಧ್ಯವಿದೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ, ಬಡವರ ಪರವಾಗಿ ವಿಶೇಷ ಕಾಳಜಿ ಹೊಂದಿರುವ ಅಶೋಕ್ ರೈ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಯಾರೂ ಮಾಡದ ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿದ್ದು ಮೆಡಿಕಲ್ ಕಾಲೇಜಿಗಾಗಿ ಕೂಡಾ ನಿರಂತರ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದರು.
ಆರಂಭದಲ್ಲಿ ಗೊಂದಲ ಇದ್ದದ್ದು ನಿಜ:
ಕೆದಂಬಾಡಿ ನಾಲ್ಕನೇ ವಾರ್ಡ್ನಲ್ಲಿ ಕಳೆದ ಬಾರಿ ಎಸ್‌ಡಿಪಿಐ ಸ್ಪರ್ಧಿಸಿದ್ದು ಅಲ್ಲಿ ನಾವು ಮೂರನೇ ಸ್ಥಾನ ಪಡೆದುಕೊಂಡಿದ್ದೆವು, ಹಾಗಾಗಿ ಈ ಬಾರಿ ಎಸ್‌ಡಿಪಿಐ ಸ್ಪರ್ದೆ ಇದ್ದ ಕಾರಣ ಆರಂಭದಲ್ಲಿ ಒಂದಷ್ಟು ಗೊಂದಲ ಇದ್ದದ್ದು ನಿಜ, ಧರ್ಮವನ್ನು ದತ್ತು ಪಡೆದ ಎರಡು ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಮತ್ತು ಜಾತ್ಯಾತೀತ ನಿಲುವಿನ ನಮ್ಮ ಅಭ್ಯರ್ಥಿ ನಡುವೆ ನಡೆದ ತ್ರಿಕೋನ ಸ್ಪರ್ಧೆಯಲ್ಲಿ ಜನತೆ ಜಾತ್ಯಾತೀತ ತತ್ವದ ಮೆಲ್ವಿನ್ ಅವರಿಗೆ ಮತ ನೀಡಿದ್ದು ಧರ್ಮದ ಆಧಾರದಲ್ಲಿ ಮತ ಕೇಳಿದವರನ್ನು ತಿರಸ್ಕರಿಸುವ ಮೂಲಕ ಒಳ್ಳೆಯ ಸಂದೇಶ ನೀಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಇನ್ನಷ್ಟು ಬಲಿಷ್ಠಗೊಳ್ಳುತ್ತಿದೆ-ಕೃಷ್ಣ ಪ್ರಸಾದ್ ಆಳ್ವ
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಮಾತನಾಡಿ ಶಾಸಕ ಅಶೋಕ್ ಕುಮಾರ್ ರೈ ಅವರ ಅಭಿವೃದ್ಧಿ ಪರವಾದ ಕಾರ್ಯವೈಖರಿಯನ್ನು ಜನತೆ ಮೆಚ್ಚಿಕೊಂಡಿದ್ದು ಉಪಚುನಾವಣೆಯಲ್ಲಿ ಜನರು ಕಾಂಗ್ರೆಸ್ ಬೆಂಬಲಿತರ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಈಗ ಇನ್ನಷ್ಟು ಬಲಿಷ್ಠಗೊಳ್ಳುತ್ತಿದ್ದು ಕಾಂಗ್ರೆಸ್ ಸರಕಾರದ ಜನಪರವಾದ ಕಾರ್ಯಗಳು ಪ್ರತೀ ಮನೆಗೂ ಮುಟ್ಟುತ್ತಿದೆ, ಹಾಗಾಗಿ ಜನತೆ ಬಿಜೆಪಿಯನ್ನು ತಿರಸ್ಕರಿಸುತ್ತಿದ್ದು ಕಾಂಗ್ರೆಸ್‌ನತ್ತ ಒಲವು ತೋರಿಸುತ್ತಿದ್ದಾರೆ ಎಂದು ಹೇಳಿದರು. ಮೆಲ್ವಿನ್ ಮೊಂತೆರೋ ಅವರ ಗೆಲವಿಗೆ ನಾಯಕರು, ಕಾರ್ಯಕರ್ತರು ಒಗ್ಗಟ್ಟಿನಲ್ಲಿ ಶ್ರಮಪಟ್ಟ ಪರಿಣಾಮ ಅವರ ಗೆಲುವು ಸಾಧ್ಯವಾಯಿತು, ಮುಂದಕ್ಕೂ ಕಾಂಗ್ರೆಸ್ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಲಿದೆ ಎಂದು ಅವರು ಹೇಳಿದರು.
