ಹಲವು ಅನುಮಾನಗಳಿಗೆ ಕಾರಣವಾದ ಸಾವು..!
ಪುತ್ತೂರು: ಸುಮಾರು 1.50 ಲಕ್ಷ ರೂ. ಹಿಡಿದುಕೊಂಡು ಪೇಟೆಗೆ ಬಂದಿದ್ದ ಪಡ್ಡಾಯೂರು ನಿವಾಸಿ, ವಿವೇಕಾನಂದ ಕಾಲೇಜಿನ ನಿವೃತ್ತ ಸಿಬ್ಬಂದಿ ನಂದಕುಮಾರ್ (68ವ.) ಅವರ ಶವ ಪುತ್ತೂರು ಸಾಮೆತ್ತಡ್ಕ ಮತ್ತು ರೋಟರಿಪುರ ನಡುವಿನ ತೋಡಿನಲ್ಲಿ ಡಿ.6ರಂದು ಬೆಳಗ್ಗೆ ಪತ್ತೆಯಾಗಿದೆ. ಇವರು ಚರಂಡಿಗೆ ಬಿದ್ದು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಾಗಿದೆ. ಆದರೆ ಅವರಲ್ಲಿದ್ದ ಲಕ್ಷಾಂತರ ರೂಪಾಯಿ ಎಲ್ಲಿ ಹೋಗಿದೆ. ಹಣಕ್ಕಾಗಿ ಈ ಕೊಲೆ ನಡೆದಿರಬಹುದೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ.
ನಂದಕುಮಾರ್ ಅವರ ಮೃತದೇಹ ರೋಟರಿಪುರ ಮತ್ತು ಸಾಮೆತ್ತಡ್ಕ ನಡುವೆ ತೋಡಿನಲ್ಲಿ ಅಂಗಾತ ಮಲಗಿದ್ದ ಹಾಗೂ ಮೈಮೇಲೆ ಬಟ್ಟೆ ಇಲ್ಲದೇ ಕೇವಲ ಒಳ ಉಡುಪಿನಲ್ಲಿ ಪತ್ತೆಯಾಗಿದೆ. ನಂದಕುಮಾರ್ ಅವರು ಡಿ.5ರಂದು ಮನೆಯಿಂದ ಪುತ್ತೂರು ಪೇಟೆಗೆ ಬಂದವರು ಮಯೂರ ಇನ್‌ಲ್ಯಾಂಡ್ ಬಳಿ ಮುಖ್ಯರಸ್ತೆ ಬದಿಯಲ್ಲಿ ತಲೆಗೆ ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡು ಬೊಳುವಾರು ಉರ್ಲಾಂಡಿ ರಸ್ತೆಗೆ ಬರುತ್ತಿರುವುದು ವಿಜಯ ಸುಪಾರಿ ಸಂಸ್ಥೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅಲ್ಲಿಂದ ಮುಂದೆ ಸಣ್ಣ ಸೇತುವೆ ದಾಟಿ ಹೋದವರು ಕಾಲು ಜಾರಿ ಪಕ್ಕದ ಚರಂಡಿಗೆ ಬಿದ್ದಿರುವ ದೃಶ್ಯ ಪಕ್ಕದ ಭಾರತ್ ಬ್ಯಾಂಕ್‌ನ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚರಂಡಿಗೆ ಬಿದ್ದ ಅವರು ಮೇಲೆ ಬಂದಿಲ್ಲ. ಈ ಘಟನೆಯು ಸಂಜೆ 4.20ರ ವೇಳೆ ನಡೆದಿದ್ದು, ಅದೇ ಸಮಯಕ್ಕೆ ಜೋರಾಗಿ ಮಳೆಯೂ ಬಂದಿದೆ. ಮಳೆ ನೀರಿನ ರಭಸಕ್ಕೆ ಅವರು ನೀರಿನಲ್ಲಿ ಕೊಚ್ಚಿಕೊಂಡು ರಾಜಕಾಲುವೆಗೆ ಸಂಪರ್ಕಗೊಂಡು ತೋಡಿನ ನೀರಿನಲ್ಲಿ ಕೊಚ್ಚಿ ಹೋಗಿರಬಹುದೆಂದು ಅಂದಾಜಿಸಲಾಗಿದೆ. ಮೃತರ ಸಹೋದರ ನರೇಂದ್ರ ಅವರು ನೀಡಿದ ದೂರಿನಂತೆ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ಪತ್ನಿ ಜಯಂತಿ, ಪುತ್ರಿಯರಾದ ಅರ್ಪಿತಾ, ಅಖಿಲಾ, ಅಳಿಯಂದಿರಾದ ವಿನೋದ್‌ರಾಜ್, ಮಹೇಶ್, ಮೂವರು