ವಿಷಯ ಕೆಮ್ಮಿಂಜೆ ಶ್ರೀಷಣ್ಮುಖ ಜಾತ್ರೋತ್ಸವಕ್ಕೆ ದೇವಳದ ಪೂರ್ವ ಭಾಗದ ರಸ್ತೆಯ ದಾರಿಯಿಂದ ಅಗಮಿಸುವ ಭಕ್ತಾದಿಗಳಿಗೆ ಸುಗಮ ದಾರಿ ವ್ಯವಸ್ಥೆ ಕಲ್ಪಿಸುವ ಕುರಿತು ಕೆಮ್ಮಿಂಜೆ ಶ್ರೀಷಣ್ಮುಖ ಸುಬ್ರಮಣ್ಯ-ಮಹಾವಿಷ್ಣು ದೇವಸ್ಥಾನದ ಭಕ್ತವೃಂದದ ವತಿಯಿಂದ ಪುತ್ತೂರು ನಗರಸಭಾ ಅಧ್ಯಕ್ಷರಿಗೆ, ಪೌರಾಯುಕ್ತರಿಗೆ ಹಾಗೂ ಕೆಮ್ಮಿಂಜೆ ದೇವಾಲಯದ ಆಡಳಿತಾಧಿಕಾರಿಯವರಿಗೆ ಮನವಿ ನೀಡಲಾಯಿತು.
ಡಿಸೆಂಬರ್ 6 ರಿಂದ 8ರವರೆಗೆ ಕೆಮ್ಮಿಂಜೆ ದೇವಸ್ಥಾನದ ಷಷ್ಠಿ ಜಾತ್ರೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಈ ಸಂದರ್ಭದಲ್ಲಿ ದೇವಳದ ಪೂರ್ವ ಭಾಗದಿಂದ ಮೊಟ್ಟೆತ್ತಡ್ಕ-ಭಗತ್ ಸಿಂಗ್ ರಸ್ತೆ-ಗೋಲೆಕ್ಸ್ ಮೂಲಕವಾಗಿ ಸುಮಾರು 10೦೦ಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಇತ್ತೀಚೆಗೆ ದೇವಸ್ಥಾನಕ್ಕೆ ಸಂಪರ್ಕಿಸುವ ಕಾಲುದಾರಿಯನ್ನು ಖಾಸಗಿ ವ್ಯಕ್ತಿಗಳು ಮುಚ್ಚಿರುವುದರಿಂದ ಭಕ್ತಾದಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಅಲ್ಲದೆ ಈಗ ದೇವಸ್ಥಾನದ ಹತ್ತಿರ ಕಿರಿದಾದ ಎತ್ತರ ತಗ್ಗುಗಳಿಂದ ಕೂಡಿದ ದಾರಿಯೊಂದಿದ್ದು ಅಲ್ಲಿಂದಲೇ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಆದರೆ ಈ ದಾರಿ ಅಪಾಯಕಾರಿಯಾಗಿದ್ದು ಮಕ್ಕಳು, ಹೆಂಗಸರು, ಹಿರಿಯ ನಾಗರಿಕರು ಈ ದಾರಿಯಾಗಿ ಆಗಮಿಸಿದರೆ ಕೆಳಗಿನ ಗದ್ದೆಗೆ ಬಿದ್ದು ದೈಹಿಕವಾಗಿ ಅಪಾಯವಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ದೇವಸ್ಥಾನಕ್ಕೆ ಸಂಬಂಧಪಟ್ಟ ದೈವ ಸಾನಿಧ್ಯದ ಮೂಲ ಸ್ಥಳಕ್ಕೂ ಇದೇ ಜಾಗದಿಂದ ಹೋಗಬೇಕಾಗಿರುತ್ತದೆ. ಇದಕ್ಕೂ ಕೂಡ ತೊಂದರೆಯಾಗುತ್ತದೆ. ಆದುದರಿಂದ ಹಲವಾರು ವರ್ಷಗಳಿಂದ ಇದ್ದ ಈ ದಾರಿಯನ್ನು ಈ ಕೂಡಲೇ ಊರ್ಜಿತವಿರಿಸಿ, ಜಾತ್ರಾ ಸಂದರ್ಭದಲ್ಲಿಯಾದರೂ ಭಕ್ತಾದಿಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.