ಪುತ್ತೂರು: ಕಳೆದ 46 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಗಣೇಶ್ ಕಾಸರಗೋಡು ಅವರ ಕಿರೀಟಕ್ಕೆ ಮತ್ತೊಂದು ಪ್ರಶಸ್ತಿಯ ಗರಿ ಸೇರಿಕೊಂಡಿದೆ. ಬೆಂಗಳೂರಿನ ‘ದಿ ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಕರ್ನಾಟಕ ಸಂಸ್ಥೆ’ ಕೊಡಮಾಡುವ ‘ವಿಶ್ವದ ಹೆಮ್ಮೆಯ ಕನ್ನಡಿಗ’ ಪ್ರಶಸ್ತಿಯನ್ನು ಈ ಸಾರಿ ಗಣೇಶ್ ಕಾಸರಗೋಡು ಅವರಿಗೆ ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ವಿಧಾನ ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ನೀಡಿ ಗೌರವಿಸಿದರು.
ಮೂಲತಃ ಕಾಸರಗೋಡಿನವರಾಗಿರುವ ಗಣೇಶ್ ಕಾಸರಗೋಡು ಅವರು ವಿಜಯ ಕರ್ನಾಟಕ ಪತ್ರಿಕೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿದ್ದಾಗ ಬರೆದ ‘ಚದುರಿದ ಚಿತ್ರಗಳು’ ಪುಸ್ತಕ ರಾಜ್ಯ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿತ್ತು. ಇದಲ್ಲದೆ ಇವರು ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇವರ ಸಿನಿಮಾ ಪತ್ರಿಕಾ ಸೇವೆಯನ್ನು ಗುರುತಿಸಿ ನೂರಾರು ಪ್ರಶಸ್ತಿ ಪುರಸ್ಕಾರಗಳು ಲಭ್ಯವಾಗಿದೆ. ಈವರೆಗೆ ಸುಮಾರು 35 ಪುಸ್ತಕಗಳನ್ನು ಬರೆದಿರುವ ಗಣೇಶ್ ಕಾಸರಗೋಡು ಅವರ ಮೇರು ಕೃತಿ ‘ಶುಭಂ’ ಕನ್ನಡ ಚಿತ್ರರಂಗದ ಭಗವದ್ಗೀತೆ ಎಂದೇ ಪ್ರಸಿದ್ಧಿ ಪಡೆದಿದೆ. ಈಗಲೂ ರಾಜ್ಯದ ಹತ್ತಾರು ಪತ್ರಿಕೆಗಳಿಗೆ ಅಂಕಣ ಬರೆಯುತ್ತಿರುವ ಇವರು ಟಿ.ವಿ. ಕಾರ್ಯಕ್ರಮಗಳ ಮೂಲಕವೂ ಪ್ರಸಿದ್ಧರು.
ಕಾಸರಗೋಡಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿರುವ ಗಣೇಶ್ ಕಾಸರಗೋಡು ಅವರು ಆರಂಭದಲ್ಲಿ ಸರ್ಕಾರಿ ಹೈಸ್ಕೂಲೊಂದರಲ್ಲಿ ಕನ್ನಡ ಉಪಾಧ್ಯಾಯ ವೃತ್ತಿ ಮಾಡಿದವರು. ನಂತರದ ದಿನಗಳಲ್ಲಿ ಬೆಂಗಳೂರು ಸೇರಿಕೊಂಡ ಇವರು ಚಿತ್ರದೀಪ, ಚಿತ್ರತಾರ, ಅರಗಿಣಿ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಟೈಮ್ಸ್ ಆಫ್ ಕರ್ನಾಟಕ, ಕರ್ಮವೀರ, ಹಾಯ್ ಬೆಂಗಳೂರ್, ಆಂದೋಲನ, ರಾಯಚೂರು ವಾಣಿ, ಮಂಗಳ, ಚಿತ್ರ, ರೂಪತಾರ, ತರಂಗ ಮೊದಲಾದ ಪತ್ರಿಕೆಗಳಿಗಾಗಿ ದುಡಿದಿದ್ದಾರೆ. ಈ ನಡುವೆ ‘ಸುದ್ದಿ ಟಿವಿ’ಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ವೃತ್ತಿ ಬದುಕಿನಲ್ಲಿ ಇವರಿಗೆ ಸಿಕ್ಕ ಪ್ರಶಸ್ತಿಗಳದ್ದೇ ಒಂದು ದೊಡ್ಡ ಪಟ್ಟಿಯಿದೆ. ಕರ್ನಾಟಕ ರಾಜ್ಯ ಚಲನಚಿತ್ರ ಸಾಹಿತ್ಯ ಪ್ರಶಸ್ತಿ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ, ಮಂತ್ರಾಲಯದ ಪ್ರತಿಷ್ಠಿತ ವಿಜಯ ವಿಠ್ಠಲ ಪ್ರಶಸ್ತಿ, ಪತ್ರಕರ್ತರ ವೇದಿಕೆ ಪ್ರಶಸ್ತಿ, ವೈಯೆನ್ಕೆ ಸಾಹಿತ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ದಿ ನ್ಯೂ ಇಂಡಿಯನ್ ಟೈಮ್ಸ್ ಪ್ರಶಸ್ತಿ, ಹಲೋ ಗಾಂಧಿ ನಗರ ಪ್ರಶಸ್ತಿ, ಇಂಡಿವುಡ್ ಎಕ್ಸಲೆನ್ಸ್ ಪ್ರಶಸ್ತಿ, ದಿ ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಧನಾ ಸಾಹಿತ್ಯ ರಾಜ್ಯ ಪ್ರಶಸ್ತಿ, ಮೀಡಿಯಾ ಅಚೀವ್’ಮೆಂಟ್ ಪ್ರಶಸ್ತಿ, ಹೂಗಾರ ಸ್ಮಾರಕ ಪ್ರಶಸ್ತಿ, ರಾಘವೇಂದ್ರ ಚಿತ್ರವಾಣಿ ಸಾಹಿತ್ಯ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿರುವ ಗಣೇಶ್ ಕಾಸರಗೋಡು ಇದೀಗ ‘ಸುದ್ದಿ ಮನೆ’ ಎಂಬ ಪ್ರತಿಷ್ಠಿತ ಯೂಟ್ಯೂಬ್ ಛಾನಲ್ಲಿನ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪುತ್ತೂರಿಗೂ ಗಣೇಶ್ ಕಾಸರಗೋಡುಗೂ ನಂಟು:
ಪುತ್ತೂರಿಗೂ ಖ್ಯಾತ ಪತ್ರಕರ್ತ ಗಣೇಶ್ ಕಾಸರಗೋಡು ಅವರಿಗೂ ಅವಿನಾಭಾವ ಸಂಬಂಧವಿದೆ. ಇವರ ತಂದೆಯ ತಂಗಿಯನ್ನು ಮದುವೆ ಮಾಡಿ ಕೊಟ್ಟದ್ದು ಪುತ್ತೂರಿಗೆ. ಅವರ ಮಗ ಅಲ್ಲಿನ ಕ್ಯಾಂಪ್ಕೋ ಕಂಪನಿಯಲ್ಲಿ ಉದ್ಯೋಗದಲ್ಲಿದ್ದವರು. ಪುತ್ತೂರು ಬೀರಮಲೆ ಬೆಟ್ಟದ ಬುಡದಲ್ಲಿ ಗಣೇಶ್ ಕಾಸರಗೋಡು ಅವರ ತಂಗಿ ಮನೆಯಿದೆ. ಗಣೇಶ್ ಕಾಸರಗೋಡು ಅವರ ಮಗ ಅಲೋಕ್ ಸಿವಿಲ್ ಎಂಜಿನಿಯರ್ ಆಗಿ ಪುತ್ತೂರಿನ ಸ್ನೇಹಿತ ಬಾಲಕೃಷ್ಣ ಅವರ ಜತೆ ಸೇರಿ ಕನ್ಸ್ಟ್ರಕ್ಷನ್ಸ್ ಕೆಲಸ ಮಾಡಿಕೊಂಡಿದ್ದವರು. ಆ ದಿನಗಳಲ್ಲಿ ಗಣೇಶ್ ಕಾಸರಗೋಡು ಅವರು ಪುತ್ತೂರಿನ ಮಗನ ಮನೆಯಲ್ಲಿ ತಿಂಗಳುಗಳ ಕಾಲ ನೆಲೆಸಿದ್ದೂ ಇದೆ. ಅಂಥಾದ್ದೊಂದು ದಿನ ಪುತ್ತೂರಿನ ಸುದ್ದಿ ನ್ಯೂಸ್ ಚಾನಲ್ ಗಾಗಿ ವಿಶೇಷ ಸಂದರ್ಶನ ನೀಡಿದ್ದರು. ಈಗಲೂ ಅಷ್ಟೇ ಕಾಸರಗೋಡಿಗೆ ಹೋಗಿ ಬರುವ ದಾರಿಯಲ್ಲಿ ಪುತ್ತೂರಿಗೆ ಬಂದು ಅವರ ವೃದ್ಧ ಅತ್ತೆಯ ಆರೋಗ್ಯವನ್ನು ವಿಚಾರಿಸಿಕೊಂಡು ಹೋಗುತ್ತಾರೆ. ಗಣೇಶ್ ಕಾಸರಗೋಡು ಅವರ ಅಭಿಮಾನಿಗಳು ಪುತ್ತೂರಿನಲ್ಲಿ ಹಲವರು ಇದ್ದಾರೆ.