ಹಿರೆಬಂಡಾಡಿ: ಸರ್ಕಾರಿ ಪ್ರೌಢಶಾಲೆ ಹಿರೆಬಂಡಾಡಿ, ಗ್ರಾಮ ಪಂಚಾಯತ್ ಹಿರೆಬಂಡಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಿರೆಬಂಡಾಡಿ, ರೋಟರಿ ಕ್ಲಬ್ ಪುತ್ತೂರು ಸಿಟಿ, ಕೆವಿಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಇವರ ಸಹಯೋಗದಲ್ಲಿ ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಉಚಿತ ದಂತಚಿಕಿತ್ಸಾ ಶಿಬಿರ ನಡೆಯಿತು.
ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ ಕಾರ್ಯದರ್ಶಿ ರಾಮಚಂದ್ರರವರು ಶಿಬಿರ ಉದ್ಘಾಟಿಸಿ ಮಾತನಾಡಿ, ರೋಟರಿ ಕ್ಲಬ್ ಸಹಯೋಗದಲ್ಲಿ ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಕೆ.ವಿ.ಜಿ ಮಹಾವಿದ್ಯಾಲಯದ ದಂತ ಚಿಕಿತ್ಸಾ ವಿಭಾಗದ ಹಿರಿಯ ಪ್ರೊಫೆಸರ್ ದೀಕ್ಷಿತ್ ಶೆಟ್ಟಿಯವರು, ಹಲ್ಲಿನ ತಪಾಸನೆ, ಚಿಕಿತ್ಸೆ ಮತ್ತು ಹಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಹಲ್ಲಿನ ಸಮಸ್ಯೆಯನ್ನು ಪ್ರಾಥಮಿಕ ಹಂತದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಮುಂದೆ ಹಲ್ಲಿನ ಸಮಸ್ಯೆಯು ಹೆಚ್ಚಿನ ಅಪಾಯವನ್ನು ಉಂಟು ಮಾಡುವುದನ್ನು
ತಡೆಗಟ್ಟಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರವೀಂದ್ರ ಪಟಾರ್ತಿ ಮಾತನಾಡಿ, ಇಂತಹ ಶಿಬಿರ ಏರ್ಪಡಿಸಿ, ಪ್ರಾರಂಭದಲ್ಲೇ ವಿದ್ಯಾರ್ಥಿಗಳ ಆರೋಗ್ಯ ನಮಸ್ಯೆಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದ್ದಲ್ಲಿ ಮುಂದೆ ಅವರು ಕಲಿಕೆಯಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಆರೋಗ್ಯ ಸಂಬಂಧಿ ಶಿಬಿರಗಳ ಸದುಪಯೋ ಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳು, ಪೋಷಕರಿಗೆ ಮನವಿ ಮಾಡಿದರು. ಹಿರೆಬಂಡಾಡಿ ಗ್ರಾ.ಪಂ.ಅಧ್ಯಕ್ಷ ಸದಾನಂದ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು.
ರೋಟರಿ ಕ್ಲಬ್‌ನ ಪ್ರಮೋದ ಮಲ್ಲಾರ, ದಂತ ಚಿಕಿತ್ಸಾ ಶಿಬಿರದ ಉಸ್ತುವಾರಿ ವಹಿಸಿದ್ದ ರಕ್ಷಿತ್, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನಿಕಟಪೂರ್ವ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಹೆನ್ನಾಳ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಶ್ರೀಧರ ಭಟ್ ಕೆ., ಸ್ವಾಗತಿಸಿದರು. ವಿಜ್ಞಾನ ಶಿಕ್ಷಕ ಮನೋಹರ್ ಎಂ ವಂದಿಸಿದರು. ಕನ್ನಡ ಭಾಷಾ ಶಿಕ್ಷಕಿ ಮಲ್ಲಿಕಾ ನಿರೂಪಿಸಿದರು. ಉಷಾಕಿರಣ, ಲಲಿತಾ ಕೆ, ವಸಂತಕುಮಾರ್, ಆರತಿ ವೈ ಡಿ ಕಾರ್ಯಕ್ರಮ ಸಂಘಟಿಸುವಲ್ಲಿ ಸಹಕರಿಸಿದರು.