ನನ್ನ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ-ಮೆಲ್ವಿನ್
ನಾನು ಪ್ರಥಮ ಬಾರಿಗೆ ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಗ್ರಾ.ಪಂ ಸದಸ್ಯನಾಗಿ ಆಯ್ಕೆಯಾಗಿದ್ದು ವಾರ್ಡ್ನಲ್ಲಿ ನನ್ನಿಂದಾಗು ಪ್ರಾಮಾಣಿಕ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತೇನೆ, ನನ್ನ ಗೆಲುವಿಗಾಗಿ ಶ್ರಮಿಸಿದ ಕಾಂಗ್ರೆಸ್‌ನ ಎಲ್ಲಾ ನಾಯಕರಿಗೆ, ಕಾರ್ಯಕರ್ತರಿಗೆ, ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಕೆದಂಬಾಡಿ ಗ್ರಾ.ಪಂ ಸದಸ್ಯರಾಗಿ ಚುನಾಯಿತರಾದ ಮೆಲ್ವಿನ್ ಮೊಂತೆರೋ ಹೇಳಿದರು.
ಮೆಲ್ವಿನ್‌ರನ್ನು ಅಭಿನಂದಿಸಿದ ಶಾಸಕರು:
ಗ್ರಾ.ಪಂ ಸದಸ್ಯರಾಗಿ ಚುನಾಯಿತರಾದ ಮೆಲ್ವಿನ್ ಮೊಂತೆರೋ ಅವರಿಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಶಾಲು ಹೊದಿಸಿ ಅಭಿನಂದಿಸಿದರು.
ವೇದಿಕೆಯಲ್ಲಿ ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರು, ಕೆಯ್ಯೂರು ವಲಯ ಕಾಂಗ್ರೆಸ್ ಅಧ್ಯಕ್ಷ ಎ.ಕೆ ಜಯರಾಮ ರೈ, ಕೆಯ್ಯೂರು ಗ್ರಾ.ಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಹಿರಿಯ ಕಾಂಗ್ರೆಸ್ ಮುಖಂಡ ಬೋಳೋಡಿ ಚಂದ್ರಹಾಸ ರೈ, ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ನರಿಮೊಗರು, ಮುಂಡೂರು ಗ್ರಾ.ಪಂ ಸದಸ್ಯ ಮಹಮ್ಮದ್ ಆಲಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹಂಝ ಎಲಿಯ, ಕೆದಂಬಾಡಿ ವಯಲ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮನೋಹರ್ ರೈ ಎಂಡೆಸಾಗು, ಕೆಯ್ಯೂರು ಗ್ರಾ.ಪಂ ಸದಸ್ಯ ಜಯಂತ್ ಪೂಜಾರಿ ಕೆಂಗುಡೇಲು, ದ.ಕ ಜಿಲ್ಲಾ ಕಾಂಗ್ರೆಸ್ ಸದಸ್ಯೆ ಅಸ್ಮಾ ಗಟ್ಟಮನೆ, ಕೆದಂಬಾಡಿ ಗ್ರಾ.ಪಂ ಸದಸ್ಯೆ ಅಸ್ಮಾ ಉಪಸ್ಥಿತರಿದ್ದರು.
ಕಾಂಗ್ರೆಸ್ ಮುಖಂಡರಾದ ಅಶ್ರಫ್ ಸಾರೆಪುಣಿ, ಹಬೀಬುಲ್ಲಾ ಕಣ್ಣೂರು, ರೇಶ್ಮಾ ಮೆಲ್ವಿನ್, ನೌಶಾದ್ ತಿಂಗಳಾಡಿ, ಶಕೀಲ್ ಬೇರಿಕೆ, ಶಾಫಿ ಬೇರಿಕೆ, ಸೋಮಯ್ಯ ತಿಂಗಳಾಡಿ, ರಫೀಕ್ ತ್ಯಾಗರಾಜೆ, ಹಾರಿಸ್ ತೋಟ, ಇಸ್ಮಾಯಿಲ್ ತಿಂಗಳಾಡಿ ಮೊದಲಾದವರು ಅತಿಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ಮೆಲ್ವಿನ್ ಮೊಂತೆರೋ ಸ್ವಾಗತಿಸಿದರು. ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು.