ಪುತ್ತೂರಿಗೆ ಆರ್‌ಟಿಒ ಸೆನ್ಸಾರ್ ಟ್ರ್ಯಾಕಿಂಗ್ ಸಿಸ್ಟಮ್, ಆಯುಷ್ ಆಸ್ಪತ್ರೆಯ ಜಾಗದ ಪಹಣಿ ಹಸ್ತಾಂತರ -5 ವರ್ಷದ ಬೇಡಿಕೆ ಈಡೇರಿಸಿದ ಶಾಸಕ ಅಶೋಕ್ ಕುಮಾರ್ ರೈ

0

ಆಯುಷ್ ಆಸ್ಪತ್ರೆಗೆ 1.27 ಎಕ್ರೆ, ಸೆನ್ಸಾರ್ ಟ್ರ್ಯಾಕಿಂಗ್ ಸಿಸ್ಟಮ್‌ಗೆ 5.40 ಎಕ್ರೆ ಜಾಗ – ಅಶೋಕ್ ಕುಮಾರ್ ರೈ

ಪುತ್ತೂರು: ಸುಮಾರು ನಾಲ್ಕೈದು ವರ್ಷಗಳಿಂದ ಪುತ್ತೂರು ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಪುತ್ತೂರಿನಲ್ಲಿ ವಾಹನ ಚಾಲನಾ ಪರೀಕ್ಷಾರ್ಥಕ್ಕೆ ಸೆನ್ಸಾರ್ ಅಟೋಮೆಟಿಕ್ ಟ್ರ್ಯಾಕಿಂಗ್ ಸಿಸ್ಟಮ್ ಮತ್ತು ಆಯುಷ್ ಇಲಾಖೆಯಿಂದ ಆಸ್ಪತ್ರೆಗೆ ಇಟ್ಟಿರುವ ಬೇಡಿಕೆ ಇದೀಗ ಈಡೇರಿದೆ. ಡಿ.7ರಂದು ಶಾಸಕರ ಕಚೇರಿಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಎರಡು ಇಲಾಖೆಯ ಅಧಿಕಾರಿಗಳಿಗೆ ತಹಸೀಲ್ದಾರ್ ಉಪಸ್ಥಿತಿಯಲ್ಲಿ ಜಾಗದ ಪಹಣಿ ಪತ್ರವನ್ನು ಹಸ್ತಾಂತರಿಸುವ ಮೂಲಕ ಕಳೆದ ನಾಲ್ಕೈದು ವರ್ಷಗಳ ಬೇಡಿಕೆಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಈಡೇರಿಸಿದ್ದಾರೆ.


ಆಯುಷ್ ಆಸ್ಪತ್ರೆಗೆ ಕಬಕದಲ್ಲಿ 1.27 ಎಕ್ರೆ ಜಾಗ- ರೂ. 8ಕೋಟಿ ಅನುದಾನ:
ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸಗಳು ಆಗುತ್ತಿದೆ. 5 ವರ್ಷದ ಹಿಂದೆ ಆಯುಷ್ ಇಲಾಖೆಯವರು ಆಸ್ಪತ್ರೆಗಾಗಿ ಸುಮಾರು 1.50 ಎಕ್ರೆ ಜಾಗಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಶೇ.60 -40ರಂತೆ ಸುಮಾರು ರೂ.15 ಕೋಟಿ ಅನುದಾನ ಬರುತ್ತದೆ. ಈ ಅನುದಾನ ಬರಬೇಕಾದರೆ ಅದಕ್ಕೆ ಮೊದಲು ಜಾಗ ಆಯುಷ್ ಇಲಾಖೆಯ ಹೆಸರಿನಲ್ಲಿ ಆಗಬೇಕು ಎಂದು ನನ್ನ ಗಮನಕ್ಕೆ ತಂದಿದ್ದರು. ಹಾಗಾಗಿ ಅದಕ್ಕಾಗಿ ನಮ್ಮ ಮೊದಲ ಪ್ರಯತ್ನವಾಗಿ ಕಬಕದಲ್ಲಿ 1.27 ಎಕ್ರೆ ಜಾಗವನ್ನು ಈಗಾಗಲೇ ಗುರುತಿಸಿ ಅದನ್ನು ಆಯುಷ್ ಇಲಾಖೆ ಹೆಸರಿನಲ್ಲಿ ಪಹಣಿಯನ್ನೂ ಮಾಡಲಾಗಿದೆ. ಮುಂದೆ ಸುಮಾರು 30 ಬೆಡ್‌ನ ಆಯುಷ್ ಆಯುರ್ವೇದಿಕ್ ಆಸ್ಪತ್ರೆ ಬರುತ್ತದೆ. ಅದರಲ್ಲಿ ಸುಮಾರು 75 ಮಂದಿಗೆ ಉದ್ಯೋಗ ಸಿಗುತ್ತದೆ. ಸರಕಾರದ ಮಟ್ಟದಿಂದ ಮತ್ತು ಹೊರಗುತ್ತಿಗೆ ಆಧಾರದಲ್ಲೂ 50 ಮಂದಿ ಸಿಬ್ಬಂದಿಗಳ ನೇಮಕವಾಗುತ್ತದೆ. ಈಗಾಗಲೇ ಸರಕಾರದ ಆರೋಗ್ಯ ವಿಭಾಗದ ಕಾರ್ಯದರ್ಶಿ ಹರ್ಷಾಗುಪ್ತಾ ಅವರನ್ನು ಮೊನ್ನೆ ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದೇನೆ. ಅವರು ತಕ್ಷಣ ಟೆಕ್‌ಅಪ್ ಮಾಡುವ ಭರವಸೆ ನೀಡಿದ್ದಾರೆ. ಮುಂದೆ ರೂ.15 ಕೋಟಿ ಅನುದಾನ ಬರಲಿದೆ. ಆಯುಷ್ ಆಸ್ಪತ್ರೆಯು ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಡೆ ಆಗಲಿದೆ. ಉಳ್ಳಾಲದಲ್ಲಿ ಈಗಾಗಲೇ ಎಲ್ಲಾ ಸಿದ್ದತೆ ನಡೆಯುತ್ತಿದೆ ಎದು ಹೇಳಿದ ಅವರು ಪುತ್ತೂರಿಗೆ ಆಯುರ್ವೇದ ಮೆಡಿಕಲ್ ಕಾಲೇಜು ಆಗಬೇಕಾದರೆ ಮೊದಲ ಹಂತದಲ್ಲಿ ಆಸ್ಪತ್ರೆಯು ಆಗಬೇಕಾಗಿದೆ. ಇದಕ್ಕೆ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ 40 ಎಕ್ರೆ ಜಾಗದಲ್ಲಿ ಮೆಡಿಕಲ್ ಕಾಲೇಜಿಗೆ ಜಾಗ ಇದೆ. ಅದರಲ್ಲಿ 20 ಎಕ್ರೆಯ ಜಾಗದಲ್ಲಿ ಆಯುರ್ವೇದ ಮೆಡಿಕಲ್ ಕಾಲೇಜ್ ಮಾಡುವ ಯೋಜನೆ ಇದೆ ಎಂದರು.