ಸಹೋದರಿಯರು, ಇಬ್ಬರು ಸಹೋದರರನ್ನು ಅಗಲಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆ ಬಳಿಕ ಸಂಜೆ ಮನೆಯಲ್ಲಿ ಅಂತಿಮ ಕ್ರಿಯೆ ನಡೆಸಿದ ಬಳಿಕ ಚಿಕ್ಕಪುತ್ತೂರು ಹಿಂದು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಡಿ.5ರಂದು ನಾಪತ್ತೆ !:
ನಂದಕುಮಾರ್ ಅವರು ತನ್ನ ಮಗಳಿಗೆ ಹಣ ನೀಡಲೆಂದು ಬೊಳುವಾರು ಉರ್ಲಾಂಡಿ ರಸ್ತೆಯ ಸುಶ್ರುತ ಆಸ್ಪತ್ರೆಯ ಬಳಿ ಇರುವ ತನ್ನ ಅಕ್ಕ ನೀರಜಾ ಅವರ ಮನೆಗೆ ಹೋಗಬೇಕಾಗಿತ್ತು. ಆದರೆ ಸಂಜೆಯಾದರೂ ಅಕ್ಕನ ಮನೆಗೆ ಬಾರದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಈ ನಡುವೆ ಅವರ ಮೊಬೈಲ್ ಪೋನ್ ಕೂಡಾ ಸ್ವಿಚ್ ಆಫ್ ಆಗಿತ್ತು. ಮನೆ ಮಂದಿ ರಾತ್ರಿ ಪೊಲೀಸರಿಗೆ ಮೌಖಿಕವಾಗಿ ನಂದಕುಮಾರ್ ಅವರು ನಾಪತ್ತೆಯಾಗಿರುವ ವಿಚಾರ ತಿಳಿಸಿದ್ದರು.
ಹಣದ ಕಟ್ಟಿನ ಮಾಹಿತಿ ಬಿಚ್ಚಿಟ್ಟಿದ್ದರು !:
ಡಿ.5ರಂದು ಮಧ್ಯಾಹ್ನ ಮನೆಯಿಂದ ಹೊರಟ ಅವರು ನೇರವಾಗಿ ಶ್ರೀಧರ್ ಭಟ್ ಅಂಗಡಿಯ ಬಳಿ ಇಳಿದು ಅಲ್ಲಿಂದ ಪಕ್ಕದ ವೈನ್‌ಶಾಪ್‌ಗೆ ಹೋಗಿದ್ದಾರೆ. ಅಲ್ಲಿ ತನ್ನಲ್ಲಿರುವ ಹಣದ ವಿಚಾರವನ್ನು ಇತರರೊಂದಿಗೆ ಮಾತನಾಡಿದ್ದಾರೆಂದು ತಿಳಿದು ಬಂದಿದೆ. ಅಲ್ಲಿಂದ ಅವರು ಮುಖ್ಯರಸ್ತೆಯಾಗಿ ನಡೆದುಕೊಂಡು ಬಂದಿದ್ದರು.
ಸ್ವಸಹಾಯ ಸಂಘದಿಂದ ಮಾಡಿದ ಸಾಲ
ನಂದಕುಮಾರ್ ಅವರ ಪತ್ನಿ ಜಯಂತಿ ಅವರು ನವೋದಯ ಸ್ವಸಹಾಯ ಸಂಘದ ಸದಸ್ಯರಾಗಿದ್ದು ಅದರ ಮೂಲಕ ರೂ.1.50ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ. ಹಣವನ್ನು ಬೆಳಿಗ್ಗೆ ಪುತ್ತೂರು ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಪಡೆದು ಆಟೋ ರಿಕ್ಷಾದಲ್ಲಿ ಮನೆಗೆ ಹೋಗಿದ್ದ ನಂದಕುಮಾರ್ ಮತ್ತೆ ಆ ನಗದನ್ನು ಅಕ್ಕನ ಮನೆಗೆ ಹೋಗಿ ನೀಡಲೆಂದು ಹೊರಟಿದ್ದರು. ಈ ನಡುವೆ ಅವರ ಪತ್ನಿ ಜಯಂತಿ ಅವರು ನಾನು ಹೋಗಿ ಕೊಡುತ್ತೇನೆ ಎಂದಾಗ ನಂದಕುಮಾರ್ ಅವರು ನನ್ನ ಮೇಲೆ ಧೈರ್ಯ ಇಲ್ಲವೇ ಎಂದು ಕೇಳಿದ್ದಾರಂತೆ. ಹಾಗೆ ನಗದು ತುಂಬಿದ ಚೀಲದೊಂದಿಗೆ ಅವರು ಪೇಟೆಗೆ ಬಂದವರು ಶವವಾಗಿ ಪತ್ತೆಯಾದರು. ಆದರೆ ನಗದು ನಾಪತ್ತೆಯಾಗಿದೆ.
