ಪತ್ನಿ, ಮಾವನಿಗೆ ಚೂರಿಯಿಂದ ಇರಿದು ಗಾಯಗೊಳಿಸಿ ಜೀವ ಬೆದರಿಕೆ ಒಡ್ಡಿದ್ದ ಪ್ರಕರಣ: ಮಾಲಾಡಿಯ ಹಕೀಂಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

0

ಪುತ್ತೂರು: ಪತ್ನಿ ಮತ್ತು ಮಾವನಿಗೆ ಚೂರಿಯಿಂದ ಇರಿದು ಗಾಯಗೊಳಿಸಿ ಜೀವ ಬೆದರಿಕೆ ಒಡ್ಡಿದ ಆರೋಪಿಗೆ ಬೆಳ್ತಂಗಡಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2024ರ ಜುಲೈ 1ರಂದು ದೇಶಾದ್ಯಂತ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ ಜಾರಿಯಾದ ನಂತರ ಹೊಸ ಕಾಯಿದೆಯಡಿ ಆರೋಪಿಗೆ ಶಿಕ್ಷೆ ವಿಧಿಸಿದ ಪ್ರಕರಣ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಮೊದಲನೆಯದಾಗಿದೆ.

ಘಟನೆಯ ವಿವರ:
ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಹಕೀಂ ಎಂಬಾತ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಣಿಯೂರು ಗ್ರಾಮದಲ್ಲಿರುವ ತನ್ನ ಪತ್ನಿ ಮನೆಯಲ್ಲಿ 2024ರ ಜು.26ರಂದು ಮಧ್ಯಾಹ್ನ 1.30ರ ವೇಳೆಗೆ ಮಗುವಿಗೆ ಊಟ ಕೊಡುತ್ತಿದ್ದ ತನ್ನ ಪತ್ನಿಗೆ ಚೂರಿಯಿಂದ ಇರಿದಿದ್ದ. ಇರಿತದ ಪರಿಣಾಮ ಮಹಿಳೆಯ ಎರಡು ಕೈಯ ಬೆರಳುಗಳಿಗೆ ತೀವ್ರ ಸ್ವರೂಪದ ಗಾಯವಾಗಿತ್ತಲ್ಲದೆ ಬಲ ಭುಜದ ಹಿಂಬದಿ ಗೀರಿದ ಗಾಯ ಮತ್ತು ಬಲ ಕಾಲಿನ ರಕ್ತದ ಗಾಯ ಉಂಟು ಮಾಡಿದ್ದ. ಇದನ್ನು ತಡೆಯಲು ಬಂದ ಹಕೀಂ ತನ್ನ ಪತ್ನಿಯ ತಂದೆ ಮೊಹಮ್ಮದ್ (73 ವ) ಅವರ ಬಲ ಕೈಗೆ ಇರಿದು ಗಾಯ ಉಂಟು ಮಾಡಿದ್ದ. ಅಲ್ಲದೆ ಪತ್ನಿ ಮತ್ತು ಮಾವನಿಗೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಎಂದು ಹಕೀಂ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ಕಲಂ 85,118 (1),118(2),351(2) ರಡಿ ಪ್ರಕರಣ ದಾಖಲಾಗಿತ್ತು.

ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕ ಸುಧಾಕರ್ ಅವರು ಭಾಗಶಃ ತನಿಖೆ ಮಾಡಿದ ನಂತರ ಉಪನಿರೀಕ್ಷಕ ಅವಿನಾಶ್ ಹೆಚ್. ಅವರು ಸಂಪೂರ್ಣ ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಆರೋಪಿ ಹಕೀಂ ಮೇಲಿನ ಆರೋಪ ಸಾಬೀತಾದ ಹಿನ್ನಲೆಯಲ್ಲಿ 85 ಬಿ.ಎನ್.ಎಸ್. ಆಡಿಯ ಅಪರಾಧಕ್ಕಾಗಿ ಆತನಿಗೆ ಒಂದು ವರ್ಷ ಸಾದಾ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂ. ದಂಡ ವಿಧಿಸಲಾಗಿದ್ದು ಕಲಂ118(1) ರ ಅಪರಾಧಕ್ಕಾಗಿ 1 ವರ್ಷ ಸಾದಾ ಶಿಕ್ಷೆಮತ್ತು 10 ಸಾವಿರ ರೂ. ದಂಡ, 118(2)ರ ಅಪರಾಧಕ್ಕಾಗಿ 2 ವರ್ಷ ಶಿಕ್ಷೆ, 10 ಸಾವಿರ ರೂ ದಂಡ. ತಪ್ಪಿದ್ದಲ್ಲಿ 1 ವರ್ಷ ಜೈಲು ಶಿಕ್ಷೆ, 351 (2)ರ ಅಪರಾಧಕ್ಕಾಗಿ 1 ವರ್ಷ ಸಾದಾ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಲಾಗಿದೆ.

ಒಟ್ಟು 35 ಸಾವಿರ ರೂ ದಂಡದ ಪೈಕಿ 25 ಸಾವಿರ ರೂಪಾಯಿಯನ್ನು ಹಕೀಂ ತನ್ನ ಪತ್ನಿಗೆ ನೀಡಬೇಕು ಮತ್ತು ಉಳಿದ 10 ಸಾವಿರ ರೂ ದಂಡವನ್ನು ಹಕೀಂ ತನ್ನ ಪತ್ನಿಯ ತಂದೆಗೆ ನೀಡಬೇಕೆಂದು ಆದೇಶ ಮಾಡಲಾಗಿದೆ.

ಹೊಸಬಿ.ಎನ್.ಎಸ್.ಕಾಯಿದೆ 2024ರ ಜುಲೈ 1ರಂದು ಜಾರಿಗೆ ಬಂದ ನಂತರ ಹೊಸ ಕಾಯಿದೆಯಡಿ ಶಿಕ್ಷೆಗೆ ಒಳಪಟ್ಟ ಉಭಯ ಜಿಲ್ಲೆಗಳಲ್ಲಿ ಪ್ರಥಮ ಪ್ರಕರಣ ಇದಾಗಿದೆ. ಆರೋಪಿ ವಿರುದ್ಧ ದೋಷಾರೋಪಣೆ ದಾಖಲೆಯಾದ ಕೇವಲ 26 ದಿನಗಳಲ್ಲಿ ಸಾಕ್ಷಿ ವಿಚಾರಣೆ ಮುಗಿಸಿ ಅಂತಿಮ ತೀರ್ಪು ನೀಡಲಾಗಿದೆ.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ಮನು ಬಿ.ಕೆ. ಅವರು ಶಿಕ್ಷೆ ಘೋಷಿಸಿದ್ದಾರೆ. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here