ಮುಂಡೂರಿನಲ್ಲಿ ಆರ್‌ಟಿಒ ಸೆನ್ಸಾರ್ ಟ್ರ್ಯಾಕಿಂಗ್ ಸಿಸ್ಟಮ್‌ಗೆ 5.40 ಎಕ್ರೆ ಜಾಗ:
ಪುತ್ತೂರು ಪ್ರಾದೇಶಿಕ ಕಚೇರಿಯಲ್ಲಿ ಮಾನವ ಶ್ರಮದ ಮೂಲಕ ವಾಹನ ಚಾಲನೆ ಪರೀಕ್ಷಾರ್ಥ ನಡೆಯುತ್ತಿದೆ. ಮುಂದೆ ಯಾವುದೇ ವಾಹನ ಚಾಲನ ಪರವಾಣಿಗೆಯನ್ನು ವಿತರಿಸುವಾಗ ಅದು ಯಾಂತ್ರಿಕೃತ ರೀತಿಯಲ್ಲಿ ನಡೆಯುತ್ತದೆ. ಈ ನಿಟ್ಟಿನಲ್ಲಿ ವಾಹನ ಚಾಲನೆ ಪರೀಕ್ಷಾರ್ಥಕ್ಕೆ ಆರ್‌ಟಿಒ ಸೆನ್ಸಾರ್ ಟ್ರ್ಯಾಕಿಂಗ್ ಸಿಸ್ಟಮ್ ಮೂಲಕ ನಡೆಸುವ ಕಾರ್ಯ ಆರಂಭವಾಗುತ್ತಿದೆ. ಈಗಾಗಲೇ ಉಳ್ಳಾಲದಲ್ಲಿ ಸೆನ್ಸಾರ್ ಟ್ರ್ಯಾಕಿಂಗ್ ಸಿಸ್ಟಮ್ ಆರಂಭವಾಗಲಿದೆ. ಉಳ್ಳಾಲದಲ್ಲಿ ಸಿಸ್ಟಮ್ ಆರಂಭವಾದರೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಾಹನ ಚಾಲನೆಗೆ ಪರವಾನಿಗೆ ಅನುಮತಿಗೆ ಪರೀಕ್ಷೆ ನೀಡಲು ಅಲ್ಲಿಗೆ ಹೋಗಬೇಕಾಗುತ್ತದೆ. ಇದನ್ನು ಮನಗಂಡು ಪುತ್ತೂರಿನಲ್ಲೇ ಜಾಗ ಗುರುತಿಸಿ ಪಹಣಿಪತ್ರವನ್ನು ಆರ್‌ಟಿಒ ಇಲಾಖೆಯ ಹೆಸರಿನಲ್ಲಿ ಮಾಡಲಾಗಿದೆ. ಪುತ್ತೂರಿನ ಮುಂಡೂರಿನಲ್ಲಿ ಸುಮಾರು 5.40 ಎಕ್ರೆ ಜಾಗ ಪಹಣಿಯಾಗಿದೆ. ಅಲ್ಲಿ ಸುಮಾರು ರೂ.8 ಕೋಟಿ ವೆಚ್ಚದಲ್ಲಿ ಮುಂದಿನ ದಿನ ಸೆನ್ಸಾರ್ ಟ್ರ್ಯಾಕಿಂಗ್ ವ್ಯವಸ್ಥೆ ಬರಲಿದೆ. ಪುತ್ತೂರು, ಸುಳ್ಯ, ಕಡಬ ಮೂರು ತಾಲೂಕಿನವರಿಗೆ ಇದರ ಪ್ರಯೋಜನ ಆಗಲಿದೆ ಎಂದು ಶಾಸಕರು ಹೇಳಿದರು.


ಎಲ್ಲವೂ ಕಾನೂನು ಬದ್ಧವಾಗಿ ಮಾಡಿದ್ದೇವೆ:
ತಹಸೀಲ್ದಾರ್ ಪುರಂದರ ಅವರು ಮಾತನಾಡಿ, ಶಾಸಕರ ಒತ್ತಡದಲ್ಲಿ ಜಾಗ ಹುಡುಕಿದ್ದೇವೆ. ಎಲ್ಲವನ್ನು ಕ್ಲೀಯರ್ ಮಾಡಿಕೊಂಡು ಕಾನುನು ಬದ್ಧವಾಗಿ ಜಾಗವನ್ನು ಎರಡು ಇಲಾಖೆಯ ಹೆಸರಿಗೆ ಮಾಡಿದ್ದೇವೆ. ಜೊತೆಗೆ ಮಹಿಳಾ ಪೊಲೀಸ್ ಠಾಣೆಗೂ 9 ಸೆಂಟ್ಸ್ ಜಾಗ ಕೊಡುವ ವ್ಯವಸ್ಥೆಯನ್ನೂ ಮಾಡಿದ್ದೇವೆ. 20 ಎಕ್ರೆ ಜಾಗದಲ್ಲೂ ಕ್ರೀಡಾಂಗಣಕ್ಕೂ ಜಾಗದ ಪತ್ರ ವ್ಯವಹಾರ ನಡೆಯುತ್ತಿದೆ. ಸರಕಾರದ ಜಮೀನನ್ನು ಗುರುತಿಸಿ ಸರಕಾರಕ್ಕೆ ಕೊಡುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಇವೆಲ್ಲ ಅನೇಕ ಅಭಿವೃದ್ದಿ ಕಾರ್ಯಗಳಿಗೆ ಪೂರಕ ಕಾರ್ಯಕ್ರಮ. ಬಡವರ ಕೆಲಸ ಆಗಬೇಕೆಂದು ಶಾಸಕರು ಸೂಚನೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಅವರಿಗೆ ನಾವು ಸಾತ್ ನೀಡುತ್ತಿದ್ದೇವೆ ಎಂದರು.


ಶಾಸಕರು ಇಲ್ಲಾಂದ್ರೆ ಈ ಜಾಗ ಸಿಗುತ್ತಿರಲಿಲ್ಲ:
ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ್ ಅಜಿಲ ಅವರು ಮಾತನಾಡಿ ಉಳ್ಳಾಲದ ಮುಡಿಪಿನಲ್ಲಿ ಸೆನ್ಸಾರ್ ಬೇಸೆಡ್ ಅಟೋಮೆಟಿಕ್ ಟೆಸ್ಟಿಂಗ್ ಟ್ರ್ಯಾಕ್ ಆಗಿದೆ. ಅದು ಜಿಲ್ಲೆಯಲ್ಲೇ ಒಂದೇ ಆಗಿರುವುದರಿಂದ ಮುಂದಿನ ದಿನ ಜಿಲ್ಲೆಯ ಎಲ್ಲಾ ಕಡೆಯಿಂದ ವಾಹನ ಚಾಲನಾ ಪರೀಕ್ಷೆಗೆ ಅಲ್ಲಿಗೆ ಹೋಗುವ ಪರಿಸ್ಥಿತಿ ಬರಲಿದೆ. ಈ ಸಂದರ್ಭ ನಾವು ಪುತ್ತೂರು ಶಾಸಕರಿಗೆ ಪುತ್ತೂರಿನಲ್ಲೂ ಸೆನ್ಸಾರ್ ಟ್ರ್ಯಾಕಿಂಗ್ ಸಿಸ್ಟಮ್ ಮಾಡಿದರೆ ಪುತ್ತೂರಿನವರು ಉಳ್ಳಾಲಕ್ಕೆ ಹೋಗುವುದು ತಪ್ಪುತ್ತದೆ ಎಂದು ಮನವರಿಕೆ ಮಾಡಿದ್ದೆವು. ಜಾಗ ಇದ್ದರೆ ನಮ್ಮ ಇಲಾಖೆಯಿಂದ ಅನುದಾನ ಸಿಗಬಹುದು ಎಂದು ತಿಳಿಸಿದ್ದೆವು. ತಕ್ಷಣ ಶಾಸಕರು ಇದಕ್ಕೆ ಸ್ಪಂಧಿಸಿದ್ದಾರೆ. ಶಾಸಕರು ಇಲ್ಲಾಂದ್ರೆ ಈ ಜಾಗ ಸಿಗುತ್ತಿರಲಿಲ್ಲ. ಸದ್ಯ ಜಾಗದಲ್ಲಿ ಅಟೋ ಮೆಟಿಕ್ ಸೆನ್ಸಾರ್ ಟೆಸ್ಟಿಂಗ್ ಆಗುತ್ತದೆ. ಜಾಗ ಉಳಿದರೆ ಅಟೋ ಮೆಟಿಕ್ ಸೆನ್ಸಾರ್ ಪಿಟ್‌ನೆಸ್ ಸೆಂಟರ್ ಕೂಡಾ ಅಲ್ಲೇ ಮಾಡಬಹುದು ಎಂದ ಅವರು ಮುಂದೆ ಎಲ್ಲವು ಆರ್ಟಿಪೀಷಿಯಲ್ ಇಂಟಲಿಜೆನ್ಸಿ ಮೂಲಕವೇ ಕೆಲಸಗಳು ನಡೆಯುತ್ತವೆ ಎಂದ ಅವರು ನಾಲ್ಕು ವರ್ಷದ ಹಿಂದೊಮ್ಮೆ ಈ ವ್ಯವಸ್ಥೆಗೆ ಸರಕಾರಕ್ಕೆ ಪ್ರಸ್ತಾವನೆ ಹೋಗಿತ್ತು. ಆದರೆ ಜಾಗ ಇಲ್ಲವೆಂದು ಉತ್ತರವೂ ಬಂದಿತ್ತು. ಆದರೆ ಇದೀಗ ಜಾಗ ಲಭ್ಯವಾಗಿದೆ ಎಂದರು.