ಹಲವು ಅನುಮಾನಗಳಿಗೆ ಕಾರಣವಾದ ಸಾವು..!
ನಂದಕುಮಾರ್ ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರು ಮನೆಯಿಂದ ಬರುವಾಗ 1.50 ಲಕ್ಷ ರೂ.ತಂದಿದ್ದರು. ಆದರೆ ಅವರ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಹಣ ಪತ್ತೆಯಾಗಿಲ್ಲ. ಮೃತದೇಹದ ಬಳಿ ಬ್ಯಾಗೊಂದು ಪತ್ತೆಯಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಪೊಲೀಸರು ಇದನ್ನು ಅಲ್ಲಗಳೆದಿದ್ದಾರೆ. ನಂದಕುಮಾರ್ ಅವರು ಚರಂಡಿಗೆ ಬೀಳುವಾಗ ಕಟ್ಟೊಂದು ರಸ್ತೆ ಬದಿ ಬಿದ್ದಿರುವುದು ಸಿಸಿ ಕ್ಯಾಮರಾದಲ್ಲಿ ಗೋಚರಿಸಿದೆ ಎಂದೂ ಹೇಳಲಾಗುತ್ತಿದೆ. ಆದರೆ ಯಾವುದಕ್ಕೂ ಆಧಾರವಿಲ್ಲ. ಚರಂಡಿಗೆ ಬಿದ್ದಿರುವುದು ಸತ್ಯ. ಆದರೆ ಮತ್ತೇನಾಯಿತು ಎಂಬುದೇ ಯಕ್ಷ ಪ್ರಶ್ನೆ. ಸಣ್ಣ ಚರಂಡಿಗೆ ಬಿದ್ದು ಮಳೆ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಲು ಸಾಧ್ಯವೇ. ಒಂದು ವೇಳೆ ಅವರು ರಾಜಕಾಲುವೆಗೂ ಬಿದ್ದರೂ ಅಲ್ಲಿಂದ ಮುಂದೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಮತ್ತು ಸಾಲ್ಮರ ರೈಲ್ವೇ ಅಂಡರ್ ಪಾಸ್ ಬಳಿಯ ರಿಂಗ್ ಅಳವಡಿಸಿದ ಸೇತುವೆಯಲ್ಲಾದರೂ ಸಿಕ್ಕಿ ಹಾಕಿಕೊಳ್ಳಬೇಕಾಗಿತ್ತು. ಅದೂ ಅಲ್ಲದೆ ಅಷ್ಟೊಂದು ರಭಸವಾಗಿ ನೀರು ಹರಿಯುವಷ್ಟು ಮಳೆಯೂ ಬಂದಿದೆಯೇ ಎಂಬುದು ಕೂಡಾ ನೋಡಬೇಕಾಗಿದೆ. ಇನ್ನೊಂದು ಕಡೆಯಿಂದ ಅವರು ಮನೆಯಿಂದ ಬರುವಾಗ ವೇಸ್ಟಿ ಮತ್ತು ಟಿ.ಶರ್ಟ್ ಧರಿಸಿ ಬಂದಿದ್ದರು. ಆದರೆ ಮಳೆ ನೀರಿನ ಸೆಳೆತಕ್ಕೆ ವೇಸ್ಟಿ ಕಿತ್ತು ಹೋಗಿರಬಹುದು. ಟಿ ಶರ್ಟ್ ಕಿತ್ತು ಹೋಗಲು ಸಾಧ್ಯವಿಲ್ಲ. ಅವರ ಮೃತ ದೇಹದಲ್ಲಿ ಅಂಡರ್‌ವೇರ್ ಮಾತ್ರ ಇದ್ದು ಬೇರೆ ಯಾವುದೇ ಬಟ್ಟೆ ಇರಲಿಲ್ಲ. ಈ ಎಲ್ಲಾ ಬೆಳವಣಿಗೆಯಲ್ಲಿ ನಂದಕುಮಾರ್ ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸಮಗ್ರ ತನಿಖೆ ನಡೆಸಲು ಮನವಿ ಸಲ್ಲಿಸುವ ಸಿದ್ಧತೆಯೂ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.