ಪುತ್ತೂರು:ಬಲ್ನಾಡು ಗ್ರಾಮದ ಬುಳೇರಿಕಟ್ಟಿ ಸಾಜ ರಸ್ತೆಯ ಮಾಪಲೆಕೊಚ್ಚಿ ಎಂಬಲ್ಲಿ ನಡೆದ ಮೊಬೈಲ್ ಟವರ್ ಬ್ಯಾಟರಿ ಕಳ್ಳತನ ಪ್ರಕರಣದ ಆರೋಪಿಯನ್ನು ತಿಂಗಳೊಳಗೆ ಬಂಧಿಸುವಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಸಾಜ ರೋಡ್ ಮಾಪಲೆಕೊಚ್ಚಿ ಎಂಬಲ್ಲಿ ಮೊಬೈಲ್ ಟವರ್‌ನಿಂದ ನ.19ಕ್ಕೆ ಬ್ಯಾಟರಿ ಕಳವಾಗಿತ್ತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರವಿ ಬಿ.ಎಸ್ ನೇತೃತ್ವದಲ್ಲಿ ತನಿಖಾ ತಂಡವು ವಿವಿಧ ಆಯಾಮಗಳಲ್ಲಿ ಹಾಗೂ ತಾಂತ್ರಿಕ ಮಾಹಿತಿಯನ್ನಾಧರಿಸಿ ತನಿಖೆ ನಡೆಸಿದಾಗ ಬಂಟ್ವಾಳ ತಾಲೂಕಿನ ಕಾವಳ ಮುಡೂರು ನಿವಾಸಿ ಹರೀಶ್ ನಾಯ್ಕ(30ವ) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಬ್ಯಾಟರಿಗಳನ್ನು ಕಳವು ಮಾಡಿದ ಬಗ್ಗೆ ತಪ್ಪೋಪ್ಪಿಕೊಂಡಿದ್ದ.
ಆರೋಪಿಯ ಹಿನ್ನೆಲೆಯನ್ನು ನೋಡಿದಾಗ ಆತ ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಬ್ಯಾಟರಿ ಸೆಲ್‌ಗಳ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಿ ರೂ.48 ಸಾವಿರ ಮೌಲ್ಯದ 24 ಬ್ಯಾಟರಿ ಸೆಲ್ ಗಳನ್ನು ಕಳವು ಮಾಡಲು ಬಳಸಿದ್ದ ರೂ.2.5 ಲಕ್ಷ ಮೌಲ್ಯದ ಕಾರು(ಕೆಎ-19:ಎಂಬಿ-2226) ಮತ್ತು 2 ಮೊಬೈಲ್ ಫೋನ್ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರ ಡಿ.ಎಸ್.ರವರ ನಿರ್ದೇಶನದಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಅರುಣ್ ನಾಗೇಗೌಡರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ರವಿ ಬಿ.ಎಸ್ ರವರ ನೇತೃತ್ವದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಎಸ್.ಐ ಜಂಬುರಾಜ್ ಬಿ ಮಹಾಜನ್, ಎಸ್.ಐ ಸುಷ್ಮಾ ಜಿ ಭಂಡಾರಿ, ಎಎಸ್‌ಐ ಮುರುಗೇಶ್ ಬಿ, ಹೆಡ್ ಕಾನ್ ಸ್ಟೇಬಲ್‌ಗಳಾದ ಪ್ರವೀಣ್ ಎನ್., ಹರೀಶ್ ಜಿ.ಎನ್, ಶರೀಫ್ ಸಾಬ್, ಕಾನ್ ಸ್ಟೇಬಲ್‌ಗಳಾದ ಚಂದ್ರಶೇಖರ ಶರಣಪ್ಪ ಪಾಟೀಲ್, ನಾಗೇಶ್ ಕೆ.ಸಿ, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ರವರ ತಂಡ ಆರೋಪಿಯ ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ್ದಾರೆ.