ಕಡಿಮೆ ಅವಧಿಯಲ್ಲಿ ಜಾಗ ಲಭ್ಯವಾಯಿತು:
ಬೆಳ್ತಂಗಡಿ ಆಯುಷ್ ಇಲಾಖೆಯ ಆರೋಗ್ಯ ವೈದ್ಯಾಧಿಕಾರಿ ಡಾ. ಕೃಷ್ಣಪ್ರಸಾದ್ ಅವರು ಮಾತನಾಡಿ ಪುತ್ತೂರು ತಾಲೂಕಿನಲ್ಲಿ ಯಾವುದೇ ಆಯುಷ್ ಆಸ್ಪತ್ರೆಗಳು ಇಲ್ಲ ಎಂದು ಜಿಲ್ಲಾ ಆಯುಷ್ ಅಧಿಕಾರಿಯವರು ಪುತ್ತೂರು ಶಾಸಕರ ಗಮನಕ್ಕೆ ತಂದಿದ್ದರು. ಆದರೆ ಎರಡೇ ತಿಂಗಳಲ್ಲಿ ನಮಗೆ ಶಾಸಕರು ಕೊಡಿಸುವ ಕೆಲಸ ಮಾಡಿದ್ದಾರೆ. ಈ ಜಾಗದಲ್ಲಿ 30 ಬೆಡ್‌ಗಳ ಸಂಪೂರ್ಣ ಸುಸಜ್ಜಿತ ಆಸ್ಪತ್ರೆಯು ಆದಷ್ಟು ಒಂದು ವರ್ಷದ ಒಳಗೆ ಆಗುವಂತೆ ನಾವು ಪ್ರಯತ್ನ ಮಾಡುತ್ತೇವೆ. ಕಡಿಮೆ ಅವಧಿಯಲ್ಲಿ ಜಾಗ ಸಿಕ್ಕಿದೆ. ನಾವು ಕೂಡಾ ಆದಷ್ಟು ಬೇಗ ಆಸ್ಪತ್ರೆ ಕಟ್ಟಣ ನಿರ್ಮಾಣಕ್ಕೆ ಸಿದ್ಧತೆ ಸುಮಾರು ರೂ.15 ಕೋಟಿ ವೆಚ್ಚದಲ್ಲಿ ಆಗಲಿದೆ. ಪಂಚಕರ್ಮ ಚಿಕಿತ್ಸೆ, ಯೋಗ ನ್ಯಾಚೂರೋಪತಿ, ಇನ್ನಾನಿಯ ಚಿಕಿತ್ಸೆ, ಹೋಮಿಯೋಪತಿ ಸಹಿತ ಈಗಿನ ಇಂಡಿಯನ್ ಪ್ರೊಟೊಕಾಲ್ ಪಾರ್ ಹಾಸ್ಪಿಟಲ್ ಸ್ಟಾಂಡರ್ಡ್‌ನ ಮಾದರಿಯಲ್ಲಿ ಆಸ್ಪತ್ರೆಯಲ್ಲಿ ಸೌಲಭ್ಯ ಸಿಗಲಿದೆ. ಇದಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯವನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಜಂಟಿ ಯೋಜನೆಯಾಗಿದೆ ಎಂದರು. ಈ ಸಂದರ್ಭ ಪುತ್ತೂರು ಪ್ರಾದೇಶಿಕ ಸಾರಿಗೆ ಇಲಾಖೆಯ ಸೂಪರಿಡೆಂಟೆಂಡ್ ದೀಪಕ್, ಪುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ, ರೈ ಎಸೋಸಿಯೇಟ್ಸ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here