ಪುತ್ತೂರು: ತುಳುನಾಡಿನ ಅತ್ಯಂತ ಕಾರಣಿಕತೆಯನ್ನು ಹೊಂದಿರುವ ಗರಡಿಗಳಲ್ಲಿ ಒಂದಾಗಿರುವ ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ರಾಮಜಾಲು ಶ್ರೀ ಬ್ರಹ್ಮಬೈದೇರ್ಕಳ ಗರಡಿಯಲ್ಲಿ 17 ನೇ ವರ್ಷದ `ಸಪ್ತದಶ’ ರಾಮಜಾಲು ಗರಡಿ ವೈಭವದ ಜಾತ್ರೋತ್ಸವವು ಜ.18 ರಂದು ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು ದ.8 ರಂದು ಗರಡಿ ವಠಾರದಲ್ಲಿ ನಡೆಯಿತು.
ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ರವರು ಭಕ್ತಾಧಿಗಳನ್ನು ಸ್ವಾಗತಿಸಿ, ಮಾಹಿತಿ ನೀಡುತ್ತಾ, ಪ್ರತಿವರ್ಷದಂತೆ ಈ ವರ್ಷ ಜ.18 ರಂದು ರಾಮಜಾಲು ಗರಡಿ ಜಾತ್ರೋತ್ಸವವು ವೈಭವದಿಂದ ನಡೆಯಲಿದೆ. ಜಾತ್ರೋತ್ಸವದ ಅಂಗವಾಗಿ ಕೋಟಿ ಚೆನ್ನಯರಿಗೆ ಬೆಳಿಗ್ಗೆ ನಡೆಯುವ ಪೂಜೆ, ಪರ್ವಗಳು, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಭಂಡಾರ ಇಳಿಯುವ ಕಾರ್ಯಕ್ರಮ, ರಾತ್ರಿ ವೈಭವದ ನೇಮೋತ್ಸವ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ಸುಮಾರು 10 ಸಾವಿರಕ್ಕಿಂತಲೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ಇದರ ಸಿದ್ಧತೆಗಳ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಗಿದೆ.
ಹಲವು ಕಾರಣಿಕತೆಗಳನ್ನು ಹೊಂದಿರುವ ರಾಮಜಾಲು ಗರಡಿಯಲ್ಲಿ ಪ್ರತಿ ವರ್ಷವೂ ಸುಮಾರು 5 ಸಾವಿರಕ್ಕಿಂತಲೂ ಅಧಿಕ ಮಂದಿಗೆ ಅನ್ನಸಂತರ್ಪಣೆ ನಡೆಯುತ್ತದೆ. ಪ್ರತಿವರ್ಷದಂತೆಯೂ ಈ ವರ್ಷವೂ ಕೋಟಿ ಚೆನ್ನಯರು ಗರಡಿ ಇಳಿಯುವ ಕಾರ್ಯಕ್ರಮ ಬಳಿಕ ಮಾಣಿಬಾಲೆ ಮಾಯಂದಾಳು ಗರಡಿ ಇಳಿಯುವ ಕಾರ್ಯಕ್ರಮ ನಡೆಯುತ್ತದೆ. ಆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಸಂಜೆ ಸ್ಥಳೀಯ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಊರಪರವೂರ ಭಕ್ತರ, ಸ್ವಯಂ ಸೇವಕರ ಸಹಕಾರದಿಂದ ರಾಮಜಾಲು ಗರಡಿ ಜಾತ್ರೋತ್ಸವವು ವೈಭವದಿಂದ ನಡೆಯಲು ಸಾಧ್ಯವಾಗಿದೆ. ಈ ವರ್ಷವೂ ಸರ್ವರ ಸಹಕಾರವನ್ನು ಬಯಸುತ್ತಿದ್ದೇವೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಭಕ್ತಾಧಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಕೋಟಿ ಚೆನ್ನಯರ ಕೃಪೆಗೆ ಪಾತ್ರರಾಗುವಂತೆ ಸಂಜೀವ ಪೂಜಾರಿ ಕೂರೇಲುರವರು ವಿನಂತಿಸಿಕೊಂಡರು.
ಕಳೆದ ವರ್ಷದ ನೇಮೋತ್ಸವದ ಲೆಕ್ಕಚಾರವನ್ನು ಸಭೆಯ ಮುಂದಿಟ್ಟ ಸಂಜೀವ ಪೂಜಾರಿಯವರು ಕಳೆದ ವರ್ಷ ಭಕ್ತಾಧಿಗಳಿಂದ ವಿವಿಧ ರೂಪಗಳಲ್ಲಿ ಹಾಗೂ ಹುಂಡಿಯಿಂದ ಸುಮಾರು 3 ಲಕ್ಷ ರೂಪಾಯಿಗಳು ಬಂದಿದ್ದು, ಸುಮಾರು 8 ಲಕ್ಷ ರೂಪಾಯಿ ಖರ್ಚು ಆಗಿದ್ದು, ಸುಮಾರು 5 ಲಕ್ಷ ರೂಪಾಯಿ ಹೆಚ್ಚುವರಿ ಖರ್ಚು ಆಗಿದೆ ಎಂದು ತಿಳಿಸಿದ ಅವರು ಈಗಾಗಲೇ 16 ವರ್ಷಗಳಲ್ಲಿ ಸುಮಾರು 60 ಲಕ್ಷ ರೂಪಾಯಿಗಳು ಹೆಚ್ಚುವರಿಯಾಗಿ ಖರ್ಚು ಆಗಿದ್ದು, ಇದನ್ನು ನಾನು ಭರಿಸಿದ್ದೇನೆ ಎಂಬ ವಿಚಾರವನ್ನು ಸಭೆಯ ಮುಂದಿಟ್ಟರು.
ನೇಮೋತ್ಸವವು ವಿಜೃಂಭಣೆಯಿಂದ ನಡೆಯುತ್ತಿರುವ ಕಾರಣ ಹೆಚ್ಚುವರಿ ಹಣ ಖರ್ಚು ಆಗುತ್ತಿದೆ. ಭಕ್ತರ ಸಹಕಾರವೂ ಅದೇ ರೀತಿ ಬರುತ್ತಿದೆ. ಪ್ರತಿಯೊಬ್ಬರ ಸಹಕಾರದಿಂದ ನೇಮೋತ್ಸವವು ಇಷ್ಟೊಂದು ಅದ್ಧೂರಿಯಾಗಿ ನಡೆಯಲು ಕಾರಣವಾಗಿದೆ ಎಂದು ಸಂಜೀವ ಪೂಜಾರಿ ಕೂರೇಲು ರವರು ತಿಳಿಸಿದರು.
ಈ ಸಂದರ್ಭದಲ್ಲಿ ರಾಜೇಶ್ ರೈ ಪರ್ಪುಂಜ, ರವೀಂದ್ರ ಸಂಪ್ಯ, ವಿಠಲ ಗೌಡ ಶಿಬರಗುರಿ, ಕಿರಣ್‌ರಾಜ್ ಮಾಸ್ತರ್, ನೇಮಾಕ್ಷ ಸುವರ್ಣ, ಹರ್ಷಿತ್ ಕುಮಾರ್ ಕೂರೇಲು ಅಲ್ಲದೆ ಪರ್ಪುಂಜ ಸ್ನೇಹ ಯುವಕ ಮಂಡಲ ಮತ್ತು ಯುವತಿ ಮಂಡಲದ ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು, ಕೂರೇಲು ಶ್ರೀ ಮಲರಾಯ ಸ್ವಯಂ ಸೇವಕ ವೃಂದದ ಸದಸ್ಯರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಪ್ರತಿವರ್ಷದಂತೆ ಈ ವರ್ಷವೂ ವೈಭವದ ಶ್ರೀ ಕೋಟಿ ಚೆನ್ನಯರ ಗರಡಿ ಜಾತ್ರೋತ್ಸವ, ಸುಮಾರು 10 ಸಾವಿರಕ್ಕಿಂತಲೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸುಮಾರು 5 ಸಾವಿರಕ್ಕಿಂತಲೂ ಅಧಿಕ ಮಂದಿಗೆ ಮಹಾಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ ದೇವದಾಸ್ ಕಾಪಿಕಾಡ್ ಸಾರಥ್ಯದಲ್ಲಿ ಈ ವರ್ಷದ ಹೊಚ್ಚ ಹೊಸ ಹಾಸ್ಯಮಯ ತುಳು ನಾಟಕ `ಏರ್ಲಾ ಗ್ಯಾರಂಟಿ ಅತ್ತ್…’ ಪ್ರದರ್ಶನಗೊಳ್ಳಲಿದೆ.
‘ರಾಮಜಾಲು ಗರಡಿಯ 17 ನೇ ವರ್ಷದ ಜಾತ್ರೋತ್ಸವವು ಜ.18 ರಂದು ನಡೆಯಲಿದ್ದು ಸರ್ವರ ಸಹಕಾರದಿಂದ ತಾಲೂಕಿನಲ್ಲೇ ಅದ್ದೂರಿ ನೇಮೋತ್ಸವ ಎಂಬ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಈ ವರ್ಷದ ನೇಮೋತ್ಸವದಲ್ಲಿಯೂ ಸಮಸ್ತ ಭಕ್ತಾಧಿಗಳು ಪಾಲ್ಗೊಂಡು ನೇಮೋತ್ಸವವನ್ನು ಚಂದಗಾಣಿಸಿಕೊಡಬೇಕಾಗಿ ವಿನಂತಿ’
ಕೆ.ಸಂಜೀವ ಪೂಜಾರಿ ಕೂರೇಲು, ಆಡಳಿತ ಮೊಕ್ತೇಸರರು, ಶ್ರೀ ರಾಮಜಾಲು ಗರಡಿ ಪರ್ಪುಂಜ