ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಉಚಿತ ಆರೋಗ್ಯ ತಪಾಸಣೆ-ಜಾಗೃತಿ ಶಿಬಿರ ಉದ್ಘಾಟನೆ

0

ಪುತ್ತೂರು: ಬೆನ್ನುಹುರಿ ಅಪಘಾತಕ್ಕೊಳಗಾದ ವಿಕಲಚೇತನರು ಧೃತಿಗೆಡದೆ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮಾನಸಿಕವಾಗಿ ಸದೃಢರಾದರೆ ಉನ್ನತ ಸಾಧನೆ ಮಾಡಬಹುದು. ಅವರ ಆತ್ಮಸ್ಥೈರ್ಯ ತುಂಬಿಸುವ ಕೆಲಸ ಇಂತಹ ಶಿಬಿರ ಅಗತ್ಯ ಎಂದು ಆದರ್ಶ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗತಜ್ಞ ಡಾ. ವೈ ಸುಬ್ರಾಯ ಭಟ್ ಅವರು ಹೇಳಿದರು.
ಬೆಳ್ತಂಗಡಿಯ ಸೇವಾಧಾಮ – ಸೇವಾಭಾರತಿಯ ಆಶ್ರಯದಲ್ಲಿ ಆದರ್ಶ ಆಸ್ಪತ್ರೆ ಪುತ್ತೂರು ಮತ್ತು ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ಸಹಯೋಗದೊಂದಿಗೆ ಎಂ.ಸಂಜೀವ ಶೆಟ್ಟಿ ಮತ್ತು ಸೋಜಾ ಮೆಟಲ್ ಮಾರ್ಟ್ ಪುತ್ತೂರು ಇವರ ಸಹಕಾರದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ವಸತಿಯುತ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸೇವಾಧಾಮದ ಸಂಸ್ಥಾಪಕ ಕೆ.ವಿನಾಯಕ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸೇವಾಧಾಮದಿಂದ 27ನೇ ಶಿಬಿರವಾಗಿದೆ, ಬೆನ್ನುಹುರಿ ಅಪಘಾತವು ಒಂದು ಅಂಗವೈಕಲ್ಯವಾಗಿದ್ದು ಒಬ್ಬ ಮನುಷ್ಯನು ಹುಟ್ಟಿದಾಗಿನಿಂದ ಎದುರಿಸುವ ತೊಂದರೆಯಾಗಿರದೆ ಅಪಘಾತಗಳು, ಎತ್ತರದಿಂದ ಬೀಳುವುದು ಹಾಗೆಯೇ ಸೋಂಕಿನಿಂದ ಉಂಟಾಗುವ ಅಂಗವೈಕಲ್ಯತೆಯಾಗಿರುತ್ತದೆ. ಅಂತಹ ನೋವಿನ ಸ್ಥಿತಿಯಲ್ಲಿರುವವರಿಗೆ ಸೇವಾಧಾಮದಿಂದ ಚಿಕಿತ್ಸಾ ಶಿಬಿರವನ್ನು ಮಾಡುತ್ತಿದ್ದೇವೆ ಎಂದರು‌.


ವಿಜಯ ಸಾಮ್ರಾಟ್ ಪುತ್ತೂರು ಇದರ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ದೀಪಕ್ ರೈ, ಆದರ್ಶ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಬಿ ಶ್ಯಾಮ, ಸರ್ಜನ್ ಡಾ. ಎಂ ಕೆ ಪ್ರಸಾದ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಕುಸುಮಾಧರ್ ಸ್ವಾಗತಿಸಿ, ಚರಣ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ಡಿ.9ಕ್ಕೆ ಗಾಲಿಕುರ್ಚಿ ಜಾಥಾ
ಡಿ.9ರಂದು ಬೆನ್ನುಹುರಿ ಅಪಫಾತಕ್ಕೊಳಗಾದವರಿಗೆ ಗಾಲಿಕುರ್ಚಿ ನೀಡುವ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಗಾಲಿ ಕುರ್ಚಿ ಜಾಥಾ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.


ಬೆನ್ನು ಹುರಿ ಅಪಘಾತದಿಂದ ಮನುಷ್ಯನು ಮೆದುಳು ಮತ್ತು ಇತರ ದೇಹದ ಭಾಗಗಳಿಗೆ ಸಂದೇಶಗಳನ್ನು ರವಾನಿಸುವ ನರಗಳ ಸ್ಪರ್ಶ ಜ್ಞಾನವನ್ನು ಮತ್ತು ನಿಯಂತ್ರಣ ಕಳೆದುಕೊಳ್ಳುತ್ತಾನೆ. ಮಲಮೂತ್ರ ನಿಯಂತ್ರಣವಿಲ್ಲದೆ ಇರುವ ಸ್ಥಿತಿಯಲ್ಲಿ ಒತ್ತಡ ಗಾಯ ಹಾಗೂ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಾಲುಗಳ ಸೆಟೆತನ ಮತ್ತು ಬಿಗಿತನದಂತಹ ಹಲವಾರು ಸಮಸ್ಯೆಗಳಿಗೆ ಒಳಗಾಗುತ್ತಾನೆ. ಅವರಿಗೆ ಶಿಬಿರದ ಮೂಲಕ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ.
ಕೆ.ವಿನಾಯಕ ರಾವ್

LEAVE A REPLY

Please enter your comment!
Please enter your name here