ಪುತ್ತೂರು: ಶಿವಪೇಟೆಯಲ್ಲಿರುವ ವಿವೇಕಾನಂದ ಶಿಶು ಮಂದಿರದಲ್ಲಿ ಡಿ.6ರಂದು ದೇವಾಲಯಗಳ ಸಂವರ್ಧನ ಸಮಿತಿ ವತಿಯಿಂದ ಹಿಂದೂ ಧಾರ್ಮಿಕ ಶಿಕ್ಷಣ ಶಾಖೆಯನ್ನು, ಆರಂಭಿಸಲಾಯಿತು.
ಶಿಕ್ಷಣ ಕೇಂದ್ರದ ಕೃಷ್ಣವೇಣಿ ಪ್ರಸಾದ್ ಮುಳಿಯರವರು ಹಿಂದೂ ಧಾರ್ಮಿಕ ಶಿಕ್ಷಣದ ಉದ್ದೇಶ ಮತ್ತು ಅದರ ವಿಶೇಷತೆಗಳನ್ನು ತಿಳಿಸಿದರು. ಬಳಿಕ ಶ್ಲೋಕವೊಂದರ ಅರ್ಥ, ದೈನಂದಿನ ಜೀವನದಲ್ಲಿ ಆಚಾರ-ವಿಚಾರಗಳು ವೈಜ್ಞಾನಿಕ ತಳಹದಿ ಮೇಲೆ ಪರಂಪರಾಗತವಾಗಿ ಹೇಗೆ ರೂಪುಗೊಂಡಿವೆ ಎಂಬುದನ್ನು ವಿವರಿಸಿ, ಭಜನೆಯನ್ನು ನಡೆಸಿಕೊಟ್ಟರು. ಸಾಹಿತಿ ಶಂಕರಿ ಶರ್ಮರವರು ಕನ್ನಡದ ಭಗವದ್ಗೀತೆ ಎನಿಸಿಕೊಂಡಿರುವ ಡಿ.ವಿ.ಜಿ.ಯವರ ಕಗ್ಗವೊಂದನ್ನು ಪ್ರಸ್ತುತಪಡಿಸಿದರು.
ಬಳಿಕ ಅದರ ಅರ್ಥವನ್ನು ವಿವರಿಸುತ್ತಾ ಇಂದಿನ ಕಾಲಘಟ್ಟದಲ್ಲಿ ಅದರ ಅಗತ್ಯತೆಯನ್ನು ತಿಳಿಸಿದರು. ಬಳಿಕ ಪೌರಾಣಿಕ ಕಥೆಯೊಂದನ್ನು ಹೇಳಿ, ಅದರ ವಿಶೇಷತೆಯನ್ನು ವಿವರಿಸಿದರು. ಶಿಶು ಮಂದಿರದ ಆಡಳಿತ ಮಂಡಳಿಯಲ್ಲಿ ಕೋಶಾಧಿಕಾರಿಯಾಗಿರುವ ಚಂದ್ರಪ್ರಭಾ ಅವರು ಭಗವದ್ಗೀತೆಯ ಮಹತ್ವವನ್ನು ತಿಳಿಸಿದರು. ಮಾತೃಭಾರತಿ ಸದಸ್ಯೆಯರಾದ ಲಕ್ಷ್ಮೀಪ್ರಭಾ ಸ್ವಾಗತಿಸಿ, ರಮ್ಯ ವಂದಿಸಿದರು. ಮುಖ್ಯಮಾತಾಜಿ ರೇಖಾ ಕುಮಾರಿ, ಮಾತಾಜಿಯವರಾದ ಹರ್ಷಿತಾ, ದಿವ್ಯ ಮತ್ತು ಪದ್ಮಪ್ರಿಯ, ಪೋಷಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.